PSI Recruitment Scam: ಪ್ರಿಯಾಂಕ್‌ ಖರ್ಗೆ ಕೊಟ್ಟ ಆಡಿಯೋದಿಂದ ಒಬ್ಬ ಬಲೆಗೆ..!

Published : Oct 23, 2022, 12:30 AM IST
PSI Recruitment Scam: ಪ್ರಿಯಾಂಕ್‌ ಖರ್ಗೆ ಕೊಟ್ಟ ಆಡಿಯೋದಿಂದ ಒಬ್ಬ ಬಲೆಗೆ..!

ಸಾರಾಂಶ

ಕನ್ನಡಪ್ರಭ ಬಯಲಿಗೆಳೆದ ಹಗರಣ: ಪಿಎಸ್‌ಐ ಪರೀಕ್ಷೆ ಅಕ್ರಮ: ಇಂಡಿಯ ಶ್ರೀಶೈಲ ಬಿರಾದಾರ ಬಂಧನ, ರಾಜ್ಯಕ್ಕೇ 6ನೇ ಸ್ಥಾನ ಪಡೆದಿದ್ದ ಆರೋಪಿ 

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಅ.23):  ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಹಗರಣ ಸಂಬಂಧ ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬಹಿರಂಗಗೊಳಿಸಿದ್ದ ಡೀಲ್‌ ಆಡಿಯೋ ಈಗ ಅಭ್ಯರ್ಥಿಯೊಬ್ಬ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಬಲೆಗೆ ಬೀಳಲು ಕಾರಣವಾದ ಕುತೂಹಲ ಸಂಗತಿ ನಡೆದಿದೆ.

ಪಿಎಸ್‌ಐ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಶ್ರೀಶೈಲ ಬಿರಾದಾರ್‌ ಬಂಧಿತನಾಗಿದ್ದು, ಅಕ್ರಮವಾಗಿ ಬ್ಲೂಟೂತ್‌ ಬಳಸಿ ಪರೀಕ್ಷೆ ಬರೆದು ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದ. ಇತ್ತೀಚೆಗೆ ಆತನ ಮೇಲೆ ತುಮಕೂರಿನಲ್ಲಿ ಎಫ್‌ಐಆರ್‌ ದಾಖಲಿಸಿ ಸಿಐಡಿ ಬಂಧಿಸಿತ್ತು. ತನ್ನ ಸಂಬಂಧಿ ಜತೆ ಪಿಎಸ್‌ಐ ಹುದ್ದೆ ಡೀಲ್‌ ಬಗ್ಗೆ ಮಾತನಾಡಿ ಶ್ರೀಶೈಲ ಬಿರಾದಾರ್‌ ಸಂಕಷ್ಟತಂದುಕೊಂಡಿದ್ದಾನೆ. ಈ ಆಡಿಯೋವನ್ನೇ ಮಾಧ್ಯಮಗಳಿಗೆ ಪ್ರಿಯಾಂಕ್‌ ಖರ್ಗೆ ಬಿಡುಗಡೆಗೊಳಿಸಿ ಗಮನ ಸೆಳೆದಿದ್ದರು.

ಪಿಎಸ್‌ಐ ನೇಮಕಾತಿ: ಪ್ರಶ್ನೆಪತ್ರಿಕೆ 1ರಲ್ಲೂ ಅಕ್ರಮ, ಬ್ಲೂಟೂತ್‌ ಬಳಕೆ ಪತ್ತೆ..!

2 ಬಾರಿ ಫೇಲ್‌ ಆಗಿ ಡೀಲ್‌:

ಪಿಎಸ್‌ಐ ಆಗುವ ಕನಸು ಕಂಡಿದ್ದ ಆರೋಪಿ ಶ್ರೀಶೈಲ ಬಿರಾದಾರ್‌, ಇದಕ್ಕಾಗಿ ಎರಡು ಬಾರಿ ಪರೀಕ್ಷೆ ಬರೆದರೂ ಯಶಸ್ಸು ಸಿಗದೆ ವಿಫಲನಾಗಿದ್ದ. ಇದರಿಂದ ಬೇಸತ್ತ ಆತ, ವಯಸ್ಸು ಮೀರುವ ಮುನ್ನ ಹೇಗಾದರೂ ಸರಿಯೇ ಈ ಬಾರಿ ಪಿಎಸ್‌ಐ ಆಗಲೇ ಬೇಕು ಎಂದು ಯೋಜಿಸಿದ್ದ. ಹೀಗಿರುವಾಗ ಶ್ರೀಶೈಲಗೆ ತನ್ನ ಸಂಬಂಧಿ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಚಂದ್ರಶೇಖರ್‌ ಪೊಲೀಸ್‌ ಪಾಟೀಲ್‌ ನೆರವು ಸಿಕ್ಕಿದೆ. ‘ನನಗೆ ಗೊತ್ತಿರುವ ವ್ಯಕ್ತಿಯೊಬ್ಬರಿದ್ದಾರೆ. ಅವರನ್ನು ಸಂಪರ್ಕಿಸಿದರೆ ನಿನಗೆ ಪಿಎಸ್‌ಐ ಹುದ್ದೆ ಸಿಗಲಿದೆ’ ಎಂದು ಶ್ರೀಶೈಲನಿಗೆ ಚಂದ್ರಶೇಖರ್‌ ಹೇಳಿದ್ದ. ಅಂತೆಯೇ ತನ್ನ ಸಂಬಂಧಿ ಮೂಲಕ ಶ್ರೀಶೈಲನಿಗೆ ಪಿಎಸ್‌ಐ ನೇಮಕಾತಿ ಹಗರಣದ ಬ್ಲೂಟೂತ್‌ ಸೂತ್ರಧಾರಿ ಅಫ್ಜಲ್‌ಪುರ ತಾಲೂಕಿನ ಕಾಂಗ್ರೆಸ್‌ ಮುಖಂಡ ರುದ್ರಗೌಡ ಪಾಟೀಲ್‌ (ಆರ್‌.ಡಿ.ಪಾಟೀಲ್‌) ಪರಿಚಯವಾಗಿದೆ. ಕೊನೆಗೆ ಇಬ್ಬರ ನಡುವೆ 40 ಲಕ್ಷ ರು.ಗೆ ಡೀಲ್‌ ಆಗಿದ್ದು, ಪಾಟೀಲ್‌ಗೆ ಮುಂಗಡವಾಗಿ ಹಣ ಕೂಡ ಪಾವತಿಯಾಗಿದೆ. ಪಿಎಸ್‌ಐ ಪರೀಕ್ಷೆಗೂ ಮುನ್ನ ಈ ಡೀಲ್‌ ನಡೆದಿತ್ತು ಎಂದು ಸಿಐಡಿ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಆಡಿಯೋ ಸಿಕ್ಕಿದ್ದು ಹೇಗೆ?:

ತುಮಕೂರಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಶ್ರೀಶೈಲನಿಗೆ ತನ್ನ ಸಹಚರರ ಮೂಲಕ ಆರ್‌.ಡಿ.ಪಾಟೀಲ್‌ ಬ್ಲೂಟೂತ್‌ ಪೂರೈಸಿ ನೆರವು ನೀಡಿದ್ದ. ಫಲವಾಗಿ ಶ್ರೀಶೈಲ ರಾಜ್ಯಕ್ಕೇ 6ನೇ ರಾರ‍ಯಂಕ್‌ ಪಡೆದು ಆಯ್ಕೆಯಾಗಿದ್ದ. ಈ ಮಧ್ಯೆ ಶ್ರೀಶೈಲನ ಸೋದರ ಸಂಬಂಧಿಯ ಪುತ್ರ ಪಿಎಸ್‌ಐ ಹುದ್ದೆಗೆ ತಯಾರಿ ನಡೆಸುತ್ತಿದ್ದ. ರಾರ‍ಯಂಕ್‌ ಪಡೆದಿದ್ದ ಶ್ರೀಶೈಲನ ಸಲಹೆ ಪಡೆಯಲು ಆತನ ಸಂಬಂಧಿ ಕರೆ ಮಾಡಿದ್ದಾನೆ. ಆಗ, ‘ನಾನು 40 ಲಕ್ಷ ರು. ಕೊಟ್ಟಿದ್ದೇನೆ. ನೀನು ನಾನು ಹೇಳಿದಂತೆ ಕೇಳಿದರೆ ಡೀಲ್‌ ಮಾಡಿಸುತ್ತೇನೆ’ ಎಂದಿದ್ದ. ಈ ಮಾತುಕತೆಯನ್ನು ಮೊಬೈಲ್‌ ರೆಕಾರ್ಡ್‌ ಮಾಡಿಕೊಂಡಿದ್ದ ಆತನ ಸಂಬಂಧಿ, ಅದನ್ನು ತನ್ನ ಸ್ನೇಹಿತರಿಗೆ ಕೊಟ್ಟಿದ್ದ. ಅದೂ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸಿಕ್ಕಿತು ಎಂದು ಸಿಐಡಿ ಮೂಲಗಳು ತಿಳಿಸಿವೆ.

PSI Scam: ಎಡಿಜಿಪಿ ಅಮೃತ್ ಪೌಲ್‌ ವಿರುದ್ದ ಚಾರ್ಜ್ ಶೀಟ್!

ಸಿಕ್ಕಿಬಿದ್ದಿದ್ದು ಹೇಗೆ?

ಈ ಡೀಲ್‌ ಆಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಸಿಐಡಿ, ಇದರ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಮೂರು ಬಾರಿ ನೋಟಿಸ್‌ ನೀಡಿತ್ತು. ಆದರೆ ಮಾಜಿ ಸಚಿವರು ವಿಚಾರಣೆಗೆ ಗೈರಾದರು. ಕೊನೆಗೆ ಸಿಐಡಿ ಪೊಲೀಸರು, ಆಡಿಯೋ ಕೂಲಂಕಷವಾಗಿ ಪರಿಶೀಲಿಸಿದಾಗ ಮಾತುಕತೆ ವೇಳೆ ಶ್ರೀಶೈಲ ಬಿರಾದಾರ್‌ ಎಂಬ ಹೆಸರು ಪ್ರಸ್ತಾಪವಾಗಿತ್ತು. ಈ ಕೂಡಲೇ ಪಿಎಸ್‌ಐ ಆಯ್ಕೆ ಪಟ್ಟಿಪರಿಶೀಲಿಸಿದಾಗ ಶ್ರೀಶೈಲ ಬಿರಾದಾರ್‌ ಮಾಹಿತಿ ಸಿಕ್ಕಿದೆ. ಬಳಿಕ ಆತ ಪರೀಕ್ಷೆ ಬರೆದಿದ್ದ ತುಮಕೂರು ಪರೀಕ್ಷಾ ಕೇಂದ್ರದ ಸಿಸಿಟಿವಿ ಕ್ಯಾಮರಾ ಹಾಗೂ ಆ ದಿನ ಕೇಂದ್ರದ ವ್ಯಾಪ್ತಿ ಸಂಪರ್ಕ ಹೊಂದಿದ್ದ ಮೊಬೈಲ್‌ ಕರೆಗಳ ವಿವರ ಶೋಧಿಸಿದಾಗ ಬ್ಲೂಟೂತ್‌ ಗ್ಯಾಂಗ್‌ ಜತೆ ಆರೋಪಿ ಸಂಪರ್ಕ ಹೊಂದಿದ್ದು ಬಯಲಾಯಿತು. ಶ್ರೀಶೈಲ ನೆರವಾಗಿದ್ದ ಆತನ ಸಂಬಂಧಿ ಚಂದ್ರಶೇಖರ್‌ ಪಾಟೀಲ್‌ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

17 ಜನರಿಗೆ ಪಾಟೀಲ್‌ ನೆರವು:

ಇದುವರೆಗೆ 17 ಅಭ್ಯರ್ಥಿಗಳಿಗೆ ಬ್ಲೂಟೂತ್‌ ನೆರವು ಕಲ್ಪಿಸಿ ಪರೀಕ್ಷೆ ಬರೆಯಲು ಆರ್‌.ಡಿ.ಪಾಟೀಲ್‌ ನೆರವಾಗಿದ್ದಾನೆ. ಇನ್ನು ತನಿಖೆ ಪ್ರಗತಿಯಲ್ಲಿದ್ದು, ಬಂಧಿತರ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್