
ಚಾಮರಾಜನಗರ (ಫೆ.10): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡುವುದರಲ್ಲಿ ಎತ್ತಿದ ಕೈ. ಕೇವಲ ಅಧಿಕಾರಕ್ಕೆ ಬರಲು ಸುಳ್ಳು ಭರವಸೆ ನೀಡಲಾಗಿತ್ತು. ಆದರೆ, ಅವರು ಕೊಟ್ಟ ಭರವಸೆಗಳಲ್ಲಿ ಯಾವುದೇ ಒಂದು ಕೆಲಸವನ್ನೂ ಮಾಡಿಲ್ಲ. ಯಾರು ಕೇಳೋರೇ ಇಲ್ಲದಂತಾಗಿದೆ ಎಂದುಕೊಂಡವರ ವಿರುದ್ಧ ಜನರು ಸಿಡಿದೇಳಬೇಕಿದೆ ಎಂದು ನಟ ಚೇತನ್ ಅಹಿಂಸಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಭರವಸೆ ಕೊಡುವುದರಲ್ಲಿ ಎತ್ತಿದ ಕೈ. ಕೇವಲ ಅಧಿಕಾರಕ್ಕೆ ಬರಲು ಸುಳ್ಳು ಭರವಸೆ ನೀಡಲಾಗಿತ್ತು. ಅಧಿಕಾರ ಬಂದ ನಂತರ ಇಚ್ಛಾಶಕ್ತಿ ಕೊರತೆಯಿಂದ ಯಾವುದೇ ಭರವಸೆಗಳನ್ನೂ ಜಾರಿಗೆ ತಂದಿಲ್ಲ. ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡಲಿಲ್ಲ. ಜಾತಿಗಣತಿ ವರದಿ ಬಿಡುಗಡೆ ಮಾಡಲಿಲ್ಲ. ರೈತವಿರೋಧಿ ಕಾನೂನು ತೆಗೆಯಲಿಲ್ಲ. ರಾಜ್ಯ ಸರ್ಕಾರದಿಂದ ಕನ್ನಡದ ಜನತೆಗೆ ಯಾವುದಕ್ಕೂ ನ್ಯಾಯ ಸಿಗಲಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ಯಾರು ಹೇಳೋರಿಲ್ಲ, ಕೇಳೋರಿಲ್ಲ. ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ವಿರುದ್ಧ ಕೋಮುವಾದ ಎಂದು ವಿರೋಧಿಸಿ ಅಧಿಕಾರಕ್ಕೆ ಬಂದಿದ್ಆರೆ. ಆದರೆ, ಕೋಮುವಾದ ಹತ್ತಿಕ್ಕುವಲ್ಲಿಯೂ ವಿಫಲವಾಗಿದೆ. ಕರ್ನಾಟಕಕ್ಕೆ ಪರ್ಯಾಯ ಬೇಕಿದೆ, ಜನರ ಆಕ್ರೋಶ ಹೆಚ್ಚಾಗುತ್ತಿದೆ. ನಮಗೆ ಅಧಿಕಾರದ ಬಗ್ಗೆ ಕಾಳಜಿ ಇರೋ ಸರ್ಕಾರ ಬೇಕಿಲ್ಲ. ಜನರ ಬಗ್ಗೆ ಕಾಳಜಿ ಇರೋ ಸರ್ಕಾರ ಬೇಕಿದೆ ಎಂದು ನಟ ಚೇತನ್ ಅಹಿಂಸಾ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ದೇಶದ ಜನ ಬಿಜೆಪಿ ವಿರುದ್ಧ ಒಂದಲ್ಲ ಒಂದು ದಿನ ರೊಚ್ಚಿಗೇಳ್ತಾರೆ: ಸಚಿವ ಶಿವರಾಜ ತಂಗಡಗಿ ವಾಗ್ದಾಳಿ!
ಚಾಮರಾಜನಗರದಲ್ಲಿ ಎಸ್‌ಡಿಪಿಐ, ಕನ್ನಡಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ಅವಘಡಗಳಿಗೆ ತುತ್ತಾಗಿ ಸರ್ಕಾರದ ಭರವಸೆ ನಂಬಿಕೊಂಡು ಕುಳಿತಿರುವ ಸಂತ್ರಸ್ತರು ಸೇರಿ ಪ್ರತಿಭಟನೆ ಮಾಡಿ 'ಕಾಂಗ್ರೆಸ್ ಕೊಟ್ಟ ಮಾತಿಗೆ ತಪ್ಪಿದ ಸರ್ಕಾರ' ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಕೊಡಿ ಎಂದು ಆಗ್ರಹಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ಜಿಲ್ಲಾಡಳಿತ ಭವನದ ಮುಂದೆ ಧರಣಿ ನಡೆಸಿದರು.
2021ರ ಮೇ ತಿಂಗಳಲ್ಲಿ ನಡೆದಿದ್ದ ದುರ್ಘಟನೆ. ಜಿಲ್ಲಾಸ್ಪತ್ರೆಯಲ್ಲಿ ಆ್ಯಕ್ಸಿಜನ್ ಕೊರತೆಯಿಂದ 37 ಮಂದಿ ಮೃತಪಟ್ಟಿದ್ದರು. ಅಧಿಕಾರಕ್ಕೆ ಬಂದರೆ ಸಂತ್ರಸ್ತರಿಗೆ ಸರ್ಕಾರ ಉದ್ಯೋಗದ ಭರವಸೆ ನೀಡಿದ್ದ ಕಾಂಗ್ರೆಸ್. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲು ಭರವಸೆ ನೀಡಿದ್ದ ರಾಹುಲ್ ಗಾಂಧಿ. 3 ವರ್ಷ ಕಳೆದರೂ ಭರವಸೆ ಈಡೇರಿಲ್ಲ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು. ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಎಲ್ಲ ಭರವಸೆ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಜೊತೆಗೆ, ಈ ದುರ್ಘಟನೆಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಕೆ ಮಾಡಿದರು.
ಇದನ್ನೂ ಓದಿ: ನಾನು ಬಿಜೆಪಿ ಸಿಎಂ ಅಭ್ಯರ್ಥಿ, ರಾಜ್ಯಾಧ್ಯಕ್ಷ ಸ್ಥಾನಕ್ಕೂ ಆಕಾಂಕ್ಷಿ: ಶಾಸಕ ಯತ್ನಾಳ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ