ಬನ್ನೇರುಘಟ್ಟಕ್ಕೆ ಬರುತ್ತಿವೆ ಬಿಳಿ ಸಿಂಹಗಳು!

By Web DeskFirst Published Jan 16, 2019, 8:46 AM IST
Highlights

ಬನ್ನೇರುಘಟ್ಟಕ್ಕೆ ಬರುತ್ತಿವೆ ಬಿಳಿ ಸಿಂಹಗಳು!| ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಕಾಣ ಸಿಗುವ 2 ಬಿಳಿ ಸಿಂಹಗಳು, ಐದು ಇಲ್ಯಾಂಡ್‌ ತರಿಸಿಕೊಳ್ಳಲು ಸಿದ್ಧತೆ

ಬೆಂಗಳೂರು[ಜ.16]: ಪ್ರಖ್ಯಾತ ಬನ್ನೇರುಘಟ್ಟಜೈವಿಕ ಉದ್ಯಾನವನಕ್ಕೆ ಮತ್ತಷ್ಟುಪ್ರವಾಸಿಗರನ್ನು ಆಕರ್ಷಿಸಲು ಮುಂದಾಗಿರುವ ಅಧಿಕಾರಿಗಳು, ಈಗಿರುವ ವಿದೇಶಿ ಪ್ರಾಣಿಗಳ ಜೊತೆಗೆ ಮತ್ತಷ್ಟುವಿದೇಶಿ ಪ್ರಾಣಿಗಳನ್ನು ಪರಿಚಯಿಸಲು ನಿರ್ಧರಿಸಿದ್ದಾರೆ.

ಈಗಾಗಲೇ ವಿದೇಶದಿಂದ ಜಿಬ್ರಾ ಮತ್ತು ಜಿರಾಫೆಗಳನ್ನು ತರಿಸಿಕೊಂಡಿದ್ದು, ಇದೀಗ ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಕಾಣ ಸಿಗುವ ಎರಡು ಬಿಳಿ ಸಿಂಹ ಮತ್ತು ಪೂರ್ವ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬರುವ ಐದು ಇಲ್ಯಾಂಡ್‌ (ಜಿಂಕೆ ಜಾತಿಯ ಪ್ರಾಣಿ)ಗಳನ್ನು ತರಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

ಪ್ರಸ್ತುತ ಉದ್ಯಾನವನದಲ್ಲಿ 95 ಪ್ರಭೇದದ ಸುಮಾರು 2000 ಸಾವಿರ ಪ್ರಾಣಿಗಳು, ವಿದೇಶಿ ಪಕ್ಷಿಗಳು, ಹಲವು ಸಸ್ತನಿಗಳಿವೆ. ಇದೀಗ ದಕ್ಷಿಣ ಆಫ್ರಿಕಾದಿಂದ ಬಿಳಿ ಸಿಂಹಗಳು ಮತ್ತು ಇಲ್ಯಾಂಡ್ಸ್‌ಗಳನ್ನು ತರಿಸಿಕೊಳ್ಳಲು ಉದ್ದೇಶಿಸಿದ್ದು, ಕೆಲವು ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ. ಶೀಘ್ರದಲ್ಲಿಯೇ ಭಾರತಕ್ಕೆ ಬರಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿದೇಶಗಳಿಂದ ವನ್ಯಜೀವಿಗಳನ್ನು ಪಡೆಯುವ ಸಂಬಂಧ ದೆಹಲಿಯಲ್ಲಿರುವ ವಿದೇಶಿ ವ್ಯಾಪಾರ ನಿರ್ದೇಶನಾಲಯ ಹಾಗೂ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮತಿ ಸಿಕ್ಕಿದ್ದು, ಮೈಸೂರು ಮೃಗಾಲಯ ಪ್ರಾಧಿಕಾರ ಅನುಮತಿ ದೊರೆತ ತಕ್ಷಣ ಎರಡೂ ಪ್ರಾಣಿಗಳನ್ನು ತರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

60 ಲಕ್ಷ ವೆಚ್ಚ ಸಾಧ್ಯತೆ:

ವೈಟ್‌ ಲಯನ್‌ ಮತ್ತು ಇಲ್ಯಾಂಡ್ಸ್‌ ನೀಡಲು ಈಗಾಗಲೇ ದಕ್ಷಿಣ ಆಫ್ರಿಕಾದ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಅಲ್ಲಿಂದ ವಿಮಾನದಲ್ಲಿ ತರಿಸಿಕೊಳ್ಳಲು ಸುಮಾರು .60 ಲಕ್ಷದವರೆಗೂ ವೆಚ್ಚವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದರು.

ಮೃಗಾಲಯದಲ್ಲಿ ಜಿರಾಫೆ, ಜಿಬ್ರಾ ಇರುವ ಸುತ್ತಲಿನ ಭಾಗದಲ್ಲೇ ಇಲ್ಯಾಂಡ್‌ ಇಡುವುದಕ್ಕೆ ಸ್ಥಳ ಗುರುತಿಸಲಾಗುತ್ತಿದೆ. ಜಿರಾಫೆ, ಜಿಬ್ರಾ, ಸಹ ದಕ್ಷಿಣ ಆಫ್ರಿಕಾದಿಂದ ತರಿಸಿಕೊಂಡಿದ್ದು, ಎಲ್ಲವನ್ನೂ ಅಕ್ಕ ಪಕ್ಕದಲ್ಲಿಯೇ ಇಡಲಾಗುವುದು. ಇದರಿಂದ ಎಲ್ಲ ವಿದೇಶಿ ಪ್ರಾಣಿಗಳನ್ನು ಒಂದೇ ಕಡೆ ನೋಡಬಹುದಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

-ರಮೇಶ್‌ ಬನ್ನಿಕುಪ್ಪೆ

click me!