* ಮಸೀದಿ, ಮದರಸಾಗಳಲ್ಲಿ ಕನ್ನಡ ಕಲಿಕಾ ಕೇಂದ್ರ ಮತ್ತು ಕನ್ನಡ ಸಂಸ್ಕೃತಿ ಶಿಬಿರ
* ಕೇವಲ ಕನ್ನಡ ಕಲಿಕಾ ಶಾಲೆಗಳನ್ನು ಆರಂಭಿಸುವ ಉದ್ದೇಶ ಹೊಂದಿಲ್ಲ
* ಕನ್ನಡ ಕಲಿಕೆಯೊಂದಿಗೆ ಸಂಸ್ಕೃತಿ ಶಿಬಿರ ನಡೆಸುವ ಉದ್ದೇಶ: ಸಮೀಉಲ್ಲಾ ಖಾನ್
ಬೆಂಗಳೂರು(ಜು.01): ಮದರಸಾ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.
ಮಸೀದಿ, ಗಳಲ್ಲಿ ಕನ್ನಡ ಕಲಿಕಾ ಕೇಂದ್ರ ಮತ್ತು ಕನ್ನಡ ಸಂಸ್ಕೃತಿ ಶಿಬಿರ ನಡೆಸುವ ಕುರಿತು ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ, ಅಲ್‌ಫೈಝ್ ಟ್ರಸ್ಟ್, ಮತ್ತಿಕೆರೆ ಮಸ್ಜಿದೆ ತಾಹ, ಫಲಾಹೆ ದಾರೇನ್ ಎಜುಕೇಷನಲ್ ಸೋಶಿಯಲ್ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳೊಂದಿಗೆ ನಾಗಾಭರಣ ಬುಧವಾರ ಸಭೆ ನಡೆಸಿದರು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟಿ.ಎಸ್. ನಾಗಾಭರಣ, ಅಖಿಲ ಕರ್ನಾಟಕ ಮಹಮದೀಯರ ವೇದಿಕೆ ಮತ್ತು ಅದರ ಸೋದರ ಸಂಸ್ಥೆಗಳ ಸಹಯೋಗದಲ್ಲಿ , ಮದರಸಾಗಳಲ್ಲಿ ಕನ್ನಡ ಕಲಿಕಾ ಕೇಂದ್ರ ಮತ್ತು ಕನ್ನಡ ಸಂಸ್ಕೃತಿ ಶಿಬಿರಗಳನ್ನು ಪ್ರಾಯೋಜಿಸುವ ಕುರಿತು ಚರ್ಚಿಸಲಾಗಿದೆ ಎಂದರು.
ಬೆಳಗಾವಿಯಲ್ಲಿ ಕನ್ನಡಿಗರಾಗಿ ಪರಿವರ್ತನೆ ಹೊಂದಿದವರ ಸಾಮಾಜಿಕ ಸಮೀಕ್ಷೆ: ನಾಗಾಭರಣ
ಕೇವಲ ಕನ್ನಡ ಕಲಿಕಾ ಶಾಲೆಗಳನ್ನು ಆರಂಭಿಸುವ ಉದ್ದೇಶ ಹೊಂದಿಲ್ಲ, ಜೊತೆಗೆ ಕನ್ನಡದ ಬದುಕನ್ನು ನಮಗೆ ಕೊಡಿ, ಎಲ್ಲರೂ ಒಟ್ಟಾಗಿ ಕನ್ನಡ ಕಟ್ಟೋಣ ಎಂಬ ಧ್ಯೇಯವನ್ನು ವೇದಿಕೆ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ರಾಜ್ಯಾಧ್ಯಕ್ಷ ಸಮೀಉಲ್ಲಾ ಖಾನ್ ಮಾತನಾಡಿ, ಸೌಹಾರ್ದಯುತ ನಾಡಿಗೆ ಶಿಶುನಾಳ ಶರೀಫರು, ಏಕೀಕರಣಕ್ಕೆ ರಂಜಾನ್‌ಸಾಬ್ ಅವರ ಕೊಡುಗೆ ಮತ್ತು ಕನ್ನಡ ನಾಡಿಗಾಗಿ ಹೋರಾಟ ಮಾಡಿರುವವರ ಸಾಧನೆ, ಕೊಡುಗೆಗಳ ಕುರಿತು ನಮ್ಮ ಮಕ್ಕಳಿಗೂ ತಿಳಿಸಬೇಕು. ಕನ್ನಡ ಕಲಿಕೆಯೊಂದಿಗೆ ಸಂಸ್ಕೃತಿ ಶಿಬಿರ ನಡೆಸುವ ಉದ್ದೇಶ ಹೊಂದಲಾಗಿದೆ ಎಂದರು. ವೇದಿಕೆಯ ಕಾರ್ಯದರ್ಶಿ ಸಾಗರ್ ಸಮೀವುಲ್ಲಾ, ಉಪಾಧ್ಯಕ್ಷ ಶಹಜಹಾನ್, ಅಲ್‌ಫೈಝ್ ಟ್ರಸ್ಟ್ ಅಧ್ಯಕ್ಷ ಸಲಾಹುದ್ದೀನ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.