ನ್ಯಾಯಾಲಯಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ ಭಾರೀ ಸಂಖ್ಯೆಯಲ್ಲಿ ಬಾಕಿ ಉಳಿದಿವೆ. ಈ ದಿಸೆಯಲ್ಲಿ ನ್ಯಾಯಾಲಯಗಳು ಸಹಕಾರ ನೀಡಬೇಕು ಎಂದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಸುವರ್ಣ ವಿಧಾನಪರಿಷತ್ (ಡಿ.14): ನ್ಯಾಯಾಲಯಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ ಭಾರೀ ಸಂಖ್ಯೆಯಲ್ಲಿ ಬಾಕಿ ಉಳಿದಿವೆ. ಈ ದಿಸೆಯಲ್ಲಿ ನ್ಯಾಯಾಲಯಗಳು ಸಹಕಾರ ನೀಡಬೇಕು ಎಂದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಕಾಂಗ್ರೆಸ್‌ನ ಎಸ್.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ವರ್ಷ ದಾಖಲಾದ ಪ್ರಕರಣ, ಇತ್ಯರ್ಥವಾದ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಅಂತರವಿದೆ, ಪೋಸ್ಕೋ ಪ್ರಕರಣದಲ್ಲಿ ಶಿಕ್ಷೆ ನೀಡಿದ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎದುರಿಸುತ್ತಿರುವ ಪೋಸ್ಕೋ ಪ್ರಕರಣದ ವಿಚಾರಣೆ ಐದು ಬಾರಿ ಮುಂದೂಡಿಕೆಯಾಗಿದೆ. ನಿಗದಿತ ಅವಧಿಯೊಳಗೆ ಪ್ರಕರಣ ಇತ್ಯರ್ಥ ಪಡಿಸಬೇಕೆಂಬ ನಿಯಮವಿದ್ದರೂ ತಡವಾಗಿದೆ ಎಂದರು.
5 ಲಕ್ಷ ಕ್ಯಾಮೆರಾ ಅಳವಡಿಕೆ: ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ ತಡೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ, ರಾಜ್ಯಾದ್ಯಂತ ಸಾರ್ವಜನಿಕ ಸುರಕ್ಷತೆಗಾಗಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು. ಹೆಣ್ಣು ಮಕ್ಕಳು ಕೆಲಸ ಮಾಡುವ ಸ್ಥಳ ಹಾಗೂ ಮಕ್ಕಳು ಇರುವ ಕಡೆ ವಿಶೇಷ ಕ್ರಮ ಕೈಗೊಳ್ಳಲಾಗಿದೆ, ಅವರಿಗಾಗಿ ಸಹಾಯವಾಣಿ ವ್ಯವಸ್ಥೆ ಮಾಡಲಾಗಿದೆ ಎಂದರು.ಇದಕ್ಕೂ ಮುನ್ನ ಮಾತನಾಡಿದ ಎಸ್.ರವಿ ಕಳೆದ ಮೂರು ವರ್ಷದಲ್ಲಿ 1673 ಅತ್ಯಾಚಾರ ಪ್ರಕರಣ ದಾಖಲಾಗಿದ್ದರೂ ಶಿಕ್ಷೆಯ ಪ್ರಮಾಣ ಶೆ.0.36 ರಷ್ಟು ಇದೆ.
ಕೊಳವೆಬಾವಿ ಮುಚ್ಚದಿದ್ದರೆ ಶಿಕ್ಷೆ ಸೇರಿ 11 ವಿಧೇಯಕ: ಬೈಕ್, ಕಾರಿಗೆ ಹೆಚ್ಚುವರಿ ಕರ
ಈ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತನೆ ಮಾಡಬೇಕಾಗುತ್ತದೆ. ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ. ಇದಕ್ಕೆ ತನಿಖೆಯ ವಿಧಾನದ ವೈಫಲ್ಯವೇ, ಸಾಕ್ಷಿ ಕ್ರೋಡೀಕರಿಸಿ ನ್ಯಾಯದಾನ ಕಲ್ಪಿಸುವಲ್ಲಿ ಆಗಿರುವ ವಿಫಲತೆಯೇ ಎಂದು ಪ್ರಶ್ನಿಸಿದ ಅವರು, ರಾಜಕೀಯವಾಗಿ ಪ್ರಭಾವಶಾಲಿಯಾಗಿರುವವರು ಪ್ರಕರಣದಿಂದ ಹೊರಗುಳಿಯುವಂತಹ ಘಟನೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ವಿಶೇಷ ತನಿಖಾ ತಂಡ ಅಥವಾ ಬೇರೆ ಮಾರ್ಗ ಕಂಡು ಕೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.
ಬಿಎಸ್‌ವೈ ಹೆಸರು ಪ್ರಸ್ತಾಪಕ್ಕೆ ಆಕ್ಷೇಪ: ಗೃಹ ಸಚಿವ ಡಾ.ಪರಮೇಶ್ವರ್ ಉತ್ತರ ನೀಡುವ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಎದುರಿಸುತ್ತಿರುವ ಪೋಸ್ಕೋ ಪ್ರಕರಣ ಐದಾರು ಬಾರಿ ಮುಂದೂಡಿಕೆಯಾಗಿದೆ, ರಾಜಕೀಯ ಪ್ರಭಾವವಿರುವವರು ಇಂತಹ ಕೃತ್ಯ ಎಸಗಿದ್ದಾರೆ ಎಂದು ಹೇಳಿದ ಮಾತಿಗೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್‌ನ ಬೋಜೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣ ಮುಂದೂಡಿಕೆ ವಿಚಾರದಲ್ಲಿ ಯಡಿಯೂರಪ್ಪ ಅವರ ಹೆಸರು ಉಲ್ಲೇಖಿಸುವುದು ಸರಿಯಲ್ಲ. ಮುಂದೂಡಿಕೆ ಮಾಡಿರುವ ಕೋರ್ಟ್ ನಿರ್ಧಾರದ ಬಗ್ಗೆ ಮಾತನಾಡುವುದು ಸರಿಯಲ್ಲ. ಹಾಗಾಗಿ ಕಡತದಿಂದ ಯಡಿಯೂರಪ್ಪ ಅವರ ಹೆಸರು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ಕೋವಿಡ್ ವೇಳೆ ಕೋರ್ಟ್ ಆದೇಶವಿದ್ದರೂ ಖಾಸಗಿ ಶಾಲೆ ಶುಲ್ಕ ಕಡಿತ ಬದಲು ಹೆಚ್ಚುವರಿ ವಸೂಲಿ
ಆದರೆ ಈ ಮಾತನ್ನು ಒಪ್ಪದ ಡಾ.ಪರಮೇಶ್ವರ್, ಇಡೀ ಜಗತ್ತಿಗೆ ಗೊತ್ತಿರುವ ವಿಷಯವನ್ನು ಸದನದಲ್ಲಿ ಹೇಳಿದ್ದೇನೆ, ಹೊಸದೇನೂ ಅಲ್ಲ ಎಂದರೆ, ಕಾಂಗ್ರೆಸ್‌ನ ಎಸ್.ರವಿ ಅವರು, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದು ಯಾಕೆ ಎಂದು ವ್ಯಂಗ್ಯವಾಡಿದರು. ಕೊನೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದನದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳಲು ಆಗದವರ ಹೆಸರು ಉಲ್ಲೇಖಿಸಿದ್ದರೆ ಅದನ್ನು ಪರಿಶೀಲಿಸಿ ಕಡತದಿಂದ ತೆಗೆದು ಹಾಕಲಾಗುವುದು ಎಂದರು.