
ಬೆಂಗಳೂರು(ಆ.07): ರಾಜ್ಯದಲ್ಲಿ ಮುಡಾ ಹಗರಣ ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದ್ದು, ಮೈಸೂರಿನ ಉತ್ತನಹಳ್ಳಿ ಗ್ರಾಮದಲ್ಲಿ 1.39 ಎಕರೆ ಜಮೀನನ್ನು ಅಕ್ರಮವಾಗಿ ಭೂ ಸ್ವಾಧೀನದಿಂದ ಕೈಬಿಡಲಾಗಿದೆ ಎಂದು ಆರೋಪಿಸಿ ದೂರು ಸಲ್ಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯ ಕೃಷ್ಣ ಎಂಬುವವರು ರಾಜ್ಯಪಾಲರಿಗೆ ದೂರು ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಡಳಿತದಿಂದ ಸೂಕ್ತ ಮಾಹಿತಿಯನ್ನು ತರಿಸಿಕೊಂಡು ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮೈಸೂರು ನಗರ ಸುತ್ತಾಡಿದ ಸಿಎಂ ಸಿದ್ದರಾಮಯ್ಯ; ಹೆಚ್ಚಾಯ್ತಾ ಮುಡಾ ಟೆನ್ಷನ್!
ಮೈಸೂರಿನ ವರುಣ ಹೋಬಳಿಯ ಉತ್ತನಹಳ್ಳಿ ಗ್ರಾಮದಲ್ಲಿ 7.01 ಎಕರೆ ಜಮೀನಿನಲ್ಲಿ ಆಶ್ರಯ ನಿವೇಶನಗಳನ್ನಾಗಿ ಹಂಚಿಕೆ ಮಾಡಲಾಗಿದೆ. ಆದರೆ, ಮೂಲಸೌಕರ್ಯ ಕಲ್ಪಿಸದ ಕಾರಣ ಹಲವು ಫಲಾನುಭವಿಗಳು ಮನೆಗಳನ್ನು ನಿರ್ಮಿಸಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡು ಮರಪ್ಪ ಎಂಬಾತ ಮುಖ್ಯಮಂತ್ರಿಗಳ ಮೂಲಕ ಅಕ್ರಮ ಎಸಗಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಉತ್ತನಹಳ್ಳಿ ಗ್ರಾಮದ ಸರ್ವೆ ನಂ.205/2ರಲ್ಲಿನ 1.39 ಎಕರೆ ಜಮೀನು ಕುಂದ ಬೈರಪ್ಪ ಮತ್ತು ಕಾಳಯ್ಯ ಎಂಬುವರಿಗೆ ಸೇರಿದೆ. ಇದನ್ನು ಸಿದ್ದರಾಮಯ್ಯ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರಿಗಳ ಮೇಲೆ ತಮ್ಮ ಪ್ರಭಾವ ಬೀರಿ, ಮರಪ್ಪ ಮತ್ತು ಕೆಲವು ಅಧಿಕಾರಿಗಳು ಸುಳ್ಳು ದಾಖಲೆ ಸೃಷ್ಟಿಸಿ ಭೂಸ್ವಾಧೀನದಿಂದ ಕೈಬಿಡಲಾಗಿದೆ ಎಂಬಂತೆ ಕಾನೂನು ಬಾಹಿರ ಆದೇಶ ಮಾಡಲಾಗಿದೆ. ಈ ಮೂಲಕ 30 ವರ್ಷಗಳ ಕಾಲ ಸರ್ಕಾರ ಮತ್ತು ಫಲಾನುಭವಿಗಳ ಸ್ವತ್ತಾದ ಭೂಮಿಯನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿದೆ. ಹೀಗಾಗಿ ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ