ಆನೆ ಕಾರಿಡಾರ್‌-ಆವಾಸಸ್ಥಾನಗಳ ರಕ್ಷಣೆಗೆ ಐಐಎಸ್ಸಿ ಜೊತೆ ಒಪ್ಪಂದ: ಸಚಿವ ಈಶ್ವರ ಖಂಡ್ರೆ

Kannadaprabha News   | Kannada Prabha
Published : Jul 16, 2025, 07:33 AM IST
Eshwar khandre

ಸಾರಾಂಶ

ಹಾಸನ, ಕೊಡಗು ಭಾಗದಲ್ಲಿ ಹೆಚ್ಚಾಗಿ ಆನೆ-ಮಾನವ ಸಂಘರ್ಷವಿದೆ. ಜೀವಹಾನಿ, ಬೆಳೆ ಹಾನಿ ಸಂಭವಿಸುತ್ತಿದೆ. ಪ್ರಸ್ತುತ ಮಾನವ-ಆನೆ ಸಂಘರ್ಷ ಇತರ ಪ್ರದೇಶಕ್ಕೂ ವಿಸ್ತರಿಸುತ್ತಿದ್ದು, ಇದನ್ನು ನಿಯಂತ್ರಿಸುವ ಅಗತ್ಯವಿದೆ.

ಬೆಂಗಳೂರು (ಜು.16): ರಾಜ್ಯದಲ್ಲಿ ಹೆಚ್ಚುತ್ತಿರುವ ಆನೆ-ಮಾನವ ಸಂಘರ್ಷ ನಿಯಂತ್ರಣ ಮತ್ತು ಕಾಡಂಚಿನ ರೈತರ ಬೆಳೆ ಸಂರಕ್ಷಿಸುವುದರ ಜೊತೆಗೆ ಆನೆ ಕಾರಿಡಾರ್‌, ಆವಾಸಸ್ಥಾನ ರಕ್ಷಣೆಗೆ ಆಧುನಿಕ ತಂತ್ರಜ್ಞಾನ ಬಳಸುವ ನಿಟ್ಟಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಮತ್ತು ಅರಣ್ಯ ಇಲಾಖೆ ಒಡಂಬಡಿಕೆ ಮಾಡಿಕೊಂಡಿವೆ. ವಿಕಾಸಸೌಧದಲ್ಲಿ ಐಐಎಸ್ಸಿಯ ಪ್ರೊ.ರಮನ್ ಸುಕುಮಾರ್‌ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ ಸಹಿ ಹಾಕಿ ಐತಿಹಾಸಿಕ ಒಡಂಬಡಿಕೆ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಉಪಸ್ಥಿತರಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ ಖಂಡ್ರೆ, ಹಾಸನ, ಕೊಡಗು ಭಾಗದಲ್ಲಿ ಹೆಚ್ಚಾಗಿ ಆನೆ-ಮಾನವ ಸಂಘರ್ಷವಿದೆ. ಜೀವಹಾನಿ, ಬೆಳೆ ಹಾನಿ ಸಂಭವಿಸುತ್ತಿದೆ. ಪ್ರಸ್ತುತ ಮಾನವ-ಆನೆ ಸಂಘರ್ಷ ಇತರ ಪ್ರದೇಶಕ್ಕೂ ವಿಸ್ತರಿಸುತ್ತಿದ್ದು, ಇದನ್ನು ನಿಯಂತ್ರಿಸುವ ಅಗತ್ಯವಿದೆ. ಜೊತೆಗೆ ಆನೆ ಕಾರಿಡಾರ್‌, ಆವಾಸಸ್ಥಾನಗಳ ಸಂರಕ್ಷಣೆಗೆ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಏಷ್ಯನ್ ಆನೆಗಳ ಭೂಪ್ರದೇಶ ನಿರ್ವಹಣೆಗಾಗಿ 5 ವರ್ಷಗಳ ಸಹಯೋಗದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಸ್ಯಾಟಲೈಟ್ ಟೆಲಿಮೆಟ್ರಿ, ಕ್ಯಾಮೆರಾ ಟ್ರಾಪ್‌ಗಳು ಮತ್ತು ಜಿಐಎಸ್ ಮಾದರಿಗಳನ್ನು ಬಳಸಿಕೊಂಡು ಆನೆ ಕಾರಿಡಾರ್‌ ಗುರುತಿಸುವುದು ಮತ್ತು ಆನೆಗಳ ಸುಗಮ ಸಂಚಾರಕ್ಕೆ ಎದುರಾಗಿರುವ ಅಡೆತಡೆಗಳನ್ನು ಗುರುತಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

ಆನೆ ಲದ್ದಿಯಲ್ಲಿರುವ ಹಾರ್ಮೋನ್‌ಗಳ ಪರೀಕ್ಷೆ ನಡೆಸುವ ಮೂಲಕ ಆನೆಗಳ ದೇಹದ ಸ್ಥಿತಿ ಮತ್ತು ಒತ್ತಡ ಸೂಚಕಗಳನ್ನು ಅಂದಾಜು ಮಾಡಲಾಗುತ್ತದೆ. ಆನೆಗಳ ಅಧ್ಯಯನ-ವಿಶ್ಲೇಷಣೆ ಮಾಡಿ ರೈತರಿಗೆ ಅರಿವು ಮೂಡಿಸುವುದೂ ಈ ಯೋಜನೆಯ ಭಾಗ ಎಂದರು. ಆನೆಗಳು ನಾಡಿನತ್ತ ಬಂದಾಗ ಮುನ್ನೆಚ್ಚರಿಕೆ ಗಂಟೆ ಮೊಳಗಿಸುವ ವ್ಯವಸ್ಥೆ ರೂಪಿಸುವ ಹಾಗೂ ಸ್ವಯಂ ಚಾಲಿತ ಧ್ವನಿಯಂತ್ರಗಳ ಮೂಲಕ ಆನೆಗಳನ್ನು ಹಿಮ್ಮೆಟ್ಟಿಸುವ ಬಗ್ಗೆಯೂ ಅಧ್ಯಯನ ನಡೆಸಲಾಗುವುದು. ಅರಣ್ಯ ಇಲಾಖೆ ಮತ್ತು ಭಾರತೀಯ ವಿಜ್ಞಾನ ಮಂದಿರದ ತಜ್ಞರು, ಅಧ್ಯಯನಿಗಳು ಆನೆಗಳ ವರ್ತನೆ, ಸ್ವಭಾವದ ದತ್ತಾಂಶ ಕ್ರೋಡೀಕರಿಸಿ ಆನೆಪಥ (ಕಾರಿಡಾರ್) ಹಾಗೂ ಮುಂದಿನ 10 ವರ್ಷಗಳಲ್ಲಿ ಎದುರಾಗಬಹುದಾದ ಭವಿಷ್ಯದ ಸಂಘರ್ಷ ಪ್ರದೇಶ ಗುರುತಿಸಲೂ ಈ ಅಧ್ಯಯನ ನೆರವಾಗಲಿದೆ ಎಂದು ಹೇಳಿದರು.

ಮೈಸೂರು ಆನೆ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಪ್ರಮುಖ ಅರಣ್ಯ ವಿಭಾಗಗಳು ಹಾಗೂ ಸಂರಕ್ಷಿತ ಪ್ರದೇಶಗಳು ಅಂದರೆ ಹುಲಿ ಸಂರಕ್ಷಿತ ಪ್ರದೇಶಗಳು, ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳು ಹಾಗೂ ಮಾನವ ವಾಸವಿರುವ ಕೃಷಿ ಪ್ರದೇಶಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಸಂಶೋಧನಾ ಚಟುವಟಿಕೆಗಳನ್ನು ಐಐಎಸ್ಸಿ ಪರಿಸರ ಶಾಸ್ತ್ರ ಕೇಂದ್ರ ಹಾಗೂ ಏಷ್ಯನ್‌ ನೇಚರ್ ಕನ್ಸರ್ವೇಷನ್ ಫೌಂಡೇಶನ್, ಫೌಂಡೇಶನ್ ಫಾರ್ ಇಕಲಾಜಿಕಲ್ ರಿಸರ್ಚ್, ಅಡ್ವೊಕಸಿ ಆ್ಯಂಡ್‌ ಲರ್ನಿಂಗ್, ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಹಯೋಗದಲ್ಲಿ ನಡೆಸಲುದ್ದೇಶಿಸಲಾಗಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌