
ಬೆಳಗಾವಿ (ಡಿ.14): ಗೋವಾದಿಂದ ನವದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಖಾನಾಪುರದ ಮಾಜಿ ಶಾಸಕಿ ಹಾಗೂ ಗೋವಾದ ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳ್ಕರ್ ಅವರು ತತ್‌ಕ್ಷಣ ವೈದ್ಯಕೀಯ ನೆರವು ನೀಡುವ ಮೂಲಕ ಅಮೆರಿಕದ ಯುವತಿಯೊಬ್ಬಳ ಪ್ರಾಣ ಉಳಿಸಿದ ಮಾನವೀಯ ಘಟನೆ ನಡೆದಿದೆ.
ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿದ್ದ ಯುವತಿಗೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತೀವ್ರ ತರನಾದ ನಡುಕ ಶುರುವಾಗಿದ್ದು, ಯುವತಿ ಪ್ರಜ್ಞಾಹೀನಳಾಗಿ ಕುಸಿದುಬಿದ್ದಿದ್ದಾಳೆ. ನಾಡಿ ಕೂಡ ಸಿಗದ ಸ್ಥಿತಿಗೆ ತಲುಪಿದ್ದ ಆ ಕ್ಷಣದಲ್ಲಿ, ಗಾಬರಿಯಾಗದ ವೈದ್ಯೆಯಾಗಿರುವ ಡಾ.ಅಂಜಲಿ ನಿಂಬಾಳ್ಕರ್ ಅವರು ಕೂಡಲೇ ಕಾರ್ಡಿಯೋ–ಪಲ್ಮನರಿ ರಿಸಸ್ಸಿಟೇಷನ್ (CPR) ನೀಡಿದರು. ಅವರ ಸಮಯೋಚಿತ ಚಿಕಿತ್ಸೆಯಿಂದ ಆ ಯುವತಿಗೆ ಮತ್ತೆ ನಾಡಿ ಬಡಿತ ಶುರುವಾಗಿದೆ. ಆದರೆ ಅರ್ಧ ಗಂಟೆ ನಂತರ ಆಕೆ ಮತ್ತೊಮ್ಮೆ ಕುಸಿದುಬಿದ್ದಳು. ವಿಮಾನದಲ್ಲಿದ್ದವರಲ್ಲಿ ಆತಂಕ ಆವರಿಸಿದ ಆ ಕ್ಷಣದಲ್ಲಿಯೂ ಡಾ.ಅಂಜಲಿ ಅವರ ಧೈರ್ಯ ಮತ್ತು ಸೇವೆಯಿಂದಾಗಿ ಮತ್ತೆ ಜೀವಸ್ಪಂದನ ಮರಳಿದೆ.
ಇಡೀ ಪ್ರಯಾಣದ ಅವಧಿಯಲ್ಲಿ ಡಾ.ಅಂಜಲಿ ನಿಂಬಾಳ್ಕರ್ ಆ ಯುವತಿಯ ಪಕ್ಕದಲ್ಲೇ ನಿಂತು ನಿರಂತರವಾಗಿ ಅಮೆರಿಕ ಯುವತಿಯನ್ನು ನೋಡಿಕೊಂಡರು. ವಿಮಾನ ದೆಹಲಿಯಲ್ಲಿ ಇಳಿಯುವ ಮುನ್ನವೇ ತುರ್ತು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿ, ವಿಮಾನ ಲ್ಯಾಂಡ್ ಆದ ತಕ್ಷಣವೇ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿಸಿದರು. ಪ್ರಯಾಣದಲ್ಲಿ ಡಾ.ಅಂಜಲಿ ನಿಂಬಾಳ್ಕರ್ ಅವರ ಕಾಳಜಿ ಮತ್ತು ಮಾನವೀಯತೆಗೆ ಸಾಕ್ಷಿಯಾಯಿತು. ಡಾ.ಅಂಜಲಿ ನಿಂಬಾಳ್ಕರ್ ಅವರ ಮಾನವೀಯ ಸೇವೆಯನ್ನು ವಿಮಾನದ ಪೈಲಟ್, ವಿಮಾನ ಸಿಬ್ಬಂದಿ ಹಾಗೂ ಸಹಪ್ರಯಾಣಿಕರು ಶ್ಲಾಘಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ