ಪಿಎಸ್‌ಐ ಪರೀಕ್ಷೆ ಅಕ್ರಮ: ಮತ್ತಿಬ್ಬರು ಅರೆಸ್ಟ್‌, ಬಂಧಿತರ ಸಂಖ್ಯೆ 39ಕ್ಕೇರಿಕೆ

By Kannadaprabha News  |  First Published Jun 10, 2022, 2:42 PM IST

*  ಮಹೇಶ ಹಿರೋಳಿ, ಸೈಫನ್‌ನನ್ನ ಬಂಧಿಸಿದ ಸಿಐಡಿ ತಂಡ
*  39ಕ್ಕೇರಿದ ಬಂಧಿತರ ಸಂಖ್ಯೆ
*  ಮಹೇಶನ ತೋಟದ ಮನೆಯಲ್ಲಿ ಬ್ಲೂಟೂತ್‌ ಪತ್ತೆ


ಕಲಬುರಗಿ(ಜೂ.10):  ಪೊಲೀಸ್‌ ಇಲಾಖೆಯ 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಹಗರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ಮುಂದುವರಿಸಿರುವ ಇಲ್ಲಿನ ಸಿಐಡಿ ಅಧಿಕಾರಿಗಳ ತಂಡ ಗುರುವಾರ, ಅಕ್ರಮದ ಕಿಂಗ್‌ಪಿನ್‌, ಅಫಜಲ್ಪುರ ತಾಲೂಕಿನ ಸೊನ್ನದ ರುದ್ರಗೌಡ ಪಾಟೀಲ್‌ನ ಬಲಗೈ ಬಂಟರಾಗಿರುವ ಕರಜಗಿಯ ಮಹೇಶ ಹೀರೋಳಿ ಹಾಗೂ ಸೈಫನ್‌ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇವರಿಬ್ಬರ ಬಂಧನದೊಂದಿಗೆ ಕಲಬುರಗಿಯಲ್ಲಿನ ಅಕ್ರಮದಲ್ಲಿ ಸಿಐಡಿ ಇದುವರೆಗೂ ಬಂಧಿಸಿರುವವರ ಸಂಖ್ಯಾಬಲ 39ಕ್ಕೆ ಹೆಚ್ಚಿದಂತಾಗಿದೆ. ಸಿಐಡಿ ತನಿಖಾಧಿಕಾರಿಗಳಾದ ಡಿವೈಎಸ್ಪಿ ಪ್ರಕಾಶ ರಾಠೋಡ, ಶಂಕರಗೌಡ ಪಾಟೀಲ್‌, ವಿರೇಂದ್ರ ಕುಮಾರ್‌ ಇವರನ್ನೊಳಗೊಂಡ ತಂಡದಿಂದ ಬುಧವಾರ ಹಾಗೂ ಗರುವಾರ ಎರಡೂ ದಿನಗಳ ಕಾಲ ನಡೆದ ನಿರಂತರ ಕಾರ್ಯಾಚರಣೆಯಲ್ಲಿ ಇವರಿಬ್ಬರೂ ಆರೋಪಿಗಳ ಬಂಧನವಾಗಿದೆ.

Tap to resize

Latest Videos

ಪಿಎಸ್‌ಐ ಜೊತೆಗೆ ಪಿಸಿ ಪರೀಕ್ಷೆ ಅಕ್ರಮ ತನಿಖೆ?

ಮಹೇಶ ಹೀರೋಳ್ಳಿ ಈತ ಹಣಕಾಸಿನ ಡೀಲ್‌ ಆದಂತಹ ಅಭ್ಯರ್ಥಿಗಳಿಗೆ ಉಪಾಯವಾಗಿ ಬ್ಲೂಟೂತ್‌ ಉಪಕರಣ ಸರಬರಾಜು ಮಾಡುತ್ತಿದ್ದನೆಂಬ ಆರೋಪಗಳಲ್ಲಿ ಬಂಧಿತನಾಗಿದ್ದಾನೆ. ಇನ್ನು ಕರಜಗಿಯ ಸೈಫನ್‌ ಈತ ಧಾರವಾಡದಲ್ಲಿ ಡಿಎಆರ್‌ ಪೇದೆ (ಸದ್ಯ ಧಾರವಾಡ ಪೊಲೀಸ್‌ ತರಬೇತಿ ಶಾಲೆಯಲ್ಲಿ ಕರ್ತವ್ಯದ ಮೇಲೆ ನಿಯೋಜನೆ) ಯಾಗಿರುವ ಕರಜಗಿ ಮೂಲದ ಇಸ್ಮಾಯಿಲ್‌ ಈತನ ಹಿರಿಯ ಸಹೋದರನಾಗಿದ್ದಾನೆ.

ಡಿಎಆರ್‌ ಪೇದೆ ಇಸ್ಮಾಯಿಲ್‌ ಈಚೆಗಿನ ಪಿಎಸ್‌ಐ ಪರೀಕ್ಷೆ ಬರೆದು ಪಾಸಾಗಿದ್ದ, ಈತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಸಿಐಡಿ ಅಧಿಕಾರಿಗಳ ತಂಡ ಆತ ತಲೆ ಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ಆತನ ಸಹೋದರ ಸೈಫನ್‌ ಈತನನ್ನು ವಿಚಾರಣೆಗೆ ವಶಕ್ಕೆ ಪಡೆದಿದೆ ಎಂದು ಗೊತ್ತಾಗಿದೆ.

ಇತ್ತ ಸಿಐಡಿ ಇಚಾರಣೆ ತೀವ್ರಗೊಂಡು ಆರೋಪಿಗಳ ಪಟ್ಟಿಯಲ್ಲಿ ತನ್ನ ಹೆಸರೂ ಇರೋದನ್ನ ಮನಗಂಡಿರುವ ಡಿಎಆರ್‌ ಪೇದೆ ಹಾಗೂ ಈಚೆಗೆ ನಡೆದಿದ್ದ ಪಿಎಸ್‌ಐ ಪರೀಕ್ಷೆ ಪಾಸಾಗಿದ್ದ ಇಸ್ಮಾಯಿಲ್‌ ಈತ ತಲೆ ಮರೆಸಿಕೊಂಡಿದ್ದಾನೆ. ಈತ ಧಾರವಾಡದ ಪೊಲೀಸ್‌ ತರಬೇತಿ ಶಾಲೆಯಲ್ಲಿಯೂ ಕಳೆದೊಂದು ತಿಂಗಳಿಂದ ಗೈರು ಹಾಜರಾಗಿದ್ದಾನೆಂಬ ಸಂಗತಿ ಸಿಐಡಿ ತಂಡದ ವಿಚಾರಣೆಯಲ್ಲಿ ಹೊರಬಿದ್ದಿದೆ.

PSI Recruitment Scam; ವಿವಾದಕ್ಕೆ ಕಾರಣವಾಗಿದ್ದ ಅಭ್ಯರ್ಥಿ ದರ್ಶನ್ ಗೌಡ ಸೇರಿ ಮೂವರು ಅರೆಸ್ಟ್

ನ್ಯೂ ನೋಬಲ್‌ ಪರೀಕ್ಷಾ ಕೇಂದ್ರದಲ್ಲಿಯೂ ಬ್ಲೂಟೂತ್‌ ಹಗರಣ:

ಈಗಾಗಲೇ ದಿವ್ಯಾ ಒಡೆತನದ ಜ್ಞಾನಜ್ಯೋತಿ ಹೈಸ್ಕೂಲ್‌ ಪರೀಕ್ಷಾ ಕೇಂದ್ರ ಹಾಗೂ ಹೈಕಶಿ ಸಂಸ್ಥೆಯ ಒಡೆತನದ ಎಂಎಸ್‌ಐ ಕಾಲೇಜಿನಲ್ಲಿ ನಡೆದಂತಹ ಪಿಎಸ್‌ಐ ಪರೀಕ್ಷೆಗಳಲ್ಲಿನ ಹಗರಣಗಳ ಬಗ್ಗೆ ಪ್ರಕರಣ ದಾಖಲಾಗಿ ತನಿಖೆ ನಡೆದಿತ್ತು. ಇದೀಗ ಈ ಸಾಲಿಗೆ ನರದಲ್ಲಿರುವ ನ್ಯೂ ನೋಬಲ್‌ ಶಾಲೆಯಲ್ಲಿದ್ದಂತಹ ಪರೀಕ್ಷಾ ಕೇಂದ್ರವೂ ಸೇರ್ಪಡೆಯಾಗಿದೆ. ಇದೀಗ ಈ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ ಇಸ್ಮಾಯಿಲ್‌ ಕರಜಗಿ ಈತನೂ ಬ್ಲೂಟೂತ್‌ ಬಳಸಿರೋ ಸಂಗತಿ ಖಚಿತವಾಗಿದೆ.

ಈ ಸಂಗತಿ ಖಚಿತವಾಗುತ್ತಿದ್ದಂತೆಯೇ ಸಿಐಡಿ ಅಧಿಕಾರಿಗಳ ತಂಡ ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ಈ ಕುರಿತಂತೆ ಮತ್ತೊಂದು ಎಫ್‌ಐಆರ್‌ ದಾಖಲು ಮಾಡಿದ್ದು ಇದೀಗ ಈ ಪ್ರಕರಣದಲ್ಲಿ ಬಂಧಿತನಾಗಿರುವ ಕರಜಗಿಯ ಸೈಫನ್‌ ಎಂಬಾತನನ್ನು ಸ್ಟೇಷನ್‌ ಬಜಾರ್‌ ಪೊಲೀಸರು ವಶಕ್ಕೆ ಪ‚ಎದಿದ್ದಾರೆ. ಇದೀಗ ಇವರ ವಶದಿಂದ ಸಿಐಡಿ ಸೈಫನ್‌ ಈತನನ್ನು ತನ್ನ ವಶಕ್ಕೆ ಪಡೆದುಕೊಂಡು ಶುಕ್ರವಾರದಿಂದ ವಿಚಾರಣೆ ನಡೆಸಲಿದೆ ಎಂದು ಗೊತ್ತಾಗಿದೆ.

ಮಹೇಶನ ತೋಟದ ಮನೆಯಲ್ಲಿ ಬ್ಲೂಟೂತ್‌ ಪತ್ತೆ:

ಆರ್‌ಡಿ ಪಾಟೀಲ್‌ ಬಲಗೈ ಬಂಟನೆಂದೇ ಹೆಸರಾಗಿರುವ ಮಹೇಶ ಹೀರೋಳ್ಳಿ ಈತನಿಗೆ ಸೇರಿದ್ದ ಕರಜಗಿ ಹೊರ ವಲಯದಲ್ಲಿ 3 ಕಿಮೀ ದೂರದಲ್ಲಿರುವ ತೋಟದ ಮನೆಗೆ ಗುರುವಾರ ಸಿಐಡಿ ತಂಡ ಲಗ್ಗೆ ಇಟ್ಟು ತಪಾಸಣೆ ನಡೆಸಿದಾಗ ಆತನ ಮನೆಯಲ್ಲಿ ಪಿಎಸ್‌ಐ ಹಗರಣದಲ್ಲಿ ಬಳಕೆಯಾಗಿರುವ ಬ್ಲೂಟೂತ್‌ಗಳು ದೊರಕಿವೆ ಎಂದು ಗೊತ್ತಾಗಿದೆ.

PSI Recruitment Scam: ಪಿಎಸ್‌ಐ ನೇಮಕ ಆದೇಶಕ್ಕೆ 9 ಶಾಸಕರ ಒತ್ತಡ

ಮಹೇಶನನ್ನು ನಿನ್ನೆಯೇ ವಶಕ್ಕೆ ಪಡೆದಿರುವ ಸಿಐಡಿ ಇಂದು ಆತನೊಂದಿಗೇ ಸ್ಥಲ ಮಹಜರಿಗಾಗಿ ಕರ್ಜಗಿ ಊರಿಗೆ ತೆರಳಿದ್ದಾಗ ಆತನ ಮನೆ ಸೋಧದಲ್ಲಿ ಉಪಕರಣಗಲು ಪತ್ತೆಯಾಗಿವೆ. ಮಳೆಯಾದ್ದರಿಂದ ಸಿಐಡಿ ತಂಡದವರು 6 ಕಿಮೀ ನಡೆದುಕೊಂಡು ಹೋಗಿ ಈ ಮನೆಯಲ್ಲಿ ಶೋಧ ಮಾಡಿದ್ದಾರೆಂದು ಗೊತ್ತಾಗಿದೆ.

ಪಿಡಬ್ಲೂಡಿ ಎಂಜಿನಿಯರ್‌ ಪರೀಕ್ಷೆ ಅಕ್ರಮಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಅನ್ನಪೂರ್ಣೆಶ್ವರಿ ನಗರ ಠಾಣೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ದಾಖಲಾಗಿರುವ ಅಕ್ರಮ ಪ್ರಕರಣದಲ್ಲಿ ಮಹೇಶ ಹೀರೋಳ್ಳಿ ಆರೋಪಿ ಪಟ್ಟಿಯಲ್ಲಿದ್ದು ಬಂಧಿತನಾಗಿದ್ದ, ಈತನೇ ಈಗ ಪಿಎಸ್‌ಐ ಹಗರಣದಲ್ಲೂ ಬ್ಲೂಟೂತ್‌ ಪೂರೈಸಿರುವ ಈರೋಪ ಎದುರಿಸುತ್ತಿದ್ದಾನೆ.

ಇದಲ್ಲದೆ ಈಗಾಗಲೇ ಸಿಐಡಿ ವಶದಲ್ಲಿರುವ ಮಣ್ಣೂರಿನ ಅಸ್ಲಂ ಮುಜಾವರನನ್ನು ಸ್ಥಳ ಮಹಜರಿಗೆ ಸಿಐಡಿ ತಂಡ ಮಣ್ಣೂರು, ಶೇಷಗಿರಿವಾಡಿ ರಸ್ತೆ, ಹೊಸೂರ್‌ ರಸ್ತೆ ಇಲ್ಲೆಲ್ಲಾ ಆತನಿಗೆ ಸಂಬಂಧಿಸಿರುವ ಮನೆಗಳು, ಹೊಲದಲ್ಲಿದ್ದ ಮನೆಗಳಿಗೆ ಕರೆದೊಯ್ದು ತಪಾಸಣೆ ನಡೆಸಿದೆಂದು ಗೊತ್ತಾಗಿದೆ. 

click me!