ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ, 60 ವಯೋಮಿತಿ ರದ್ದು: ಬೊಮ್ಮಾಯಿ

By Kannadaprabha NewsFirst Published Nov 2, 2021, 6:40 AM IST
Highlights
  •   ಮುಂದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ ಇರುವುದಿಲ್ಲ
  • ವಿವಿಧ ಕ್ಷೇತ್ರಗಳ ತಜ್ಞರೇ ಸಾಧಕರನ್ನು ಶೋಧಿಸಿ ಪ್ರಶಸ್ತಿ

 ಬೆಂಗಳೂರು (ನ.02):  ಇನ್ನು ಮುಂದೆ ಕರ್ನಾಟಕ ರಾಜ್ಯೋತ್ಸವ (Karnataka rajyotsava) ಪ್ರಶಸ್ತಿಗೆ ಅರ್ಜಿ ಆಹ್ವಾನ ಇರುವುದಿಲ್ಲ. ವಿವಿಧ ಕ್ಷೇತ್ರಗಳ ತಜ್ಞರೇ ಸಾಧಕರನ್ನು ಶೋಧಿಸಲಿದ್ದಾರೆ!

ಹೌದು, ಈ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರೇ ತಿಳಿಸಿದ್ದು, ಸರ್ಕಾರ 2022ನೇ ಸಾಲಿನಿಂದ ಅರ್ಜಿ ಪಡೆದು ಪ್ರಶಸ್ತಿ ನೀಡದಿರಲು ನಿರ್ಧರಿಸಿದೆ. ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ತಜ್ಞರ ಮೂಲಕ ಶೋಧಿಸಿ ಸರ್ಕಾರ ಪ್ರಶಸ್ತಿ ನೀಡಲಿದೆ ಎಂದು ತಿಳಿಸಿದ್ದಾರೆ. ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿ ಮೊತ್ತವನ್ನು ಒಂದು ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಲಾಗುವುದು ಎಂದಿದ್ದಾರೆ.

ಬೆಂಗಳೂರಿನ (Bengaluru) ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವ ಸಂಪ್ರದಾಯ ಸರಿಯಲ್ಲ. ಅದಕ್ಕಾಗಿ ಸಾಧಕರು ಕಿಲೋಗಟ್ಟಲೆ ಪುಸ್ತಕಗಳನ್ನು ಹೊತ್ತು ತರಬೇಕಿಲ್ಲ. ಸಾಧಕರ ಮಾಹಿತಿಯನ್ನು ಸರ್ಕಾರ ಮತ್ತು ಆಯ್ಕೆ ಸಮಿತಿ ತಜ್ಞರು ಎರಡು ತಿಂಗಳ ಶೋಧನೆ ಮಾಡಿ ಗುರುತಿಸಲಿದ್ದಾರೆ ಎಂದು ಹೇಳಿದರು.

ಸಮುದ್ರದಾಳದಲ್ಲಿ ಮೊದಲ ಸಲ ಕನ್ನಡ ಧ್ವಜಾರೋಹಣ!

ಮುಂದಿನ ವರ್ಷದಿಂದ ಪ್ರಶಸ್ತಿ ಆಯ್ಕೆಗಾಗಿ ಇರುವ ವಯೋಮಿತಿಯನ್ನು (Age Limit) (60 ವರ್ಷ) ಕಡಿಮೆ ಮಾಡಲು ನ್ಯಾಯಾಲಯಕ್ಕೆ ಪ್ರಮಾಣಪತ್ರ (ಅಫಿಡವಿಟ್‌) ಸಲ್ಲಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಪ್ರತಿಭೆಗೂ ವಯಸ್ಸಿಗೂ ಸಂಬಂಧವಿಲ್ಲ. ಈಗಿನ ತಂತ್ರಜ್ಞಾನದ ಕಾಲದಲ್ಲಿ ಸಾಕಷ್ಟುಮಕ್ಕಳು ಪ್ರತಿಭಾವಂತರಾಗಿದ್ದಾರೆ. ಆ ಮಕ್ಕಳಿಗೆ ಅವಕಾಶ ಕೊಟ್ಟಾಗ ಇತರರು ಸಾಧನೆಗೈಯಲು ಪ್ರೇರಕ ಶಕ್ತಿಯಾಗುತ್ತದೆ ಎಂದರು.

ಗಂಗಾವತಿಯ ಪ್ರಾಣೇಶ್‌ ಅವರಿಗೆ ಪ್ರಶಸ್ತಿ ನೀಡುವಂತೆ ಎರಡ್ಮೂರು ಬಾರಿ ಶಿಫಾರಸು ಮಾಡಿದ್ದೆ. ಆದರೆ, ಅವರಿಗೆ 60 ವರ್ಷ ವಯಸಾಗಿಲ್ಲ ಎಂದು ತಡೆ ಹಿಡಿಯಲಾಗಿತ್ತು. ಇಂತಹ ಅನೇಕ ಪ್ರತಿಭೆಗಳಿಗೆ ವಯೋಮಿತಿ ಅಡ್ಡಿಯಾಗಬಾರದೆಂದು ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.

ಪ್ರಶಸ್ತಿ ಮೊತ್ತ ಹೆಚ್ಚಳ: 

  2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ (Kannada Rajyotsava) ಪ್ರಶಸ್ತಿಯನ್ನು 66 ಸಾಧಕರಿಗೆ ನೀಡಿ ಗೌರವಿಸಲಾಯ್ತು.  ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ( Basavaraj Bommai) ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ಪ್ರದಾನ ಮಾಡಿದರು.

ಪ್ರಶಸ್ತಿ ನೀಡಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಸಲ ಪ್ರಶಸ್ತಿಯೊಂದಿಗೆ ಹಣವನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ ಮಾಡುವುದಾಗಿ ಘೋಷಿಸಿದರು. ಜೊತೆಗೆ ಮುಂದಿನ ಬಾರಿ ಅರ್ಜಿ ತೆಗೆದುಕೊಂಡು ಪ್ರಶಸ್ತಿ ಕೊಡುವುದಿಲ್ಲ. ಯಾರು ಬಯೋಡೇಟವನ್ನು ತೆಗೆದುಕೊಳ್ಳುವುದಿಲ್ಲ. ಸರ್ಕಾರ ಮತ್ತು ಆಯ್ಕೆ ಸಮಿತಿ ಎರಡು ತಿಂಗಳ ‌ಮುಂಚೆ ಆಯ್ಕೆ ಮಾಡುತ್ತೆ. ಪ್ರಶಸ್ತಿಗೆ ಸಾಧಕರ ಆಯ್ಕೆ ಶೋಧನೆಯಿಂದ ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಮೊತ್ತ ಹೆಚ್ಚಿಸಿದ ಸಿಎಂ, ಹಾಸ್ಯ ಚಟಾಕಿ ಹಾರಿಸಿದ ಪ್ರಾಣೇಶ್

ಇಂದು ಬಹಳ ಸಂತೋಷವಾಗ್ತಿದೆ. ಕನ್ನಡದಲ್ಲಿ ಇಷ್ಟೊಂದು ದೊಡ್ಡ ಸಾಧಕರ ಪಟ್ಟಿ ಇದೆ. ಇವರ ಬದುಕಲ್ಲಿ ಹಲವಾರು ಆಯ್ಕೆ ಇತ್ತು, ಆದರೆ ಸಮಾಜಮುಖಿ ಕೆಲಸಕ್ಕೆ ಮಾನ್ಯತೆ ನೀಡಿದ್ರು. ಸಾಹಿತ್ಯ ಕಲಾ ಸಂಗೀತ ಸಂಸ್ಕೃತಿ ಹಾಡುಗಾರಿಕೆ‌ ಎಲ್ಲಾ ರಂಗವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಸಾಧಕರನ್ನು ಹಾಡಿ ಹೊಗಳಿದರು. ಆಯ್ಕೆ ಸಮಿತಿ ಸಮುದ್ರ ಆಳದಲ್ಲಿ ಇರುವ ಮುತ್ತು, ಭೂಮಿ ಆಳದಲ್ಲಿರುವ ರತ್ನವನ್ನು ಆಯ್ಕೆ ಮಾಡಿದ್ದಾರೆ. ಇವರೆಲ್ಲರಿಗೂ ನನ್ನ ಧನ್ಯವಾದ ಎಂದರು.

ಮೊದಲ ಸ್ಥಾನ ಕನ್ನಡಿಗನಿಗೆ
 
ಪರೋಪಕಾರಿ ಗುಣಗಳು ಮನುಷ್ಯನಲ್ಲಿ ಬರಬೇಕು. ಬದುಕಿನಲ್ಲಿ ಒಂದು ಬ್ಯಾಲೆನ್ಸಿಂಗ್ ಇದೆ. ಇಡೀ ಜಗತ್ತಿನಲ್ಲಿ ಕನ್ನಡ ನಾಡು ವಿಶೇಷವಾದ ಭಾಗ, ಮನುಷ್ಯನಿಗೆ ಹಲವಾರು ಆಸೆ ಅಭಿಲಾಷೆ ಇರುತ್ತೆ. ದೈಹಿಕ ಬೆಳವಣಿಗೆ ಜೊತೆಗೆ ಮಾನಸಿಕ ಬೆಳವಣಿಗೆ ಕೂಡ ಆಗಿರುತ್ತೆ. ಅದರಂತೆ ನಮ್ಮ ಆಸೆ ಅಭಿಲಾಸೆ ಕೂಡ ಬದಲಾಗುತ್ತಿರುತ್ತೆ. ಅದು ಬಂದಾಗ ಮಾತ್ರ ಜೀವನದಲ್ಲಿ ಒಳ್ಳೆಯ ಸಮಾಜ ನಿರ್ಮಾಣ ಮಾಡಬಹುದು. ಮುಂದಿನ ದಿನಗಳಲ್ಲಿ ಕನ್ನಡ(kannada) ಪರ್ವ ಪ್ರಾರಂಭ ಆಗಬೇಕು. ಪರ್ವ ಅಂದರೆ ಎಲ್ಲಾ ರಂಗದಲ್ಲಿ ಮೊದಲೇ ಸ್ಥಾನ ಕನ್ನಡಕ್ಕೆ ಇರಬೇಕು. ಮೊದಲ ಸ್ಥಾನ ಕನ್ನಡಿಗನಿಗೆ ಇರಬೇಕು ಎಂದು ಕರೆ ನೀಡಿದರು.

ನಮ್ಮ‌ 8 ಸಾಹಿತಿಗಳು ಜ್ಞಾನ ಪೀಠ ಪ್ರಶಸ್ತಿ ಪಡೆದಿದ್ದಾರೆ. ಮೊದಲು ವಿದೇಶಿಯರು ದೆಹಲಿಗೆ ಬರ್ತಿದ್ರು, ಇಂದು ಬೆಂಗಳೂರಿಗೆ ಬರ್ತಿದ್ದಾರೆ. ನಮ್ಮ ವಿಶೇಷವಾದ ಕೃಷಿ ಉತ್ಪನ್ನ ಇದೆ. ಮಲ್ನಾಡಿನ ಕಾಫಿ, ನಮ್ಮ ಉತ್ತರ ಕರ್ನಾಟಕದಲ್ಲಿ ಮೆಣಸಿನಕಾಯಿ ವಿದೇಶಕ್ಕೆ ಗೊತ್ತು. ಚೈನಾ ರೇಷ್ಮೆ ಜೊತೆಗೆ ನಮ್ಮ ಕರ್ನಾಟಕ ರೇಷ್ಮೆ ಪೈಪೋಟಿ ‌ಕೊಡ್ತಿದೆ. ನಾಡನ್ನ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. ಕನ್ನಡದ ಅಂತರಂಗದ ಶಕ್ತಿ ಪ್ರೀತಿ ಮತ್ತು ವಿಶ್ವಾಸ, ಬೇರೆ ಭಾಷೆ ಬಗ್ಗೆ ವಿಶ್ಲೇಷಣೆ ಬೇಡ. ಆದರೆ ನಮ್ಮ ಕನ್ನಡದ ವಿಶ್ಲೇಷಣೆ ಬೇಕು. ಹೃದಯ ವೈಶಾಲತೆ ನಮ್ಮ ಕನ್ನಡಿಗರಿಗಿದೆ. ನಾಡು ಶ್ರೀಮಂತವಾಗಬೇಕಾದರೇ ಜನ ಶ್ರೀಮಂತವಾಗಬೇಕು. ಜನ ಶ್ರೀಮಂತರಾದರೇ ಎಲ್ಲಾ ರಂಗಗಳೂ ಶ್ರೀಮಂತವಾಗುತ್ತೆ, ಆ ನಾಡು ಶ್ರೀಮಂತವಾಗುತ್ತೆ ಎಂದರು.

click me!