ಅಪಘಾತ ಪ್ರಕರಣ : ಬಲವಂತವಾಗಿ ಸಿ.ಟಿ.ರವಿ ರಾಜಿ ಸಂಧಾನ?

By Web DeskFirst Published Feb 28, 2019, 12:16 PM IST
Highlights

ಸಿ.ಟಿ.ರವಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಇಬ್ಬರು ಯುವಕರು ಮೃತಪಟ್ಟಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರೊಂದಿಗೆ ಬಲವಂತವಾಗಿ ರಾಜಿ ಸಂಧಾನ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಮಂಡ್ಯ :  ಮಾಜಿ ಸಚಿವ ಸಿ.ಟಿ.ರವಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಇಬ್ಬರು ಯುವಕರು ಮೃತಪಟ್ಟಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್‌ ಅಧಿಕಾರಿಯ ಮಧ್ಯಸ್ಥಿಕೆಯಲ್ಲಿ ರಾಜಿಸಂಧಾನ ನಡೆದಿದೆ. ಪ್ರಕರಣದಿಂದ ಮುಕ್ತಿ ಪಡೆಯಲು ಶಾಸಕ ಸಿ.ಟಿ.ರವಿ ಅವರು ಮೃತ ಯುವಕರ ಪೋಷಕರನ್ನು ಬಲವಂತವಾಗಿ ಎಎಸ್ಪಿ ಬಲರಾಮೇಗೌಡ ಅವರ ಸರ್ಕಾರಿ ನಿವಾಸಕ್ಕೆ ಕರೆಸಿಕೊಂಡು ತಲಾ 2.50 ಲಕ್ಷ ರು. ಪರಿಹಾರ ಹಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿಕ್ಕಮಗಳೂರು ಕ್ಷೇತ್ರ ಶಾಸಕ ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಇದರಲ್ಲಿ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಶಶಿಕುಮಾರ್‌ ಮತ್ತು ಸುನೀಲ್ ಗೌಡ ಸ್ಥಳದಲ್ಲಿಯೇ ಮೃತಪಟ್ಟರೆ, ಮುನಿರಾಜು ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಕುಣಿಗಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಮೃತ ಯುವಕರು ಪ್ರವಾಸಕ್ಕೆ ಕೊಂಡೊಯ್ದಿದ್ದ ಸ್ಕಾರ್ಪಿಯೋ ಕಾರು ಎಎಸ್ಪಿ ಬಲರಾಮೇಗೌಡ ಅವರ ಪತ್ನಿಯ ಹೆಸರಿನಲ್ಲಿದೆ. ಅಲ್ಲದೆ, ಬಲರಾಮಗೌಡರು ಅಪಘಾತಕ್ಕೀಡಾದ ಯುವಕನೊಬ್ಬನ ದೂರದ ಸಂಬಂಧಿಯೂ ಆಗಿದ್ದಾರೆ. ಹೀಗಾಗಿ ಅವರ ಸಮುಖದಲ್ಲಿಯೇ ಸಿ.ಟಿ.ರವಿ ಮೃತರ ಕುಟುಂಬದವರೊಂದಿಗೆ ರಾಜಿ ಸಂಧಾನದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. 

ಅಮಾಯಕ ಯುವಕರ ಸಾವಿನಿಂದಾಗಿ ಸೂರನಹಳ್ಳಿ ಗ್ರಾಮಸ್ಥರು ಆಕ್ರೋಶಗೊಂಡಿದ್ದರು. ಹೀಗಾಗಿ ಕನಕಪುರಕ್ಕೆ ಹೋದರೆ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದ್ದುದರಿಂದ ಈ ರಾಜಿ ಸಂಧಾನ ನಡೆಸಿದರು ಎಂದು ಹೇಳಲಾಗಿದೆ. ಈ ಮೂಲಕ ಪ್ರಕರಣದಲ್ಲಿ ತೀವ್ರ ಮುಜಗರಕ್ಕೀಡಾಗಿದ್ದ ಬಿಜೆಪಿ ಶಾಸಕ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

click me!