
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಆ.23): ಕರುನಾಡಿಗೆ ವಿಷವುಣಿಸುತ್ತಿದ್ದ, ರಾಷ್ಟ್ರವನ್ನೇ ಬೆಚ್ಚಿಬೀಳಿಸಿರುವ ನಕಲಿ ಔಷಧ ಮಾರಾಟ ಜಾಲಕ್ಕೆ ವಿದೇಶದ ನಂಟು ಬಯಲಾಗಿದ್ದು, ಈಗ ಕಡಿಮೆ ಬೆಲೆಗೆ ಕೋಟ್ಯಂತರ ಮೌಲ್ಯದ ಔಷಧ ಸಾಗಣೆಗೆ ಯತ್ನಿಸುತ್ತಿದ್ದಾಗ ವಿದೇಶದಲ್ಲಿ ದಂಧೆಯ ಪ್ರಮುಖ ಆರೋಪಿ ಸೇರಿ ಮೂವರು ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.
ನಕಲಿ ಮಾರಾಟ ದಂಧೆ ನಾಯಕ ಎನ್ನಲಾದ ನಾಗರಬಾವಿಯ ಪ್ರಶಾಂತ್ ಹಾಗೂ ಆತನ ಇಬ್ಬರು ಸಹಚರರೇ ಸಿಕ್ಕಿಬಿದ್ದವರು. ಅಜರ್‌ಬೈಜಾನ್ ರಾಷ್ಟ್ರದಿಂದ ಕಡಿಮೆ ದರದ ಔಷಧವನ್ನು ಕರ್ನಾಟಕಕ್ಕೆ ತರುವಾಗ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಪಾಸಣೆ ವೇಳೆ ಈ ತಂಡ ಸಿಕ್ಕಿಬಿದ್ದಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಪೊಲೀಸರ ವಿಚಾರಣೆ ವೇಳೆ ಪ್ರಶಾಂತ್ ಪತ್ನಿ ಈ ಹೇಳಿಕೆ ನೀಡಿದ್ದಾರೆ. ಈ ಮಾಹಿತಿ ಆಧಾರದಲ್ಲಿ ಇಂಟರ್‌ಪೋಲ್ ನೆರವು ಪಡೆದು ಆರೋಪಿಯನ್ನು ವಶಕ್ಕೆ ಪಡೆಯಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದಾಗಿದೆ ಎನ್ನಲಾಗಿದೆ.
ಇತ್ತೀಚೆಗೆ ಬೆಂಗಳೂರು ದಕ್ಷಿಣ ತಾಲೂಕಿನ ಸಿ.ಕೆ.ತಾಂಡ್ಯಾದ ಫಾರ್ಮ್ ಹೌಸ್‌ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಔಷಧಗಳ ಪ್ಯಾಕಿಂಗ್ ಘಟಕ ಮೇಲೆ ತಾವರೆಕೆರೆ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಘಟಕದ ಒಡೆತನ ನಾಗರಬಾವಿಯಲ್ಲಿರುವ ಪ್ರಶಾಂತ್ ಅವರಿಗೆ ಸೇರಿದ್ದು ಎಂಬುದು ಪತ್ತೆಯಾಗಿತ್ತು. ಆದರೆ ಈ ಕಾರ್ಯಾಚರಣೆ ಮುನ್ನವೇ, ಅಂದರೆ ಆ.8ರಂದೇ ಔಷಧ ಖರೀದಿ ಸಂಬಂಧ ಆತ ಅಜರ್‌ಬೈಜಾನ್ ದೇಶಕ್ಕೆ ತೆರಳಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಹಲವು ವರ್ಷಗಳಿಂದ ಔಷಧ ಮಾರಾಟ ವ್ಯವಹಾರದಲ್ಲಿ ತೊಡಗಿರುವ ಪ್ರಶಾಂತ್‌ಗೆ ದೇಶ-ವಿದೇಶದ ಕಂಪನಿಗಳ ಜತೆ ಸಂಪರ್ಕವಿತ್ತು. ಚೆನ್ನೈ, ಹರ್ಯಾಣ ಹಾಗೂ ಚಂಡೀಗಢ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿರುವ ಔಷಧ ತಯಾರಿಕಾ ಕಂಪನಿಗಳಿಂದಲೂ ಕಡಿಮೆ ಬೆಲೆಗೆ ಔಷಧಗಳನ್ನು ಪ್ರಶಾಂತ್ ಖರೀದಿಸಿದ್ದಾನೆ. ಅದೇ ರೀತಿ ಅಗ್ಗದ ಬೆಲೆಗೆ ವಿದೇಶಿ ಔಷಧವನ್ನೂ ರಾಜ್ಯಕ್ಕೆ ತಂದು ನಾಲ್ಕು ಪಟ್ಟು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಮೂಲಗಳು ಹೇಳಿವೆ.
ಹೀಗೆ ದೇಶ-ವಿದೇಶಗಳಿಂದ ಬರುತ್ತಿದ್ದ ಔಷಧವನ್ನು ತಾವರೆಕೆರೆ ಸಮೀಪದ ಸಿ.ಕೆ.ತಾಂಡ್ಯಾದ ಫಾರ್ಮ್ ಹೌಸ್‌ನಲ್ಲಿ ಸಂಗ್ರಹಿಸುತ್ತಿದ್ದ. ಅಲ್ಲಿ ಆ ಔಷಧಗಳಿಗೆ ದುಬಾರಿ ದರ ತೋರಿಸುವ ಲೇಬಲ್ ಅಂಟಿಸಿ ಹಾಗೂ ಕೆಲ ನಕಲಿ ಔಷಧಗಳಿಗೆ ಪ್ರತಿಷ್ಠಿತ ಕಂಪನಿಗಳ ಲೇಬರ್ ಅಂಟಿಸಿ ಔಷಧ ಮಾರಾಟಗಾರರ ಮೂಲಕ ಜನರಿಗೆ ಬಿಕರಿ ಮಾಡುತ್ತಿದ್ದ ಎಂದು ಗೊತ್ತಾಗಿದೆ.
ಅಜರ್‌ಬೈಜಾನ್‌ನಲ್ಲಿ ಕಡಿಮೆ ಬೆಲೆಗೆ ಕ್ಯಾನ್ಸರ್ ಔಷಧ ದೊರೆಯುತ್ತದೆ. ಹಾಗಾಗಿ ಹಲವು ವರ್ಷಗಳಿಂದ ಆ ದೇಶದ ಔಷಧ ಕಂಪನಿಗಳ ಜತೆ ಪ್ರಶಾಂತ್ ವ್ಯವಹಾರ ನಡೆಸುತ್ತಿದ್ದು, ಕಳೆದ ವಾರ ಕ್ಯಾನ್ಸರ್ ಔಷಧ ಖರೀದಿ ಸಲುವಾಗಿಯೇ ಆ ದೇಶಕ್ಕೆ ತೆರಳಿದ್ದ. ಅದೇ ಹೊತ್ತಿಗೆ ತಾವರೆಕೆರೆಯಲ್ಲಿದ್ದ ಆತನ ನಕಲಿ ಔಷಧ ಅಡ್ಡೆ ಮೇಲೆ ಪೊಲೀಸರ ದಾಳಿ ನಡೆದಿತ್ತು. ಆ ದೇಶದಲ್ಲಿ ತನ್ನ ಇಬ್ಬರು ಸಹಚರರ ಮೂಲಕ ಕೋಟ್ಯಂತರ ರು. ಮೌಲ್ಯದ ಔಷಧ ಖರೀದಿಸಿ ಭಾರತಕ್ಕೆ ಸಾಗಿಸಲು ಯೋಜಿಸಿದ್ದ. ಆದರೆ ವಿಮಾನ ನಿಲ್ದಾಣದಲ್ಲಿ ದೊಡ್ಡ ಪ್ರಮಾಣದ ಔಷಧ ಸಾಗಣೆ ಬಗ್ಗೆ ಸಂಶಯಗೊಂಡು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಆಗ ತಾವು ಪ್ರಶಾಂತ್ ಸೂಚನೆ ಮೇರೆಗೆ ಔಷಧ ತಂದಿದ್ದಾಗಿ ಕಸ್ಟಮ್ಸ್ ಅಧಿಕಾರಿಗಳ ಮುಂದೆ ಸಹಚರರು ಬಾಯ್ಬಿಟ್ಟಿದ್ದಾರೆ. ಕೂಡಲೇ ಪ್ರಶಾಂತ್‌ನನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ವಿಚಾರ ಬಗ್ಗೆ ಪೊಲೀಸರ ಮುಂದೆ ಪ್ರಶಾಂತ್ ಪತ್ನಿಯೇ ಹೇಳಿಕೆ ಕೊಟ್ಟಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.
ತಲೆಮರೆಸಿಕೊಳ್ಳುವ ಮುನ್ನ ಬಲೆಗೆ
ಕಸ್ಟಮ್ಸ್ ಬಲೆಗೆ ಬೀಳುವ ಮುನ್ನವೇ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿರುವ ತನ್ನ ಔಷಧ ಮಾರಾಟ ಘಟಕದ ಮೇಲೆ ಪೊಲೀಸರ ದಾಳಿ ಸಂಗತಿ ಪ್ರಶಾಂತ್‌ಗೆ ತಿಳಿದಿತ್ತು. ಹೀಗಾಗಿ ಅಜರ್‌ಬೈಜಾನ್‌ನಲ್ಲೇ ತಲೆಮರೆಸಿಕೊಳ್ಳಲು ಆತ ಯೋಜಿಸಿದ್ದ. ಆದರೆ ಅಷ್ಟರಲ್ಲಿ ಔಷಧ ಸಾಗಿಸುವಾಗ ಆತನ ಸ್ನೇಹಿತರು ಕಸ್ಟಮ್ಸ್ ಬಲೆಗೆ ಬಿದ್ದಿದ್ದು ಪ್ರಶಾಂತ್‌ಗೆ ಸಂಕಷ್ಟ ತಂದಿದೆ ಎಂದು ತಿಳಿದು ಬಂದಿದೆ.
ಅಜರ್‌ಬೈಜಾನ್ ದೇಶದಲ್ಲಿ ಪ್ರಶಾಂತ್‌ನನ್ನು ಕಸ್ಟಮ್ಸ್ ವಶಕ್ಕೆ ಪಡೆದಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಇಂಟರ್‌ಪೋಲ್ ಮೂಲಕವೂ ಮಾಹಿತಿ ಕೋರಲಾಗುತ್ತದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಪೊಲೀಸರ ದಾಳಿ ಸಂಗತಿ ತಿಳಿದ ಕೂಡಲೇ ತನ್ನ ವ್ಯವಹಾರಿಕ ಪಾಲುದಾರ ವೆಂಕಟೇಶ್‌ಗೂ ಅಜರ್‌ಬೈಜಾನ್ ರಾಷ್ಟ್ರಕ್ಕೆ ಬರುವಂತೆ ತಿಳಿಸಿ ಪ್ರಶಾಂತ್ ಟಿಕೆಟ್ ಬುಕ್ ಮಾಡಿದ್ದ. ಅಷ್ಟರಲ್ಲಿ ಮಾಹಿತಿ ಪಡೆದು ಹೆಬ್ಬಾಳ ಬಳಿ ವೆಂಕಟೇಶ್‌ನನ್ನು ಬಂಧಿಸಲಾಯಿತು. ಸ್ಪಲ್ಪ ತಡವಾಗಿದ್ದರೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಆತ ಪರಾರಿಯಾಗಿರುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ