
ರಾಯಚೂರು (ಜೂ.17) ಜಿಲ್ಲೆಗೆ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಮಂಜೂರು ಮಾಡುವುದಕ್ಕಾಗಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಭರವಸೆ ನೀಡಿದರು.
ರಾಯಚೂರು ಏಮ್ಸ್ ಮಂಜೂರಾತಿ ಹೊರಾಟ ಸಮಿತಿ ನೇತೃತ್ವದಲ್ಲಿ ನಿರಂತರವಾಗಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಶುಕ್ರವಾರ 400ನೇ ದಿನ ಪೂರೈಸಿದ ಹಿನ್ನೆಲೆ ಸ್ಥಳೀಯ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಯುವಜನರು, ಸಂಘ ಸಂಸ್ಥೆಗಳ ಸದಸ್ಯರು ಮಾನವ ಸರಪಳಿ ನಿರ್ಮಿಸಿ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಬೃಹತ್ ಸಮಾವೇಶದ ಸ್ಥಳಕ್ಕೆ ಆಗಮಿಸಿದ ಸಚಿವ ಬೋಸರಾಜು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಕಲಬುರಗಿಗೆ ಏಮ್ಸ್: ಶರಣ ಪ್ರಕಾಶ ಹೇಳಿಕೆಗೆ ರಾಯಚೂರು ಜಿಲ್ಲೆಯಲ್ಲಿ ತೀವ್ರ ವಿರೋಧ
ಈಗಾಗಲೇ ಏಮ್ಸ್ ವಿಚಾರದ ಕುರಿತು ಮುಖ್ಯಮಂತ್ರಿಗೆ ಮನವಿ ನೀಡಲಾಗಿದೆ. ಇದಕ್ಕೆ ಸ್ಪಂದಿಸಿರುವ ಅವರು, ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಭರವಸೆ ನೀಡಿದ್ದಾರೆ. ನಮ್ಮ ಸರ್ಕಾರದ ಮುಖ್ಯ ಉದ್ದೇಶವೆ ರಾಯಚೂರಿಗೆ ಏಮ್ಸ್ ಮಂಜೂರು ಮಾಡಿಸುವುದು ಆಗಿದೆ. ಏಮ್ಸ್ ಸ್ಥಾಪಿಸುವ ಮೂಲಕ ಸ್ಥಳೀಯ ಆರೋಗ್ಯ ಕಾಪಾಡುವುದೇ ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದರು.
ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ ಮಾತನಾಡಿ, ಹಿಂದಿನ ಡಬಲ್ ಎಂಜಿನ್ ಸರ್ಕಾರ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವುದಾಗಿ ಹೇಳಿ ಕೊನೆಗೆ ಏಮ್ಸ್ ಮಾದರಿ ಆಸ್ಪತ್ರೆ ನೀಡುತ್ತೇವೆ ಎಂದಿತ್ತು. ಆದರೆ, ಕೊನೆಯಲ್ಲಿ ಮಹಾ ದ್ರೋಹ ಎಸಗಿದೆ. ಆದ್ದರಿಂದ ಪ್ರಸ್ತುತ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಆದಷ್ಟುಶೀಘ್ರದಲ್ಲಿಯೇ ರಾಯಚೂರಿಗೆ ಏಮ್ಸ್ ಮಂಜೂರು ಮಾಡಿಸಲು ಒತ್ತು ನೀಡಬೇಕು ಎಂದರು.
ರಾಯಚೂರು: ಕಲಬುರಗಿಗೆ ಏಮ್ಸ್ ಎಂದ ಸಚಿವ ಶರಣಪ್ರಕಾಶ ವಿರುದ್ಧ ಗೋ ಬ್ಯಾಕ್ ಚಳವಳಿ ಎಚ್ಚರಿಕೆ
ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಸಮಾವೇಶದ ಸಾನ್ನಿಧ್ಯ ವಹಿಸಿದ್ದರು.
ಈ ವೇಳೆ ಹೋರಾಟ ಸಮಿತಿಯ ಅಶೋಕ್ ಜೈನ್, ಮಾರಪ್ಪ ಎಸ್., ಜಾನ್ ವೆಸ್ಲಿ, ಎನ್.ಮಹಾವೀರ್, ನರಸಪ್ಪ ಬಾಡಿಯಾಲ, ಬಸವರಾಜ ಮಿಮಿಕ್ರಿ, ಕಾಮರಾಜ್ ಪಾಟೀಲ್, ವೀರಭದ್ರಪ್ಪ ಅಂಬರಪೇಟೆ, ಚಾಂದ್ ಪಾಷಾ, ಹನುಮಪುರ, ವಿನಯ್ ಚಿತ್ರಗಾರ, ಪರಶುರಾಮ, ಥಾಮಸ್ ಬೆಂಜಮಿನ್, ಎಸ್.ಎಸ್.ಬಿರಾದಾರ್, ಸುಲೋಚನಾ, ಚಂದ್ರಶೇಖರ್ ಭಂಡಾರಿ, ಪಂಪನಗೌಡ ಮಾಚನೂರು ವೆಂಕಟರೆಡ್ಡಿ ದಿನ್ನಿ, ಜಶವಂತರಾವ್ ಕಲ್ಯಾಣ ಕಾರ, ವೆಂಕಯ್ಯ ಶೆಟ್ಟಿಹೊಸಪೇಟೆ, ಇಮ್ರಾನ್ ಬಡೇಸಾಬ್ ಸಾದಿಕ್ ಖಾನ್, ಜಿಲಾನಿ, ಆಂಜನೇಯ ಕುರುಬದೊಡ್ಡಿ, ಕಾಂಗ್ರೆಸ್ ಮುಖಂಡರಾದ ಶಾಂತಪ್ಪ, ಬಸವರಾಜ್ ಅತ್ತನೂರು, ಜಯವಂತರಾವ್ ಪತಂಗೆ ರುದ್ರಪ್ಪ ಅಂಗಡಿ, ತಾಯಣ್ಣ ಗೌಡ, ಜಿ.ಶಿವಮೂರ್ತಿ ಸೇರಿ ಅನೇಕರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ