ಶಾಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ: ಖರ್ಗೆ ಕಿಡಿ

By Suvarna NewsFirst Published Jan 20, 2020, 10:43 AM IST
Highlights

ಶಾಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ|  ನೆರೆ ಪರಿಹಾರ, ಮಹದಾಯಿ ವಿಚಾರ ಮಾತನಾಡದೆ ಕೇವಲ ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಮಾತನಾಡುವ ಮೂಲಕ ಮತ ಬ್ಯಾಂಕ್‌ ಭದ್ರಪಡಿಸಿಕೊಳ್ಳಲು ರಾಜ್ಯಕ್ಕೆ ಆಗಮಿಸಿದ್ದರು 

ಬೆಂಗಳೂರು[ಜ.20]: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ರಾಜ್ಯದ ಜನತೆ ಬಗ್ಗೆ ಕಾಳಜಿ ಇಲ್ಲ. ನೆರೆ ಪರಿಹಾರ, ಮಹದಾಯಿ ವಿಚಾರ ಮಾತನಾಡದೆ ಕೇವಲ ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಮಾತನಾಡುವ ಮೂಲಕ ಮತ ಬ್ಯಾಂಕ್‌ ಭದ್ರಪಡಿಸಿಕೊಳ್ಳಲು ರಾಜ್ಯಕ್ಕೆ ಆಗಮಿಸಿದ್ದರು ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಭಾನುವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್‌ ಶಾ ಅವರು ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಯಾವ ವಿಚಾರವನ್ನೂ ಪ್ರಸ್ತಾಪಿಸಿಲ್ಲ. ಕಳಸಾ ಬಂಡೂರಿ ನಾಲೆ ಯೋಜನೆ ಬಗ್ಗೆ ಮಾತಾಡಲಿಲ್ಲ. ನೆರೆ ಪರಿಹಾರದ ಬಗ್ಗೆಯೂ ಚಕಾರವೆತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಅಮಿತ್‌ ಶಾ ಅವರಿಗೆ ಈ ಬಗ್ಗೆ ಕೇಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಸಿಎಂ ಯಡಿಯೂರಪ್ಪಗೆ ಪ್ರಿಯಾಂಕ್‌ ಖರ್ಗೆ ಮೆಚ್ಚುಗೆ

ನಮ್ಮ ರಾಜ್ಯದ ಬಡವರು, ದಲಿತರು, ರೈತರ ಬಗ್ಗೆ ಅಮಿತ್‌ ಶಾಗೆ ಕಾಳಜಿ ಇಲ್ಲ. ಅಮಿತ್‌ ಶಾ ಅವರಿಗೆ ನೆರೆ ಹಾವಳಿಗಿಂತ ಪೌರತ್ವ ತಿದ್ದುಪಡಿ ಕಾಯಿದೆ ಬಗೆಗಿನ ಪ್ರಚಾರವೇ ದೊಡ್ಡ ವಿಷಯವಾಯಿತು. ಮುಖ್ಯಮಂತ್ರಿಯಾದವರು ರಾಜ್ಯದ ಸಮಸ್ಯೆಗಳ ಬಗ್ಗೆ ಅವರ ಗಮನ ಸೆಳೆಯಬೇಕಿತ್ತು. ಆದರೆ ರಾಜ್ಯದ ಮುಖ್ಯಮಂತ್ರಿಗಳು ಸಹ ಅದನ್ನು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಲಿತರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ:

ಪೌರತ್ವ ತಿದ್ದುಪಡಿ ಕಾಯಿದೆಗೆ ವಿರೋಧ ವ್ಯಕ್ತಪಡಿಸುವವರು ದಲಿತ ವಿರೋಧಿಗಳು ಎಂಬ ಅಮಿತ್‌ ಶಾ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಖರ್ಗೆ, ಬಿಜೆಪಿಯವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಸಿಎಎ ಬಗ್ಗೆ ಭಾವನಾತ್ಮಕವಾಗಿ ಪ್ರಚೋದನೆ ನೀಡಲು ಇಂತಹ ಮಾತುಗಳನ್ನು ಆಡಿದ್ದಾರೆ. ದಲಿತರು ಐದು ಸಾವಿರ ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದಾರೆ. ಇವರ ಮನಸ್ಥಿತಿ, ಸಿದ್ಧಾಂತಗಳಲ್ಲಿ ದಲಿತರ ಬಗ್ಗೆ ಸ್ವಲ್ಪ ಚಿಂತೆ ಮಾಡಿದ್ದರೂ ಇಷ್ಟು ಶೋಷಣೆ ಇರುತ್ತಿರಲಿಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ ಅಮಿತ್‌ ಶಾ ದಲಿತರ ವಿಚಾರ ಪ್ರಸ್ತಾಪಿಸಿದ್ದಾರೆ ಎಂದರು.

'ಗೌಡ, ಖರ್ಗೆ ಹಳೆ ಹುಲಿಗಳು, ಏನ್ಮಾಡ್ತಾರೆ ಅಂತ ಹೇಳಲಾಗದು'

- ನೆರೆ ಪರಿಹಾರ, ಮಹದಾಯಿ ಬಗ್ಗೆ ಮಾತಾಡದೆ ಸಿಎಎ ಬಗ್ಗೆ ಮಾತ್ರ ಮಾತು

- ಸಿಎಂ ಕೂಡ ರಾಜ್ಯದ ಅಭವಿವೃದ್ಧಿಯ ವಿಚಾರ ಶಾ ಬಳಿ ಪ್ರಸ್ತಾಪಿಸಿಲ್ಲ

click me!