
ನವದೆಹಲಿ/ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ಮತ್ತು ಆಕೆಯ ಸಹಚರರು ನಡೆಸುತ್ತಿದ್ದ ಎನ್ನಲಾದ ಬೃಹತ್ ಚಿನ್ನದ ಕಳ್ಳಸಾಗಣೆ ಜಾಲದ ಕರಾಳ ಮುಖಗಳು ಒಂದೊಂದಾಗಿ ಅನಾವರಣಗೊಳ್ಳುತ್ತಿವೆ. ಸುಮಾರು 102.55 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬುಧವಾರ ನ್ಯಾಯಾಲಯಕ್ಕೆ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿದೆ. ಇದರಲ್ಲಿ ಉಗಾಂಡಾ ಮೂಲದ ಏಜೆಂಟರೊಂದಿಗೆ ನಟಿ ನಡೆಸಿದ್ದ ಡೀಲಿಂಗ್ ಬಗ್ಗೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ತನಿಖಾ ವರದಿಗಳ ಪ್ರಕಾರ, ರನ್ಯಾ ರಾವ್ ಕೇವಲ ದುಬೈನಿಂದ ಮಾತ್ರವಲ್ಲದೆ, ಆಫ್ರಿಕನ್ ರಾಷ್ಟ್ರಗಳಿಂದಲೂ ಚಿನ್ನ ಪಡೆಯಲು ಸಂಚು ರೂಪಿಸಿದ್ದರು. ಇದಕ್ಕಾಗಿ ಅವರು ಉಗಾಂಡಾ ಮೂಲದ ಏಜೆಂಟ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಆರಂಭದಲ್ಲಿ 5 ಕೆಜಿ ಚಿನ್ನವನ್ನು ಪ್ರಾಯೋಗಿಕವಾಗಿ ಸಾಗಿಸಲು ಯತ್ನಿಸಿದ್ದ ಈ ತಂಡ, ನಂತರ ಬರೋಬ್ಬರಿ 50 ಕೆಜಿ ಚಿನ್ನದ ಸಾಗಣೆಗೆ ಉಗಾಂಡಾ ಏಜೆಂಟ್ ಜೊತೆ ಡೀಲಿಂಗ್ ಕುದುರಿಸಿತ್ತು. ಇದಕ್ಕಾಗಿ ದುಬೈನಲ್ಲಿ 'ವೀರಾ ಡೈಮಂಡ್ಸ್ ಟ್ರೇಡಿಂಗ್' ಎಂಬ ಹೆಸರಿನ ಕಂಪನಿಯನ್ನು ಕೂಡ ತೆರೆಯಲಾಗಿತ್ತು.
ಅಕ್ರಮ ಹಾದಿಯಲ್ಲಿ ಕೋಟ್ಯಂತರ ರೂಪಾಯಿ ಗಳಿಸಲು ಹೊರಟಿದ್ದ ರನ್ಯಾ ರಾವ್ ಮತ್ತು ಆಕೆಯ ಸ್ನೇಹಿತ ರಾಜು ಎಂಬುವವರಿಗೆ ಉಗಾಂಡಾದ ಮಧ್ಯವರ್ತಿಯೇ ಕೈಕೊಟ್ಟಿದ್ದಾನೆ. ಚಿನ್ನ ಖರೀದಿಗಾಗಿ ಅಡ್ವಾನ್ಸ್ ಆಗಿ 33 ಲಕ್ಷ ರೂಪಾಯಿ ಪಾವತಿಸಲಾಗಿತ್ತು. ಜನವರಿ 2024ರಲ್ಲಿ ರಾಜು ಎಂಬಾತ ಚಿನ್ನ ತರಲು ಉಗಾಂಡಾದ ಕಂಪಾಲಕ್ಕೆ ತೆರಳಿದ್ದಾಗ, ಏಜೆಂಟ್ ಹೆಚ್ಚುವರಿಯಾಗಿ 1.7 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ರನ್ಯಾ ರಾವ್ ದುಬೈ ಮೂಲದ ವ್ಯಕ್ತಿಯ ಮೂಲಕ ಈ ಹಣ ನೀಡುವುದಾಗಿ ಒಪ್ಪಿಕೊಂಡಿದ್ದರೂ, ಕೊನೆಗೆ ತಾವು ವಂಚನೆಗೆ ಒಳಗಾಗಿದ್ದೇವೆ ಎಂದು ತಿಳಿದು ಅಲ್ಲಿನ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನಟಿ ರನ್ಯಾ ರಾವ್ ಅವರು, 2025ರ ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಡಿಆರ್‌ಐ (DRI) ಅಧಿಕಾರಿಗಳು ತಪಾಸಣೆ ಮಾಡಿದ್ದು, ಆಗ ಚಿನ್ನ ಇರುವುದು ಖಚಿತವಾಗದ ಕೂಡಲೇ ಆಕೆಯನ್ನು ವಶಕ್ಕೆ ಪಡೆದು ಪೂರ್ಣವಾಗಿ ತಪಾಸಣೆ ಮಾಡಿದಾಗ ನಟಿಯ ಬಳಿ 14.213 ಕೆಜಿ ಚಿನ್ನ ಪತ್ತೆಯಾಗಿತ್ತು. ಇದಾದ ನಂತರ ತನಿಖೆಗಿಳಿದ ಸರ್ಕಾರಿ ತನಿಖಾ ಸಂಸ್ಥೆಗಳು ಒಂದೊಂದೇ ಹಗರಣವನ್ನು ಬಯಲಿಗೆಳೆಯುತ್ತಾ ಹೋದವು. ತನಿಖಾ ವರದಿಯಲ್ಲಿ ಮಾರ್ಚ್ 2024ರಿಂದ ಮಾರ್ಚ್ 2025ರ ಅವಧಿಯಲ್ಲಿ ಈ ಜಾಲವು ಸುಮಾರು 127.287 ಕೆಜಿ ವಿದೇಶಿ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ಸಾಗಿಸಿದೆ. ಇದನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಿ ಬಂದ ಹಣವನ್ನು ಹವಾಲಾ ಮಾರ್ಗವಾಗಿ ವರ್ಗಾಯಿಸಲಾಗಿದೆ ಎಂಬ ಅಂಶವೂ ಕಂಡುಬಂದಿದೆ.
ಈ ಪ್ರಕರಣದ ಗಂಭೀರತೆ ಪರಿಗಣಿಸಿರುವ ಇಡಿ, ರನ್ಯಾ ರಾವ್ ಹೆಸರಿನಲ್ಲಿದ್ದ 34.12 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಜೊತೆಗೆ ದಾಳಿ ವೇಳೆ 2.67 ಕೋಟಿ ರೂಪಾಯಿ ನಗದು ಮತ್ತು 2.06 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ನಟಿ ರನ್ಯಾ ರಾವ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ