'ಕರ್ಕಶವಾದ ಲೌಡ್ ಸ್ಪೀಕರ್ ಅವನು..' ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಪ್ರಕಾಶ್ ರಾಜ್!

By Ravi Janekal  |  First Published Feb 27, 2024, 8:40 PM IST

ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿವೆ. ಹಿಂದೆ ಸ್ವಾತಂತ್ರ್ಯಕ್ಕಾಗಿ ಉಪವಾಸ ಮಾಡುವ ನಾಯಕರಿದ್ರು. ಆದರೆ ಈಗ ದೇವಸ್ಥಾನದ ಉದ್ಘಾಟನೆಗೆ ಉಪವಾಸ ಮಾಡುವ ನಾಯಕರಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ ರೈ ವಾಗ್ದಾಳಿ ನಡೆಸಿದರು.


ಮಂಗಳೂರು (ಫೆ.27): ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿವೆ. ಹಿಂದೆ ಸ್ವಾತಂತ್ರ್ಯಕ್ಕಾಗಿ ಉಪವಾಸ ಮಾಡುವ ನಾಯಕರಿದ್ರು. ಆದರೆ ಈಗ ದೇವಸ್ಥಾನದ ಉದ್ಘಾಟನೆಗೆ ಉಪವಾಸ ಮಾಡುವ ನಾಯಕರಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ ರೈ ವಾಗ್ದಾಳಿ ನಡೆಸಿದರು. 

ಇಂದು ಮಂಗಳೂರಿನ ತೊಕ್ಟೊಟ್ಟುವಿನಲ್ಲಿ  ನಡೆದ DYFI ನ ರಾಜ್ಯಮಟ್ಟದ ಬಹಿರಂಗ ಸಭೆಯಲ್ಲಿ ಮಾತನಾಡಿದ ಪ್ರಕಾಶ್ ರೈ, ಎಲ್ಲಾ ಧರ್ಮದಲ್ಲಿರುವ ಅಂಧ ಭಕ್ತರದ್ದೇ ನನಗೆ ಸಮಸ್ಯೆಯಾಗಿದೆ. ಕೆಲವರು ನಾನು ಯಾವ ಪಾರ್ಟಿ ಅಂತಾ ಕೇಳ್ತಾರೆ. ನಾನು ಜನರ ಪಾರ್ಟಿ ಅಂತಾ ಹೇಳ್ತೇನೆ. ಸಮಸ್ಯೆ ಬಂದಾಗ ಕಲಾವಿದನಾಗಿ ನಾನು ಮಾತನಾಡಬೇಕಿರುವುದು ನನ್ನ ಜವಾಬ್ದಾರಿ. ನಾನು ಬಡವ ಅಲ್ಲ ಜನರ ಶ್ರೀಮಂತಿಕೆ ನನ್ನ ಬಳಿ ಇದೆ. ದೇಹಕ್ಕಾದ ಗಾಯಗಳು ಸುಮ್ಮನಿದ್ರೂ ವಾಸಿಯಾಗುತ್ತೆ. ಆದರೆ ದೇಶಕ್ಕಾದ ಗಾಯ ನಾವು ಸುಮ್ಮನಿದ್ದಷ್ಟು ಹೆಚ್ಚಾಗುತ್ತದೆ. ನಮ್ಮ ದೇಶದಲ್ಲಿ ಎಂತಹ ನಾಯಕನಿದ್ದಾನೆ. ದೇಶವನ್ನು ಹೇಗೆ ಮಂಗ ಮಾಡ್ತಿದ್ದಾನೆ. 2019ರಲ್ಲಿ ಗುಹೆ ಸೇರಿಕೊಂಡ, ಈಗ ಕ್ಯಾಮೆರಾ ಹಿಡಿದುಕೊಂಡು ನೀರೊಳಗೆ ಸೇರಿದ್ದಾನೆ. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ. ದಿನಕ್ಕೆ ಐದು ಕಾಸ್ಟ್ಯೂಮ್ ಚೇಂಜ್ ಮಾಡ್ತಾನೆ. ಕರ್ಕಶವಾದ ಲೌಡ್ ಸ್ಪೀಕರ್ ಅವನು ಎಂದು ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

Tap to resize

Latest Videos

ಈತ ವಂದೇ ಭಾರತ್‌ಗೆ ಬಾವುಟ ತೋರಿಸಿದಷ್ಟು ಸ್ಟೇಷನ್ ಮಾಸ್ಟರ್ ಸಹ ಬಾವುಟ ತೋರಿಸಿರಲಿಕ್ಕಿಲ್ಲ. ಬಿಜೆಪಿ ಮತ್ತು ಆರೆಸ್ಸೆಸ್ ನಂತಹ ಕಿಡ್ನಾಪಿಂಗ್ ಟೀಮ್ ಈ ದೇಶದಲ್ಲಿ ಬೇರೆ ಯಾವುದು ಇಲ್ಲ. ಮಾತೆತ್ತಿದರೆ ರಾಮಮಂದಿರ, ಮಸೀದಿ, ಹಿಂದೂ ಧರ್ಮ ಅಂತಾರೆ. ಎಷ್ಟು ಅಂತಾ ಅಗೆಯುತ್ತಾ ಹೋಗ್ತಿರಾ? ಮುಂದೆ ಹರಪ್ಪ, ಮೊಹೆಂಜಾದೂರು ಸಿಗಬಹುದು. ಹಾಗಾದ್ರೆ ಮತ್ತೆ‌ ಶಿಲಾಯುಗಕ್ಕೆ ಹೋಗ್ತೀರಾ? ಎಂದು ಲೇವಡಿ ಮಾಡಿದ ಪ್ರಕಾಶ್ ರೈ.

ಪೆಟ್ರೋಲ್ ಮುಸ್ಲಿಂ ರಾಷ್ಟ್ರದಲ್ಲಿ ಸಿಗುತ್ತೆ. ಹಾಗಾದ್ರೆ ಪೆಟ್ರೋಲ್ ಬೇಡ ಅಂತಾ ಎತ್ತಿನಗಾಡಿಯಲ್ಲಿ ಹೋಗ್ತೀರಾ? ಈ ಸಲ ಗೆದ್ರೆ ಇನ್ನಷ್ಟು ನಾಚಿಕೆ ಮಾನ ಮರ್ಯಾದೆ ಕಳೆದುಕೊಳ್ತಾನೆ. ಹಿಂದು ರಾಷ್ಟ್ರ ಮಾಡಲು ಈ ಮಂಗಗಳು ತಿರುಗಾಡ್ತಾ ಇದ್ದಾರೆ. ಹಿಂದೂ ರಾಷ್ಟ್ರ ಆದ ಮೇಲೆ ಮತ್ತೆ ಜಾತಿ ಪದ್ಧತಿ ಶುರು ಮಾಡುತ್ತಾರೆ. ಫೇಕ್ ಡಿಗ್ರಿಯಲ್ಲಿ ಒಡಾಡುತ್ತಿರುವವನಿಗೆ ಇದೆಲ್ಲಾ ಹೇಗೆ ಗೊತ್ತಾಗುತ್ತೆ. ಪಾರ್ಲಿಮೆಂಟ್ ಮೇಲೆ ನಾಲ್ಕೈದು ಯುವಕ ಯುವತಿಯರು ದಾಳಿ ಮಾಡಿದ್ರು. ಯಾಕೆ ಹಾಗೆ ಯುವಕರು ಮಾಡಿದ್ರು ಎಂದು ನಾವು ಯೋಚನೆ ಮಾಡಬೇಕು. ನಿರುದ್ಯೋಗ ಸಮಸ್ಯೆ ಇದೆ ಎಂದು ಯುವಕರು ಹೇಳ್ತಿದ್ದಾರೆ. ಬಾಲ್ಯದಲ್ಲಿದ್ದಾಗ ಮಂಗಳೂರು ಈಗಾಗುತ್ತೆ ಎಂದು ಗೊತ್ತಿರಲಿಲ್ಲ. ಎಷ್ಟು ಜನ ಯುವಕರು ಜೈಲಿನಲ್ಲಿ ಕೊಳಿತಾ ಇದ್ದಾರೆ. ಗಲಾಟೆ ಮಾಡಿಸುವ ಒಬ್ಬ ಜನಪ್ರತಿನಿಧಿಯ ಮಕ್ಕಳು ಜೈಲಿನಲ್ಲಿ ಇದ್ದಾರಾ? ದೇಶದಲ್ಲಿ ದೇವಸ್ಥಾನವನ್ನು ಉದ್ಘಾಟನೆ ಮಾಡುವ ಕೆಲಸ ಯಾರಾದರೂ ಮಾಡಿದ್ದಾರಾ ಕಾಮಗಾರಿ ಅಪೂರ್ಣವಾಗಿ ಉದ್ಘಾಟನೆಯಾಗಿದೆ. ಸಂಗ್ರಹಿಸಿದ ದುಡ್ಡೆಲ್ಲಾ ಎಲ್ಲೋಯ್ತು? ಕೋಟ್ಯಂತರ ಲೆಕ್ಕದಲ್ಲಿ ಸಂಗ್ರಹವಾದ ಇಟ್ಟಿಗೆ ಎಲ್ಲೋಯ್ತು ಪ್ರಜಾಪ್ರಭುತ್ವ ಅಂದ್ರೆ ಮೆಜಾರಿಟಿ ಅಲ್ಲ. ಮೆಜಾರಿಟಿ ಮುಖ್ಯವಾದ್ರೆ ಕಾಗೆ ರಾಷ್ಟ್ರೀಯ ಪಕ್ಷಿ ಆಗಬೇಕಿತ್ತು. ಹಸು ರಾಷ್ಟ್ರೀಯ ಪ್ರಾಣಿ ಆಗಬೇಕಿತ್ತು. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಕೊಟ್ಟವರಲ್ಲಿ ಅಧಿಕಾರದ‌ ಶಕ್ತಿ ಇದೆ. ಲೋಕಸಭಾ ಚುನಾವಣೆಯಲ್ಲಿ ಮನೆ‌ಮನೆಗೆ ಈ ಸಂದೇಶ ನೀಡಬೇಕು. ಮೋದಿ‌ ಏನು ಕಿಸಿದು ಗುಡ್ಡ ಹಾಕಿದ್ದಾನೆ? ಪ್ರಜಾಪ್ರಭುತ್ವದಲ್ಲಿ ಸೂಕ್ಷ್ಮತೆ ಇರಬೇಕು. ಅದ್ಯಾವುದು ಮೋದಿಗೆ ಇಲ್ಲ ಇಂಥವರು ನಮ್ಮನ್ನಾಳುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

click me!