Latest Videos

ಭವಾನಿ ರೇವಣ್ಣ ಬಂಧಿಸಲು ಅನುಮತಿ ಕೊಡಿ: ಹೈಕೋರ್ಟ್‌ಗೆ ಎಸ್‌ಐಟಿ ಮನವಿ

By Kannadaprabha NewsFirst Published Jun 15, 2024, 5:46 AM IST
Highlights

ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ. 

ಬೆಂಗಳೂರು (ಜೂ.15): ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ. ಭವಾನಿ ಅವರ ನಿರೀಕ್ಷಣಾ ಜಾಮಿನು ಕುರಿತು ಶುಕ್ರವಾರ ಸುದೀರ್ಘ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಪೀಠ ತೀರ್ಪು ಕಾಯ್ದಿರಿಸಿತು. ಅಲ್ಲದೆ, ಅರ್ಜಿಯ ತೀರ್ಪು ಪ್ರಕಟಿಸುವವರೆಗೂ ಭವಾನಿ ರೇವಣ್ಣ ಅವರನ್ನು ಬಂಧಿಸಬಾರದು ಎಂದು ಸೂಚಿಸಿ ಜೂ.7ರಂದು ಹೊರಡಿಸಿದ ಮಧ್ಯಂತರ ಅದೇಶವನ್ನು ವಿಸ್ತರಿಸಿ ಆದೇಶಿಸಿತು.

ಇದಕ್ಕೂ ಮುನ್ನ ಭವಾನಿ ಅವರಿಗೆ ನೀಡಲಾಗಿರುವ ಮಧ್ಯಂತರ ನಿರೀಕ್ಷಣಾ ಜಾಮೀನು ಮುಂದುವರಿಕೆಗೆ ಎಸ್‌ಐಟಿ ಪರ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಎಸ್‌ಐಟಿ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ.ರವಿವರ್ಮ ಕುಮಾರ್‌, ಭವಾನಿ ರೇವಣ್ಣ ತನಿಖೆಗೆ ಸಹಕರಿಸುತ್ತಿಲ್ಲ. ಮೂರು ದಿನ ತನಿಖೆಗೆ ಹಾಜರಾಗಿದ್ದಾರೆ. ತನಿಖಾಧಿಕಾರಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸುಳ್ಳು ಉತ್ತರ ನೀಡುತ್ತಾರೆ. ಆ ಮೂಲಕ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಮೊಬೈಲ್‌ ವಶಕ್ಕೆ ನೀಡಬೇಕೆಂಬ ತನಿಖಾಧಿಕಾರಿಯ ಸೂಚನೆ ಪಾಲಿಸುತ್ತಿಲ್ಲ. ಹಾಗಾಗಿ ಅವರನ್ನು ಬಂಧಿಸಿಯೇ ವಿಚಾರಣೆಗೊಳಪಡಿಸಬೇಕಿದೆ.

ಯಡಿಯೂರಪ್ಪ ಬಂಧಿಸಲು ಹೊರಟಿದ್ದ ಸಿಐಡಿಗೆ ಹಿನ್ನಡೆ!

ಅದಕ್ಕೆ ಅನುಮತಿಸಬೇಕು. ನ್ಯಾಯಾಲಯ ಕಳೆದ ವಾರ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನನ್ನು ಯಾವುದೇ ಕಾರಣಕ್ಕೂ ಒಂದು ದಿನ ಕೂಡ ಮುಂದುವರಿಸಬಾರದು ಎಂದು ಕೋರಿದರು. ಭವಾನಿ ರೇವಣ್ಣ ಅವರನ್ನು ಕೇಳಿದ ಪ್ರಶ್ನಾವಳಿಗಳು ಹಾಗೂ ಉತ್ತರಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ, ಆರೋಪಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ. ಸುಳ್ಳು ಉತ್ತರ ನೀಡುತ್ತಾರೆ ಎಂದು ನೀವು ಹೇಗೆ ಹೇಳಲು ಸಾಧ್ಯ? ನಿಮಗೆ ಬೇಕಾದ ಉತ್ತರವನ್ನು ಅವರು ಕೊಡಬೇಕು ಎಂದು ಹೇಳಲು ಯಾವುದೇ ಕಾನೂನು ಇಲ್ಲ. ಅವರು ತಮಗೆ ತಿಳಿದಿದ್ದನ್ನು ಹೇಳಿದ್ದಾರೆ. ಅದು ಅಸಹಕಾರ ಹೇಗೆ ಆಗುತ್ತದೆ? ಎಂದು ಎಸ್‌ಐಟಿ ಪರ ವಕೀಲರನ್ನು ಪ್ರಶ್ನಿಸಿತು.

ಆ ನಂತರ ಎಸ್‌ಐಟಿ ಪರ ವಕೀಲರು, ಇಡೀ ಪ್ರಕರಣದ ಮಾಸ್ಟರ್‌ ಮೈಂಡ್‌ ಭವಾನಿ ರೇವಣ್ಣ ಅವರೇ ಆಗಿದ್ದಾರೆ. ಮಹಿಳೆಯ ಅಪಹರಣದ ಹಿಂದಿನ ಸೂತ್ರಧಾರಿ ಅವರೇ, ಎಲ್ಲಾ ಆರೋಪಿಗಳೊಂದಿಗೆ ಅವರು ಸಂಪರ್ಕದಲ್ಲಿದ್ದಾರೆ, ಅದಕ್ಕೆ ಸಾಕ್ಷಿಗಳು ಇವೆ ಎಂದು ಸಮಜಾಯಿಷಿ ನೀಡಿದರು. ಈ ವಾದವನ್ನು ರೇವಣ್ಣ ಅವರ ಪರ ವಕೀಲರು ಅಲ್ಲಗೆಳೆದರು.

ಧ್ವನಿ ಬಳಿಕ ಪ್ರಜ್ವಲ್ ರೇವಣ್ಣಗೆ ಅಂಗಾಂಗ ಪರೀಕ್ಷೆ ಸಂಕಷ್ಟ?: ಕಾರಣವೇನು!

ಪ್ರಕರಣವೇನು?: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಅಪಹರಿಸಲಾಗಿದೆ ಎಂಬ ಆರೋಪ ಸಂಬಂಧ ಕೆ.ಆರ್.ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ಭವಾನಿ ಪತಿ ಎಚ್.ಡಿ. ರೇವಣ್ಣ ಮೊದಲ, ಸತೀಶ ಬಾಬಣ್ಣ ಎರಡನೇ ಆರೋಪಿಯಾಗಿದ್ದಾರೆ. ಎಚ್.ಡಿ.ರೇವಣ್ಣ ಈಗಾಗಲೇ ಬಂಧನಕ್ಕೊಳಗಾಗಿ ಜಾಮೀನು ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಭವಾನಿ ಅವರ ಹೆಸರು ಕೇಳಿ ಬಂದಿದೆ. ಆದರೆ, ಎಫ್‌ಐಆರ್‌ನಲ್ಲಿ ಅವರ ಹೆಸರು ಉಲ್ಲೇಖಿಸಿಲ್ಲ. ಈ ಪ್ರಕರಣದಲ್ಲಿ ಭವಾನಿ ನಿರೀಕ್ಷಣಾ ಜಾಮೀನು ಕೋರಿದ್ದರು. ಅವರನ್ನು ಬಂಧಿಸದಂತೆ ಮಧ್ಯಂತರ ಜಾಮೀನು ನೀಡಿದ್ದ ಹೈಕೋರ್ಟ್‌, ತನಿಖಾಧಿಕಾರಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ಆಕೆಗೆ ಜೂ.7ರಂದು ಸೂಚನೆ ನೀಡಿತ್ತು.

click me!