38 ವರ್ಷಗಳ ನಂತರ ಉಡುಪಿ ಸಂಪೂರ್ಣ ಜಲಾವೃತ| 315 ಮಿ.ಮೀ ದಾಖಲೆಯ ಮಳೆ| ಅಪಾಯಕ್ಕೆ ಸಿಲುಕಿದ್ದ 350ಕ್ಕೂ ಹೆಚ್ಚು ಜನರ ರಕ್ಷಣೆ
ಉಡುಪಿ(ಸೆ.21): 38 ವರ್ಷಗಳ ನಂತರ, ಭಾನುವಾರ ಉಡುಪಿ ನಗರ ಸಂಪೂರ್ಣ ಜಲಾವೃತಗೊಂಡಿತು. ನಗರದ ಎಲ್ಲ ರಸ್ತೆಗಳಲ್ಲಿ ಒಂದು ಅಡಿಗಳಷ್ಟುನೀರು ತುಂಬಿಕೊಂಡಿತ್ತು. ಮುಖ್ಯವಾಗಿ ಉಡುಪಿ - ಮಣಿಪಾಲ ರಾ.ಹೆ.ಯಲ್ಲಿ ಇಂದ್ರಾಣಿ ಹೊಳೆಯಿಂದ ಪ್ರವಾಹ ಉಕ್ಕಿ, ಮೊಣಕಾಲಿನ ವರೆಗೆ ನೀರು ಹರಿಯಿತು. ಇದರಿಂದ ದಿನವಿಡೀ ಪ್ರಥಮ ಬಾರಿಗೆ ಈ ರಾ.ಹೆ.ಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.
undefined
ಈ ಹೆದ್ದಾರಿಗೆ ಹೊಂದಿಕೊಂಡಿರುವ ಕೃಷ್ಣ ಮಠಕ್ಕೆ ಹೋಗುವ ರಸ್ತೆಗಳ ಮೇಲೂ ಪ್ರವಾಹ ಹರಿದು ರಸ್ತೆತಡೆ ಉಂಟಾಯಿತು. ಭಾನುವಾರವಾದ್ದರಿಂದ ಸಂಚಾರ ವಿರಳವಾಗಿತ್ತು. ಆದರೆ ಈ ರಸ್ತೆಯಲ್ಲಿರುವ ನೂರಾರು ಅಂಗಡಿಗಳೊಳಗೆ ನೀರು ನುಗ್ಗಿ, ಸಗಟು, ದಿನಸಿ, ಬಟ್ಟೆ, ಎಲೆಕ್ಟ್ರಾನಿಕ್ ವ್ಯಾಪಾರಿಗಳಿಗೆ ಲಕ್ಷಾಂತರ ರು.ನಷ್ಟವಾಗಿದೆ.
ಇನ್ನೂ 2 ದಿನ ಭಾರೀ ಮಳೆ : ರೆಡ್ ಅಲರ್ಟ್ ಲಿಸ್ಟ್‌ನಲ್ಲಿ ನಿಮ್ಮ ಜಿಲ್ಲೆಯೂ ಇದೆಯಾ?
ದಾಖಲೆಯ 315 ಮಿ.ಮೀ. ಮಳೆ
ಜಿಲ್ಲೆಯಲ್ಲಿ ಶನಿವಾರ ರಾತ್ರಿ ದಾಖಲೆಯ 315 ಮಿ.ಮೀ.ಗಳಷ್ಟುಮಳೆಯಾಗಿದೆ. ಜಿಲ್ಲೆಯ ನದಿಗಳೆಲ್ಲವೂ ಅಪಾಯದ ಮಟ್ಟಮೀರಿ ಹರಿದು, ಅಕ್ಕಪಕ್ಕದ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದವು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಕರೆಸಲಾಗಿದ್ದು, ಅಪಾಯಕ್ಕೆ ಸಿಲುಕಿದ್ದ 350 ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸ್ಥಳಾಂತರ ಮಾಡಲಾಯಿತು.
ನೂರಾರು ಅಂಗಡಿಗಳಿಗೆ ನೀರು ನುಗ್ಗಿದ್ದು ಲಕ್ಷಾಂತರ ರು. ಸೊತ್ತುಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ನೂರಾರು ಎಕರೆ ಕೃಷಿ ಭೂಮಿ ನೆರೆಯಿಂದ ಆವೃತವಾಗಿದ್ದು, ಬೆಳೆಗಳಿಗೆ ಹಾನಿಯಾಗಿದೆ. ಮೂರು ಮನೆಗಳು ಸಂಪೂರ್ಣ ಕುಸಿದಿವೆ, 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ.
ರಾಜ್ಯದಲ್ಲಿ 13 ವರ್ಷದ ಬಳಿಕ ದಾಖಲೆಯ ಬಿತ್ತನೆ
ಗಾಳಿಮಳೆಗೆ ಮರಗಳು ಉರುಳಿ ಮೆಸ್ಕಾಂನ 50- 60 ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಮಲ್ಪೆಯ ಸೈಂಟ್ ಮೇರೀಸ್ ದ್ವೀಪದಲ್ಲಿದ್ದ 10 ಮಂದಿ ಮೀನುಗಾರರನ್ನು ಮತ್ತು ಬಜೆ ಜಲಾಶಯದ ಖಾಸಗಿ ವಿದ್ಯುತ್ ಸ್ಥಾವರದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮೂವರು ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ.
ಅಂದು 11 ಮಂದಿ ಸತ್ತಿದ್ದರು...
1983ರಲ್ಲಿ ಸುರಿದ ಭಾರಿ ಮಳೆಗೆ ಉಡುಪಿಗೆ ಉಡುಪಿಗೆಯೇ ತತ್ತರಿಸಿ ಹೋಗಿತ್ತು, ತೀರಾ ಅಗಲ ಕಿರಿದಾಗಿದ್ದ ಕಲ್ಸಂಕ ರಸ್ತೆ (ಇಂದಿನ ರಾ.ಹೆ.)ಯಲ್ಲಿ ಮೂರ್ನಾಲ್ಕು ಅಡಿ ಎತ್ತರದವರೆಗೆ ಪ್ರವಾಹ ಹರಿದಿತ್ತು. 11 ಮಂದಿ ಈ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ಉಡುಪಿಗೆ ಬಂದಿದ್ದರು.
ಕಾದಿದೆಯಾ ಮಂಗಳೂರಿಗೆ ಗಂಡಾಂತರ : ದೇಶದಲ್ಲೇ ಅತ್ಯಧಿಕ ಮಳೆ- ರೆಡ್ ಅಲರ್ಟ್
ಪ್ರವಾಹದ ಭೀತಿ ಇನ್ನೂ ಕಡಿಮೆಯಾಗಿಲ್ಲ
ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಭಾನುವಾರ ಜಿಲ್ಲಾದ್ಯಂತ ಪ್ರವಾಹ ಸಂಭವಿಸಿದೆ. ಭಾನುವಾರ ಮಧ್ಯಾಹ್ನ ಮಳೆ ಕಡಿಮೆಯಾಗಿ ಪ್ರವಾಹ ಇಳಿಮುಖವಾಯಿತಾದರೂ, ಪ್ರವಾಹದ ಬೀತಿ ಇನ್ನೂ ಕಡಿಮೆಯಾಗಿಲ್ಲ. ರಾಜ್ಯ ಹವಾಮಾನ ಇಲಾಖೆ ಕರಾವಳಿಯಾದ್ಯಂತ ಭಾನುವಾರ ಮತ್ತು ಸೋಮವಾರ ವಿಪರೀತ ಮಳೆಯಾಗುವ ಬಗ್ಗೆ ರೆಡ್ ಅಲರ್ಟ್ ಘೋಷಿಸಿತ್ತು. ಆದ್ದರಿಂದ ಇಂದು ಮತ್ತೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ, ಅಧಿಕಾರಿಗಳು ಕೇಂದ್ರಸ್ಥಾನವನ್ನು ಬಿಟ್ಟು ಹೋಗದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಇಷ್ಟು ದಿನ ಕೊರೋನಾ ಭೀತಿ, ಈಗ ಮಳೆ ಕಾಟ: ಪರೀಕ್ಷೆ ಮುಂದೂಡಿಕೆ
ಪರ್ಯಾಯ ಶ್ರೀಗಳಿಂದ ಸಹಾಯಹಸ್ತ
ಶನಿವಾರ ರಾತ್ರೊರಾತ್ರಿ ಸುರಿದ ಭಾರಿ ಮಳೆಗೆ ಕೃಷ್ಣಮಠದ ಸುತ್ತಮುತ್ತಲಿನ ಮಠದಬೆಟ್ಟು, ಬೈಲಕರೆ, ಕಲ್ಸಂಕ ಮುಂತಾದ ತಗ್ಗುಪ್ರದೇಶದ ಹತ್ತಿಪ್ಪತ್ತಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ಅಲ್ಲಿನ ಜನರು ತೀವ್ರ ಆತಂಕಕ್ಕೆ ಗುರಿಯಾಗಿದ್ದರು. ಮುಂಜಾನೆ 3 ಗಂಟೆಗೆ ವಿಷಯ ತಿಳಿದ ಕೃಷ್ಣಮಠದ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ತಮ್ಮಲ್ಲಿದ್ದ ದೋಣಿಯನ್ನು ಕಳುಹಿಸಿ ಅಪಾಯದಲ್ಲಿದ್ದವರನ್ನು ಸ್ಥಳಾಂತರಕ್ಕೆ ನೆರವಾದರು. ಮಠದ ಭಕ್ತರಾದ ಮೀನುಗಾರರ ಮುಖಂಡ ಯಶಪಾಲ್ ಸುವರ್ಣ ಅವರು ಈ ದೋಣಿಯನ್ನು ಶ್ರೀಗಳಿಗೆ ನೀಡಿದ್ದರು. ಮಾತ್ರವಲ್ಲದೆ ಈ ಸುಮಾರು 200 ಜನ ಸಂತ್ರಸ್ತರಿಗೆ ಮಠದಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ವಸತಿ ವ್ಯವಸ್ಥೆಯನ್ನೂ ಮಾಡಿದ್ದಾರೆ.
ಅವೈಜ್ಞಾನಿಕ ನಗರ ಯೋಜನೆ ಕಾರಣವೇ?
ಇತ್ತೀಚಿನ ವರ್ಷಗಳಲ್ಲಿ ಉಡುಪಿ ನಗರಕ್ಕೆ ಪ್ರತಿ ಮಳೆಗಾಲದಲ್ಲಿ ಸಣ್ಣ ಪ್ರಮಾಣದ ನೆರೆಯೂ ತೊಂದರೆಗೆ ಕಾರಣವಾಗುತ್ತಿದೆ. ಭಾನುವಾರ ಭಾರಿ ಹಾನಿಯನ್ನೇ ಮಾಡಿದೆ. ಇದಕ್ಕೆ ಉಡುಪಿಯ ಅವೈಜ್ಞಾನಿಕ ನಗರವ ಯೋಜನೆಯೇ ಕಾರಣ ಎನ್ನಲಾಗುತ್ತಿದೆ. ನಗರದ ಮಧ್ಯೆ ಹರಿಯುವ ರಾಜಕಾಲುವೆ (ಇಂದ್ರಾಣಿ ಹೊಳೆ) ಅತಿಕ್ರಮಣಕ್ಕೊಳಗಾಗಿ ತೋಡಾಗಿಬಿಟ್ಟಿದೆ. ನಗರದ ಪ್ರಮುಖ ರಸ್ತೆಗಳನ್ನು ಕಾಂಕ್ರಿಟೀಕರಣಗೊಳಿಸಿ ನೀರು ಹೊರಗೆ ಹರಿಯದಂತಾಗಿದೆ. ಹಿಂದೆ ನೀರು ಹರಿಯುತಿದ್ದ ನಗರದ ಇಕ್ಕೆಲದ ತಗ್ಗುಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ. ಪರಿಣಾಮ ಭಾರೀ ಮಳೆಯ ನೀರು ಹೊರಗೆ ಹೋಗದೆ ನಗರದಲ್ಲಿ ಕೃತಕ ಪ್ರವಾಹಕ್ಕೆ ಕಾರಣವಾಗಿದೆ.