ಗೃಹ ಸಚಿವರ ಮನೆಗೆ ಮುತ್ತಿಗೆ ಪ್ರಕರಣ; ಜೆ.ಸಿ.ನಗರ ಠಾಣೆಯ ಇಬ್ಬರು ಸಸ್ಪೆಂಡ್

By Kannadaprabha NewsFirst Published Jul 31, 2022, 6:23 AM IST
Highlights

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಭದ್ರತೆ ನೀಡುವಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಡಿ ಜೆ.ಸಿ.ನಗರ ಠಾಣೆ ಸಬ್‌ಇನ್ಸ್‌ಪೆಕ್ಟರ  ಮತ್ತು ವಿಶೇಷ ಗಸ್ತು (ಎಸ್‌ಬಿ) ಹೆಡ್‌ ಕಾನ್ಸ್‌ಟೇಬಲ್‌ ಅವರನ್ನು ಅಮಾನುತುಗೊಳಿಸಲಾಗಿದೆ.

ಬೆಂಗಳೂರು (ಜು.31): ಗೃಹ ಸಚಿವರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಸಿ.ನಗರ ಪೊಲೀಸ್  ಠಾಣೆಯ ಇಬ್ಬರ ಪೊಲೀಸರ ತಲೆದಂಡವಾಗಿದೆ. ಪಿಎಸ್ ಐ ರಾಜ್ ಸಾಬ್ ಹಾಗೂ ವಿಶೇಷ ಗಸ್ತು (ಎಸ್‌ಬಿ) ಹೆಡ್‌ ಕಾನ್ಸ್ ಟೇಬಲ್ ಶ್ರೀನಿವಾಸ್ ಮೂರ್ತಿ ಸಸ್ಪೆಂಡ್ ಮಾಡಿ ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ಆದೇಶ ಮಾಡಿದ್ದಾರೆ. ಕರ್ತವ್ಯ ಲೋಪ ಹಿನ್ನಲೆ ಇಬ್ಬರನ್ನು ಅಮಾನತು ಮಾಡಿ ಆದೇಶ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಖಂಡಿಸಿ, ಪಿಎಫ್‌ಐ, ಎಸ್‌ಡಿಪಿಐ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಶನಿವಾರ ಗೃಹ ಸಚಿವರ ಮನೆಗೇ ಮುತ್ತಿಗೆ ಹಾಕಿ, ಹೂವಿನ ಕುಂಡಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಜಯಮಹಲ್‌ನ ಗೃಹಸಚಿವ ಆರಗ ಜ್ಞಾನೇಂದ್ರ ಅವರ ನಿವಾಸದ ಬಳಿ ಶನಿವಾರ ಬೆಳಗ್ಗೆ ಆಗಮಿಸಿದ್ದ ನೂರಕ್ಕೂ ಅಧಿಕ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ಸಚಿವರ ನಿವಾಸದ ಗೇಟ್‌ ತಳ್ಳಿ ಒಳನುಗ್ಗಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಈ ವೇಳೆ ನಿವಾಸದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಇರಲಿಲ್ಲ. ಮನೆಗೆ ನುಗ್ಗಲು ಯತ್ನಿಸಿದ ಉದ್ರಿಕ್ತ ಪ್ರತಿಭಟನಾಕಾರರನ್ನು ಪೊಲೀಸರು ತಡೆಯಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಆಗ ಕೆಲ ಪ್ರತಿಭಟನಾಕಾರರು ಗೇಟ್‌ ಹಾಗೂ ಕಾಂಪೌಂಡ್‌ ಹಾರಿ ಆವರಣ ಪ್ರವೇಶಿಸಿ ಅಲಂಕಾರಿಕ ಪಾಟ್‌ಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ. ಈ ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜತೆಗೆ ಎಸ್‌ಡಿಪಿಐ, ಪಿಎಫ್‌ಐ ನಿಷೇಧಿಸಬೇಕು. ಸಿಎಂ ಬಸವರಾಜ ಬೊಮ್ಮಾಯಿ ಅಸಮರ್ಥರು ಎಂದು ಘೋಷಣೆ ಕೂಗಿದರು.

ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಒಂದು ಹಂತದಲ್ಲಿ ಪರಿಸ್ಥಿತಿ ಕೈ ಮೀರಿದಾಗ ಪೊಲೀಸರು ಎಬಿವಿಪಿ ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಈ ನಡುವೆಯೂ ಗೃಹಸಚಿವರ ಮನೆಗೆ ನುಗ್ಗಲು ಯತ್ನಿಸಿದ ಸುಮಾರು 30 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಈ ವೇಳೆ ತೀವ್ರ ಪ್ರತಿರೋಧವೊಡ್ಡಿದ ಪ್ರತಿಭಟನಾಕಾರರನ್ನು ಪೊಲೀಸರು ಬಿಡದೆ ಎಳೆದೊಯ್ದರು.

ಹಿರಿಯ ಅಧಿಕಾರಿಗಳು ದೌಡು: ಗೃಹ ಸಚಿವರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ವಿಚಾರ ತಿಳಿದ ತಕ್ಷಣ ಉತ್ತರ ವಿಭಾಗದ ಡಿಸಿಪಿ ವಿನಾಯಕ್‌ ಪಾಟೀಲ್‌ ಅವರು ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ಗೃಹಸಚಿವರ ಮನೆಗೆ ಎಸಿಪಿ ನೇತ್ವದಲ್ಲಿ 50ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಿದರು. ಇನ್ನು ಗೃಹಸಚಿವ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಗೃಹ ಸಚಿವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸರು ತಡೆದರೂ ಅವರನ್ನು ತಳ್ಳಿ ಎಬಿವಿಪಿ ಕಾರ್ಯಕರ್ತರು ಗೃಹ ಸಚಿವರ ಮನೆಗೆ ನುಗ್ಗಿದ್ದಾರೆ. ಈ ಸಂಬಂಧ ಕೆಲವರನ್ನು ಬಂಧಿಸಲಾಗಿದೆ. ಈ ಸಂಬಂಧ ಡಿಸಿಪಿಗೆ ವರದಿ ನೀಡಲು ಸೂಚಿಸಿದ್ದೇನೆ. ವರದಿ ಬಂದ ಬಳಿಕ ಭದ್ರತೆ ಲೋಪದ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಿದ ಸಂಬಂಧ ಜೆ.ಸಿ.ನಗರ ಪೊಲೀಸ್‌ ಠಾಣೆಯಲ್ಲಿ ಎಬಿವಿಪಿಯ 30 ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. 29 ಯುವಕರು ಪುರುಷರು ಮತ್ತು ಓರ್ವ ಯುವತಿ 30 ಮಂದಿಯನ್ನು ಬಂಧಿಸಿದ್ದರು. ಸಂಜೆ ವೇಳೆಗೆ ಷರತ್ತುಬದ್ಧ ಜಾಮೀನು ನೀಡಿ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ.

ಪರಿಸ್ಥಿತಿ ಅರಿಯಲು ಪೊಲೀಸರು ವಿಫಲ: ಎಬಿವಿಪಿ ಕಾರ್ಯಕರ್ತರು ಗೃಹ ಸಚಿವರಿಗೆ ಮನವಿ ಪತ್ರ ನೀಡಿ ಮೌನ ಪ್ರತಿಭಟನೆ ನಡೆಸಲು ಬಂದಿದ್ದರು. ಈ ವೇಳೆ ಗೃಹ ಸಚಿವರ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಏಕಾಏಕಿ ಮನೆ ಆವರಣಕ್ಕೆ ನುಗ್ಗಿದ್ದಾರೆ. ಸಚಿವರ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡುವಲ್ಲಿ ಸ್ಥಳೀಯ ಪೊಲೀಸರು ವಿಫಲರಾಗಿದ್ದಾರೆ. ಈ ಸಂಬಂಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.

ಸಚಿವರು, ಶಾಸಕರ ಮನೆಗೆ ಭದ್ರತೆ: ಎಬಿವಿಪಿ ಕಾರ್ಯಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ ಬೆನ್ನಲ್ಲೇ ನಗರದಲ್ಲಿ ನೆಲೆಸಿರುವ ಸಚಿವರು, ಬಿಜೆಪಿ ಶಾಸಕರು, ಸಂಸದರ ನಿವಾಸಕ್ಕೆ ಪೊಲೀಸರ ಭದ್ರತೆ ನೀಡಲಾಗಿದೆ. ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿಯೂ ಹೆಚ್ಚಿನ ಪೊಲೀಸ್‌ ಬಂದೋಬಸ್‌್ತ ಏರ್ಪಡಿಸಲಾಗಿದೆ.

click me!