ರಾಜ್ಯಕ್ಕೆ ಅನಂತ್‌ ಕೊಡುಗೆ ಅಮೂಲ್ಯ, ಸಿಎಂ ಶ್ಲಾಘನೆ

By Kannadaprabha NewsFirst Published May 7, 2022, 2:57 AM IST
Highlights

- ಬೆಂಗಳೂರು ಮೆಟ್ರೋ, ಅಂ.ರಾ. ಏರ್‌ಪೋರ್ಚ್‌ ನಿರ್ಮಾಣಕ್ಕೆ ಕಾರಣಕರ್ತರು
- ಹುಬ್ಬಳ್ಳಿಯಲ್ಲಿ ನೈಋುತ್ಯ ರೈಲ್ವೆ ಸ್ಥಾಪನೆಯಲ್ಲೂ ಅವರ ಪಾತ್ರ ಪ್ರಮುಖ
- ಕೃಷ್ಣಾ ನೀರು ರಾಜ್ಯಕ್ಕೆ ಸಮರ್ಪಕ ಹಂಚಿಕೆ ಆಗಲು ಅನಂತ್‌ ಕಾರಣ
- ಬೆಂಗಳೂರಲ್ಲಿ ‘ಅನಂತ ಪ್ರೇರಣಾ ಕೇಂದ್ರ’ಕ್ಕೆ ಚಾಲನೆ ನೀಡಿ ಬೊಮ್ಮಾಯಿ ಸ್ಮರಣೆ
 

ಬೆಂಗಳೂರು (ಮೇ.7): ರಾಜ್ಯದ ಜಲ, ನೆಲದ ವಿಚಾರದಲ್ಲಿ ಮಾಜಿ ಕೇಂದ್ರ ಸಚಿವ ದಿ.ಅನಂತಕುಮಾರ್‌ (Ananth kumar) ಅವರು ಗಟ್ಟಿನಿಲುವು ತಾಳುತ್ತಿದ್ದರು. ಬೆಂಗಳೂರು ಮೆಟ್ರೋ (Bengaluru Metro), ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (International Airport), ಹುಬ್ಬಳ್ಳಿ ನೈಋುತ್ಯ ರೈಲ್ವೆ ವಿಭಾಗ ಸ್ಥಾಪನೆಗೆ ಪ್ರಮುಖ ಪಾತ್ರ ವಹಿಸಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM basavaraj bommai)  ಕೊಂಡಾಡಿದರು.

ಜಯನಗರದ ಸೌತ್‌ಎಂಡ್‌ ವೃತ್ತದಲ್ಲಿ ಶುಕ್ರವಾರ ಅನಂತ್‌ ಕುಮಾರ್‌ ಕಚೇರಿಯಲ್ಲಿ ‘ಅನಂತ ಪ್ರೇರಣಾ ಕೇಂದ್ರ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಹಾಗೂ ರಾಜ್ಯದ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಅನಂತಕುಮಾರ್‌ ಸಹಕಾರ ನೀಡುತ್ತಿದ್ದರು. ನಮ್ಮ ಮೆಟ್ರೋ, ವಿಮಾನ ನಿಲ್ದಾಣ, ಕೃಷ್ಣಾ ಮೇಲ್ದಂಡೆ ಯೋಜನೆ, ಕಾವೇರಿ ಜಲ ವಿಷಯದಲ್ಲಿ (Cauvery Water Issue) ಬಿಗಿ ನಿಲುವಿನಿಂದ ರಾಜ್ಯಕ್ಕೆ ಪರಿಹಾರ ಕೊಡಿಸುವಲ್ಲಿ ಅನಂತಕುಮಾರ್‌ ಪಾತ್ರ ಶ್ಲಾಘನೀಯ ಎಂದರು.

ಕೃಷ್ಣಾ ನ್ಯಾಯಾಧಿಕರಣ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯ ಸಮ್ಮತವಾಗಿ ಕರ್ನಾಟಕದ ಪರವಾಗಿ ಹೋರಾಟ ನಡೆಸಿ ರಾಜ್ಯಕ್ಕೆ ಆಗಬಹುದಾದ ಆಪತ್ತನ್ನು ತಪ್ಪಿಸಿದರು ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು.

ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿ ನಾಯಕತ್ವ ವಹಿಸಿದರು. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಬಲಪಡಿಸುವುದರಲ್ಲಿ ನಾಯಕತ್ವ ವಹಿಸಿದರು. ಹತ್ತು ಜನ ಇದ್ದಾಗಲೂ, ಹತ್ತು ಲಕ್ಷ ಜನ ಇದ್ದಾಗಲೂ ನಾಯಕತ್ವ ವಹಿಸಿದ್ದರು. ಬಹಳ ಅಪರೂಪದ ನಾಯಕತ್ವ ಅವರದ್ದಾಗಿತ್ತು ಎಂದರು.

‘ಅನಂತಕುಮಾರ್‌ ಅವರೊಂದಿಗೆ ಚಿಕ್ಕಂದಿನಿಂದಲೂ ಸ್ನೇಹವಿತ್ತು. ನಾವಿಬ್ಬರೂ ಸಹಪಾಠಿಗಳಾಗಿದ್ದು, ನಮ್ಮ ಮಧ್ಯೆ ಆತ್ಮೀಯ ಒಡನಾಟವಿತ್ತು. ನಮ್ಮ ನಡುವೆ ಯಾರೇ ಕಾಲೇಜಿಗೆ ಬೇಗ ಹೋದರೂ ಒಬ್ಬರು ಮೇಜನ್ನು ಕಾಯ್ದಿರಿಸುತ್ತಿದ್ದೆವು. ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ವಿದ್ಯಾರ್ಥಿ ಕ್ರಿಯಾ ಸಮಿತಿ ರೂಪಿಸಿ ಅನಂತ ಕುಮಾರ್‌ ಅವರನ್ನು ಕಾರ್ಯದರ್ಶಿಗಳನ್ನಾಗಿ ಮಾಡಲಾಗಿತ್ತು. ತುರ್ತು ಪರಿಸ್ಥಿತಿ ವಿರುದ್ಧ ದೊಡ್ಡ ಪ್ರಮಾಣದ ಹೋರಾಟಕ್ಕೆ ನಿಷೇಧವಿದ್ದರೂ ನೂರಾರು ವಿದ್ಯಾರ್ಥಿಗಳನ್ನು ಸೇರಿಸಿ ದೊಡ್ಡ ಹೋರಾಟ ನಡೆದಿತ್ತು. ಲಾಠಿಚಾಜ್‌ರ್‍ ಆಗಿ ಪೊಲೀಸರು ಅನಂತ ಕುಮಾರ್‌ ಅವರನ್ನು ಬಂಧಿಸಿದರು’ ಎಂದು ಹೇಳಿದರು.

ಪ್ರೀತಿಯ ಗಾಳ: ‘ಬಿಜೆಪಿಗೆ ಬರುವಂತೆ ಆಗಿಂದಾಗ್ಗೆ ನನಗೆ ಗಾಳ ಹಾಕುತ್ತಿದ್ದರು. ಆದರೂ ನಾನು ಬರಲ್ಲ ಎನ್ನುತ್ತಿದ್ದೆ. ಕೊನೆಗೆ ಬಿಜೆಪಿ ಸೇರುವ ಸಮಯದಲ್ಲಿ ‘ಕೊನೆಗೂ ಬಂದೆಯಲ್ಲ’ ಎಂದು ಹೇಳಿದರು. ‘ನಿನ್ನ ಪ್ರೀತಿಯ ಗಾಳದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದರು’ ಎಂದು ಸಿಎಂ ಸ್ಮರಿಸಿದರು.

ತೇಜಸ್ವಿನಿ ಅನಂತಕುಮಾರ್‌ ಅವರ ಸಾಮಾಜಿಕ ಚಟುವಟಿಕೆಗಳು, ಅದಮ್ಯಚೇತನದ ಕೆಲಸ, ಸಸ್ಯಾಗ್ರಹ ಕಾರ್ಯಕ್ರಮ ಉತ್ತಮ ಬೆಳವಣಿಗೆ. ಅನಂತಕುಮಾರ್‌ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಎಲ್ಲ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಸರ್ಕಾರದ ಕೊರೋನಾ ಸಾವಿನ ಲೆಕ್ಕ ಸುಳ್ಳು, ಕಾಂಗ್ರೆಸ್‌ ಕಿಡಿ

ಕರ್ತವ್ಯ ಪಾಲನೆಗೆ ಸದಾ ಸಿದ್ಧ: ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಮಾತನಾಡಿ, ಅನಂತಕುಮಾರ್‌ ಸದಾ ದೇಶ ಸೇವೆಯಲ್ಲಿ ತೊಡಗಿದ್ದರು. ಅವರ ಕರ್ತವ್ಯ ನಿಷ್ಠೆ ಪ್ರತಿಯೊಬ್ಬರಿಗೂ ಪ್ರೇರಣೆ. ನಗುಮೊಗದ ಅನಂತ್‌ಕುಮಾರ್‌, ಆರೋಗ್ಯ ಸರಿಯಿಲ್ಲದಿದ್ದರೂ, ಕರ್ತವ್ಯ ಪರಿಪಾಲನೆಯಲ್ಲಿ ಹಿಂದೇಟು ಹಾಕುತ್ತಿರಲಿಲ್ಲ. ಸದಾಕಾಲ ಕಾರ್ಯನಿರತವಾಗಿರುತ್ತಿದ್ದರು. ಕರ್ತವ್ಯ ನಿಷ್ಠೆಯಲ್ಲಿ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದ್ದರು ಎಂದರು.

ಮಾಜಿ ಸಚಿವ ಪುಟ್ಟಸ್ವಾಮಿ ಈಗ ಪೂರ್ಣಾನಂದ ಪುರಿ ಸ್ವಾಮೀಜಿ

ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, 1997ರಲ್ಲಿ ಆರಂಭವಾದ ಅದಮ್ಯ ಚೇತನ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಪ್ರತಿ ದಿನ 1.7 ಲಕ್ಷ ಜನರಿಗೆ ಊಟ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೌರ ಕಾರ್ಮಿಕರಿಗೂ ಬಿಸಿಯೂಟ ವಿತರಣೆ ಕಾರ್ಯಕ್ರಮ ವಿಸ್ತರಿಸಲಾಗಿದೆ ಎಂದು ಹೇಳಿದರು. ಸಂಸದ ತೇಜಸ್ವಿ ಸೂರ್ಯ, ಶಾಸಕ ಎಲ್‌.ಎ. ರವಿಸುಬ್ರಹ್ಮಣ್ಯ, ವಿಧಾನ ಪರಿಷತ್‌ ಸದಸ್ಯ ಅ. ದೇವೇಗೌಡ ಉಪಸ್ಥಿತರಿದ್ದರು.

click me!