ಗಣೇಶ ಹಬ್ಬದ ಹಿನ್ನೆಲೆ ಸುಲಿಗೆ, ಖಾಸಗಿ ಬಸ್‌ಗಳ ಮೇಲೆ ಆರ್‌ಟಿಒ ದಾಳಿ

By Suvarna News  |  First Published Aug 28, 2022, 9:30 AM IST

ಗಣೇಶ ಹಬ್ಬದ ಹಿನ್ನೆಲೆ ಟಿಕೆಟ್‌ ದರವನ್ನು 2-3 ಪಟ್ಟು ಹೆಚ್ಚಿಸಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ಬೆಂಗಳೂರಿನ ಖಾಸಗಿ ಬಸ್‌ಗಳ ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳು ಶನಿವಾರ ರಾತ್ರಿ ದಿಢೀರ್‌ ದಾಳಿ ನಡೆಸಿದ್ದಾರೆ.  ಸುಲಿಗೆ ಮಾಡಿದ್ದ ಬಸ್‌ಗಳಿಗೆ ದಂಡ ಹಾಕಿದ್ದಾರೆ.


ಬೆಂಗಳೂರು (ಆ.28): ಗಣೇಶ ಹಬ್ಬದ ಹಿನ್ನೆಲೆ ಟಿಕೆಟ್‌ ದರವನ್ನು 2-3 ಪಟ್ಟು ಹೆಚ್ಚಿಸಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ಬೆಂಗಳೂರಿನ ಖಾಸಗಿ ಬಸ್‌ಗಳ ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳು ಶನಿವಾರ ರಾತ್ರಿ ದಿಢೀರ್‌ ದಾಳಿ ನಡೆಸಿದ್ದಾರೆ. ರಾಜ್ಯ ಸಾರಿಗೆ ಇಲಾಖೆ ಆಯುಕ್ತ ಕುಮಾರ್‌ ಸೂಚನೆ ಮೇರೆಗೆ ನಗರದ ಆನಂದರಾವ್‌ ಸರ್ಕಲ್‌, ಮೆಜೆಸ್ಟಿಕ್‌, ಕೆ.ಆರ್‌.ಪುರಂ. ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್‌ ಜಂಕ್ಷನ್‌, ಗೊರಗುಂಟೆಪಾಳ್ಯ, ಕಲಾಸಿಪಾಳ್ಯ, ಕೆ.ಆರ್‌.ಮಾರುಕಟ್ಟೆಸೇರಿ ವಿವಿಧ ಕಡೆ ಖಾಸಗಿ ಬಸ್‌ ನಿಲ್ದಾಣಗಳಿಗೆ ತೆರಳಿದ ಸಾರಿಗೆ ಅಧಿಕಾರಿಗಳು ದುಬಾರಿ ಟಿಕೆಟ್‌ ದರದ ಕುರಿತು ಕಾರ್ಯಾಚರಣೆ ನಡೆಸಿದರು. ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ತೆರಳುತ್ತಿದ್ದ ಬಸ್‌ಗಳನ್ನು ಏಕಾಏಕಿ ನಿಲ್ಲಿಸಿದ ಅಧಿಕಾರಿಗಳು ಬಸ್‌ ಒಳಗೆ ತೆರಳಿ ಪ್ರಯಾಣಿಕರ ಬಳಿ ಟಿಕೆಟ್‌ ದರದ ಬಗ್ಗೆ ವಿಚಾರಿಸಿದರು. ಬಳಿಕ ಹೆಚ್ಚು ಟಿಕೆಟ್‌ ದರ ಪಡೆದ ಬಸ್‌ ನಿರ್ವಾಹಕರು, ಏಜೆಂಟರ್‌ ಹಾಗೂ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಹಬ್ಬ ಎಂದು ಮನಬಂದಂತೆ ಪ್ರಯಾಣ ದರ ಏರಿಸಿ ಗ್ರಾಹಕರ ಸುಲಿಗೆ ಮಾಡುವಂತಿಲ್ಲ. ಒಂದು ವೇಳೆ ಹೆಚ್ಚು ದರ ಪಡೆದರೆ ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿ, ರಹದಾರಿ ರದ್ಧತಿಗೆ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ (ಆರ್‌ಟಿಎ) ಶಿಫಾರಸು ಮಾಡುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಹೆಚ್ಚುವರಿ ಟಿಕೆಟ್‌ ದರ ಪಡೆದ ಬಸ್‌ಗಳಿಗೆ ದಂಡ ವಿಧಿಸಿದ್ದು, ಕೆಲವೆಡೆ ಪ್ರಯಾಣಿಕರಿಗೆ ಟಿಕೆಟ್‌ನ ಹೆಚ್ಚುವರಿ ಮೊತ್ತವನ್ನು ಹಿಂದಿರುಗಿಸಲಾಗಿದೆ.

ಕನ್ನಡಪ್ರಭ ವರದಿ ಮಾಡಿತ್ತು: ‘ಈ ಬಾರಿ ಗಣೇಶ ಹಬ್ಬಕ್ಕೆ ಖಾಸಗಿ ಬಸ್‌ ಟಿಕೆಟ್‌ ದರ 2-3 ಪಟ್ಟು ಹೆಚ್ಚಾಗಿದ್ದು, ಶುಕ್ರವಾರದಿಂದಲೇ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ಸುಲಿಗೆ ಆರಂಭಿಸಿವೆ. ಆದರೆ, ಸಾರಿಗೆ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಕನ್ನಡಪ್ರಭ ಆ.27ರಂದು ವರದಿ ಮಾಡಿತ್ತು. ಇದರ ಬೆನ್ನಲ್ಲೆ ಶನಿವಾರ ಸಂಜೆ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

Tap to resize

Latest Videos

ಹುಬ್ಬಳ್ಳಿ ರೂಟ್‌ಗೆ ಭಾರಿ ಏರಿಕೆ: ಖಾಸಗಿ ಬಸ್‌ಗಳು ಟಿಕೆಟ್‌ ದರವನ್ನು ಒಂದೊಂದು ಮಾರ್ಗಕ್ಕೆ ಒಂದೊಂದು ರೀತಿ ಹೆಚ್ಚಿಸಲಾಗಿದೆ. ಮಂಗಳೂರು, ಮಡಿಕೇರಿ, ಮೈಸೂರು ಮಾರ್ಗದಲ್ಲಿ ಸಾಮಾನ್ಯ ದಿನಗಳಿಗಿಂತ ಒಂದೂವರೆಯಿಂದ ಎರಡು ಪಟ್ಟು ಟಿಕೆಟ್‌ ದರ ಹೆಚ್ಚಿದೆ. ಆದರೆ, ಹೋಲಿಸಿದರೆ ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ವಿಜಯನಗರ ಮಾರ್ಗದಲ್ಲಿ ಎರಡೂವರೆ, ಮೂರುಪಟ್ಟು ಟಿಕೆಟ್‌ ದರ ಹೆಚ್ಚಿಸಲಾಗಿದೆ. ಪ್ರವಾಸಿ ಸ್ಥಳ, ಧಾರ್ಮಿಕ ಕೇಂದ್ರಗಳ ಟಿಕೆಟ್‌ ದರ ಕೂಡಾ ಎರಡೂವರೆಯಿಂದ ಮೂರುಪಟ್ಟು ಹೆಚ್ಚಾಗಿದೆ.

ಖಾಸಗಿ ಬಸ್‌ಗಳ ‘ಹಬ್ಬದ ಸುಲಿಗೆ’ ಶುರು, ಟಿಕೆಟ್ ದರ 3 ಪಟ್ಟು ಏರಿಕೆ!

ಪ್ರಯಾಣಿಕರ ಕಿಡಿ: ಹಬ್ಬದ ಸಂದರ್ಭದಲ್ಲಿ ಟಿಕೆಟ್‌ ದರ ಹೆಚ್ಚಳವಾಗುತ್ತದೆ ಎಂಬ ಮಾಹಿತಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿದಿರುತ್ತದೆ. ಆದರೆ, ಈವರೆಗೂ ಖಾಸಗಿ ಬಸ್‌ ಆಪರೇಟರ್ಸ್‌ಗೆ ದರ ಹೆಚ್ಚಳ ಮಾಡದಂತೆ ನಿರ್ಬಂಧವಾಗಲಿ, ಕಟ್ಟುನಿಟ್ಟಿನ ಸೂಚನೆಯಾಗಲಿ ಸಾರಿಗೆ ಇಲಾಖೆ ನೀಡಿಲ್ಲ. ಪ್ರಯಾಣಿಕರು ದೂರು ನೀಡಲು ಸಹಾಯವಾಣಿಯನ್ನೂ ಆರಂಭಿಸಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ಕೆಎಸ್ಸಾರ್ಟಿಸಿಯಿಂದ ಹಬ್ಬಕ್ಕಿಲ್ಲ ಹೆಚ್ಚು ಬಸ್‌, ಖಾಸಗಿಯತ್ತ ಜನ..!

ಆ್ಯಪ್‌ಗಳಿಂದ ಜಿಎಸ್‌ಟಿ ಬಿಸಿ: ಟ್ರಾವೆಲ್‌ ಅಥವಾ ಪೇಮೆಂಟ್‌ ಆ್ಯಪ್‌ಗಳಿಂದ ಬಸ್‌ ಟಿಕೆಟ್‌ ಬುಕ್ಕಿಂಗ್‌ ಮಾಡುವವರಿಗೆ ಈ ಬಾರಿ ಶೇ.5ರಷ್ಟುಜಿಎಸ್‌ಟಿ ಕೂಡ ಅನ್ವಯವಾಗುತ್ತಿದೆ. 1000 ರು. ಮೊತ್ತದ ಟಿಕೆಟ್‌ ಖರೀದಿಸುವವರು 50 ರು. ತೆರಿಗೆ ಕಟ್ಟಬೇಕಿದೆ.

click me!