ಒಂದೂ ಆಲೂಗಡ್ಡೆ ಬೀಜ ಉತ್ಪಾದಿಸದ ಏರೋಪೋನಿಕ್ಸ್‌ ಕೇಂದ್ರ..!

By Kannadaprabha NewsFirst Published Dec 12, 2022, 12:30 AM IST
Highlights

ರೈತರಿಗೆ ವರವಾಗಬೇಕಿದ್ದ ಕೇಂದ್ರದ ಶೂನ್ಯ ಸಾಧನೆ, 5.5 ಕೋಟಿ ರು.ವೆಚ್ಚದ ಘಟಕ ಖಾಸಗಿ ಕಂಪನಿಗೆ ವಹಿಸಿ ಕೈತೊಳೆದುಕೊಂಡ ತೋಟಗಾರಿಕಾ ಇಲಾಖೆ. 

ಸಂಪತ್‌ ತರೀಕೆರೆ

ಬೆಂಗಳೂರು(ಡಿ.12):  ದೇಶದ 2ನೇ ಮತ್ತು ರಾಜ್ಯದ ಏಕೈಕ ಏರೋಪೋನಿಕ್ಸ್‌ ತಾಂತ್ರಿಕ ಆಲೂಗಡ್ಡೆ ಬೀಜೋತ್ಪಾದನಾ ಕೇಂದ್ರ ಆರಂಭಗೊಂಡು ಬರೋಬ್ಬರಿ ಏಳು ವರ್ಷ ಕಳೆದಿದ್ದರೂ ಒಂದೇ ಒಂದು ಆಲೂಗಡ್ಡೆ ಬೀಜವನ್ನು ಉತ್ಪಾದಿಸಿಲ್ಲ! ರಾಜ್ಯದ ರೈತರಿಗೆ ರೋಗರಹಿತ ಆಲೂಗಡ್ಡೆ ಬೀಜ ಸಿಗಬೇಕೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರ 2015ರ ಜ.9ರಂದು ಚಿಕ್ಕಬಳ್ಳಾಪುರ ಹೊರವಲಯದ ನಂದಿ ಕ್ರಾಸ್‌ನ ಪಿಆರ್‌ಎಸ್‌ ತೋಟಗಾರಿಕಾ ಕೇಂದ್ರದ ಆವರಣದಲ್ಲಿ 3.5 ಕೋಟಿ ರು.ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯ ಏರೋಪೋನಿಕ್ಸ್‌ ತಂತ್ರಜ್ಞಾನದ ಆಲೂಗಡ್ಡೆ ಬೀಜೋತ್ಪಾದನಾ ಕೇಂದ್ರ ಆರಂಭಿಸಿತ್ತು.

ಆರಂಭ ಏಕೆ?:

ಉತ್ತಮ ಗುಣಮಟ್ಟದ ಆಲೂಗಡ್ಡೆ ಬಿತ್ತನೆ ಬೀಜಗಳನ್ನು ದೂರದ ಪಂಜಾಬ್‌ನ ಜಲಂಧರ್‌ನಿಂದ ತರಿಸಿಕೊಳ್ಳಬೇಕಾಗಿದ್ದರಿಂದ ಆರ್ಥಿಕವಾಗಿ ಸರ್ಕಾರ ಹಾಗೂ ರೈತರಿಗೆ ಹೊರೆಯಾಗುತ್ತಿತ್ತು. ಆದ್ದರಿಂದ ಆಲೂಗಡ್ಡೆ ಬಿತ್ತನೆ ಬೀಜಗಳ ಖರೀದಿ ಮತ್ತು ಸಾಗಣೆ ವೆಚ್ಚ ಉಳಿಸಿಕೊಂಡು ರೈತರು ಈ ಬೀಜೋತ್ಪಾದನಾ ಕೇಂದ್ರದಿಂದಲೇ ಬಿತ್ತನೆ ಬೀಜಗಳನ್ನು ಖರೀದಿಸಿ, ಬೆಳೆದು ಮಾರಾಟ ಮಾಡಬೇಕೆಂಬ ಸದುದ್ದೇಶ ಸರ್ಕಾರದ್ದಾಗಿತ್ತು.

Seeds Price Rise : ಬಿತ್ತನೆ ಆಲೂಗಡ್ಡೆ ಬೆಲೆ ಗಗನಕ್ಕೆ - ರೈತರು ಕಂಗಾಲು

2 ವರ್ಷದ ಗುರಿ:

ಏರೋಪೋನಿಕ್ಸ್‌ ಬೀಜೋತ್ಪಾದನಾ ಕೇಂದ್ರ ಪ್ರಾರಂಭಗೊಂಡ ದಿನದಿಂದ 2 ವರ್ಷಗಳಲ್ಲಿ ಏರೋಪೋನಿಕ್ಸ್‌ ತಂತ್ರಜ್ಞಾನದಲ್ಲಿ ರೋಗರಹಿತ ಬೀಜೋತ್ಪಾದನೆ ಮಾಡಿ ಸ್ಥಳೀಯ ಆಲೂಗಡ್ಡೆ ಬೆಳೆಯು ರೈತರಿಗೆ ವಿತರಿಸಬೇಕೆಂಬ ಗುರಿ ನೀಡಲಾಗಿತ್ತು. ಆದರೆ ಏಳು ವರ್ಷ ಕಳೆದರೂ ತೋಟಗಾರಿಕೆ ಇಲಾಖೆ ಸಾಧನೆ ಶೂನ್ಯ ಮಾತ್ರ. ಏರೋಪೋನಿಕ್ಸ್‌ ಕೇಂದ್ರಕ್ಕೆ 3.5 ಕೋಟಿ ರು., ಸಂಸ್ಕರಣಾ ಕಟ್ಟಡಕ್ಕೆ 2 ಕೋಟಿ ಖರ್ಚು ಮಾಡಿ ಬರೋಬ್ಬರಿ 5.5 ಕೋಟಿ ವೆಚ್ಚದಲ್ಲಿ ಆರಂಭವಾದ ಈ ಕೇಂದ್ರದಿಂದ ಆಲೂಗಡ್ಡೆಯ ಬೀಜಗಳು ಸಿಗುತ್ತವೆ ಎಂದು ಕಾದು ಕುಳಿತಿದ್ದ ರೈತರು ನಿರಾಶೆ ಅನುಭವಿಸಿದ್ದಾರೆ.

ಅರ್ಧಂಬರ್ಧ:

ಆರಂಭದಲ್ಲಿ ಜಿ 1, ಜಿ 2, ಜಿ 3, ಜಿ 4 ಹಂತದವರೆಗಿನ ಬೀಜೋತ್ಪಾದನೆ ಪೈಕಿ ಜಿ 1 ಮತ್ತು ಜಿ 2 ಹಂತದ ಆಲೂಗಡ್ಡೆ ಬಿತ್ತನೆ ಬೀಜ ಉತ್ಪಾದನೆಯ ಪ್ರಯೋಗ ಮಾಡಿದ್ದ ತೋಟಗಾರಿಕೆ ಇಲಾಖೆ ಸತತ ಎರಡು ವರ್ಷಗಳ ಅವಧಿಯಲ್ಲಿ ಬೆಳೆಸಲು ಮುಂದಾಗಿ ಕೈಸುಟ್ಟುಕೊಂಡಿತ್ತು. ಇದಕ್ಕೆ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಅಸಮರ್ಪಕ ನಿರ್ವಹಣೆ ಇಲ್ಲದಿರುವುದು ಪ್ರಮುಖ ಕಾರಣವೆನ್ನಲಾಗಿದೆ.

ಖಾಸಗಿಗೆ ಹಸ್ತಾಂತರ:

ತೋಟಗಾರಿಕೆ ಇಲಾಖೆಯಲ್ಲಿ ಏರೋಪೋನಿಕ್ಸ್‌ ತಂತ್ರಜ್ಞಾನ ಬಳಕೆ ಮಾಡಿ ಆಲೂಗಡ್ಡೆ ಬೀಜೋತ್ಪಾದನೆ ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ್ದ ಅಧಿಕಾರಿಗಳು ಈ ಬೀಜೋತ್ಪಾದನಾ ಕೇಂದ್ರವನ್ನು ಖಾಸಗಿ ಕಂಪನಿಗೆ ಹಸ್ತಾಂತರಿಸಿ ಕೈತೊಳೆದುಕೊಂಡಿದ್ದಾರೆ. ಬೆಂಗಳೂರು ಮೂಲದ ಉತ್ಕಲ್‌ ಟ್ಯೂಬ್ಸ್‌ (ಖಿಠಿka್ಝ ಠ್ಠಿಚಿಛಿs) ಎಂಬ ಕಂಪನಿಗೆ ಐದು ವರ್ಷಗಳ ಅವಧಿಗೆ ಒಪ್ಪಂದದ ಮೇರೆಗೆ ಈ ಕೇಂದ್ರವನ್ನು ಟೆಂಡರ್‌ ಮೂಲಕ ವಹಿಸಲಾಗಿದೆ.

ಈ ಸಂಸ್ಥೆಯು ಈಗಾಗಲೇ ಜಿ 1 ಮತ್ತು ಜಿ 2 ಹಂತದ ಬೀಜೋತ್ಪಾದನೆ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ತೋಟಗಾರಿಕೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಆದರೆ, ಒಂದೇ ಒಂದು ಬೀಜ ಸ್ಥಳೀಯರ ರೈತರಿಗೆ ವಿತರಣೆಯಾಗಿಲ್ಲ. ಬದಲಿಗೆ ಬೀಜೋತ್ಪಾದನೆ ಕೇಂದ್ರದ ಪ್ರಯೋಗಾಲಯ, ಅಲ್ಲಿನ ಯಂತ್ರೋಪಕರಣಗಳು ಸೇರಿದಂತೆ ಇತ್ಯಾದಿ ಉಪಕರಣಗಳ ಬಳಸಿಕೊಂಡಿದ್ದಕ್ಕೆಂದು ತೋಟಗಾರಿಕೆ ಇಲಾಖೆಗೆ ತಿಂಗಳಿಗೆ 15ರಿಂದ 20 ಲಕ್ಷ ರು.ಗಳ ಬಾಡಿಗೆ ಕಟ್ಟುತ್ತಿದೆ. ಜೊತೆಗೆ ಈಗಾಗಲೇ 12 ಲಕ್ಷ ರು. ಠೇವಣಿಯನ್ನು ಕೂಡ ಇಟ್ಟಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

Mysuru : ಬೀಜ - ರಸಗೊಬ್ಬರ ಕಂಪನಿಗಳು ಬ್ರಿಟಿಷರು ಇದ್ದಂತೆ

ಏನಿದು ಏರೋಪೋನಿಕ್ಸ್‌ ತಂತ್ರಜ್ಞಾನ?

ಏರೋಪೋನಿಕ್ಸ್‌ ತಂತ್ರಜ್ಞಾನದ ಮೂಲಕ ಬೇರುಗಳಿಗೆ ಮಣ್ಣು ತಾಗಿಸದೇ ಗಾಳಿ ಮತ್ತು ಮಂಜಿನ ವಾತಾವರಣದಲ್ಲಿ 19 ಅಂಶಗಳುಳ್ಳ ಆಹಾರ ಪದಾರ್ಥಗಳನ್ನು ದ್ರವ್ಯ ರೂಪದಲ್ಲಿ ನೀಡಿ ಬಿತ್ತನೆ ಆಲೂಗಡ್ಡೆಯನ್ನ ಬೆಳೆಯಬೇಕು. ರೋಗ ರಹಿತ ಮತ್ತು ಉತ್ತಮ ಗುಣಮಟ್ಟದ ಆಲೂಗಡ್ಡೆ ಬಿತ್ತನೆ ಬೀಜಗಳು ಸಿಗುವಂತಾಗಬೇಕು ಎಂಬುದು ಈ ಕೇಂದ್ರದ ಉದ್ದೇಶವಾಗಿತ್ತು.

ಹೊರರಾಜ್ಯಗಳ ಆವಲಂಬನೆ?

ರಾಜ್ಯದಲ್ಲಿ ಹಾಸನ, ಬೆಳಗಾವಿ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಸೇರಿದಂತೆ ಇತರೆ ಕಡೆಗಳಲ್ಲಿ 45 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ 5.90 ಲಕ್ಷ ಮೆಟ್ರಿಕ್‌ ಟನ್‌ಗೂ ಅಧಿಕವಾಗಿ ಆಲೂಗಡ್ಡೆ ಬೆಳೆಯಾಗುತ್ತಿದೆ. ಪ್ರತಿ ಹೆಕ್ಟೇರ್‌ಗೆ 15ರಿಂದ 16 ಟನ್‌ ಆಲೂಗಡ್ಡೆ ಬೆಳೆಯುತ್ತಿದ್ದು ಕೇವಲ ಹಾಸನ ಜಿಲ್ಲೆಯೊಂದರಲ್ಲೇ ಶೇ.41ಕ್ಕೂ ಅಧಿಕವಾಗಿ ಆಲೂಗಡ್ಡೆ ಬೆಳೆಯಲಾಗುತ್ತಿದೆ. ವಿಪರಾರ‍ಯಸವೆಂದರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ವೈಫಲ್ಯದಿಂದಾಗಿ ಅತ್ಯುತ್ತಮ ಬೀಜಗಳಿಗಾಗಿ ಇಂದಿಗೂ ನಮ್ಮ ರಾಜ್ಯದ ರೈತರು ಪಂಜಾಬ್‌ನ ಜಲಂಧರ್‌ ಸೇರಿದಂತೆ ಇತರೆ ರಾಜ್ಯಗಳನ್ನು ಆವಲಂಬಿಸಬೇಕಾದ ದುಸ್ಥಿತಿ ಮುಂದುವರೆದಿದೆ.
 

click me!