1200 ಪೆನ್‌ ರಿಫೀಲ್‌ನಲ್ಲಿ ಅರಳಿದ ಹಂಪಿ ಕಲ್ಲಿನ ತೇರು!

By Kannadaprabha News  |  First Published Dec 2, 2023, 5:04 AM IST

ವಿಶ್ವವಿಖ್ಯಾತ ಹಂಪಿಯ ಕಲ್ಲಿನ ತೇರಿನ ಸ್ಮಾರಕದ ಕಲಾಕೃತಿಯನ್ನು ಪೆನ್‌ ರಿಫೀಲ್‌ನಲ್ಲಿ ಕಲಾವಿದರೊಬ್ಬರು ಅರಳಿಸಿದ್ದು, ಹೊಸದಿಲ್ಲಿಯ ಕೆಂಪುಕೋಟೆಯಲ್ಲಿ ಈ ಕಲಾಕೃತಿ ಪ್ರದರ್ಶನಗೊಳ್ಳಲಿದೆ.


- ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ಡಿ.2) : ವಿಶ್ವವಿಖ್ಯಾತ ಹಂಪಿಯ ಕಲ್ಲಿನ ತೇರಿನ ಸ್ಮಾರಕದ ಕಲಾಕೃತಿಯನ್ನು ಪೆನ್‌ ರಿಫೀಲ್‌ನಲ್ಲಿ ಕಲಾವಿದರೊಬ್ಬರು ಅರಳಿಸಿದ್ದು, ಹೊಸದಿಲ್ಲಿಯ ಕೆಂಪುಕೋಟೆಯಲ್ಲಿ ಈ ಕಲಾಕೃತಿ ಪ್ರದರ್ಶನಗೊಳ್ಳಲಿದೆ.

Tap to resize

Latest Videos

undefined

ಭಾರತೀಯ ಸಂಸ್ಕೃತಿ ಸಚಿವಾಲಯ ಆಯೋಜಿಸಿರುವ ಕಲಾ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಭಾರತೀಯ ವಿವಿಧ ಸ್ಮಾರಕಗಳ ಚಿತ್ರಗಳನ್ನು ಕಲಾವಿದರು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ. ಈ ಪೈಕಿ ಆಂಧ್ರಪ್ರದೇಶದ ಧರ್ಮಾವರಂ ಮೂಲದ ಸದ್ಯ ಬೆಂಗಳೂರು ವಾಸಿ ಸಾಫ್ಟವೇರ್‌ ಎಂಜಿನಿಯರ್‌ ಎಂ.ಎಆರ್. ಶ್ರೀನಿವಾಸಲು ಪೆನ್‌ ರಿಫೀಲ್‌ನಲ್ಲೇ ಹಂಪಿಯ ಕಲ್ಲಿನ ತೇರಿನ ಸ್ಮಾರಕವನ್ನು ಅರಳಿಸಿದ್ದಾರೆ.

ಹಂಪಿ ವಿರೂಪಾಕ್ಷೇಶ್ವರ ದೇವಾಲಯದ ಕಂಬಕ್ಕೆ ಮೊಳೆ ಹೊಡೆದ ಕೇಸ್; ಗುಮಾಸ್ತ ಸಸ್ಪೆಂಡ್‌

1200 ರಿಫೀಲ್‌ಗಳು:

ಪೆನ್‌ಗಳ ಬಳಸಿದ ರಿಫೀಲ್‌ಗಳನ್ನು ಬಿಸಾಡುವುದು ವಾಡಿಕೆ. ಆದರೆ, ಪರಿಸರ ಜಾಗೃತಿ ಮೂಡಿಸುವ ಹವ್ಯಾಸವನ್ನೂ ಮಾಡಿಕೊಂಡಿರುವ ಶ್ರೀನಿವಾಸಲು ಅವರು ಈ ರಿಫೀಲ್‌ಗಳನ್ನೇ ಬಳಸಿ ಕಲಾಕೃತಿಗಳನ್ನು ಅರಳಿಸುತ್ತಿದ್ದಾರೆ. ಕಳೆದ 22 ತಿಂಗಳಿನಿಂದ ಖಾಲಿ ರಿಫೀಲ್‌ಗಳನ್ನು ಸಂಗ್ರಹಿಸಿ ಈ ಕಲಾಕೃತಿಯನ್ನು ಅರಳಿಸಿದ್ದಾರೆ. ಹಂಪಿಗೆ ಆಗಮಿಸಿ 1864ರಲ್ಲಿ ತೆಗೆದಿರುವ ಕಲ್ಲಿನ ತೇರಿನ ಫೋಟೊಯೊಂದನ್ನು ಸಂಗ್ರಹಿಸಿ ಅದೇ ಮಾದರಿಯಲ್ಲಿ ಗೋಪುರ ಸಹಿತ ಕಲಾಕೃತಿಯನ್ನು ಅರಳಿಸಿದ್ದಾರೆ. ಈ ತ್ರೀಡಿ ಕಲಾಕೃತಿ ಈಗ ಆಕರ್ಷಣೀಯವಾಗಿದೆ.

ದಿಲ್ಲಿಯ ಕೆಂಪುಕೋಟೆಯಲ್ಲಿ ಡಿ. 8ರಿಂದ 2024ರ ಮಾರ್ಚ್‌ವರೆಗೆ ದೇಶದ ವಿವಿಧ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ತೀರ್ಪುಗಾರರ ಮೆಚ್ಚುಗೆ ಗಳಿಸಿದರೆ, ಈ ಕಲಾಕೃತಿಯನ್ನು ಇಟಲಿಯ ವೆನಿಸ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಲಾಕೃತಿ ಪ್ರದರ್ಶನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಲಾವಿದ ಶ್ರೀನಿವಾಸಲು ನಾಜೂಕಾಗಿ ಕಲ್ಲಿನ ತೇರಿನ ಸ್ಮಾರಕದ ಕೃತಿಯನ್ನು ಅರಳಿಸಿದ್ದಾರೆ.

ಕಲ್ಲಿನತೇರಿಗೆ ಗೋಪುರ:

ಹಂಪಿಯ ಕಲ್ಲಿನ ತೇರಿನಲ್ಲಿ ಈ ಹಿಂದೆ ಗೋಪುರ ಇತ್ತು. ಕಾಲಕ್ರಮೇಣ ಈ ಗೋಪುರ ಬಿದ್ದು ಹೋಗಿದೆ. 1864ರಲ್ಲಿ ತೆಗೆದಿರುವ ಫೋಟೋದಲ್ಲಿ ಈ ಗೋಪುರ ಇದೆ. ಹಾಗಾಗಿ ಈಗ ಕಲಾವಿದ ಶ್ರೀನಿವಾಸಲು ಬಿಡಿಸಿರುವ ಕಲಾಕೃತಿಯಲ್ಲಿ ಗೋಪುರವನ್ನು ಬಿಡಿಸಿದ್ದಾರೆ. ಈ ತ್ರೀಡಿ ಮಾದರಿಯ ಕಲಾಕೃತಿಯನ್ನು ಮೂಲ ಸ್ಮಾರಕದಂತೆ ಅರಳಿಸಿದ್ದಾರೆ. ಈ ಹಿಂದೆ 1500 ಪೆನ್‌ಗಳ ರಿಫೀಲ್‌ಗಳನ್ನು ಬಳಸಿ ಅಮೃತಸರದ ಸ್ವರ್ಣ ಮಂದಿರದ ಚಿತ್ರವನ್ನೂ ಕಲಾವಿದ ಶ್ರೀನಿವಾಸಲು ರಚಿಸಿದ್ದರು. ಈಗ ಕಲ್ಲಿನತೇರಿನ ಸ್ಮಾರಕದ ಚಿತ್ರವನ್ನೂ ರಚಿಸಿದ್ದು, ಸ್ಮಾರಕಗಳ, ದೇವಾಲಯಗಳ ಚಿತ್ರಗಳನ್ನು ಪೆನ್‌ ರಿಫೀಲ್‌ನಲ್ಲೇ ಬಿಡಿಸುವ ಕಲೆಯನ್ನು ಇನ್ನಷ್ಟು ಜನಪ್ರಿಯಗೊಳಿಸಲು ಪ್ರಯತ್ನಿಸಿದ್ದಾರೆ.

ಐತಿಹಾಸಿಕ ಸ್ಮಾರಕಗಳಿಗೆ ಪೂರಕ:

ಹಂಪಿ ಸೇರಿದಂತೆ ಐತಿಹಾಸಿಕ ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡಲು ಈ ಕಲಾಕೃತಿಗಳು ಸಹಾಯಕವಾಗಲಿವೆ. ಈ ಸ್ಮಾರಕಗಳು ಹಾಳಾದರೆ, ಅವುಗಳನ್ನು ಜೀರ್ಣೋದ್ಧಾರ ಮಾಡಲು ಪೆನ್‌ ರಿಫೀಲ್‌ನಲ್ಲಿ ಬಿಡಿಸುವ ತ್ರೀಡಿ ಕಲಾಕೃತಿಗಳು ಸಹಾಯಕವಾಗಲಿವೆ. ಹಾಗಾಗಿ ಇಂತಹ ಕಲಾಕೃತಿಗಳನ್ನು ಬಿಡಿಸಲು ಭಾರತೀಯ ಪುರಾತತ್ವ ಇಲಾಖೆ ಇನ್ನಷ್ಟು ಉತ್ತೇಜನ ನೀಡಬೇಕು ಎಂದು ಹೇಳುತ್ತಾರೆ ಕಲಾವಿದ ಎಂ.ಆರ್‌. ಶ್ರೀನಿವಾಸಲು.

ಹಂಪಿಯ ಸ್ಮಾರಕಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ಕಲಾವಿದ ಶ್ರೀನಿವಾಸಲು ಅವರು ಆಗಾಗ ಹಂಪಿಗೆ ಭೇಟಿ ನೀಡಿ ಇಲ್ಲಿನ ಸ್ಮಾರಕಗಳು ಹಾಗೂ ವಿಜಯನಗರದ ವಾಸ್ತು ಶಿಲ್ಪ ಶೈಲಿ ಬಗ್ಗೆ ಅಧ್ಯಯನ ಕೂಡ ಮಾಡುತ್ತಿದ್ದಾರೆ. ಕಲ್ಲಿನ ತೇರಿನ ಸ್ಮಾರಕವನ್ನು ವಿಜಯನಗರದ ವಾಸ್ತು ಶಿಲ್ಪಶೈಲಿಯಲ್ಲೇ ಪೆನ್‌ ರಿಫೀಲ್‌ನಲ್ಲಿ ಮರು ಅರಳಿಸಿದ್ದಾರೆ.

ಸುಖೋಯ್‌ ಯುದ್ಧ ವಿಮಾನದ ರಾಡಾರ್‌ಗೆ ಹಂಪಿ ವಿರೂಪಾಕ್ಷನ ಹೆಸರು

ಮರುಸೃಷ್ಟಿ:

ಹಂಪಿಯ ಕಲ್ಲಿನ ತೇರಿನ ಸ್ಮಾರಕವನ್ನು 1200 ಪೆನ್‌ ರಿಫೀಲ್‌ಗಳನ್ನು ಬಳಸಿ ಮರು ಸೃಜಿಸಿರುವೆ. ತ್ರೀಡಿಯಲ್ಲಿ ಅರಳಿರುವ ಈ ಕಲಾಕೃತಿಯನ್ನು ಜತನದಿಂದ ಕಾಪಾಡಿಕೊಂಡರೆ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಈ ಸ್ಮಾರಕವನ್ನುಜೀರ್ಣೋದ್ಧಾರ ಮಾಡಲು ಸಹಾಯಕವಾಗಲಿದೆ ಎಂದರು ಕಲಾವಿದ ಎಂ.ಆರ್‌. ಶ್ರೀನಿವಾಸಲು.

click me!