
ಬೆಂಗಳೂರು (ಅ.31) : ನಾಡಿನ ಖ್ಯಾತ ಸಾಹಿತಿಗಳು ಬರೆದ ಕೃತಿಗಳ ವಿವರ, ಆಯ್ದ ಕೃತಿಗಳ ಅಂದವಾದ ಮುಖಪುಟ, ಸಾಹಿತಿಗಳ ಕುರಿತ ಮಾಹಿತಿಗಳನ್ನು ಒಳಗೊಂಡ ವಿಶಿಷ್ಟರೀತಿಯ ಚಿತ್ರ ಪ್ರದರ್ಶನ ನಗರದ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವಲ್ಡ್‌ರ್ ಕಲ್ಚರ್‌ನಲ್ಲಿ ಆರಂಭವಾಗಿದೆ. ಕುವೆಂಪು, ಪುತಿನ, ಜಿ.ಎಸ್.ಶಿವರುದ್ರಪ್ಪ, ಚಂದ್ರಶೇಖರ್ ಕಂಬಾರ, ಯು.ಆರ್.ಅನಂತಮೂರ್ತಿ, ಬರಗೂರು ರಾಮಚಂದ್ರಪ್ಪ, ಜಯಂತ್ ಕಾಯ್ಕಿಣಿ, ಸಾಯಿಸುತೆ, ಸುಧಾಮೂರ್ತಿ ಸೇರಿದಂತೆ 61 ಸಾಹಿತಿಗಳ ಕೃತಿಗಳು, ಹಲವು ದಶಕಗಳ ಹಿಂದಿನ ಕೃತಿಗಳ ಬಣ್ಣದ ಮುಖಪುಟಗಳನ್ನು ವೀಕ್ಷಿಸಬಹುದಾಗಿದೆ.
ಕನ್ನಡ ಬಲ್ಲವರನ್ನೆಲ್ಲ ಕನ್ನಡಿಗ ಅಂತ ಪರಿಗಣಿಸಿ: ಕಸಾಪ
ಚಿತ್ರಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ, ಕಾದಂಬರಿಗಳ ಪರಿಚಯ ನೀಡುವ ವಿಶಿಷ್ಟರೀತಿಯ ಈ ಚಿತ್ರ ಪ್ರದರ್ಶನ ಅಪರೂಪದ್ದಾಗಿದೆ. ಕಾದಂಬರಿ ಮತ್ತು ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಲು ಯುವ ಜನರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ನಾಗಮಂಡಲ, ಚಿಗುರಿದ ಕನಸು, ಜನುಮದ ಜೋಡಿ ಮತ್ತಿತರ ಸಿನಿಮಾಗಳ ಮೂಲ ಕಾದಂಬರಿಗಳ ಮುಖ ಪುಟವನ್ನು ನೋಡಿ ಖುಷಿಯಾಯಿತು. ಇಂತಹ ಒಳ್ಳೆಯ ಕೆಲಸ ಮಾಡಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವಲ್ಡ್‌ರ್ ಕಲ್ಚರ್‌ನ ಕಾರ್ಯ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು.
ಸಾಹಿತ್ಯ ಮತ್ತು ಸಾಹಿತಿಗಳನ್ನು ಕಾಣಿಸುವ ಕ್ರಿಯೆಯನ್ನು ಇಲ್ಲಿ ಮಾಡಲಾಗಿದೆ. ಈ ಪ್ರದರ್ಶನವನ್ನು ನೋಡಿ ಸ್ಫೂರ್ತಿಗೊಂಡು ನಾಡಿನ ಹಲವೆಡೆ ಇಂತಹ ಪ್ರದರ್ಶನಗಳು ಆಯೋಜನೆಯಾಗುವ ವಿಶ್ವಾಸವಿದೆ. ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವ ಕನ್ನಡ ಸಮ್ಮೇಳನಗಳಂತಹ ಬೃಹತ್ ವೇದಿಕೆಯನ್ನೂ ಇದಕ್ಕೆ ಬಳಸಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
ಲೇಖಕಿಯರಾದ ಡಾ ವಿಜಯಲಕ್ಷ್ಮಿ ಬಾಳೇಕುಂದ್ರಿ, ಡಾ ಟಿ.ಎಸ್.ಸತ್ಯವತಿ, ಚಿತ್ರ ಕಲಾವಿದ ಪ.ಸ.ಕುಮಾರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವಲ್ಡ್‌ರ್ ಕಲ್ಚರ್‌ನ ಕಾರ್ಯದರ್ಶಿ ಅರಕಲಿ ವೆಂಕಟೇಶ್, ಕಾರ್ಯಕಾರಿ ಸದಸ್ಯ ಕೆ.ಎಸ್.ಸತೀಶ್ ಹಾಜರಿದ್ದರು.
ಹಾವೇರಿ: 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ
ಪ್ರದರ್ಶನದಲ್ಲಿ ಏನಿದೆ
ಕುವೆಂಪು, ಪುತಿನ, ವಿ.ಕೃ.ಗೋಕಾಕ್, ಜಿ.ಎಸ್.ಶಿವರುದ್ರಪ್ಪ, ಕೆ.ಎಸ್.ನರಸಿಂಹಸ್ವಾಮಿ, ತರಾಸು, ಅನಕೃ, ಡಿ.ವಿ.ಗುಂಡಪ್ಪ, ಶಿವರಾಮ ಕಾರಂತ, ದ.ರಾ.ಬೇಂದ್ರೆ, ಚಂದ್ರಶೇಖರ ಕಂಬಾರ, ಎಚ್.ಎಸ್.ವೆಂಕಟೇಶಮೂರ್ತಿ, ಎಸ್.ಎಲ್.ಭೈರಪ್ಪ, ಸಾಯಿಸುತೆ, ಬೀಚಿ, ಚಂದ್ರಶೇಖರ ಪಾಟೀಲ, ಅನುಪಮಾ ನಿರಂಜನ, ಬರಗೂರು ರಾಮಚಂದ್ರಪ್ಪ, ಯು.ಆರ್.ಅನಂತಮೂರ್ತಿ, ಯಶವಂತ ಚಿತ್ತಾಲ, ನಿಸಾರ್ ಅಹಮದ್, ಜಯಂತ ಕಾಯ್ಕಿಣಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಶತಾವಧಾನಿ ಆರ್.ಗಣೇಶ್, ಸುಧಾ ಮೂರ್ತಿ ಸೇರಿದಂತೆ ಹಲವು ಸಾಹಿತಿಗಳ ಕೃತಿಗಳ ಮುಖಪುಟ, ವಿವರಗಳ ಪ್ರದರ್ಶನವಿದೆ. ನ.10 ರವರೆಗೆ ಬೆಳಗ್ಗೆ 10ರಿಂದ ಸಂಜೆ 7ರವರೆಗೂ ಪ್ರದರ್ಶನ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ