ರಾಯಚೂರು ಸೇರಿ ಕಲ್ಯಾಣ ಕರ್ನಾಟಕದ ಜನ ಗುಳೆ ಹೋಗುವುದನ್ನು ತಪ್ಪಿಸಲು ಈ ಭಾಗದಲ್ಲಿ ಗಾರ್ಮೆಂಟ್ಸ್ ಉದ್ದಿಮೆ ಅಭಿವೃದ್ಧಿ. ನೀರಾವರಿ ಯೋಜನೆ ಘೋಷಣೆ ಮಾಡಲಾಗಿದೆ. ಸಿರಿಧಾನ್ಯ ಹಬ್ ಆಗಿ ಕಲ್ಯಾಣ ಕರ್ನಾಟಕ ಎಂದ ಸಚಿವೆ ನಿರ್ಮಲಾ.
ರಾಯಚೂರು (ಆ.28): ಕಲ್ಯಾಣ ಕರ್ನಾಟಕವು ಸಿರಿಧಾನ್ಯ ಉತ್ಪಾದನೆ ಹಬ್ ಆಗಬೇಕು. ಇದಕ್ಕೆ ಅಗತ್ಯ ನೆರವು ನೀಡುತ್ತೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇದೇ ವೇಳೆ, ಒಂದು ವಾರ ಅಥವಾ 10 ದಿನದೊಳಗೆ ನೀತಿ ಆಯೋಗವು ‘ಸಿರಿಧಾನ್ಯ ಚಾಲೆಂಜ್’ ಸ್ಪರ್ಧೆ ಘೋಷಣೆ ಮಾಡಲಿದೆ. ಗೆದ್ದ ಮೂವರಿಗೆ ತಲಾ 1 ಕೋಟಿ ರು. ಮೂಲನಿಧಿ ನೀಡಲಾಗುತ್ತದೆ ಎಂದಿದ್ದಾರೆ. ರಾಯಚೂರು ಸೇರಿ ಕಲ್ಯಾಣ ಕರ್ನಾಟಕದ ಜನ ಗುಳೆ ಹೋಗುವುದನ್ನು ತಪ್ಪಿಸಲು ಈ ಭಾಗದಲ್ಲಿ ನೀರಾವರಿ ಅಭಿವೃದ್ಧಿಯಾಗಬೇಕು, ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೋದ್ಯಮ ಸ್ಥಾಪಿಸಿ ಉದ್ಯೋಗ ನೀಡಬೇಕು. ಈ ನಿಟ್ಟಿನಲ್ಲಿ ಜೀನ್ಸ್ ಮತ್ತು ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರಕ್ಕೆ ಈಗಾಗಲೇ ಶಿಫಾರಸು ಮಾಡಲಾಗಿದೆ. ಇದಲ್ಲದೆ, ರಾಜ್ಯ ಸರ್ಕಾರದಿಂದಲೂ ರಾಯಚೂರಲ್ಲಿ ಗಾರ್ಮೆಂಟ್ಸ್ ಉದ್ದಿಮೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಬಳ್ಳಾರಿ, ರಾಯಚೂರು, ಕಲಬುರಗಿಯಲ್ಲಿ ಗಾರ್ಮೆಂಟ್ಸ್ ಉದ್ಯಮದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ ಬಳ್ಳಾರಿಯಲ್ಲಿ ಜೀನ್ಸ್ ಮತ್ತು ಕಲಬುರಗಿಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದರು.
undefined
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ರಾಜ್ಯದ ಪಾಲಿನ ನೀರಿನ ಸಂಪೂರ್ಣ ಬಳಕೆಗೆ ಸರ್ಕಾರ ಬದ್ಧವಾಗಿದ್ದು, ಈಗಾಗಲೇ ಆಲಮಟ್ಟಿಜಲಾಶಯದ ಎತ್ತರ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು 9 ಯೋಜನೆಗಳನ್ನು ರೂಪಿಸಿದ್ದು, ಆಲಮಟ್ಟಿಜಲಾಶಯ ಎತ್ತರ ಹೆಚ್ಚಿಸುವ ಕುರಿತ ವಿಚಾರವು ಸುಪ್ರೀಂ ಕೋರ್ಚ್‌ನಲ್ಲಿದೆ. ನೋಟಿಫಿಕೇಷನ್ ಬಂದ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು. ಇದರಿಂದಾಗಿ 1.30 ಲಕ್ಷ ಹೆಕ್ಟೇರ್ ಭೂ ಸ್ವಾಧೀನ ಹಾಗೂ 22 ಹಳ್ಳಿಗಳ ಸ್ಥಳಾಂತರ ಮಾಡಬೇಕಾಗಿದೆ. ಅದಕ್ಕಾಗಿ .5 ಸಾವಿರ ಕೋಟಿ ಬೇಕಿದ್ದು, ಒದಗಿಸಿಕೊಡಲಾಗುವುದು ಎಂದರು.
ಕೇಂದ್ರಕ್ಕೆ ಮನವರಿಕೆ ಪ್ರಯತ್ನ: ರಾಯಚೂರಲ್ಲೇ ಏಮ್ಸ್ ಸ್ಥಾಪಿಸುವ ಕುರಿತು ಈಗಾಗಲೇ ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ. ವಿಮಾನ ನಿಲ್ದಾಣ, ಜವಳಿ ಪಾರ್ಕ್ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಂದಿನ ತಿಂಗಳು ಚಾಲನೆ ನೀಡಲಿದ್ದೇನೆ ಎಂದರು.
ಸಂಸ್ಕರಣಾ ಘಟಕ ಸ್ಥಾಪನೆಗೆ ನೆರವು-ಸಿಎಂ: ಕಲ್ಯಾಣ ಕರ್ನಾಟಕ ಭಾಗದ ಪ್ರತಿ ಜಿಲ್ಲೆಗೊಂದು ಸಿರಿಧಾನ್ಯ ಗೊತ್ತುಪಡಿಸಿ ಬೆಳೆ ಬೆಳೆಯಲು, ಅಲ್ಲೇ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೆಪೆಕ್ ಸಂಸ್ಥೆ ಮೂಲಕ ಎಲ್ಲಾ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಯಚೂರು ಕೃಷಿ ವಿವಿಗೆ ಕೇಂದ್ರ ಹಣಕಾಸು ಸಚಿವರಿಂದ ಭರ್ಜರಿ ಗಿಫ್ಟ್..!
ರಾಯಚೂರು ಕೃಷಿ ವಿಜ್ಞಾನಗಳ ವಿವಿ ಹಾಗೂ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸಹಯೋಗದಲ್ಲಿ ಕೃಷಿ ವಿವಿಯಲ್ಲಿ ಎರಡು ದಿನಗಳ ಸಿರಿಧಾನ್ಯ ಸಮಾವೇಶ ಉದ್ಘಾಟಿಸಿ ಶನಿವಾರ ಮಾತನಾಡಿ, ಕೃಷಿ ವಿವಿಗಳು ರೈತರು-ಕೃಷಿ ಆಧಾರಿತ ಸಂಶೋಧನೆಗಳನ್ನು ಆರಂಭಿಸಬೇಕು. ರೈತರ ಹೊಲಗಳೇ ಸಂಶೋಧನಾ ಕೇಂದ್ರಗಳಾಗಬೇಕು. ಕೃಷಿ ವಿಜ್ಞಾನಿಗಳು ಪ್ರಯೋಗಾಲಯದಿಂದ ಹೊರಬಂದು ರೈತರ ಜಮೀನುಗಳಿಗೆ ಹೋಗಿ ಸಂಶೋಧನೆ ಮಾಡಬೇಕು ಎಂದು ಸಲಹೆ ನೀಡಿದರು.