ಮಂಗಳೂರು ಕೋರ್ಟ್ ಆವರಣದಲ್ಲಿ ಮತ್ತೊಂದು ಗೋಡೆ ಬರಹ| ಮುಂದುವರಿದ ಕಿಡಿಗೇಡಿಗಳ ಅಟ್ಟಹಾಸ, ಎರಡೇ ದಿನದಲ್ಲಿ ಎರಡು ಪ್ರಚೋದನಕಾರಿ ಬರಹ, ಒಂದೇ ತಂಡದ ಕೃತ್ಯ ಶಂಕೆ
ಮಂಗಳೂರು(ನ.20): ನಗರದಲ್ಲಿ ಇತ್ತೀಚೆಗಷ್ಟೇ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸಿ ಗೋಡೆ ಬರಹ ಬರೆದ ಬೆನ್ನಲ್ಲೇ ಕಿಡಿಗೇಡಿಗಳ ಅಟ್ಟಹಾಸ ಮುಂದುವರಿದಿದ್ದು, ಇದೀಗ ಮತ್ತೊಂದು ಕಡೆ ಪ್ರಚೋದನಕಾರಿ ಗೋಡೆ ಬರಹ ಬರೆದಿರುವುದು ಕಂಡುಬಂದಿದೆ. ಈ ಬಾರಿ ಗೋಡೆ ಬರಹ ಬರೆಯಲು ಜಿಲ್ಲಾ ನ್ಯಾಯಾಲಯದ ಅವರಣವನ್ನೇ ದುಷ್ಕರ್ಮಿಗಳು ಆಯ್ಕೆ ಮಾಡಿರುವುದು ಮತ್ತಷ್ಟುಆತಂಕ ಮೂಡಿಸಿದೆ.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ರಸ್ತೆ ಬದಿಯಲ್ಲಿ ಇರುವ ಪೊಲೀಸ್ ಹಳೆ ಔಟ್‌ಪೋಸ್ಟ್ ಗೋಡೆಯ ಮೇಲೆ ಆಕ್ಷೇಪಾರ್ಹ ಬರಹ ಬರೆದಿರುವುದು ಭಾನುವಾರ ಬೆಳಗ್ಗಿನ ವೇಳೆಗೆ ಬೆಳಕಿಗೆ ಬಂದಿದೆ. ಈ ಹಿಂದೆ ಇಂಗ್ಲಿಷ್‌ನಲ್ಲಿ ಗೋಡೆ ಬರಹ ಬರೆದಿದ್ದರೆ, ಈ ಬಾರಿ ಉರ್ದು ಭಾಷೆಯಲ್ಲಿ ಬರೆಯಲಾಗಿದೆ.
undefined
ಬರೆದದ್ದೇನು?: ಇಂಗ್ಲಿಷ್ ಲಿಪಿಯಲ್ಲಿ ಉರ್ದು ಭಾಷೆಯಲ್ಲಿ ‘ಗುಸ್ತಾಕ್ ಏ ರಸೂಲ್ ಕೀ ಏಕ್ ಹೀ ಸಜಾ ಸರ್ ತನ್ ಸೇ ಜುದಾ’ ಎಂದು ಬರೆಯಲಾಗಿದೆ. ಅಂದರೆ ‘ಪ್ರವಾದಿಯನ್ನು ನಿಂದನೆ ಮಾಡಿದರೆ ತಲೆಯನ್ನು ದೇಹದಿಂದ ಬೇರ್ಪಡಿಸುವುದೊಂದೇ ಶಿಕ್ಷೆ’ ಎಂದರ್ಥ. ಇದನ್ನು ಗೋಡೆ ಮೇಲೆ ಕಪ್ಪು ಬಣ್ಣದ ಶಾಯಿಯಲ್ಲಿ ದೊಡ್ಡದಾಗಿ ಬರೆದಿದ್ದಾರೆ. ಕೋರ್ಟ್ ರಸ್ತೆಯಲ್ಲಿ ಸಾಗುವವರಿಗೆ ಈ ಬರಹ ಸ್ಪಷ್ಟವಾಗಿ ಕಾಣುವಂತಿತ್ತು.
ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆಯೊಳಗೆ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಕರಣ ಬೆಳಕಿಗೆ ಬಂದ ಕೂಡಲೆ ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ನಂತರ ಬರಹವನ್ನು ಅಳಿಸಿಹಾಕಲಾಗಿದೆ.
ಒಂದೇ ತಂಡದ ಕೃತ್ಯ: ಕದ್ರಿ ಬಟ್ಟಗುಡ್ಡೆಯ ಅಪಾರ್ಟ್‌ಮೆಂಟ್ ಗೋಡೆಯ ಮೇಲೆ ಬರೆದ ಆಕ್ಷೇಪಾರ್ಹ ಬರಹಕ್ಕೂ ಈ ಬರಹಕ್ಕೂ ಸಾಮ್ಯತೆ ಕಂಡುಬಂದಿದೆ. ಅಕ್ಷರ ವಿನ್ಯಾಸ, ಬರವಣಿಗೆ ಶೈಲಿಯನ್ನು ಪರಿಶೀಲಿಸಿದಾಗ ಒಬ್ಬನೇ ವ್ಯಕ್ತಿ ಬರೆದಿರುವುದಾಗಿ ಪೊಲೀಸರು ಸ್ಪಷ್ಟನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ, ಮೊನ್ನೆಯ ಹಾಗೆಯೇ ಇಲ್ಲೂ ಕೂಡ ಬರೆಯಲು ಕಪ್ಪು ಬಣ್ಣದ ಸ್ಪ್ರೇ ಪೈಂಟ್ ಬಳಕೆ ಮಾಡಿರುವುದು ಇದಕ್ಕೆ ಮತ್ತಷ್ಟುಪುಷ್ಟಿನೀಡಿದೆ.
ನಾಲ್ಕು ತಂಡಗಳಿಗೆ ಹೊಣೆ: ಒಂದೇ ತಂಡದ ಕೃತ್ಯ ಇದಾಗಿರುವುದರಿಂದ ಈಗಾಗಲೇ ರಚನೆ ಮಾಡಿರುವ ಮೂರು ತನಿಖಾ ತಂಡಗಳು ಸೇರಿದಂತೆ ಬಂದರು ಠಾಣೆಯ ಇನ್ನೊಂದು ತಂಡವನ್ನು ಹೆಚ್ಚುವರಿಯಾಗಿ ರಚಿಸಲಾಗಿದ್ದು, ಎರಡೂ ಪ್ರಕರಣದ ಹೊಣೆಯನ್ನು ಈ ತಂಡಗಳಿಗೆ ವಹಿಸಲಾಗಿದೆ.
ಸಿಸಿಟಿವಿ ಫäಟೇಜ್ ಅಸ್ಪಷ್ಟ: ಕೋರ್ಟ್ ಆವರಣದಲ್ಲಿರುವ ಸಿಸಿಟಿವಿ ತುಂಬ ದೂರದಲ್ಲಿರುವುದರಿಂದ ಕಿಡಿಗೇಡಿಗಳ ಚಹರೆ ಅಸ್ಪಷ್ಟವಾಗಿ ದಾಖಲಾಗಿದೆ. ಆದರೆ ಕದ್ರಿಯಲ್ಲಿ ದೊರೆತ ಸಿಸಿಟಿವಿ ಫäಟೇಜ್ ಇದಕ್ಕಿಂತ ಸ್ಪಷ್ಟವಾಗಿದ್ದು, ತಾಂತ್ರಿಕ ವಿಶ್ಲೇಷಣೆ ನಡೆಸಲಾಗುತ್ತಿದೆ. ಎಷ್ಟುಮಂದಿ ಭಾಗಿಯಾಗಿದ್ದಾರೆ ಇತ್ಯಾದಿ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಬೆನ್ನಲ್ಲೇ ನಗರದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ರಾತ್ರಿ ವೇಳೆ ನಿಗಾ ವಹಿಸಲು ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮಾಹಿತಿ ನೀಡಲು ಆಯುಕ್ತರ ಮನವಿ
ಎರಡೇ ದಿನದ ಅವಧಿಯೊಳಗೆ ಎರಡು ಕಡೆ ಆಕ್ಷೇಪಾರ್ಹ ಬರಹ ಬರೆದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಚಟವಟಿಕೆಯಲ್ಲಿ ತೊಡಗಿರುವವರ ಬಗ್ಗೆ ಮಾಹಿತಿಯಿದ್ದಲ್ಲಿ ಸಾರ್ವಜನಿಕರು ಮಾಹಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮನವಿ ಮಾಡಿದ್ದಾರೆ. ಮಾಹಿತಿಯನ್ನು ಇಬ್ಬರು ಡಿಸಿಪಿಗಳು, ನಗರ ನಿಯಂತ್ರಣ ಕೊಠಡಿ ಅಥವಾ ಸಮೀಪದ ಪೊಲೀಸ್ ಠಾಣೆಗೆ ನೀಡಬಹುದು. ಮಾಹಿತಿ ನೀಡಿದ ವ್ಯಕ್ತಿಯ ಪರಿಚಯವನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.
ಗೋಡೆಗಳ ಮೇಲೆ ಬರೆದಿರುವ ಪ್ರಚೋದನಕಾರಿ ಬರಹಗಳ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದ್ದು, ಇಂತಹ ಚಟುವಟಿಕೆಯಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.
ಕೋರ್ಟ್ ಆವರಣ ಆಯ್ಕೆ ಏಕೆ?
ಕದ್ರಿಯಲ್ಲಿ ದೇಶವಿರೋಧಿ ಬರಹ ಬರೆಯಲು ಠಾಣೆಗಿಂತ ಕೂಗಳತೆ ದೂರದಲ್ಲಿರುವ ಅಪಾರ್ಟ್‌ಮೆಂಟ್ ಗೋಡೆ ಆಯ್ಕೆ ಮಾಡಿದ್ದ ಕಿಡಿಗೇಡಿಗಳು, ಈ ಬಾರಿ ಜಿಲ್ಲಾ ನ್ಯಾಯಾಲಯ ಆವರಣವನ್ನೇ ಆಯ್ಕೆ ಮಾಡಿರುವುದು ತೀವ್ರ ಆತಂಕ ಸೃಷ್ಟಿಸಿರುವುದಲ್ಲದೆ, ನ್ಯಾಯಾಲಯದ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಕೋರ್ಟ್ ಆವರಣದಲ್ಲೇ ಬರೆದಿರುವ ಹಿಂದೆ ತೀವ್ರ ಸಂಚಲನ ಸೃಷ್ಟಿಸುವ ದುರುದ್ದೇಶ ಅಡಗಿರುವ ಸಂಶಯ ವ್ಯಕ್ತವಾಗಿದೆ.