ನಿ.ಏರ್ ಕಮೋಡೋರ್ ಚಂದ್ರಶೇಖರ್‌ಗೆ ಭಾವಪೂರ್ಣ ವಿದಾಯ

Kannadaprabha News   | Kannada Prabha
Published : Aug 31, 2025, 07:27 AM IST
MK Chandrasekhar

ಸಾರಾಂಶ

ಭಾರತೀಯ ವಾಯುಸೇನೆಯಲ್ಲಿ ಸುದೀರ್ಘ 30 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ವಯೋ ಸಹಜ ಅನಾರೋಗ್ಯದಿಂದಾಗಿ ಶುಕ್ರವಾರ ನಿಧನರಾದ ನಿವೃತ್ತ ಏರ್ ಕಮೋಡೋರ್ ಎಂ.ಕೆ.ಚಂದ್ರಶೇಖರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶನಿವಾರ ಸೇನೆ ಹಾಗೂ ಸಕಲ ಸರ್ಕಾರಿ ಗೌರವದೊಂದಿಗೆ ನಗರದಲ್ಲಿ ನೆರವೇರಿತು.

 ಬೆಂಗಳೂರು :  ಭಾರತೀಯ ವಾಯುಸೇನೆಯಲ್ಲಿ ಸುದೀರ್ಘ 30 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ವಯೋ ಸಹಜ ಅನಾರೋಗ್ಯದಿಂದಾಗಿ ಶುಕ್ರವಾರ ನಿಧನರಾದ ನಿವೃತ್ತ ಏರ್ ಕಮೋಡೋರ್ ಎಂ.ಕೆ.ಚಂದ್ರಶೇಖರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶನಿವಾರ ಸೇನೆ ಹಾಗೂ ಸಕಲ ಸರ್ಕಾರಿ ಗೌರವದೊಂದಿಗೆ ನಗರದಲ್ಲಿ ನೆರವೇರಿತು.

ಇದಕ್ಕೂ ಮುನ್ನ ಅಗಲಿದ ಸೇನಾಧಿಕಾರಿಯ ಅಂತಿಮ ದರ್ಶನಕ್ಕೆ ಎಚ್ಎಎಲ್ ಬಳಿಯ ಯಮಲೂರಿನ ಅವರ ನಿವಾಸದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇಂದ್ರ ಸಚಿವ ಕಿರಣ್ ರಿಜಿಜು, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಶಾಸಕ ಸತೀಶ್ ರೆಡ್ಡಿ ಸೇರಿ ಹಲವು ರಾಜಕೀಯ ನಾಯಕರು, ಗಣ್ಯರು, ಸೇನೆಯ ಹಾಲಿ ಮತ್ತು ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿ, ಸ್ನೇಹಿತರು, ಸಂಬಂಧಿಕರು ಅಂತಿಮ ದರ್ಶನ ಪಡೆದರು. ಈ ವೇಳೆ ಎಂ.ಕೆ.ಚಂದ್ರಶೇಖರ್ ಅವರ ನಿಧನಕ್ಕೆ ಕಂಬನಿ ಮಿಡಿದರು. ಅವರ ಸೇವೆ, ಒಡನಾಟ ಮೆಲುಕು ಹಾಕಿದರು. ಚಂದ್ರಶೇಖರ್‌ರ ಧರ್ಮಪತ್ನಿ ಜಯ ಚಂದ್ರಶೇಖರ್, ಪುತ್ರ, ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ತರುವಾಯ ಮಧ್ಯಾಹ್ನ 3 ಗಂಟೆಗೆ ನಗರದ ಕೂಡ್ಲು ಗೇಟ್ ಬಳಿ ಇರುವ ಬಿಬಿಎಂಪಿ ಚಿತಾಗಾರದಲ್ಲಿ ಪುತ್ರ ರಾಜೀವ್ ಅವರು ಸಕಲ ವಿಧಿ-ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಿದರು. ಈ ವೇಳೆ ಕುಟುಂಬದ ಸದಸ್ಯರು, ಸಂಬಂಧಿಕರು, ಆಪ್ತರು, ಸ್ನೇಹಿತ ವರ್ಗದವರು ಉಪಸ್ಥಿತರಿದ್ದರು.

ಗಣ್ಯರಿಂದ ಅಂತಿಮ ದರ್ಶನ

ಎಂ.ಕೆ. ಚಂದ್ರಶೇಖರ್ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಚಂದ್ರಶೇಖರ್ ಅವರು ನಗರದಲ್ಲಿ ರಾಷ್ಟ್ರೀಯ ಸೈನಿಕ ಸ್ಮಾರಕ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅಂತಹ ವಿಶೇಷ ವ್ಯಕ್ತಿಯನ್ನು ಕಳೆದುಕೊಂಡಿರುವ ಕುಟುಂಬಸ್ಥರು, ಅಭಿಮಾನಿಗಳಿಗೆ ಭಗವಂತ ಶಕ್ತಿ ನೀಡಲಿ ಎಂದರು.

ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಮಾತನಾಡಿ, ಚಂದ್ರಶೇಖರ್‌ ಅವರು ಜಕ್ಕೂರಿನ ವೈಮಾನಿಕ ಕೇಂದ್ರದ ನಿರ್ದೇಶಕನಾಗಿದ್ದಾಗ ಅನೇಕ ಬಾರಿ ಭೇಟಿಯಾಗಿದ್ದೆ. ಅವರ ಸೌಜನ್ಯಯುತ ಮಾತುಗಳು, ಆಳವಾದ ಜ್ಞಾನ ನನಗೆ ಇಷ್ಟವಾಯಿತು ಎಂದರು.

ಸಂಸದ ತೇಜಸ್ವಿ ಸೂರ್ಯ, ಲೇಹ್, ತಂಬರಮ್ ಮತ್ತು ಜೋಹ್ರತ್ ಪ್ರದೇಶಗಳನ್ನು ನಿಭಾಯಿಸಿದ್ದ ಇವರು, ಅನೇಕ ಪೈಲಟ್‌ಗಳಿಗೆ ತರಬೇತಿ ನೀಡಿದ್ದಾರೆ. ವಿಶಿಷ್ಟ ಸೇವೆಗಾಗಿ 1964ರಲ್ಲಿ ವಿಶಿಷ್ಟ ಸೇವಾ ಪದಕ ಮತ್ತು 1970ರಲ್ಲಿ ವಿಶಿಷ್ಟ ಪದಕದ ಗೌರವಕ್ಕೆ ಭಾಜನರಾಗಿದ್ದಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಎಂ.ಕೆ.ಚಂದ್ರಶೇಖರ್ ಅವರ ನಿಧನಕ್ಕೆ ಸಂತಾಪ ಕೋರುವೆ. 1962ರ ಚೀನಾ ಜತೆಗಿನ ಸಂಘರ್ಷದ ಸಮಯದಲ್ಲಿ ಡಕೋಟಾ ಡಿಸಿ-3 ಯುದ್ಧ ವಿಮಾನದಲ್ಲಿ ಸೈನಿಕರನ್ನು ಏರ್‌ಲಿಫ್ಟ್‌ ಮಾಡಿದ್ದ ಅವರ ಸಾರ್ಥಕ ಸೇವೆ ಸದಾ ಸ್ಮರಣೀಯ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದರು.

ಸೇನೆಯಿಂದ ಗೌರವ

ಎಂ.ಕೆ. ಚಂದ್ರಶೇಖರ್ ಅವರ ನಿವಾಸದಲ್ಲಿ ಅವರ ಪಾರ್ಥಿವ ಶರೀರಕ್ಕೆ ಸೇನಾ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಷ್ಟ್ರಧ್ವಜ ಸಹಿತ ಸೇನೆಯ ಧ್ವಜವನ್ನು ಹೊದಿಸುವ ಮೂಲಕ ಗೌರವ, ವಂದನೆ ಸಲ್ಲಿಸಿದರು. ಸೇನೆಯ ಹಾಲಿ ಮತ್ತು ನಿವೃತ್ತ ಅಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.

ದೇಶಾದ್ಯಂತ ಗಣ್ಯರ ಸಂತಾಪ

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ, ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ, ಎಚ್‌.ಡಿ.ಕುಮಾರಸ್ವಾಮಿ, ಧರ್ಮೇಂದ್ರ ಪ್ರಧಾನ್, ಗಜೇಂದ್ರ ಸಿಂಗ್ ಶೇಖಾವತ್, ಸರ್ಬಾನಂದ ಸೋನೋವಾಲಾ, ಜ್ಯೋತಿರಾದಿತ್ಯ ಸಿಂಧ್ಯ, ಶೋಭ ಕರಂದ್ಲಾಜೆ, ವಿ.ಸೋಮಣ್ಣ, ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಿಲ್ ಕೆ. ಆ್ಯಂಟನಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ. ಜಗದೀಶ್ ಶೆಟ್ಟರ್, ಒಡಿಶಾ ಡಿಸಿಎಂ ಪ್ರವತಿ ಪರಿದಾ ಸೇರಿ ದೇಶ ಮತ್ತು ರಾಜ್ಯದ ಅನೇಕ ಗಣ್ಯರು ಎಂ.ಕೆ. ಚಂದ್ರಶೇಖರ್ ಅವರ ನಿಧನಕ್ಕೆ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.

ಜಾಲತಾಣಗಳಲ್ಲಿ ಸಂತಾಪ

ನಿವೃತ್ತ ಕರ್ನಲ್ ಸಂತಾಪ

ಎಂ.ಕೆ. ಚಂದ್ರಶೇಖರ್ ಭಾರತೀಯ ಸೇನೆಯ ಅತ್ಯಂತ ವಿಶೇಷವಾದ ವ್ಯಕ್ತಿಯಾಗಿದ್ದರು. ಪೈಲಟ್ ಆಗಿದ್ದ ಅವರು, ಸೇನಾ ಕಾರ್ಯಾಚರಣೆ ಕುರಿತು ಅಪಾರವಾದ ಅನುಭವ ಹೊಂದಿದ್ದರು ಎಂದು ನಿವೃತ್ತ ಕರ್ನಲ್ ಎಸ್. ದಿನ್ನಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿ ಕಂಬನಿ

ಎಂ.ಕೆ. ಚಂದ್ರಶೇಖರ್ ನಿಧನದ ಸುದ್ದಿ ತಿಳಿದು ಅತೀವ ನೋವಾಗಿದೆ. ಭಾರತೀಯ ವಾಯುಸೇನೆಯ ಅಧಿಕಾರಿಯಾಗಿದ್ದು ದೇಶಕ್ಕೆ ಅವರು ಸಲ್ಲಿಸಿದ ಸೇವೆ ಸದಾ ಕಾಲ ನೆನಪಿನಲ್ಲಿ ಇರುತ್ತದೆ. ಅಗಲಿದ ಅಧಿಕಾರಿ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ಸ್ನೇಹಿತ ಮತ್ತು ಪಕ್ಷದ ಹಿರಿಯ ನಾಯಕರಾದ ರಾಜೀವ್ ಚಂದ್ರಶೇಖರ್ ಅವರ ತಂದೆ ಎ.ಕೆ.ಚಂದ್ರಶೇಖರ್ ಅವರ ನಿಧನಕ್ಕೆ ಸಂತಾಪಗಳು. ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಅವರ ಕುಟುಂಬದವರಿಗೆ ನೀಡಲಿ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಎಂ.ಕೆ.ಚಂದ್ರಶೇಖರ್ ಅವರ ನಿಧನದ ಸುದ್ದಿ ತಿಳಿದು ದುಃಖವಾಗಿದೆ. ದೇಶ ಸೇವೆ, ಸಮಾಜಕ್ಕೆ ಅವರು ನೀಡಿದ ಅವರ ಕೊಡುಗೆಗಳು ಸ್ಮರಣೀಯ. ಕುಟುಂಬ ಸದಸ್ಯರು, ಸ್ನೇಹಿತರು, ಸಂಬಂಧಿಕರಿಗೆ ನೋವು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ