
ವಿಧಾನಮಂಡಲ : ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲು ಜಾರಿ ಆದೇಶ ಹೊರಡಿಸುತ್ತಿದ್ದಂತೆಯೇ ಈ ಹೊಸ ಮೀಸಲು ನೀತಿಯಂತೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ನೇಮಕಾತಿ ವೇಳೆ ಒಂದು ಬಾರಿಗೆ ಅನ್ವಯವಾಗುವಂತೆ ವಯೋಮಿತಿ ಸಡಿಲಗೊಳಿಸಲು ತೀರ್ಮಾನಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಭಯ ಸದನದಲ್ಲಿ ಪ್ರಕಟಿಸಿದ್ದಾರೆ.
ಜತೆಗೆ, ಕಾಲಕಾಲಕ್ಕೆ ಪರಿಶಿಷ್ಟ ಜಾತಿಗಳಲ್ಲಿನ ಈ ದತ್ತಾಂಶಗಳ ಆಧಾರದ ಮೇಲೆ ಅಧ್ಯಯನ ಮಾಡಿ ವರದಿ ನೀಡಲು ‘ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗ’ ರಚನೆಗೆ ತೀರ್ಮಾನ ಮಾಡಲಾಗಿದೆ ಎಂದೂ ತಿಳಿಸಿದರು.
ಮಂಗಳವಾರ ರಾತ್ರಿ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿ ಕುರಿತು ತೆಗೆದುಕೊಂಡ ನಿರ್ಣಯವನ್ನು ಬುಧವಾರ ಉಭಯ ಸದನಗಳಲ್ಲಿ ಅವರು ಪ್ರಕಟಿಸಿದರು.
ಈ ವೇಳೆ ಸರ್ಕಾರದ ಆದೇಶ ಹೊರಡಿಸಿದ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಹೀಗಾಗಿ ಒಳ ಮೀಸಲಾತಿ ಜಾರಿಯಾಗುವವರೆಗೆ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆಸದಂತೆ ನ.24 ರಂದು ಹೊರಡಿಸಿದ್ದ ಸರ್ಕಾರದ ಆದೇಶ ರದ್ದಾಗಲಿದೆ. ಅಂದಿನಿಂದ ನೆನೆಗುದಿಗೆ ಬಿದ್ದಿರುವ ನೇಮಕಾತಿ ಪ್ರಕ್ರಿಯೆ ಆದೇಶ ಹೊರಬೀಳುತ್ತಿದ್ದಂತೆಯೇ ಮತ್ತೆ ಆರಂಭವಾಗಲಿದೆ.
ಜತೆಗೆ ಈ ಮೀಸಲು ಜಾರಿಗಾಗಿ ಕಳೆದ ಎರಡೂವರೆ ದಶಕಗಳಿಂದ ಹೋರಾಟ ನಡೆಸುತ್ತಿದ್ದವರ ಮೇಲೆ ದಾಖಲಾಗಿದ್ದ ಮೊಕದ್ದಮೆಗಳನ್ನೂ ಹಿಂಪಡೆಯಲು ಸಂಪುಟ ಅನುಮೋದನೆ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ರಾಷ್ಟ್ರೀಯ ಜನಗಣತಿ ಅಂಕಿ-ಅಂಶ ಆಧರಿಸಿ ಬದಲಾವಣೆಗೆ ಒಳಪಟ್ಟಿದೆ : ಸಿಎಂ
ಒಳ ಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನದಲ್ಲಿ ಯಾವುದಾದರೂ ಮಾರ್ಪಾಡುಗಳ ಅಗತ್ಯ ಕಂಡು ಬಂದರೆ ಮುಂದಿನ ರಾಷ್ಟ್ರೀಯ ಜನಗಣತಿ ಅಂಕಿ-ಅಂಶ ಆಧರಿಸಿ ಬದಲಾವಣೆಗೆ ಒಳಪಡುವ ಷರತ್ತಿಗೆ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
- ಒಂದು ಬಾರಿ ವಯೋಮಿತಿ ಸಡಲಿಕೆಗೆ ನಿರ್ಧಾರ
- ಕಾಲಕಾಲಕ್ಕೆ ಅಧ್ಯಯನಕ್ಕಾಗಿ ಆಯೋಗ ರಚನೆ
- ‘ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗ’ ಸ್ಥಾಪನೆ
- ಒಳಮೀಸಲು ಹೋರಾಟಗಾರರ ಕೇಸ್ ವಾಪಸ್
- ರಾಷ್ಟ್ರೀಯ ಗಣತಿ ಆಧರಿಸಿ ಮೀಸಲು ಪರಿಷ್ಕರಣೆ
- ಉಭಯ ಸದನಗಳಿಗೆ ಮುಖ್ಯಮಂತ್ರಿ ಮಾಹಿತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ