ಕೋವಿಡ್ ವೇಳೆ ಕೋರ್ಟ್ ಆದೇಶವಿದ್ದರೂ ಖಾಸಗಿ ಶಾಲೆ ಶುಲ್ಕ ಕಡಿತ ಬದಲು ಹೆಚ್ಚುವರಿ ವಸೂಲಿ
ಕೋವಿಡ್ ಅವಧಿಯಲ್ಲಿ (2020-21)ಶಾಲಾ ಶುಲ್ಕ ಕಡಿತಗೊಳಿಸಬೇಕು ಎಂಬ ಹೈಕೋರ್ಟ್ ನಿರ್ದೇಶನ ಉಲ್ಲಂಘಿಸಿರುವ ರಾಜ್ಯದ ಖಾಸಗಿ ಅನುದಾನರಹಿತ ಶಾಲೆಗಳು 345 ಕೋಟಿ ರು. ನಷ್ಟು ಹೆಚ್ಚುವರಿ ಶುಲ್ಕ ವಸೂಲಿ ಮಾಡಿವೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ.
ಸುವರ್ಣ ವಿಧಾನಸಭೆ (ಡಿ.13): ಕೋವಿಡ್ ಅವಧಿಯಲ್ಲಿ (2020-21)ಶಾಲಾ ಶುಲ್ಕ ಕಡಿತಗೊಳಿಸಬೇಕು ಎಂಬ ಹೈಕೋರ್ಟ್ ನಿರ್ದೇಶನ ಉಲ್ಲಂಘಿಸಿರುವ ರಾಜ್ಯದ ಖಾಸಗಿ ಅನುದಾನರಹಿತ ಶಾಲೆಗಳು 345 ಕೋಟಿ ರು. ನಷ್ಟು ಹೆಚ್ಚುವರಿ ಶುಲ್ಕ ವಸೂಲಿ ಮಾಡಿವೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ಭಾರತ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು (ಸಿಎಜಿ) ಸಿದ್ಧಪಡಿಸಿರುವ ಕರ್ನಾಟಕ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಕುರಿತ (2024ರ ವರದಿ ಸಂಖ್ಯೆ 06) ವರದಿಯನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಈ ವರದಿಯಲ್ಲಿ ಪ್ರಮುಖವಾಗಿ ಕೋವಿಡ್ 19 ಅವಧಿಯಲ್ಲಿ ಪೋಷಕರು ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರಿಂದ ಶಾಲಾ ಶುಲ್ಕ ಕಡಿತಗೊಳಿಸಲು ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಈ ನಿರ್ದೇಶನವನ್ನು ಜಾರಿಗೊಳಿಸದ ಕಾರಣ 2020-21ರಲ್ಲಿ ಆರ್‌ಟಿಇಯೇತರ ವಿದ್ಯಾರ್ಥಿಗಳಿಂದ ಅನುದಾನರಹಿತ ಖಾಸಗಿ ಶಾಲೆಗಳು 345.80 ಕೋಟಿ ರು. ಹೆಚ್ಚುವರಿ ಶುಲ್ಕ ಸಂಗ್ರಹಿಸಿವೆ ಎಂದು ತಿಳಿಸಿದೆ. ಇನ್ನು ಆರ್‌ಟಿಇ ವಿದ್ಯಾರ್ಥಿಗಳಿಗೆ ಸಂಬಂಧಿಸಿ ಈ ಖಾಸಗಿ ಶಾಲೆಗಳು ಸರ್ಕಾರದಿಂದ ಕ್ಲೈಂ ಮಾಡಿದ 7.07 ಕೋಟಿ ರು. ಹೆಚ್ಚುವರಿ ಶುಲ್ಕ ಕೂಡ ಸರ್ಕಾರ ಪರಿಶೀಲಿಸದೆ ಮರುಪಾವತಿ ಮಾಡಿದೆ. ಇದರಿಂದ ಸರ್ಕಾರಕ್ಕೆ ಇಷ್ಟು ಹಣ ಹೊರೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉಳಿದಂತೆ, ಶಿಕ್ಷಣ ಇಲಾಖೆಯು 2017-18ರಿಂದ 2021021ರ ಅವಧಿಯಲ್ಲಿ ಒಂದು ದೃಷ್ಟಿಕೋನದ ಯೋಜನೆ ಸಿದ್ಧಪಡಿಸಿಲ್ಲ. ಇದರ ಪರಿಣಾಮ ವಾರ್ಷಿಕ ಕಾರ್ಯ ಯೋಜನೆ ಮತ್ತು ಆಯವ್ಯಯ ತಯಾರಿಕೆ ಮೇಲೆ ಪರಿಣಾಮ ಬೀರಿದೆ. ರಾಜ್ಯದ 4.87 ಲಕ್ಷಕ್ಕೂ ಹೆಚ್ಚು ವಾಸಸ್ಥಳಗಳ ಪೈಕಿ 1.32 ವಾಸಸ್ಥಳಗಳಲ್ಲಿ ಒಂದು ಕಿ.ಮೀ. ವ್ಯಾಕ್ತಿಯೊಳಗೆ ಕಿರಿಯ ಪ್ರಾಥಮಿಕ ಶಾಲೆಗಳೇ ಇಲ್ಲ. ಇಲಾಖೆಯ ಹಲವಾರು ಶಾಲೆಗಳಲ್ಲಿ ಸಾಕಷ್ಟು ನಿರ್ದಿಷ್ಟ ವಿಷಯಗಳ ಶಿಕ್ಷಕರೂ ಲಭ್ಯವಿಲ್ಲ. ಹಲವು ವರ್ಷಗಳಿಂದ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚುತ್ತಿದ್ದು, ಶಿಕ್ಷಕರ ಕೊರತೆ ತೀವ್ರವಾಗಿದೆ ಎಂದು ಸಿಎಜಿ ವರದಿ ಹೇಳಿದೆ.
ಮೀಸಲಾತಿ ಒದಗಿಸಿ ಕೊಟ್ರೆ ಸಚಿವೆ ಲಕ್ಷ್ಮೀ ಹೆಬಾಳ್ಕರ್‌ಗೆ 1 ಕೆಜಿ ಬಂಗಾರ: ಮುರುಗೇಶ ನಿರಾಣಿ
ಶಾಲೆಯಿಂದ ಹೊರಗುಳಿದ ಮಕ್ಕಳು, ವಲಸೆ ಬಂದ ಕುಟುಂಬಗಳ ಮಕ್ಕಳನ್ನು ಗುರುತಿಸುವುದು, ಶಾಲೆಗೆ ದಾಖಲು ಮಾಡುವ ಪ್ರಯತ್ನಗಳು ಸಮರ್ಪಕವಾಗಿ ನಡೆದಿಲ್ಲ. ರಾಜ್ಯದಲ್ಲಿ ಅಂಗವಿಕಲ ಮಕ್ಕಳ ಶಿಕ್ಷಣದ ಕರಡು ನೀತಿ ಅಂತಿಮಗೊಳಿಸುವಲ್ಲಿ ವಿಳಂಬವಾಗುತ್ತಿರುವುದು ಶಿಕ್ಷಣ ಕಾರ್ಯಕ್ರಮಗಳ ಅನುಷ್ಠಾನದ ಮೇಲೆ ಪರಿಣಾಮ ಬೀರಿದೆ. 2017-18ರಿಂದ 2021-22ರಅವಧಿಯಲ್ಲಿ ಶಾಲಾ ಮಾನ್ಯತೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ನಡೆದಿಲ್ಲ. ಪರಿಣಾಮ ಮಾನ್ಯತೆಯ ನವೀಕರಣವಿಲ್ಲದೆ ಹಲವು ಶಾಲೆಗಳು ಕಾರ್ಯನಿರ್ವಹಿಸಿರುವುದು ಕಂಡುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.