ರಾಜೀನಾಮೆ ನೀಡ್ತಾರಾ ಸಚಿವ ಡಿಕೆಶಿ? ಹೇಳಿದ್ದೇನು?

By Web DeskFirst Published Jan 20, 2019, 7:52 AM IST
Highlights

ನಾಲ್ಕೂ ಅತೃಪ್ತರೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ| ಅಂತಿಮ ಪ್ರತಿಫಲ ಶೀಘ್ರವೇ ಬಹಿರಂಗಪಡಿಸುವೆ: ಜಲಸಂಪನ್ಮೂಲ ಸಚಿವ

ಬೆಂಗಳೂರು[ಜ.20]: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೈರುಹಾಜರಾದ ಅತೃಪ್ತ ಶಾಸಕರಾದ ಡಾ. ಉಮೇಶ್‌ ಜಾಧವ್‌, ಬಿ.ನಾಗೇಂದ್ರ ಸೇರಿದಂತೆ ನಾಲ್ಕೂ ಮಂದಿಯೊಂದಿಗೆ ಸತತ ಸಂಪರ್ಕ ಹೊಂದಿದ್ದೇನೆ. ಅವ​ರೊಂದಿಗೆ ವಿಷ​ದ​ವಾಗಿ ಚರ್ಚೆ ನಡೆ​ಸ​ಲಾ​ಗಿದ್ದು, ಅದರ ಫಲ​ವೇನು ಎಂಬು​ದನ್ನು ಶೀಘ್ರವೇ ಬಹಿ​ರಂಗ​ಪ​ಡಿ​ಸು​ತ್ತೇವೆ. ಅತೃ​ಪ್ತ​ರನ್ನು ಸಮಾ​ಧಾ​ನ​ಪ​ಡಿ​ಸಲು ಅಗತ್ಯಬಿದ್ದರೆ ಸಚಿವ ಸ್ಥಾನವನ್ನೂ ತ್ಯಾಗ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಕೇವಲ ಬಿ.ನಾಗೇಂದ್ರ ಮಾತ್ರವಲ್ಲ ಉಮೇಶ್‌ ಜಾಧವ್‌ ಸೇರಿದಂತೆ ಎಲ್ಲರೊಂದಿಗೂ ಉತ್ತಮ ಸಂಪರ್ಕ ಇದೆ. ಅತೃಪ್ತಿ ಎಂಬುದು ಪ್ರತಿಯೊಬ್ಬ ಮನುಷ್ಯನಿಗೂ ಇದ್ದೇ ಇರುತ್ತದೆ. ನನಗೆ ವೈಯಕ್ತಿಕವಾಗಿ ಈ ಶಾಸಕರೊಂದಿಗೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಸತತವಾಗಿ ಮಾತುಕತೆ ನಡೆಸುತ್ತಿದ್ದು, ಅಂತಿಮ ಪ್ರತಿಫಲ ಸದ್ಯದಲ್ಲೇ ತಿಳಿಸುತ್ತೇನೆ ಎಂದು ಹೇಳಿದರು.

ಅತೃ​ಪ್ತ ಶಾಸಕರನ್ನು ತೃಪ್ತಿಪಡಿಸಲು ಅಗತ್ಯವಾದರೆ ಸಚಿವ ಸ್ಥಾನವನ್ನು ಬಿಟ್ಟುಕೊಡಲು ನಾನು ಸಿದ್ಧನಿದ್ದೇನೆ. ನನಗೂ ಸಹ ಹಲವು ವೇಳೆಯಲ್ಲಿ ಸಚಿವ ಸ್ಥಾನ ಸಿಗದ ಅನುಭವ ಆಗಿದೆ. ಧರ್ಮಸಿಂಗ್‌ ಅವರ ಸರ್ಕಾರದಲ್ಲಿ ನನಗೆ ಅವಕಾಶ ನೀಡಿರಲಿಲ್ಲ. ಸಿದ್ದರಾಮಯ್ಯ ಅವರು ಸಹ ಮೊದಲ ಹಂತದಲ್ಲಿ ಅವಕಾಶ ನೀಡಿರಲಿಲ್ಲ. ಆದರೂ ಪಕ್ಷದ ಕಾರ್ಯಕರ್ತನಾಗಿ ಕಾದಿದ್ದೇನೆ. ಈಗಲೂ ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ರೋಷನ್‌ಬೇಗ್‌, ವಿ. ಮುನಿಯಪ್ಪ, ಎಚ್‌.ಕೆ. ಪಾಟಿಲ್‌ ಅವರಿಗೆ ಅವಕಾಶ ಲಭಿಸಿಲ್ಲ. ಹೀಗಾಗಿ ಪಕ್ಷಕ್ಕಾಗಿ ನಾನು ಸಚಿವ ಸ್ಥಾನ ತ್ಯಜಿಸಲು ಸಿದ್ಧ. ಈ ಬಗ್ಗೆ ಹೈಕಮಾಂಡ್‌ಗೂ ಮಾಹಿತಿ ನೀಡಿದ್ದೇನೆ ಎಂದರು.

ರೆಸಾರ್ಟಿನಲ್ಲಿ ಕ್ಷೇತ್ರವಾರು ಚರ್ಚೆ:

ಪಕ್ಷದ ಶಾಸಕರೊಂದಿಗೆ ಕ್ಷೇತ್ರವಾರು ಸಭೆ ನಡೆಸಲು ಈಗಲ್ಟನ್‌ ರೆಸಾರ್ಟಿನಲ್ಲಿ ಸೇರಲಾಗಿದೆ. ಇಲ್ಲಿ ಶಾಸಕಾಂಗ ಪಕ್ಷದ ಸಭೆ, ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಚರ್ಚೆಗಳು ನಡೆಯಲಿವೆ. ನಮ್ಮ ಶಾಸಕರೆಲ್ಲರೂ ನಮ್ಮೊಟ್ಟಿಗೆ ಇದ್ದು, ವಿವಿಧ ಅಭಿವೃದ್ಧಿ ಚರ್ಚೆಗಳಿಗಾಗಿ ಎರಡು ದಿನ ರೆಸಾರ್ಟ್‌ನಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ರೆಸಾರ್ಟ್‌ ರಾಜಕಾರಣವನ್ನು ಸಮರ್ಥಿಸಿಕೊಂಡರು.

click me!