ಅನ್ನ ಸಾಂಬಾರ್‌ ವಿತ್‌ ಅನಂತ್ ಕುಮಾರ್‌

By Web DeskFirst Published 13, Nov 2018, 10:44 AM IST
Highlights

ರಾಮಕೃಷ್ಣ ಹೆಗಡೆ, ಮೋದಿಗೆ ಒಲಿದಂಥ ಅದೃಷ್ಟಅನಂತ್‌ಗೆ ಯಾಕೆ ಒಲಿಯಲಿಲ್ಲವೋ! ಇವರಿಗಿರುವ ಸಾಮರ್ಥ್ಯ ಅನಂತ್ ಕುಮಾರ್‌ಗೆ ಇರಲಿಲ್ಲ ಎಂದಲ್ಲ. ಅತಿ ಚಿಕ್ಕ ವಯಸ್ಸಿನಲ್ಲೇ ಕೇಂದ್ರ ಸಚಿವರಾದದ್ದು ಸಣ್ಣ ಸಾಧನೆಯಲ್ಲ.

The Best Of Ananth Kumar

Was Yet To Come

ನನ್ನ ಪ್ರಕಾರ, ಅನಂತ ಕುಮಾರ್‌ ಅವರ ಕಾರ್ಯದಕ್ಷತೆ ಹಾಗೂ ಸಾಮರ್ಥ್ಯಕ್ಕೆ ತಕ್ಕ ಹುದ್ದೆ ಮತ್ತು ಅಧಿಕಾರ ಅವರಿಗೆ ಸಿಕ್ಕಲೇ ಇಲ್ಲ. ಬಹುಶಃ ಇನ್ನೂ ಹತ್ತು ವರ್ಷ ಆಯಸ್ಸು ಅವರಿಗೆ ಇದ್ದಿದ್ದರೆ...! ಒಂದು ವೇಳೆ ಅವರು ಮುಖ್ಯಮಂತ್ರಿ ಆಗಿದ್ದಿದ್ದರೆ.... ಖಂಡಿತ ರಾಮಕೃಷ್ಣ ಹೆಗಡೆ ಶ್ರೇಣಿಯ ಇನ್ನೊಬ್ಬ ಪ್ರಭಾವಿ ಮುಖ್ಯಮಂತ್ರಿಯನ್ನು ಕರ್ನಾಟಕ ಪಡೆಯುತ್ತಿತ್ತು. ಎಲ್ಲದಕ್ಕೂ ಅದೃಷ್ಟಬೇಕಲ್ಲ? ರಾಮಕೃಷ್ಣ ಹೆಗಡೆ ಅವರಿಗಾಗಲೀ, ನರೇಂದ್ರ ಮೋದಿ ಅವರಿಗಾಗಲೀ ಒಲಿದಂಥ ಅದೃಷ್ಟಅನಂತ ಕುಮಾರ್‌ಗೆ ಯಾಕೆ ಒಲಿಯಲಿಲ್ಲವೋ ಎಂದು ನನಗೆ ಹಲವು ಬಾರಿ ಅನಿಸಿದ್ದಿದೆ.

ಇವತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜಾಗತಿಕ ಚರಿಷ್ಮಾದ ಎದುರು ಅನಂತ ಕುಮಾರ್‌ ಪ್ರಭಾವವನ್ನು ಹೋಲಿಕೆ ಮಾಡಲಾಗದು. ಆದರೆ, ಅಂದು ನರೇಂದ್ರ ಮೋದಿ ಯಾರು ಎಂದೇ ತಿಳಿಯದ ಕಾಲದಲ್ಲಿ ಅನಂತ ಕುಮಾರ್‌ ಇಡೀ ದೇಶಕ್ಕೆ ಚಿರಪರಿಚಿತರಾಗಿದ್ದರು. ವಾಜಪೇಯಿ ಸರ್ಕಾರದಲ್ಲಿ ಅನಂತ ಕುಮಾರ್‌ ಮಿಂಚುತ್ತಿದ್ದಾಗ ನರೇಂದ್ರ ಮೋದಿ ಒಂದೇ ಒಂದು ಚುನಾವಣೆಗೂ ಸ್ಪರ್ಧಿಸಿರಲಿಲ್ಲ. ಅನಂತ ಕುಮಾರ್‌ ಅವರು ವಾಜಪೇಯಿ - ಅಡ್ವಾಣಿಯವರ ನೀಲಿಗಣ್ಣಿನ ಹುಡುಗನಾಗಿ, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾಗ ಮೋದಿ ಇನ್ನೂ ಪಕ್ಷದ ಹಿರಿಯ ಕಾರ್ಯಕರ್ತ ಅಷ್ಟೇ. ಆದರೆ, ಒಂದು ಅದೃಷ್ಟ.... ಮೋದಿಯವರನ್ನು ನೇರವಾಗಿ ಗುಜರಾತಿನ ಮುಖ್ಯಮಂತ್ರಿ ಮಾಡಿತು. ಮುಂದಿನದು ಗೊತ್ತೇ ಇದೆಯಲ್ಲ. ಮೋದಿ ತಮ್ಮ ಕಾರ್ಯದಕ್ಷತೆ, ರಾಜಕೀಯ ಚಾಣಾಕ್ಷತೆ, ದೂರದೃಷ್ಟಿ, ದಣಿವರಿಯದ ಪರಿಶ್ರಮದಿಂದ ‘ಗುಜರಾತ್‌ ಮಾದರಿ’ ಎಂಬ ಪರಿಭಾಷೆಯನ್ನೇ ಸೃಷ್ಟಿಸಿದರು. ಅದೇ ಅವರನ್ನು ಮುಂದೆ ಪ್ರಧಾನಿ ಪಟ್ಟದವರೆಗೂ ಕರೆದೊಯ್ದಿತು. ಬರೀ ಭಾರತಕ್ಕಷ್ಟೇ ಅಲ್ಲ ವಿಶ್ವದ ಅತಿ ಪ್ರಭಾವಿ ನಾಯಕ ಎಂಬ ಪಟ್ಟವೂ ಮೋದಿಯವರಿಗೆ ದಕ್ಕಿತು.

ರಾಮಕೃಷ್ಣ ಹೆಗಡೆ ಕೂಡ ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದು ಅದೃಷ್ಟದಿಂದಲೇ. ನಂತರ ತಮ್ಮ ರಾಜಕೀಯ ಚಾಣಾಕ್ಷತೆ, ನಾಯಕತ್ವದಿಂದ ಚುನಾವಣೆಯಲ್ಲಿ ಗೆದ್ದು ಕರ್ನಾಟಕದ ಪ್ರಭಾವೀ ಮುಖ್ಯಮಂತ್ರಿಗಳಲ್ಲಿ ಒಬ್ಬರು ಎನಿಸಿಕೊಂಡರು.

ಇವರಿಗಿರುವ ಸಾಮರ್ಥ್ಯ ಅನಂತ ಕುಮಾರ್‌ಗೆ ಇರಲಿಲ್ಲ ಎಂದಲ್ಲ. ಅತಿ ಚಿಕ್ಕ ವಯಸ್ಸಿನಲ್ಲೇ ಕೇಂದ್ರ ಸಚಿವರಾದದ್ದು ಸಣ್ಣ ಸಾಧನೆಯಲ್ಲ. ಸಿಕ್ಕ ಖಾತೆಯಲ್ಲೇ ಇವರ ಕೊಡುಗೆ ಸಣ್ಣದೇನಲ್ಲ. ಒಬ್ಬ ಯಶಸ್ವಿ ಮುತ್ಸದ್ದಿ ರಾಜಕಾರಣಿಗೆ ಬೇಕಾದ ರಾಜಕೀಯ ಚಾಣಾಕ್ಷತೆ, ತ್ವರಿತ ಯೋಜನೆ ಅನುಷ್ಠಾನ ಮಾಡುವ ಕಾರ್ಯದಕ್ಷತೆ, ಚುನಾವಣೆಗಳನ್ನು ಗೆಲ್ಲಲು ಬೇಕಾದ ತಂತ್ರಗಾರಿಕೆ, ಆಡಳಿತ ನಡೆಸಲು ಬೇಕಾದ ನಾಯಕತ್ವ, ಅಭಿವೃದ್ಧಿಗೆ ಬೇಕಾದ ದೂರದೃಷ್ಟಿ... ಎಲ್ಲವೂ ಅನಂತ ಕುಮಾರ್‌ ಅವರಲ್ಲಿ ಇತ್ತು ಎಂಬುದನ್ನು ಅವರ ವಿರೋಧಿಗಳೂ ಒಪ್ಪುತ್ತಾರೆ. ಬಹುಶಃ ಆ ಒಂದು ಅದೃಷ್ಟಒಲಿದಿದ್ದರೆ ಅನಂತ ಕುಮಾರ್‌ ಕರ್ನಾಟಕದ ಶ್ರೇಷ್ಠ ಮುಖ್ಯಮಂತ್ರಿಗಳ ಸಾಲಿನಲ್ಲಿ ಒಬ್ಬರಾಗಿ ನಿಲ್ಲುತ್ತಿದ್ದರು.

ಬಿಟ್ಟಸ್ಥಳ ತುಂಬುವವರಾರು?

ನಾವು ಕನ್ನಡಿಗರು ಹಾಗೂ ನಮ್ಮ ನಾಯಕರು ರಾಜ್ಯದಲ್ಲಿ ಎಷ್ಟೇ ಅಬ್ಬರಿಸಿದರೂ ಕೇಂದ್ರ ಮಟ್ಟದಲ್ಲಿ ಹಾಗೂ ಸಂಸತ್ತಿನಲ್ಲಿ ನಮ್ಮ ದನಿ ಸಣ್ಣದೇ. ನೆರೆಯ ತಮಿಳುನಾಡು, ಆಂಧ್ರ ಅಥವಾ ಬಿಹಾರ, ಉತ್ತರ ಪ್ರದೇಶದ ಸಂಸದರಿಗೆ ಹೋಲಿಸಿದರೆ ನಮ್ಮ ಸಂಸದರು ಕರ್ನಾಟಕದ ಪರ ಲಾಬಿ ಮಾಡುವುದರಲ್ಲಿ, ಒತ್ತಡ ಹೇರುವುದರಲ್ಲಿ ತುಸು ಮೃದು ಎಂಬ ಕೊರಗು ನಮಗೆಲ್ಲರಿಗೂ ಇದೆ. ಆದರೆ, ಅನಂತ ಕುಮಾರ್‌ ಮಾತ್ರ ಹಾಗಿರಲಿಲ್ಲ. ಕನ್ನಡ ಹಾಗೂ ಕರ್ನಾಟಕದ ವಿಷಯ ಬಂದಾಗ ಅವರು ಕರ್ನಾಟಕದ ಪಕ್ಷಪಾತಿಯಾಗಿರಲು ಹಿಂದುಮುಂದು ನೋಡುತ್ತಿರಲಿಲ್ಲ ಹಾಗೂ ದೆಹಲಿಯ ಶಕ್ತಿಕೇಂದ್ರದಲ್ಲಿ ಶಕ್ತಿ ಪ್ರದರ್ಶನಕ್ಕೆ ಇಳಿಯುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ. ಈಗ ಅನಂತ ಕುಮಾರ್‌ ಅವರ ಈ ಸ್ಥಾನ ತೆರವಾಗಿದೆ. ಈ ಬಿಟ್ಟಸ್ಥಳವನ್ನು ತುಂಬುವವರಾರು ಎಂಬ ಪ್ರಶ್ನೆಗೆ ಉತ್ತರ ಕಾಣುತ್ತಿಲ್ಲ.

ಹೆಗಡೆ, ಕೃಷ್ಣ ಶ್ರೇಣಿಯ ನಾಯಕ

ಅನಂತ ಕುಮಾರ್‌ ಟಿಪಿಕಲ್‌ ರಾಜಕಾರಣಿ ಅಲ್ಲ. ಅವರು ರಾಮಕೃಷ್ಣ ಹೆಗಡೆ ಹಾಗೂ ಎಸ್‌.ಎಂ.ಕೃಷ್ಣ ಶ್ರೇಣಿಯ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕ ಎಂದೇ ನನ್ನ ಭಾವನೆ. ರಾಜಕಾರಣದ ಹೊರತಾಗಿಯೂ ಅನಂತ್‌ಗೆ ಅನೇಕ ಸದಭಿರುಚಿಗಳಿದ್ದವು. ಹೆಗಡೆ ಹಾಗೂ ಕಷ್ಣ ಅವರಂತೆ ಅನಂತ್‌ ಕೂಡ ತಮ್ಮನ್ನು ಕಲೆ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ, ಪರಿಸರದಂಥ ಕ್ಷೇತ್ರಗಳಲ್ಲಿ ರಾಜಕಾರಣದಷ್ಟೇ ಆಳವಾಗಿ ತೊಡಗಿಸಿಕೊಂಡಿದ್ದರು. ನಿಂತ ನೀರಿನ ಬದಲು ನಾವೀನ್ಯತೆಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಇಂದಿನ ಬಹುತೇಕ ರಾಜಕಾರಣಗಳಲ್ಲಿ ಇಂಥ ವ್ಯಕ್ತಿತ್ವವನ್ನು ಕಾಣುವುದು ಅಪರೂಪ. ಹಣದ ಮದ, ತಾವೇ ಅಪಹಾಸ್ಯಕ್ಕೆ ಒಳಗಾಗುವ ಹಾಸ್ಯಾಸ್ಪದ ಪ್ರಜ್ಞೆ, ಸದನದಲ್ಲಿ ಅಂಗಿ ಹರಿದುಕೊಳ್ಳುವ ಅನಾಗರಿಕತೆ, ಮೌಲ್ಯವನ್ನು ಕಮಿಷನ್‌ ರೂಪದಲ್ಲಿ ಮಾತ್ರ ನೋಡುವ ರಾಜಕಾರಣಿಗಳ ನಡುವೆ ಅನಂತ ಕುಮಾರ್‌ ಅವರ ವ್ಯಕ್ತಿತ್ವ ಇಂದಿನ ರಾಜಕಾರಣದಲ್ಲಿ ಬಹು ಅಮೂಲ್ಯ ಎನಿಸುತ್ತದೆ.

ಕೌಟಿಲ್ಯ ತಂತ್ರ, ಚಾಣಕ್ಯ ನೀತಿ

ನನಗಿನ್ನೂ ನೆನಪಿದೆ. 1996-97ರ ಸಮಯ. ಆಗಿನ್ನೂ ಭಾರತಕ್ಕೆ ಇಂಟರ್ನೆಟ್‌ ಪರಿಚಯವಾಗಿ ಎರಡು ಮೂರು ವರ್ಷ ಮಾತ್ರ ಆಗಿತ್ತು. ಇಂಟರ್ನೆಟ್‌ ಅಂದರೆ ವಾಣಿಜ್ಯ ಉದ್ಯಮಗಳಿಗೆ, ಮಾಧ್ಯಮಗಳಿಗೆ, ವಿಜ್ಞಾನಿಗಳಿಗೆ ಮಾತ್ರ ಮೀಸಲಾದ ಸೌಲಭ್ಯ ಎಂದೇ ಪರಿಗಣಿಸಲಾಗಿತ್ತು. ರಾಜಕಾರಣಕ್ಕೂ ಇಂಟರ್‌ನೆಟ್‌ ವೆಬ್‌ಸೈಟ್‌ಗಳಿಗೂ ಸಂಬಂಧವೇ ಇರದ ಕಾಲ ಅದು. ಆಗಲೇ ಇಬ್ಬರು ರಾಜಕಾರಣಿಗಳು ತಮ್ಮ ವೈಯಕ್ತಿಕ ವೆಬ್‌ಸೈಟ್‌ ಪ್ರಾರಂಭಿಸಿದ್ದರು. ಆ ಇಬ್ಬರು ಯಾರು ಗೊತ್ತಾ? ಒಬ್ಬರು ನರೇಂದ್ರ ಮೋದಿ ಹಾಗೂ ಇನ್ನೊಬ್ಬರು ಅನಂತ ಕುಮಾರ್‌. ಈಗ ಚುನಾವಣೆಗೆ ನಿಲ್ಲಲು, ಇ-ಮೇಲ್‌, ಫೇಸ್‌ಬುಕ್‌, ಟ್ವೀಟರ್‌ ಖಾತೆಗಳೆಲ್ಲ ಬೇಕು ಎಂದು ಎಲ್ಲಾ ಪಕ್ಷಗಳೂ ತಾಕೀತು ಮಾಡುತ್ತವೆ. ಆದರೆ, ಆಗಲೇ ಈ ಇಬ್ಬರು ನಾಯಕರು ತಂತ್ರಜ್ಞಾನವನ್ನು ಬಳಸಿ ಜನರನ್ನು ತಲುಪುವ ದೂರದೃಷ್ಟಿಹೊಂದಿದ್ದರು. ಮೋದಿ ಮತ್ತು ಅನಂತ್‌ ಅವರಿಬ್ಬರೂ ಒಂದೇ ದಿಕ್ಕಿನಲ್ಲಿ ಯೋಚಿಸುತ್ತಿದ್ದುದು ಕೇವಲ ಕಾಕತಾಳೀಯವೇ?

ಹಾಗಂತ ಅನಂತ ಕುಮಾರ್‌ ನಿಷ್ಕಳಂಕಿತ ಎಂದು ಹೇಳುತ್ತಿಲ್ಲ. ಅನೇಕ ವಿವಾದಗಳು ಅವರ ಸುತ್ತಲೂ ಇದ್ದದ್ದು ನಿಜ. ಆದರೆ, ವಿವಾದಗಳು ಯಾವ ನಾಯಕನನ್ನು ಬಿಟ್ಟಿವೆ ಹೇಳಿ. ಅವರನ್ನು ಹಾಗೂ ವಿವಾದಗಳನ್ನು ತಕ್ಕಡಿಯಲ್ಲಿ ಇಟ್ಟು ತೂಗಿದರೆ ಅನಂತ್‌ ಅವರ ವ್ಯಕ್ತಿತ್ವವೇ ಮೇಲುಗೈ ಸಾಧಿಸುತ್ತದೆ ಎನ್ನುವುದು ಪಕ್ಷಾತೀತ ಸತ್ಯ. ಅನಂತ ಕುಮಾರ್‌ ಬಗ್ಗೆ ಇರುವ ಇನ್ನೊಂದು ಆಪಾದನೆ ಅವರ ನಾಜೂಕುತನದ ಬಗ್ಗೆ. ಆದರೆ, ಅದು ಕೌಟಿಲ್ಯ ತಂತ್ರ. ರಾಜಕಾರಣದಲ್ಲಿ ಚಾಣಕ್ಯ ನೀತಿ ಅನಿವಾರ್ಯ ಎಂದು ಸಮಜಾಯಿಷಿ ಕೊಡಬಹುದು ಬಿಡಿ.

ಆವತ್ತಿನ ಹೆಡ್‌ಲೈನ್‌ ಅವರದೇ!

ಹಾಗೆ ನೋಡಿದರೆ, ಸಂಪಾದಕನಾಗಿ ನಾನು ಅನಂತ್‌ ವಿರುದ್ಧ ಅನೇಕ ಸುದ್ದಿಗಳನ್ನು ಪ್ರಕಟಿಸಿದ್ದೇನೆ. ಅವರಿಗೆ ತೀವ್ರ ಮುಜುಗರ ಉಂಟುಮಾಡುವ ಬರಹಗಳನ್ನೂ ಪ್ರಕಟಿಸಿದ್ದೇನೆ. ಅವರು ಮಾನಹಾನಿ ಖಟ್ಲೆ ಹಾಕುವುದಾಗಿಯೂ ನನಗೆ ಸಂದೇಶ ಕಳಿಸಿದ್ದರು. ಅವರ ವಿರುದ್ಧ ಮೂರು ನಾಲ್ಕು ತೀರಾ ಮೊನಚಾದ ಸಂದರ್ಶನಗಳನ್ನು ಪ್ರಕಟಿಸಿದ್ದೇನೆ. ಆದರೆ, ಅನಂತ ಕುಮಾರ್‌ ಎಂದೂ ಅವುಗಳನ್ನು ವೈಯಕ್ತಿಕ ದ್ವೇಷವಾಗಿ ಪರಿಗಣಿಸಿಲ್ಲ. ನಮ್ಮ ಪತ್ರಿಕಾ ಸ್ವಾತಂತ್ರ್ಯಕ್ಕೆ ಒಂದಿನಿತೂ ಕಡಿವಾಣ ಹಾಕಲು ಪ್ರಯತ್ನಿಸಲಿಲ್ಲ. ಅವರ - ನನ್ನ ವೈಯಕ್ತಿಕ ಸಂಬಂಧ ಸ್ವಲ್ಪವೂ ಹಳಸಲಿಲ್ಲ. ರಾಮಕೃಷ್ಣ ಹೆಗಡೆಯವರ ಇಂತಹುದೇ ವಿಶಾಲವಂತಿಕೆ ಅನಂತ ಕುಮಾರ್‌ ಅವರಲ್ಲೂ ನನಗೆ ಕಂಡಿದೆ.

ಒಮ್ಮೆ ನಾನು ದೆಹಲಿಗೆ ಹೋದಾಗ, ಅನಂತ ಕುಮಾರ್‌ ಅವರ ಸಚಿವಾಲಯಕ್ಕೆ ಭೇಟಿ ನೀಡಿದ್ದೆ. ಅಲ್ಲೋ, ಗಿಜಿಬಿಜಿ ಜನ. ತಮ್ಮ ಗಡಿಬಿಡಿಯ ನಡುವೆಯೂ ಈ ಕೇಂದ್ರ ಸಚಿವರು ಬಿಡುವು ಮಾಡಿಕೊಂಡು ತಮ್ಮ ಖಾತೆಯ ಬಗ್ಗೆ, ತಮ್ಮ ಜನೌಷಧಿ ಯೋಜನೆಯ ಬಗ್ಗೆ, ಬೇವು ಲೇಪಿತ ಯೂರಿಯಾ ಯೋಜನೆಯ ಬಗ್ಗೆ ತಾಂತ್ರಿಕ ಹಾಗೂ ವಾಣಿಜ್ಯ ವಿವರಗಳನ್ನು ನೀಡತೊಡಗಿದರು. ತಾವು ಮಾಡುವ ಕೆಲಸದ ಇಂಚಿಂಚು ಮಾಹಿತಿಯೂ ಅನಂತ ಕುಮಾರ್‌ ಅವರಿಗೆ ಇರುತ್ತದೆ. ಅತ್ಯಂತ ಕಠಿಣ ಶಬ್ದಗಳನ್ನು ಬಳಸಿ ಕಬ್ಬಿಣದ ಕಡಲೆಯಂಥ ವಾಕ್ಯಗಳನ್ನೂ ಪ್ರಯೋಗಿಸಬಲ್ಲ ಅಥವಾ ಚಿಕ್ಕ ಮಗುವಿಗೂ ಅರ್ಥವಾಗುವ ಶಬ್ದಗಳಲ್ಲಿ ಅತ್ಯಂತ ಸರಳವಾಗಿ, ಆಸಕ್ತಿದಾಯಕವಾಗಿ ತಿಳಿಸಿಕೊಡಬಲ್ಲ ವಿಶೇಷ ಕೌಶಲ್ಯ ಅನಂತ ಕುಮಾರ್‌ ಅವರದು. ಅಷ್ಟೊತ್ತಿಗೆ ಮಧ್ಯಾಹ್ನ 1 ಗಂಟೆ. ಈಗ ಊಟದ ಸಮಯ ಅಂದರು ಸಾಹೇಬರು. ಸರಿ ನಾನು ಹೊರಡುತ್ತೇನೆ ಅಂದೆ. ಎಲ್ಲಿಗೆ ಹೋಗುತ್ತೀರಿ... ಮನೆಯಿಂದ ಒಳ್ಳೆಯ ಊಟ ಬಂದಿದೆ. ಇಲ್ಲಿಗೆ ಬಂದವರು ಊಟ ಮಾಡದೇ ಹೋಗುವಂತಿಲ್ಲ ಎಂದವರೇ ತಾವೇ ಸ್ವತಃ ಪ್ಲೇಟಿಗೆ ಚಪಾತಿ ಪಲ್ಯ, ಅನ್ನ ಸಾಂಬಾರ್‌ ಬಡಿಸಲು ಆರಂಭಿಸಿದರು. ಸಂಪಾದಕರೇ... ಇವತ್ತು ಈ ಸಂದರ್ಶನಕ್ಕೆ ನಾನೇ ಶೀರ್ಷಿಕೆ ಕೊಡುತ್ತೇನೆ ಎಂದು ಹೇಳಿದರು ನಸುನಗುತ್ತ.... ಅನ್ನ ಸಾಂಬಾರ್‌ ವಿತ್‌ ಅನಂತ ಕುಮಾರ್‌!

ಅವರ ಈ ಆತ್ಮೀಯ ನಡವಳಿಕೆ ನನ್ನ ಜೊತೆ ಮಾತ್ರ ಅಲ್ಲ, ಅವರ ಕಚೇರಿಗೆ ಹೋದ ಎಲ್ಲರಿಗೂ ಇದೇ ಅನುಭವ.

ಇಂಥ ಒಬ್ಬ ಅಪರೂಪದ ನಾಯಕ, ಸರಳ ವ್ಯಕ್ತಿ, ಮೇಧಾವಿ ರಾಜಕಾರಣಿ, ಮುತ್ಸದ್ದಿ ನಾಯಕ ಇಂದು ನಮ್ಮೊಂದಿಗಿಲ್ಲ. ಅವರ ನೆನಪುಗಳೆಲ್ಲ ಮೊಗೆದಷ್ಟೂ ಅನಂತ.

-ರವಿ ಹೆಗಡೆ,ಪ್ರಧಾನ ಸಂಪಾದಕ, ಕನ್ನಡ ಪ್ರಭ

Last Updated 13, Nov 2018, 11:33 AM IST