
ಬೆಂಗಳೂರು (11): ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ತೃತೀಯ ಭಾಷೆ ಮತ್ತು ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು (ಎನ್ಎಸ್‌ಕ್ಯೂಎಫ್) ವಿಷಯಗಳಿಗೆ ಪಾಸ್-ಫೇಲ್ ಪದ್ಧತಿ ಕೈಬಿಟ್ಟು ಮೂರು ಗ್ರೇಡ್ ಪದ್ಧತಿ ಜಾರಿಗೊಳಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶುಕ್ರವಾರ ಕರಡು ಅಧಿಸೂಚನೆ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲವಕಾಶ ನೀಡಿದೆ.
ತೃತೀಯ ಭಾಷೆ ಹಾಗೂ ಎನ್‌ಎಸ್‌ಕ್ಯೂಎಫ್ ನಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳ ಆಧಾರದ ಮೇಲೆ ಎ,ಬಿ,ಸಿ ಶ್ರೇಣಿಗಳನ್ನು ನೀಡಲಾಗುತ್ತದೆ. ಅದರಂತೆ, ಈ ವಿಷಯದಲ್ಲಿ ಶೇ.80 ರಿಂದ ಶೇ.100 ಅಂಕ ಪಡೆದರೆ ‘ಎ‘ ಶ್ರೇಣಿ, ಶೇ.50 ರಿಂದ ಶೇ.79ರವರೆಗೆ ‘ಬಿ’ ಮತ್ತು ಶೇ.49 ರವರೆಗೆ ‘ಸಿ’ ಶ್ರೇಣಿ ನೀಡಲಾಗುವುದು ಎಂದು ತಿಳಿಸಲಾಗಿದೆ. ಹಾಗೆಯೇ ಈ ಎಲ್ಲಾ ವಿಷಯಗಳ ಶ್ರೇಣಿಯನ್ನು ಅಂಕಪಟ್ಟಿಯಲ್ಲಿ ಹೆಚ್ಚುವರಿ ವಿಷಯಗಳಾಗಿ ನಮೂದಿಸಬೇಕು ಮತ್ತು ಇದನ್ನು ಉತ್ತೀರ್ಣಕ್ಕೆ ಪರಿಗಣಿಸುವುದಿಲ್ಲ. ಇದು 2025-26ನೇ ಸಾಲಿನ ಎಸ್ಎಸ್ ಎಲ್ ಸಿ ಪರೀಕ್ಷೆಯಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉಳಿದ ಐದು ವಿಷಯಗಳಲ್ಲಿ ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆಯಲ್ಲಿ ಒಟ್ಟಾರೆಯಾಗಿ ಶೇ.33 ಅಂಕ ಪಡೆಯಬೇಕು. ಐದೂ ವಿಷಯಗಳ ಒಟ್ಟು 525 ಅಂಕಗಳಲ್ಲಿ ಕನಿಷ್ಟ 173 ಅಂಕ ಗಳಿಸುವುದರೊಂದಿಗೆ ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಪ್ರತಿ ವಿಷಯದಲ್ಲಿ ಕನಿಷ್ಠ 30 ಪ್ರತಿಶತ ಅಂಕಗಳನ್ನು ಗಳಿಸಿದರೆ ಅಂಥ ಅಭ್ಯರ್ಥಿಗಳನ್ನು ಉತ್ತೀರ್ಣರಾಗಿದ್ದಾರೆಂದು ಘೋಷಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕರಡು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ