ಗೂಗಲ್‌ ಬೆನ್ನಲ್ಲೇ ಅಮೇಜಾನ್ ಉದ್ಧಟತನ, ಮಹಿಳೆಯರ ಒಳ ಉಡುಪಿನಲ್ಲಿ ಕನ್ನಡ ಧ್ವಜ!

By Suvarna NewsFirst Published Jun 5, 2021, 4:31 PM IST
Highlights

* ಅಮೇಜಾನ್ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಕನ್ನಡ ಧ್ವಜಕ್ಕೆ ಅವಮಾನ

* ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ವಿರೋಧ

* ಮಹಿಳೆಯರ ಒಳ ಉಡುಪಿನಲ್ಲಿ ನಮ್ಮ ಕನ್ನಡದ ಬಾವುಟ

ಬೆಂಗಳೂರು(ಜೂ.05): ಕಳೆದೆರಡು ದಿನಗಳ ಗೂಗಲ್‌ನಲ್ಲಿ ಬಂದ ಮಾಹಿತಿಯೊಂದು ಕನ್ನಡಿಗರ ಸ್ವಾಭಿಮಾನ ಕೆರಳಿಸಿತ್ತು. ಕನ್ನಡ ಭಾಷೆಗೆ ಮಾಡಿದ ಅವಮಾನಕ್ಕೆ, ಕನ್ನಡಿಗರೂ ಸರಿಯಾಗಿ ಪಾಠ ಕಲಿಸಿದ್ದರು. ಆದರೀಗ ಈ ಪ್ರಕರಣದ ಬೆನ್ನಲ್ಲೇ ವಿಶ್ವದ ಅತೀದೊಡ್ಡ ಆನ್‌ಲೈನ್ ಶಾಪಿಂಗ್ ಕಂಪನಿ ಅಮೇಜಾನ್ ಇದೇ ಹಾದಿಯಲ್ಲಿ ಹೆಜ್ಜೆ ಇರಿಸಿದೆ. 

"

ಹೌದು ಅಮೇಜಾನ್ ಆನ್​ಲೈನ್ ಶಾಪಿಂಗ್ ಸಂಸ್ಥೆ ಕನ್ನಡಿಗರ ಸಂಸ್ಕೃತಿಗೆ ಅಪಮಾನ ಮಾಡಿದೆ. ಅಮೇಜಾನ್ ಮೂಲಕ ಮಾರಾಟ ಮಾಡುವ ಮಹಿಳೆಯರ ಒಳ ಉಡುಪುಗಳ ಮೇಲೆ ಕನ್ನಡ ಬಾವುಟ, ಲಾಂಛನದ ಬಳಕೆಯಾಗಿದೆ. ಪ್ರತಿಯೊಬ್ಬ ಕನ್ನಡಿಗನೂ ರಾಷ್ಟ್ರ ಬಾವುಟದಷ್ಟೇ ಗೌರವಿಸುವ ಮತ್ತೊಂದು ಬಾವುಟವೆಂದರೆ ಅದು ಕೆಂಪು, ಹಳದಿ ಬಣ್ಣದ ಕರುನಾಡಿನ ಬಾವುಟ. ಪ್ರತಿಯೊಬ್ಬ ಕನ್ನಡಿಗನಿಗೂ ಈ ಬಾವುಟ ತಾಯಿ ಸಮಾನ. ಎಲ್ಲೇ ಇದ್ದರೂ ಇದಕ್ಕೆ ಗೌರವ. ಆದರೀಗ ಅಮೇಜಾನ್‌ನ ನಡೆ ಕನ್ನಡಿಗರನ್ನು ಕೆರಳಿಸಿದೆ.

ಕನ್ನಡಿಗರ ಕ್ಷಮೆಯಾಚಿಸಿದ ಗೂಗಲ್, ಇನ್ನುಮುಂದೆ ಹೀಗಾಗಲ್ಲ

ಇನ್ನು ಅಮೇಜಾನ್‌ ಆನ್​ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಕನ್ನಡ ಧ್ವಜ, ಲಾಂಛನಕ್ಕೆ ಹೀಗೆ ಅಪಮಾನ ಆಗಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ತೀವ್ರ ಆಕ್ರೋಶ, ವಿರೋಧ ವ್ಯಕ್ತಪಡಿಸಿದ್ದಾರೆ. ಅಮೇಜಾನ್‌ ಕಂಪನಿ ಮಹಿಳೆಯರ ಒಳ ಉಡುಪಿನಲ್ಲಿ ನಮ್ಮ ಕನ್ನಡದ ಬಾವುಟ, ಭಾರತದ ಅಶೋಕ ಚಕ್ರ, ಕರ್ನಾಟಕದ ಲಾಂಛನವನ್ನು ಹಾಕುವ ಮೂಲಕ ಕನ್ನಡಿಗರಿಗೆ ಹಾಗೂ ಭಾರತೀಯರಿಗೆ ನೋವುಂಟು ಮಾಡಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಇಂತಹ ದುಷ್ಟ ಶಕ್ತಿಗಳ ಹುನ್ನಾರವನ್ನು ಬಗ್ಗು ಬಡಿಯಬೇಕು ಎಂದು ಎಲ್ಲ ಕನ್ನಡಿಗರ ಪರವಾಗಿ ಅವರು ಆಗ್ರಹಿಸಿದ್ದಾರೆ.

ಕನ್ನಡಿಗರ ಸ್ವಾಭಿಮಾನ ಪ್ರದರ್ಶನ

ಇತ್ತೀಚೆಗೆ ಗೂಗಲ್ ನಲ್ಲೂ ಹೀಗೆ ಆಗಿತ್ತು. ಈ ಕೂಡಲೇ ಅಮೇಜಾನ್ ಸಂಸ್ಥೆ ಕ್ಷಮೆ ಕೇಳಬೇಕು. ರಾಜ್ಯ ಸರ್ಕಾರ ಕನ್ನಡಿಗರಿಗಾಗಿಯೇ ಒಂದು ಸೈಬರ್ ಕ್ರೈಮ್ ಸೆಲ್ ಶುರು ಮಾಡಬೇಕು .ಇದೇ ರೀತಿ ಕನ್ನಡಿಗರ ಅವಮಾನ ಮಾಡಿದರೆ ಮಸ್ಕಾ ಚಳುವಳಿ ಬಿಟ್ಟು,  ಮಚ್ಚು ಹಿಡಿದು ಚಳುವಳಿ ಮಾಡಬೇಕಾಗುತ್ತದೆ ಎಂದು ಕರವೇ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. 

click me!