ದೇವೇಗೌಡರು ವಾನಪ್ರಸ್ಥಾಶ್ರಮದ ಶಾಂತಿ ಪಡೆಯಲಿ!

By Suvarna NewsFirst Published Dec 15, 2019, 3:58 PM IST
Highlights

ಆಕಸ್ಮಿಕ ಸಾಧನೆಯ ಹತ್ತು ತಿಂಗಳು ದೇವೇಗೌಡರಿಗೆ ಮಾಜಿ ಪ್ರಧಾನಿ ಎಂಬ ಪಟ್ಟವನ್ನು ಗಟ್ಟಿಮಾಡಿತು. ಅದು ತಮಾಷೆಯೂ ಮತ್ತು ಅಪಾಯಕಾರಿಯೂ ಆಗಿತ್ತು. ಈ ದೇಶವು ತಮ್ಮ ನೇತೃತ್ವವನ್ನಷ್ಟೇ ಬಯಸುವುದಿಲ್ಲ, ಜೊತೆಗೆ ತಮ್ಮ ಮಕ್ಕಳು, ಮೊಮ್ಮಕ್ಕಳು ಮತ್ತು ಸೊಸೆಯಂದಿರ ನೇತೃತ್ವವನ್ನೂ ಬಯಸುತ್ತದೆ ಎಂದು ಅವರು ಮನದಟ್ಟು ಮಾಡಿಕೊಂಡಿದ್ದಾರೆ.

ತಮ್ಮ ರಾಜಕೀಯದಿಂದ ಜನರು ಬೇಸತ್ತು ಹೋಗಿದ್ದಾರೆ ಎಂಬುದನ್ನು ದೇವೇಗೌಡರು ಯಾವಾಗ ಅರ್ಥಮಾಡಿಕೊಳ್ಳುತ್ತಾರೆ? ಅವರ ಅನುಯಾಯಿಗಳೇ ಬೇಸತ್ತು ಹೋಗಿದ್ದಾರೆ. ಜೆಡಿಎಸ್‌ನ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದ ಎ.ಎಚ್‌. ವಿಶ್ವನಾಥ್‌ ಸೇರಿದಂತೆ ಹಲವರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ.

ಕಳೆದ ವಾರದ ಉಪಚುನಾವಣೆಗಳಲ್ಲಿ 15 ಸ್ಥಾನಗಳಿಗೆ ಸ್ಪರ್ಧೆ ಇತ್ತು. ಬಿಜೆಪಿ 12 ಗೆದ್ದರೆ ಕಾಂಗ್ರೆಸ್‌ 2 ಗೆದ್ದಿತು. ಒಂದು ಸ್ಥಾನ ಸ್ವತಂತ್ರ ಅಭ್ಯರ್ಥಿಗೆ ಹೋದರೆ, ದೇವೇಗೌಡರ ಪಕ್ಷ ದೊಡ್ಡ ಶೂನ್ಯವನ್ನು ಸಂಪಾದಿಸಿತು.

ಮೋದಿ ಕೈಯಲ್ಲಿ ಅಸ್ಸಾಲ್ಟ್ ರೈಫಲ್: ಸಿಕ್ಕ ಬಲಕ್ಕೆ ಸೈನಿಕರಿಗೆ ಖುಷಿಯಾಗಿದೆ ಫುಲ್!

ಇದೇನು ತತ್ವಾಧಾರಿತ, ಸಿದ್ಧಾಂತವನ್ನು ಆಧರಿಸಿದ ಚುನಾವಣೆಯಾಗಿರಲಿಲ್ಲ. ವಾಸ್ತವವಾಗಿ ಚುನಾವಣೆಗೆ ಮುಖ್ಯ ಕಾರಣವೆಂದರೆ, ಎಂದಿನ ಕಾರಣಗಳಿಗಾಗಿ ಕಾಂಗ್ರೆಸ್‌- ಜೆಡಿಎಸ್‌ ಎಂಎಲ್‌ಎಗಳು ಸಾಮೂಹಿಕವಾಗಿ ರಾಜೀನಾಮೆಯನ್ನು ನೀಡಿದ್ದು. ಈ ಪ್ರಕ್ರಿಯೆಯಲ್ಲಿ ಬಿಜೆಪಿಯ ಎಷ್ಟುಕೋಟಿಗಳು ಉರುಳಿಹೋದವು ಎಂಬುದು ನಮಗೆ ಗೊತ್ತಿಲ್ಲ. ರಾಜೀನಾಮೆ ನೀಡಿದ ಎಲ್ಲ ಶಾಸಕರೂ ‘ಭವಿಷ್ಯದ ಮಂತ್ರಿಗಳು’ ಎಂದು ಬಿಜೆಪಿ ವರ್ಣಿಸಿದ್ದಷ್ಟೇ ನಮಗೆ ಗೊತ್ತಿರುವುದು.

ಹಣವು ಒಂದು ಕಡೆಯಿಂದ ಕರೆಯುತ್ತಿದ್ದರೆ ಅಧಿಕಾರವು ಮತ್ತೊಂದು ಕಡೆಯಿಂದ ಕರೆಯುತ್ತಿತ್ತು. ಬಿಜೆಪಿಗೆ ನಿಷ್ಠೆ ತೋರಿಸಿದವರು ವಿಜಯದ ಹಾದಿ ಹಿಡಿದರು. ಬಿಜೆಪಿಯು ಭರವಸೆ ನೀಡಿದಂತೆ ಪಕ್ಷಾಂತರ ಮಾಡಿ ಗೆಲವು ಸಾಧಿಸಿದ ಎಲ್ಲರಿಗೂ ಸಚಿವ ಪದವಿಯನ್ನು ನೀಡುವುದು ಆಳುವ ಪಕ್ಷಕ್ಕೆ ಕಷ್ಟವಾಗಬಹುದು ಎಂದು ನಾವು ಆಲೋಚಿಸಬಹುದು. ಆದರೆ ನಮ್ಮ ಪ್ರಜಾಪ್ರಭುತ್ವವು ಎಷ್ಟೊಂದು ಸ್ಥಿತಿಸ್ಥಾಪಕತ್ವ ಉಳ್ಳದ್ದು ಎಂದರೆ 70ರಿಂದ 100 ಸದಸ್ಯರ ಸಚಿವ ಸಂಪುಟವನ್ನು ಮಾಡುವುದಕ್ಕೂ ಯಾವುದೇ ಸಮಸ್ಯೆ ಇರಲಾರದು.

ಒಬ್ಬ ಒಕ್ಕಲಿಗರಾಗಿ ದೇವೇಗೌಡರು ಸುಲಭವಾಗಿ ಮಹತ್ವದ ಮತ್ತು ಸಂಖ್ಯೆಯ ದೃಷ್ಟಿಯಿಂದ ಮುಖ್ಯವಾಗಿರುವ ಆ ಸಮುದಾಯದ ಮತಗಳನ್ನು ಪಡೆಯುತ್ತಿದ್ದರು. ಆದರೆ ಶೇಕಡಾ 60ರಷ್ಟುಒಕ್ಕಲಿಗರು ಈ ಮೊದಲೇ ಬಿಜೆಪಿಗೆ ಮತ ಹಾಕಿರುವುದು ಕಂಡುಬಂದಿತ್ತು.

ಒಬ್ಬರಲ್ಲ ಇನ್ನೊಬ್ಬರೊಂದಿಗೆ ಚೌಕಾಶಿಯ ಆಧಾರದ ಮೇಲೆ ಅಧಿಕಾರದಲ್ಲಿರುವ ಪಕ್ಷವು ಉತ್ತಮವಾಗಿ ಪರಿಣಾಮಕಾರಿಯಾಗಿಯೇ ಆಟವನ್ನು ಆಡಬಲ್ಲುದು. ಅದೇನೇ ಇದ್ದರೂ, ಈ ಬಾರಿ ಮತದಾರರು ಜೆಡಿಎಸ್‌ ಪಕ್ಷವನ್ನು ತಿರಸ್ಕರಿಸಿರುವುದನ್ನು ನೋಡಿದರೆ ದೇವೇಗೌಡರ ಸ್ವಾರ್ಥ ರಾಜಕಾರಣವು ಹಿಂತಿರುಗದ ನೆಲೆಯನ್ನು ತಲುಪಿದ್ದನ್ನು ತೋರಿಸುತ್ತದೆ.

ಸೋಲಿಗೆ ಒಂದು ಕಾರಣ ಕೊಡೋಣ ಅಂದರೂ ಅವರ ಬಳಿ ಏನೂ ಇರಲಿಲ್ಲ. ತಮಗೊಂದು ಪ್ರಭಾವಳಿ ಇದೆ ಎಂದು ಅವರು ಕಲ್ಪನೆ ಮಾಡಿಕೊಂಡಿದ್ದರು. ಅದು ಒಂದಾನೊಂದು ಕಾಲದಲ್ಲಿ ಆಕಸ್ಮಿಕ ಸನ್ನಿವೇಶಗಳ ಕಾರಣದಿಂದಾಗಿ ಅವರನ್ನು ಪ್ರಧಾನಮಂತ್ರಿಯ ಗದ್ದುಗೆಯ ಮೇಲೆ ಕುಳ್ಳಿರಿದ ಸನ್ನಿವೇಶ. ಅವರು ಅಲ್ಲಿ ಒಂದು ವರ್ಷ ಕೂಡ ಉಳಿಯಲಿಲ್ಲ. ಆ ಆಕಸ್ಮಿಕ ಸಾಧನೆಯ ಹತ್ತು ತಿಂಗಳು ಅವರಿಗೆ ಮಾಜಿ ಪ್ರಧಾನಿ ಎಂಬ ಪಟ್ಟವನ್ನು ಗಟ್ಟಿಮಾಡಿತು.

ಕಡ್ಲೇಕಾಯಿ ಮಾರುವ ಪಾಕ್‌ ಮಾಜಿ ಸಂಸದಗೆ ಪೌರತ್ವ ಖುಷಿ!

ಅದು ತಮಾಷೆಯದೂ ಮತ್ತು ಅಪಾಯಕಾರಿಯಾದುದೂ ಆಗಿತ್ತು. ಈ ದೇಶವು ತಮ್ಮ ನೇತೃತ್ವವನ್ನಷ್ಟೇ ಬಯಸುವುದಿಲ್ಲ, ಜೊತೆಗೆ ತಮ್ಮ ಮಕ್ಕಳು, ಮೊಮ್ಮಕ್ಕಳು ಮತ್ತು ಸೊಸೆಯಂದಿರ ನೇತೃತ್ವವನ್ನೂ ಬಯಸುತ್ತದೆ ಎಂದು ಅವರು ಮನದಟ್ಟು ಮಾಡಿಕೊಂಡಿದ್ದಾರೆ. ದುರ್ದೈವವಶಾತ್‌ ಅವರ ಅಪ್ಪ ಮಕ್ಕಳ ಕಲ್ಪನೆಯು ಇಂದಿರಾ ಗಾಂಧಿಯವರ ಅಮ್ಮ-ಮಕ್ಕಳ ವ್ಯವಹಾರದಷ್ಟುಲಾಭವನ್ನು ಪಡೆದುಕೊಳ್ಳಲಿಲ್ಲ.

ನಮ್ಮ ಪ್ರಾಚೀನ ಶಾಸ್ತ್ರಗಳು ಹಾಕಿಕೊಟ್ಟತತ್ವಗಳ ಪ್ರಕಾರ ದೇವೇಗೌಡರು ವಾನಪ್ರಸ್ಥದಲ್ಲಿ ಶಾಂತಿಯನ್ನು ಸವಿಯಲು ಸೂಕ್ತವಾದ ವಯಸ್ಸನ್ನು ತಲುಪಿದ್ದಾರೆ. ಈಗ 86ನೇ ವರ್ಷದಲ್ಲಿರುವ ಅವರು ಯಡಿಯೂರಪ್ಪನವರಿಗಿಂತ ಹತ್ತು ವರ್ಷ ದೊಡ್ಡವರು. ಕಾಂಗ್ರೆಸ್ಸಿನ ಸಿದ್ದರಾಮಯ್ಯನವರಿಗಿಂತ 15 ವರ್ಷ ದೊಡ್ಡವರು ಮತ್ತು ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆಗಿಂತ ಒಂಬತ್ತು ವರ್ಷ ಹಿರಿಯರು. ಅವರ ಆರೋಗ್ಯ ಕೂಡ ಚೆನ್ನಾಗಿಲ್ಲ. ಹೀಗಿದ್ದೂ ತಮ್ಮ ಅಸ್ಮಿತೆಯನ್ನು ತೋರಿಸಿಕೊಳ್ಳಲು ಅವರು ಉತ್ಸುಕರಾಗಿದ್ದಾರೆ.

 ಕಳೆದ ವರ್ಷ ಅವರು ಶ್ರವಣಬೆಳಗೊಳದಲ್ಲಿ 400 ಮೆಟ್ಟಿಲುಗಳನ್ನು ಏರಿದರು. ಅದಕ್ಕೆ ಕಾರಣ ಇಷ್ಟೇ, ಅದಕ್ಕಿಂತ ಒಂದು ವಾರ ಮೊದಲು ಅವರಿಗಿಂತ ಕಿರಿಯರಾದ ಸಿದ್ದರಾಮಯ್ಯ ಅದನ್ನು ಏರಿದ್ದರು ಎಂಬುದು. ತಾವು ಹಾಸಿಗೆಯ ಮೇಲೆ ಯೋಗಾಸನ ಮಾಡಿದ್ದನ್ನು ಪ್ರಸಾರ ಮಾಡುವುದಕ್ಕೆ ಅವರು ಟೀವಿ ಕ್ಯಾಮೆರಾಗಳನ್ನು ವ್ಯವಸ್ಥೆ ಮಾಡಿಕೊಂಡಿದ್ದರು. ಇಂಥ ಧೈರ್ಯದ ನಡೆಗಳಿಂದ ಅವರ ವಯಸ್ಸಿನಲ್ಲಿ ಒಂದು ದಿನ ಕೂಡ ಕಡಿಮೆಯಾಗಿಲ್ಲ ಅಥವಾ ರಕ್ತದೊತ್ತಡದಲ್ಲಿ ಏರುಪೇರು ಮತ್ತು ಮಧುಮೇಹದಂಥ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳೂ ನಿವಾರಣೆಯಾಗಲಿಲ್ಲ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಒಂದು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ನಿಲ್ಲಿಸಿದಾಗ ಅದರ ಲಾಭ ಬಿಜೆಪಿಗೆ ಆಯಿತು, ಏಕೆಂದರೆ ಬಿಜೆಪಿ ವಿರೋಧಿ ಮತಗಳು ಒಡೆದುಹೋದವು. ಯಡಿಯೂರಪ್ಪನವರ ಮೇಲಿದ್ದ ಕಳಂಕ (ಭ್ರಷ್ಟಾಚಾರಕ್ಕಾಗಿ ಜೈಲಿಗೆ ಹೋಗಿ ಬಂದ ಅವರು ರಾಜ್ಯದಲ್ಲಿ ಬಿಜೆಪಿಯ ಏಕೈಕ ಅಧಿನಾಯಕ) ಸಮರ್ಥ ಪರ್ಯಾಯದ ಅನುಪಸ್ಥಿತಿಯಲ್ಲಿ ಮರೆಯಾಗಿ ಹೋಯಿತು.

ಬಿಜೆಪಿಯ ಈ ಗೊಂದಲದ ಲಾಭವನ್ನು ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್‌ ಏನಾದರೂ ಹೊಳಹುಗಳನ್ನು ಹೊಂದಿದೆಯೋ ನಿಶ್ಚಯವಿಲ್ಲ. ಹಾಗೊಂದು ವೇಳೆ ಅದು ಹೊಳಹುಗಳನ್ನು ಹೊಂದಿದ್ದರೆ ಅದು ವೈಯಕ್ತಿಕವಾದದ್ದೆ? ಸಿದ್ದರಾಮಯ್ಯ ಅವರ ನಾಯಕತ್ವವು ನಾಚಿಕೆಯಿಂದ ಈಗಾಗಲೇ ರಾಜೀನಾಮೆ ಸಲ್ಲಿಸಿದೆ. ವಿಶ್ವಾಸಾರ್ಹ ಎನಿಸುವ ಯುವ ಪೀಳಿಗೆಯ ನಾಯಕತ್ವ ಕಣ್ಣಿಗೆ ಕಾಣಿಸುತ್ತಿಲ್ಲ.

ಒಂದು ವಿವೇಚನೆಯುಕ್ತ ಮಾರ್ಗ ಮುಂದಿರುವುದೆಂದರೆ ಶೂನ್ಯ ಸಂಪಾದಿಸಿರುವ ಜೆಡಿಎಸ್‌ ವಿಸರ್ಜನೆಗೊಂಡು ದ್ವಿಪಕ್ಷ ವ್ಯವಸ್ಥೆ ಉದಯಿಸುವುದು. ಆದರೆ ಇದು ಸಾಧ್ಯವಾಗುವುದಿಲ್ಲ, ಏಕೆಂದರೆ ದೇವೇಗೌಡರ ಅಹಂ ಇದನ್ನು ಆಗಗೊಡುವುದಿಲ್ಲ.

ಇದರರ್ಥ ಕರ್ನಾಟಕ ರಾಜ್ಯವು ಮಹಾರಾಷ್ಟ್ರದಲ್ಲಿ ಆಗಿರುವಂತೆ ಹೊಸ ಬದುಕನ್ನು ನೀಡುವಂಥ ಪವಾಡದ ಪುನರಾವರ್ತನೆಯಾಗುವ ಅವಕಾಶ ಪಡೆದಿಲ್ಲ. ಪರಸ್ಪರ ವಿರೋಧಿಯಾದ ಕಾಂಗ್ರೆಸ್‌ ಮತ್ತು ಶಿವಸೇನೆ ಒಟ್ಟಿಗೆ ಬಂದವು, ಏಕೆಂದರೆ ಅಲ್ಲಿ ತೀಕ್ಷ$್ಣ ತಂತ್ರಗಾರರಾದ ಶರದ್‌ ಪವಾರ್‌ರಂಥವರು ನಡೆಗಳನ್ನು ಚಲಾಯಿಸಿದರು.

ಕರ್ನಾಟಕದಲ್ಲಿರುವುದು ಒಬ್ಬರೇ ಒಬ್ಬರು ದೇವೇಗೌಡರು. ಅವರ ಜಗತ್ತು ಪ್ರಾರಂಭವಾಗುವುದು ಹೊಳೆನರಸೀಪುರದಲ್ಲಿ ಮತ್ತು ಕೊನೆಯಾಗುವುದೂ ಹೊಳೆನರಸೀಪುರದಲ್ಲಿ. ಒಂದು ದಿನ ಅವರು ಕರ್ನಾಟಕದಲ್ಲಿ ಕಾಂಗ್ರೆಸ್‌ ನೇತೃತ್ವದ ರಂಗವು ಪ್ರವರ್ಧಮಾನಕ್ಕೆ ಬರುತ್ತದೆ ಎಂದು ಹೇಳುತ್ತಾರೆ. ಅದರ ಮರುದಿನವೇ ಏಕತಾ ಮೂರ್ತಿಯ ಹಿಂದಿರುವ ಮೋದಿಯವರ ದರ್ಶನದ ಉದಾತ್ತತೆಯ ಬಗ್ಗೆ ಮಾತನಾಡುತ್ತಾರೆ. ಅಲ್ಲೆಲ್ಲಿಯೋ ರೋಗಿಷ್ಠ ಮತ್ತು/ಅಥವಾ ಗೊಂದಲದ ಮನಸ್ಸು ಇದೆ. ಎಲ್ಲಿ?

- ಟಿಜೆಎಸ್ ಜಾರ್ಜ್ 

 

click me!