ರಾಜ್ಯ ಸೇವೆಯಿಂದ ಡಿಜಿಪಿ ಪ್ರವೀಣ್‌ ಸೂದ್‌ ಬಿಡುಗಡೆ ಹಿನ್ನೆಲೆ;ಸಹೋದ್ಯೋಗಿಗಳಿಗೆ ಭಾವನಾತ್ಮಕ ಪತ್ರ

Published : May 23, 2023, 09:50 AM ISTUpdated : May 23, 2023, 09:51 AM IST
ರಾಜ್ಯ ಸೇವೆಯಿಂದ ಡಿಜಿಪಿ ಪ್ರವೀಣ್‌ ಸೂದ್‌ ಬಿಡುಗಡೆ ಹಿನ್ನೆಲೆ;ಸಹೋದ್ಯೋಗಿಗಳಿಗೆ  ಭಾವನಾತ್ಮಕ ಪತ್ರ

ಸಾರಾಂಶ

 ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ನಿರ್ದೇಶಕರಾಗಿ ನೇಮಕಗೊಂಡಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಸೋಮವಾರ ರಾಜ್ಯ ಸೇವೆಯಿಂದ ಬಿಡುಗಡೆಯಾದರು. ಈ ಸಂದರ್ಭದಲ್ಲಿ ಅವರು ತಮ್ಮ ಸಹೋದ್ಯೋಗಿಗಳಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

ಬೆಂಗಳೂರು (ಮೇ.23) : ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ನಿರ್ದೇಶಕರಾಗಿ ನೇಮಕಗೊಂಡಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಸೋಮವಾರ ರಾಜ್ಯ ಸೇವೆಯಿಂದ ಬಿಡುಗಡೆಯಾದರು. ಈ ಸಂದರ್ಭದಲ್ಲಿ ಅವರು ತಮ್ಮ ಸಹೋದ್ಯೋಗಿಗಳಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

‘ರಾಜ್ಯ ಪೊಲಿಸ್‌ ಇಲಾಖೆಯ ಮುಖ್ಯಸ್ಥನಾಗಿ ಭಾರವಾದ ಹೃದಯದಿಂದ ಈ ಕೊನೆಯ ಪತ್ರ ಬರೆಯುತ್ತಿದ್ದೇನೆ. ಮೂರು ವರ್ಷಗಳ ಕಾಲ ಮಾರಿಷನ್‌ ದೇಶದಲ್ಲಿ ಪೊಲೀಸ್‌ ಸಲಹೆಗಾರನಾಗಿ ಸೇವೆ ಸಲ್ಲಿಸಿದ್ದರ ಹೊರತಾಗಿ ಇಲಾಖೆಯಲ್ಲಿ 37 ವರ್ಷ ಹಾಗೂ ಇಲಾಖಾ ಮುಖ್ಯಸ್ಥನಾಗಿ ಮೂರೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಇಲಾಖೆಯ ವಿವಿಧ ಹುದ್ದೆಗಳಲ್ಲಿ ವೃತ್ತಿಪರತೆ ಮತ್ತು ಸೇವಾ ಮನೋಭಾವದಿಂದ ನನ್ನನ್ನು ಅರ್ಪಿಸಿಕೊಂಡಿದ್ದೇನೆ’ ಎಂದು ತಿಳಿಸಿದ್ದಾರೆ.

ಪ್ರವೀಣ್‌ ಸೂದ್‌ ಸಿಬಿಐ ನಿರ್ದೇಶಕರಾಗಿ ನೇಮಕ ಹಿನ್ನೆಲೆ; ಡಿಜಿಪಿಯಾಗಿ ಅಲೋಕ್‌ ಪದಗ್ರಹಣ

‘ಈ ದಿನ ರಾಜ್ಯ ಪೊಲೀಸ್‌ ಮುಖ್ಯಸ್ಥ(State Police Chief)ನಾಗಿ ನಿರ್ಗಮಿಸುತ್ತಿದ್ದರೂ ಮತ್ತೊಂದು ಹುದ್ದೆಯಲ್ಲಿ ಸೇವೆ ಸಲ್ಲಿಸಲು ಸದಾವಕಾಶ ದೊರಕಿದೆ. ಜೀವನ, ರಿಲೇ ಓಟದ ತರಹ ಮತ್ತು ನಾವು ಅಧಿಕಾರವನ್ನು ಮುಂದಿನವರಿಗೆ ಹಸ್ತಾಂತರ ಮಾಡದ ಹೊರತು ಜಯಗಳಿಸಲು ಸಾಧ್ಯವಿಲ್ಲ. ಪೊಲೀಸ್‌ ಮುಖ್ಯಸ್ಥನಾಗಿ ಒಂದು ಪಡೆಯನ್ನು ಮುನ್ನಡೆಸುವುದು ನಿಜಕ್ಕೂ ಸವಾಲಿನ ವಿಷಯವೇ ಸರಿ. ಆದರೆ, ಕಾನ್ಸ್‌ಟೇಬಲ್‌ನಿಂದ ಹಿಡಿದು ಡಿಜಿ ಹುದ್ದೆವರೆಗಿನ ನನ್ನ ಎಲ್ಲಾ ಸಹೋದ್ಯೋಗಿಗಳು ನೀಡಿದ ಸಹಕಾರದಿಂದ ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಸಾಧ್ಯವಾಯಿತು. ಉತ್ತುಂಗದಲ್ಲಿ ಒಮ್ಮೊಮ್ಮೆ ಏಕಾಂಗಿಭಾವ ಕಾಡಿದ್ದೂ ಉಂಟು. ಆದರೆ, ಅವು ಕೆಲವೇ ಕ್ಷಣಗಳಾಗಿದ್ದವು’ ಎಂದಿದ್ದಾರೆ.

‘ಪ್ರತಿಯೊಬ್ಬ ಐಪಿಎಸ್‌ ಅಧಿಕಾರಿಗೆ ನಾಯಕತ್ವ ಮೂಲಗುಣ ಎಂಬುದು ನೆನಪಿರಬೇಕು. ಐಪಿಎಸ್‌ ಅಧಿಕಾರಿಗಳು ಇಲಾಖೆಯ ಸುಧಾರಣೆಗಾಗಿ ಯಾವುದೇ ನಿರ್ದಿಷ್ಟಹುದ್ದೆಯನ್ನು ಅಲಂಕರಿಸಲು ಕಾಯಬಾರದು. ಜಿಲ್ಲಾ ವರಿಷ್ಠಾಧಿಕಾರಿ, ಆಯುಕ್ತರು ಅಥವಾ ಮಹಾನಿರ್ದೇಶಕರ ಹುದ್ದೆಯನ್ನೇರಿದರೆ ಮಾತ್ರ ಬದಲಾವಣೆ ಸಾಧ್ಯವೆಂದು ಕಾಯುತ್ತಾ ಕೂರುವುದು ಸಮಂಜಸವಲ್ಲ. ಪೊಲೀಸ್‌ ಪಡೆಯ ಸುಧಾರಣೆಗೆ ಪ್ರತಿಯೊಂದು ಹುದ್ದೆಯು ನಮಗೆ ಉತ್ತಮ ಅವಕಾಶ ಕಲ್ಪಿಸಿಕೊಡುತ್ತದೆ. ಮಾಧ್ಯಮಗಳು ಕೆಲವೊಂದು ಹುದ್ದೆಗಳನ್ನು ಎಲ್ಲರ ಹುಬ್ಬೇರುವಂತೆ ವರ್ಣರಂಜಿತವಾಗಿ ಬಿಂಬಿಸುತ್ತವೆ. ಆದರೆ ಇನ್ನುಳಿದ ಹುದ್ದೆಗಳು ಕೇವಲ ಅಧೀನ ಸಿಬ್ಬಂದಿಯ ನಿಶ್ಯಬ್ದ ಹೊಗಳಿಕೆಗೆ ಪಾತ್ರವಾಗುತ್ತವೆ. ನಿಜವಾಗಿ ಅಷ್ಟೇನೂ ಮಹತ್ವವಲ್ಲದ ಹುದ್ದೆಗಳಲ್ಲಿ ವ್ಯವಸ್ಥೆಯ ಬದಲಾವಣೆಗೆ ಉತ್ತಮ ಅವಕಾಶ ಲಭಿಸುತ್ತದೆ. ಮಾಧ್ಯಮದವರು ಇದನ್ನು ಗಮನಿಸಲಾರರು. ಆದರೆ, ವೀಕ್ಷಕನಾಗಿ ಸಾಮಾನ್ಯ ಕಾನ್ಸ್‌ಟೇಬಲ್‌ ಇದನ್ನು ಗುರುತಿಸಲು ಶಕ್ತನಾಗಿರುತ್ತಾನೆ. ಇವರೇ ಅಧಿಕಾರಿಗಳ ಕಾರ್ಯವೈಖರಿಯ ನಿಜವಾದ ತೀರ್ಪುಗಾರರು’ ಎಂದು ತಮ್ಮ ಸಹೋದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ.

 

ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ರಾಜ್ಯಕ್ಕೆ ಕೀರ್ತಿ ತರುವೆ: ಪ್ರವೀಣ್‌ ಸೂದ್‌

‘ರಾಜ್ಯದ ಜನತೆ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ನನಗೆ ಹಾಗೂ ನನ್ನ ಕುಟುಂಬಕ್ಕೆ ಅಪಾರ ಪ್ರೀತಿ ತೋರಿದ್ದಾರೆ. ಕರ್ನಾಟಕ ರಾಜ್ಯ ನನ್ನ ಜನ್ಮಭೂಮಿ ಅಲ್ಲದಿದ್ದರೂ ಇದು ನನ್ನ ಕರ್ಮಭೂಮಿ. ಮುಂದೆ ಎರಡು ವರ್ಷಗಳ ನಂತರ ಕನ್ನಡ ನಾಡಿಗೆ ಮರಳು ಬರಲು ನಾನು ಕಾತುರದಿಂದ ಕಾಯುತ್ತಿರುತ್ತೇನೆ. ನನಗೆ ಲಭಿಸಿದ್ದಕ್ಕಿಂತ ಹೆಚ್ಚಿನ ದೈವಾನುಗ್ರಹ ನಿಮಗೆಲ್ಲರಿಗೂ ಲಭಿಸಲಿ’ ಎಂದು ಪ್ರವೀಣ್‌ ಸೂದ್‌ ಬರೆದಿರುವ ಸುದೀರ್ಘ ಪತ್ರದಲ್ಲಿ ಸಹೋದ್ಯೋಗಿಗಳಿಗೆ ಶುಭ ಹಾರೈಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು: ನಗರದಲ್ಲಿ 1000ಕ್ಕೂ ಅಧಿಕ ಅಪಾಯಕಾರಿ ಮರ ಪತ್ತೆ!
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ