
ಬೆಂಗಳೂರು (ಜೂ.07): ಆಕ್ಮೆ ಕ್ಲೀನ್ ಟೆಕ್ ಸಲ್ಯೂಷನ್ ಕಂಪನಿಯು ಮಂಗಳೂರಿನಲ್ಲಿ ಹೈಡ್ರೋಜನ್ ಮತ್ತು ಅಮೋನಿಯಾ ಘಟಕ ಹಾಗೂ ಪೂರಕವಾಗಿ ಸೋಲಾರ್ ಘಟಕ ಸ್ಥಾಪನೆಗೆ 52 ಸಾವಿರ ಕೋಟಿ ರು. ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಸೋಮವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು.
ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಮತ್ತು ಆಕ್ಮೆ ಗ್ರೂಪ್ ಕಂಪನಿಯ ಸಿಒಒ ಸಂದೀಪ್ ಕಶ್ಯಪ್ ಅವರು ಒಪ್ಪಂದಕ್ಕೆ ಸಹಿ ಮಾಡಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯ ಸರ್ಕಾರವು ಗ್ರೀನ್ ಹೈಡ್ರೋಜನ್ ನೀತಿಯನ್ನು ರೂಪಿಸುತ್ತಿದ್ದು, ಇದರ ಲಾಭ ಪಡೆದುಕೊಳ್ಳುವಂತೆ ಆಕ್ಮೆ ಗ್ರೂಪ್‌ನವರಿಗೆ ಸಲಹೆ ನೀಡಿದರು.
ಸ್ಟಾರ್ಟ್‌ಅಪ್‌ಗಳಿಗೆ ಕರ್ನಾಟಕ ಅಗ್ರತಾಣ: ಸಿಎಂ ಬೊಮ್ಮಾಯಿ
ಎಲ್ಲಾ ಬೆಂಬಲ: ಕರ್ನಾಟಕ ರಾಜ್ಯವು ಸದಾ ಹೊಸ ತಂತ್ರಜ್ಞಾನ, ಭವಿಷ್ಯದ ಯೋಜನೆಗಳಿಗೆ ಉತ್ತೇಜನ ನೀಡುತ್ತಾ ಬಂದಿದೆ. ಈ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ತ್ವರಿತವಾಗಿ ಎಲ್ಲಾ ಅಗತ್ಯ ಬೆಂಬಲ ನೀಡಲಿದೆ. ನೀವು ಸಹ ಸಕಾಲದಲ್ಲಿ ಯೋಜನೆ ಜಾರಿಗೊಳಿಸಬೇಕು. ಬಂಡವಾಳ ಹೂಡಿಕೆಗೆ ಕರ್ನಾಟಕ ಉತ್ತಮ ತಾಣ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇಡೀ ದೇಶದಲ್ಲಿಯೇ ಕರ್ನಾಟಕ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿದೆ. ಕಳೆದ ಮೂರು ತ್ರೈಮಾಸಿಕ ಅವಧಿಯಲ್ಲಿ ಕರ್ನಾಟಕಕ್ಕೆ ಹರಿದು ಬಂದಿರುವ ಎಫ್‌ಡಿಐ ಮೊತ್ತವೇ ಇದಕ್ಕೆ ಸಾಕ್ಷಿ ಎಂದರು.
ಆಕ್ಮೆ ಗ್ರೂಪ್‌ನ ಉಪಾಧ್ಯಕ್ಷ ಶಶಿ ಶೇಖರ್ ಶೇಖರ್ ಮಾತನಾಡಿ, ಆಕ್ಮೆ ಗ್ರೂಪ್ ಜಾಗತಿಕ ಮಟ್ಟದಲ್ಲಿ ಹೈಡ್ರೋಜನ್-ಅಮೋನಿಯ ಘಟಕಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ರಾಜಸ್ಥಾನದ ಬಿಕಾನೇರ್‌ನಲ್ಲಿ ವಿಶ್ವದ ಮೊದಲ ಹೈಡ್ರೋಜನ್ ಅಮೋನಿಯ, ಸೋಲಾರ್ ಘಟಕವನ್ನು ಸ್ಥಾಪಿಸಿದ್ದು, ಕಾರ್ಯಾರಂಭ ಮಾಡಿದೆ ಎಂದು ತಿಳಿಸಿದರು.
ಬೀಜ, ಗೊಬ್ಬರ ಕೊರತೆಯಾಗದಂತೆ ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ!
ಇತ್ತೀಚೆಗೆ ಸ್ವಿಜರ್ಲೆಂಡಿನ ದಾವೋಸ್‌ನಲ್ಲಿ ರೆನ್ಯೂ ಪವರ್ ಕಂಪನಿಯವರು ನವೀಕರಿಸಬಹುದಾದ ಇಂಧನ ವಲಯದಲ್ಲಿ 50 ಸಾವಿರ ಕೋಟಿ ರು. ಹೂಡಿಕೆ ಒಪ್ಪಂದ ಮಾಡಿಕೊಂಡಿರುವುದನ್ನು ಸ್ಮರಿಸಬಹುದು. ಈ ವೇಳೆ ಇಂಧನ ಸಚಿವ ವಿ.ಸುನಿಲ್ ಕುಮಾರ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣಾ, ಆಕ್ಮೆ ಗ್ರೂಪ್‌ನ ಅಧಿಕಾರಿಗಳಾದ ಎಂ.ವಿ.ವಿ.ಎಸ್.ರೆಡ್ಡಿ, ಅರುಣ್ ಚೋಪ್ರಾ ಇತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ