ಎರಡು ವರ್ಷಗಳ ಹಿಂದೆ ಮನೆಬಿಟ್ಟು ಹೋದ ತಂದೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಎಲ್ಲ ಕಡೆ ಹುಡುಕಾಡಿ ಕೊನೆಗೆ ಹೈಕೋರ್ಟ್ ಮೊರೆ ಹೋದ ಇಬ್ಬರು ಪುತ್ರಿಯರು.
ವೆಂಕಟೇಶ್ ಕಲಿಪಿ
ಬೆಂಗಳೂರು (ಜು.1) ‘ಇನ್ನು ಮುಂದೆ ನನಗೆ ಕರೆ ಮಾಡಬೇಡ. ಕರೆ ಮಾಡಿದರೆ ನೀನು ಸಮಸ್ಯೆಗೆ ಒಳಗಾಗುತ್ತೀಯಾ’ ಎಂದು ತಮಿಳುನಾಡಿನಿಂದ ಸಂದೇಶ ಕಳುಹಿಸಿ ಎರಡೂವರೆ ವರ್ಷದ ಹಿಂದೆ ಕಾಣೆಯಾಗಿರುವ ತಂದೆಯನ್ನು ಪತ್ತೆ ಮಾಡಿಕೊಡಲು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿ ಕಾಣೆಯಾದ ವ್ಯಕ್ತಿಯೊಬ್ಬರ ಪುತ್ರಿಯರು ಹೈಕೋರ್ಟ್ ಮೊರೆ ಹೋಗಿರುವ ಪ್ರಕರಣವಿದು.
ಎರಡು ವರ್ಷ ಸತತ ಹಾಗೂ ಸುದೀರ್ಘವಾಗಿ ವಿಚಾರಿಸಿದರೂ ನಮ್ಮ ತಂದೆಯ ಸುಳಿವು ಸಿಕ್ಕಿಲ್ಲ. ಇದರಿಂದ ತಂದೆಯನ್ನು ಯಾರಾದರೂ ಬಂಧಿಸಿ ವಶದಲ್ಲಿ ಇಟ್ಟುಕೊಂಡಿರಬಹುದು ಎಂಬ ಆತಂಕ ನಮಗೆ ಕಾಡುತ್ತಿದೆ. ಹಾಗಾಗಿ, ತಂದೆಯನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕರ್ನಾಟಕ ಮತ್ತು ತಮಿಳುನಾಡು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ನಗರದ ಪಲ್ಲವಿ ಮತ್ತು ರುಕ್ಮಣೈ (ನಾಪತ್ತೆಯಾದ ವ್ಯಕ್ತಿಯ ಪುತ್ರಿಯರು) ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಕಿಡ್ನಾಪ್ ಪ್ರಕರಣ: ಅಪಹರಣಕ್ಕೆ ಒಳಗಾದವನೇ ಮಹಾ ವಂಚಕ! ಮೋಸ ಹೋದವರಿಂದಲೇ ಅಪಹರಣ!
ಈ ಇಬ್ಬರು ಹೆಣ್ಣುಮಕ್ಕಳ ಅಳಲು ಆಲಿಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠ, ನಾಪತ್ತೆಯಾಗಿರುವ ಅರ್ಜಿದಾರರ ತಂದೆಯನ್ನು ಪತ್ತೆಹಚ್ಚಲು ತೆಗೆದುಕೊಂಡಿರುವ ಪರಿಣಾಮಕಾರಿ ಕ್ರಮಗಳ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಬೆಂಗಳೂರು ಮತ್ತು ಚೆನ್ನೈ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದೆ. ಅಲ್ಲದೆ, ಒಂದೊಮ್ಮೆ ಕಾಣೆಯಾದ ವ್ಯಕ್ತಿ ಪತ್ತೆ ಯಾವುದೇ ಕ್ರಮ ಜರುಗಿಸದೆ ಹೋದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಹ ಎಚ್ಚರಿಸಿರುವ ನ್ಯಾಯಪೀಠ, ಪ್ರಕರಣದ ಮಾಹಿತಿ ಮತ್ತು ಮುಂದಿನ ಕ್ರಮಕ್ಕಾಗಿ ಈ ಆದೇಶ ಪ್ರತಿಯನ್ನು ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಗೆ ರವಾನಿಸುವಂತೆ ಸೂಚಿಸಿದೆ.
ಆ ಮೂಲಕ ಎರಡು ವರ್ಷಗಳಿಂದ ನಾಪತ್ತೆಯಾಗಿರುವ ತಂದೆಯನ್ನು ಕಾಣಬೇಕೆಂಬ ಹೆಣ್ಣುಮಕ್ಕಳ ಹಂಬಲಕ್ಕೆ ನ್ಯಾಯಾಲಯ ಮಿಡಿದಿದೆ.
ಪ್ರಕರಣವೇನು:
ಯಲಹಂಕ ನಿವಾಸಿ ಎನ್.ಸುಕುಮಾರ್(N Sukumar) ವ್ಯಾಪಾರದ ಉದ್ದೇಶದಿಂದ 2021ರ ಡಿಸೆಂಬರ್‌ನಲ್ಲಿ ಮನೆಯಿಂದ ಹೊರ ಹೋಗಿದ್ದು, ಮತ್ತೆ ಹಿಂದಿರುಗಲಿಲ್ಲ. ಇದರಿಂದ ಆತನ ಪುತ್ರಿಯರು 2024ರ ಜ.29ರಂದು ಹೈಕೋರ್ಟ್(karnataka highcourt)ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ‘ಇನ್ನು ಮುಂದೆ ನನಗೆ ಕರೆ ಮಾಡಬೇಡ. ಕರೆ ಮಾಡಿದರೆ ನೀನು ಸಮಸ್ಯೆಗೆ ಒಳಗಾಗುತ್ತೀಯಾ’ ಎಂದು ತಂದೆಯು ನನ್ನ ತಾಯಿಯ ಮೊಬೈಲ್ ಪೋನ್‌ಗೆ ಸಂದೇಶ ಕಳುಹಿಸಿದ್ದರು. ಸಂದೇಶ ಕಳುಹಿಸಿದಾಗ ಅವರು ತಮಿಳುನಾಡಿನಲ್ಲಿದ್ದರು ಎಂದು ತಿಳಿಯಿತು. ಕೆಲಸದ ಉದ್ದೇಶದಿಂದ ಹೊರಗಡೆ ದೀರ್ಘಕಾಲ ಉಳಿಯುವುದು, ಆಗಾಗ್ಗೆ ಪೋನ್ ಮೂಲಕ ನಮ್ಮನ್ನು ಸಂಪರ್ಕಿಸುವುದು ಸಾಮಾನ್ಯ. ಇದರಿಂದ ಬಿಡುವು ಆದ ಮೇಲೆ ಮನೆಗೆ ಹಿಂದಿರುಗುತ್ತಾರೆ ಎಂಬ ನಂಬಿಕೆಯಿತ್ತು. ಇದೇ ನಂಬಿಕೆಯಿಂದ ಕೆಲ ಸಮಯವಾದರೂ ತಂದೆ ಸಂಪರ್ಕ ಮಾಡದಿದ್ದರೂ ಪೊಲೀಸರ ಮೊರೆ ಹೋಗಲಿಲ್ಲ’ ಎಂದು ವಿವರಿಸಿದ್ದಾರೆ.
ಆದರೆ, ‘ಹಲವು ದಿನ ಕಳೆದರೂ ತಂದೆ ನಮ್ಮನ್ನು ಸಂಪರ್ಕಿಸಲಿಲ್ಲ. ಇದರಿಂದ ಆತಂಕಗೊಂಡು ಅವರ ಸ್ನೇಹಿತರು ಮತ್ತು ಸಂಬಂಧಿಕರನ್ನು ಸಂಪರ್ಕಿಸಿ ವಿಚಾರಿಸಿದರೂ ಸುಳಿವು ಸಿಗಲಿಲ್ಲ. ಕೆಲವರು ತಂದೆಯನ್ನು ಸೆರೆಹಿಡಿದು ಬಲವಂತವಾಗಿ ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿರಬಹುದು ಎಂಬ ಅನುಮಾನ ಮೂಡಿದೆ. ಆದ್ದರಿಂದ ತಂದೆಯನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕರ್ನಾಟಕ ಮತ್ತು ತಮಿಳುನಾಡು ಪೊಲೀಸರಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ವ್ಯಕ್ತಿಯ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸಬೇಕಿದೆ. ಹಾಗಾಗಿ, ತಮಿಳುನಾಡು ಡಿಜಿಪಿ ಅವರೊಂದಿಗೆ ಸಂಪರ್ಕ ಸಾಧಿಸಿ, ಸುಕುಮಾರ್ ಪತ್ತೆಗೆ ಕ್ರಮ ಕೈಗೊಳ್ಳಬೇಕು ಎಂದು 2024ರ ಜೂ.16ರಂದು ರಾಜ್ಯ ಸರ್ಕಾರ ಹಾಗೂ ಡಿಜಿಪಿಗೆ ಸೂಚಿಸಿತ್ತು.
ಹೆಚ್‌ಡಿಕೆ ಕೇಂದ್ರ ಸಚಿವರಾದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟಕ್ಕೆ ನಿಖಿಲ್ ಸಜ್ಜು?
ಜೀವಂತವಾಗಿರುವುದು ತಿಳಿಯಬೇಕಲ್ಲವೇ?
ಅರ್ಜಿ ಜೂ.27ರಂದು ಮತ್ತೆ ವಿಚಾರಣೆಗೆ ಬಂದಾಗ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎ.ಬೆಳ್ಳಿಯಪ್ಪ ಹಾಜರಾಗಿ, ‘ಸುಕುಮಾರ್ ಕಾಣೆಯಾದ ಎರಡು ವರ್ಷ ನಂತರ ನ್ಯಾಯಾಲಯಕ್ಕೆ ಈ ಅರ್ಜಿ ಸಲ್ಲಿಸಲಾಗಿದೆ. ನಾಪತ್ತೆಯಾದ ವ್ಯಕ್ತಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅವರು ವಿದೇಶಕ್ಕೆ ಹೋಗಿದ್ದಾರೆ ಎಂದು ಆತನ ಸ್ನೇಹಿತರೊಬ್ಬರು ತಿಳಿಸುತ್ತಾರೆ. ಆದರೆ, ಅವರು ದೇಶದಲ್ಲಿಯೇ ಇರಬಹುದು. ಸದ್ಯ ಎಲ್ಲಿದ್ದಾರೆ ಎನ್ನವುದು ತಿಳಿದು ಬಂದಿಲ್ಲ. ತಮಿಳುನಾಡು ಡಿಜಿಪಿ ಮತ್ತು ಚೆನ್ನೈ ನಗರ ಪೊಲೀಸ್ ಆಯುಕ್ತರ ಸಹಕಾರದೊಂದಿಗೆ ಸುಕುಮಾರ್ ಅವರನ್ನು ಪತ್ತೆ ಮಾಡಲು ಸ್ವಲ್ಪ ಸಮಯಾವಕಾಶ ನೀಡಬೇಕು’ ಎಂದು ಕೋರಿದರು.
ಈ ಮನವಿ ಪರಿಗಣಿಸಿದ ವಿಭಾಗೀಯ ಪೀಠ, ‘ಕೊನೆಯ ಪಕ್ಷ ಅವರು ಜೀವಂತವಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನಾದರೂ ತಿಳಿಯಬೇಕಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಈ ಮೇಲಿನಂತೆ ಸೂಚಿಸಿದೆ.