* ಮಸೀದಿಗಳ ಮೈಕ್ ತೆಗೆದು ಹಾಕಲು ರಾಜ್ಯ ಸರಕಾರಕ್ಕೆ ಡೆಡ್‌ಲೈನ್
* ಕರ್ನಾಟ ಬಿಜೆಪಿ ಸರ್ಕಾರಕ್ಕೆ ಡೆಡ್‌ಲೈನ್ ಕೊಟ್ಟ ಆಂದೋಲಾ ಶ್ರೀ
* ಸರಕಾರಕ್ಕೆ ಮೇ 9 ರವರೆಗೆ ಗಡುವು
ವರದಿ :- ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್, ಕಲಬುರಗಿ
ಕಲಬುರಗಿ, (ಏ.20):- ಮೇ.9 ರ ರಂಜಾನ್ ದಿನದಂದು ಆಜಾನ್ ವಿರುದ್ದ ಹನುಮಾನ್ ಚಾಲಿಸ್ ಆಂದೋಲನ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಆಂದೋಲಾ ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಇಂದು(ಬುಧವಾರ) ಸುವರ್ಣನ್ಯೂಸ್ ಜೊತೆ ಮಾತನಾಡಿದ ಅವರು, ಆಜಾನ್ ವಿರುದ್ಧ ಮೇ 9 ರ ರಂಜಾನ್ ದಿನ ಮತ್ತೆ ಹೋರಾಟ ಶುರು ಮಾಡುತ್ತೇವೆ. ರಂಜಾನ್ ದಿನ ಮಸೀದಿಗಳಲ್ಲಿ ಮುಸ್ಲಿಮರು ಆಜಾನ್ ಮೊಳಗಿಸುವ ಐದೂ ಬಾರಿಯೂ ಮಸೀದಿಯ ಸಮೀಪದಲ್ಲಿರುವ ದೇವಸ್ಥಾನಗಳಲ್ಲಿ ನಾವು ಹನುಮಾನ್ ಚಾಲಿಸ್ ಮೊಳಗಿಸುತ್ತೆವೆ ಎಂದು ಹೇಳಿದ್ದಾರೆ.
ನಾವು ಆಜಾನ್ ಸೆ ಆಜಾದಿ ಕೇಳುತ್ತಿರುವುದು ನಮಗಾಗಿ ಅಲ್ಲ, ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಲು ಈ ಆಜಾದಿ ಬೇಡುತ್ತಿದ್ದೇವೆ. ಇದು ಶ್ರೀರಾಮ ಸೇನೆಯ ಬೇಡಿಕೆ ಮಾತ್ರವಲ್ಲ. ಸುಪ್ರೀಂ ಕೋರ್ಟ ಕೂಡ ಇದನ್ನೇ ಹೇಳಿದೆ. ನ್ಯಾಯಾಲಯದ ನಿರ್ದೇಶನ ಪಾಲಿಸಲು ಇವರಿಗೆ ತೊಂದರೆ ಇದೆ ಎಂದು ಸರಕಾರದ ವಿರುದ್ದ ಕಿಡಿಕಾರಿದರು.
ಮಸೀದಿ ಮೇಲಿನ ಮೈಕ್ ತೆರವಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ
ಸರಕಾರಕ್ಕೆ ಮೇ 9 ರವರೆಗೆ ಗಡುವು
ಮಸೀದಿಗಳ ಮೇಲಿನ ಮೈಕ್ ಗಳನ್ನು ತೆಗೆದು ಹಾಕಲು ರಾಜ್ಯ ಸರಕಾರಕ್ಕೆ ಮೇ 9 ರವರೆಗೆ ಗಡುವು ಕೊಟ್ಟಿದ್ದೇವೆ. ಅಷ್ಟರೊಳಗೆ ಮಸೀದಿ ಮೇಲಿನ ಮೈಕ್ ಗಳನ್ನು ತೆರವುಗೊಳಿಸಿ ಇಲ್ಲವೇ ಒಳಗಡೆ ಇರಿಸಿ. ಇದಾವುದೂ ಮಾಡದಿದ್ರೆ ಮೇ 9 ರ ರಂಜಾನ್ ದಿನ ಮಸೀದಿ ಸಮೀಪದಲ್ಲಿರುವ ಮಂದಿರಗಳಲ್ಲಿ ಹನುಮಾನ ಚಾಲಿಸ್ ಹಾಕುತ್ತೇವೆ. ರಾಜ್ಯದ ಎಲ್ಲಾ ಮಸೀದಿಗಳ ಬಳಿ ಇರುವ ಮಂದಿಗಳಲ್ಲಿ ಹನುಮಾನ ಚಾಲಿಸ್ ಹಾಕಲಾಗುವುದು ಎಂದರು.
ಶಾಂತಿ ಭಂಗವಾದ್ರೆ ಸಿಎಂ ಹೊಣೆ
ಮಸೀದಿ ಸಮೀಪದಲ್ಲಿರುವ ಮಂದಿರಗಳಲ್ಲಿ ಆಜಾನ್ ಸಮಯದಲ್ಲಿಯೇ ಹನುಮಾನ್ ಚಾಲಿಸ್ ಹಾಕುವುದರಿಂದ ಶಾಂತಿ ಭಂಗ ಆಗುತ್ತೇ ಅನ್ನುವುದಾದ್ರೆ ಸರಕಾರ ಎಚ್ಚೆತ್ತುಕೊಳ್ಳಲಿ ಎಂದು ಆಂದೋಲಾದ ಸಿದ್ದಲಿಂಗ ಸ್ವಾಮಿಜಿ ಕಿವಿ ಮಾತು ಹೇಳಿದರು. ಸರಕಾರ ಮೊದಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಮಸಿದಿ ಮೇಲಿನ ಮೈಕ್ ಗಳನ್ನು ತೆಗೆಸಬೇಕು. ಇಲ್ಲದಿದ್ರೆ ನಮ್ಮ ಅಭಿಯಾನ ನಿಶ್ಚಿತ. ಇದರಿಂದ ಅಂದು ಶಾಂತಿ ಭಂಗವಾದ್ರೆ ಅದಕ್ಕೆ ಸರಕಾರ ಮತ್ತು ಸಿಎಂ ಬೊಮ್ಮಾಯಿ ಅವರೇ ನೇರ ಹೊಣೆಯಾಗುತ್ತಾರೆ ಎಂದು ನೇರ ಎಚ್ಚರಿಕೆ ನೀಡಿದರು.
ಎಂ.ಬಿ ಪಾಟೀಲ್ ವಿರುದ್ದ ಆಕ್ರೋಶ
PFI ಜೊತೆ ವಿಶ್ವ ಹಿಂದೂಪರಿಷತ್, ಭಜರಂಗದಳ ನಿಷೇಧಿಸಿ ಎನ್ನುವ ಎಂ.ಬಿ ಪಾಟೀಲ್ ಹೇಳಿಕೆಗೆ ಆಂದೋಲಾ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಶಾಂತಿ ವ್ಯವಸ್ಥೆಗೆ ಭಂಗ ತರುವ ಕೆಲಸ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಗಳಂತ ಸಂಘಟನೆಗಳು ಯಾವತ್ತೂ ಮಾಡಿಲ್ಲ. ದೇಶ ವಿರೋಧಿ ಕೆಲಸ, ಶಾಂತಿ ಭಂಗ ತರುವಕೆಲಸ ಮಾಡುತ್ತಿರುವುದು ಪಿ.ಎಫ್.ಐ. ಹಾಗಾಗಿ ಅದನ್ನು ನಿಷೇಧಿಸಬೇಕಾಗಿದೆ ಎಂದು ಶ್ರೀಗಳು ಆಗ್ರಹಿಸಿದರು.
ಕಾಂಗ್ರೆಸ್ ಮೊದಲಿನಿಂದಲೂ ಮುಸ್ಲಿಂ ಓಟ್ ಬ್ಯಾಂಕ್ ಗಾಗಿ ಈ ರೀತಿ ಹೇಳಿಕೆ ನೀಡುತ್ತಲೇ ಬಂದಿದೆ. ಪಿ.ಎಫ್.ಐ ಜೊತೆಗೆ ಕಾಂಗ್ರೆಸ್ ಪಕ್ಷವನ್ನೂ ಬ್ಯಾನ್ ಮಾಡಬೇಕಾದ ಅಗತ್ಯ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.