
ಕೊಡಗು (ಮಾ.13) : ಮಳೆಗಾಲ ಆರಂಭವಾಯಿತ್ತೆಂದರೆ ಕೊಡಗಿನಲ್ಲಿ ರಸ್ತೆ ಕುಸಿತ, ಇಲ್ಲವೆ ಬೆಟ್ಟ ಕುಸಿತ ಎನ್ನುವುದು ಕಳೆದ ನಾಲ್ಕೈದು ವರ್ಷಗಳಿಂದ ಸಾಮಾನ್ಯ ವಿಷಯ ಎನ್ನುವಂತೆ ಆಗಿದೆ. ಅದರಲ್ಲೂ ಮೈಸೂರಿನಿಂದ ಮಡಿಕೇರಿ ಮೂಲಕ ಮಾಣಿವರೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಡಿಕೇರಿಯಿಂದ ಸಂಪಾಜೆಯವರೆಗೆ ಪ್ರತೀ ವರ್ಷದ ಮಳೆಗಾಲದಲ್ಲಿ ಹೆದ್ದಾರಿ ಕುಸಿತ ಇಲ್ಲವೆ, ಹೆದ್ದಾರಿ ಮೇಲೆ ಬೆಟ್ಟ ಕುಸಿಯುವುದು ಸಾಮಾನ್ಯವಾಗಿ ಹೋಗಿತ್ತು. ಇದರಿಂದಾಗಿ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಸಂಚಾರ ತೀವ್ರ ದುಸ್ಥರವಾಗಿ ಬಿಡುತಿತ್ತು.
ಮಡಿಕೇರಿಯಿಂದ ಸಂಪಾಜೆವರೆಗೆ 21 ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ಇರುವ ಗುಡ್ಡಗಳು ಕುಸಿತ್ತಲೇ ಇದ್ದವು. ಇದನ್ನು ಮನಗಂಡ ಅಂದಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಲ್ಲೆಲ್ಲಿ ರಸ್ತೆ ಕುಸಿತ ಅಥವಾ ರಸ್ತೆಯ ಮೇಲೆ ಗುಡ್ಡ ಕುಸಿತಗಳು ನಡೆಯುತ್ತವೆಯೋ ಅಲ್ಲೆಲ್ಲಾ ಹೆದ್ದಾರಿಗೆ ತಡೆಗೋಡೆ ನಿರ್ಮಿಸುವುದಕ್ಕೆ ಯೋಜನೆ ರೂಪಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದರು. ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 21 ಕಡೆಗಳಲ್ಲಿ ತಡೆಗೋಡೆ ನಿರ್ಮಿಸುವುದಕ್ಕೆ ಅನುಮೋದನೆ ನೀಡಿದೆ.
ಇದನ್ನೂ ಓದಿ: Kodagu News: ಕೊಡಗಿನಲ್ಲಿ ಮತ್ತೆ ಚಿಗುರಿದ 'ಏರ್ ಸ್ಟ್ರಿಪ್' ಕನಸು; ಕಾಮಗಾರಿ ಶೀಘ್ರ ಎಂದ ಸಂಸದ ಯದುವೀರ್ ಒಡೆಯರ್!
ಮಳೆಗಾಲದಲ್ಲಿ ಭೂಕುಸಿತದ ಅಪಾಯವಿರುವ 21 ಕಡೆಗಳಲ್ಲಿ ತಡೆಗೋಡೆ ನಿರ್ಮಿಸಬೇಕೆಂಬ ಎಂಜಿನಿಯರಿಂಗ್ ವಿಭಾಗದ ಕೋರಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಅಲ್ಲದೆ 94 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗೆ ಅನುಮೋದನೆ ನೀಡಿದೆ. ಈ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಶುರುವಾಗಿದ್ದು, ಟೆಂಡರ್ ಮುಗಿಯುತ್ತಿದ್ದಂತೆ ಕಾಮಗಾರಿ ನಡೆಯಲಿದೆ. ನಿರೀಕ್ಷೆಯಂತೆ ಕಾಮಗಾರಿ ನಡೆದರೆ ಪ್ರತೀ ವರ್ಷದ ಮಳೆಗಾಲದಲ್ಲಿ ಮಡಿಕೇರಿಯಿಂದ ಮಂಗಳೂರು ಕಡೆಗಿನ ರಸ್ತೆ ಸಂಚಾರಕ್ಕೆ ಎದುರಾಗುತ್ತಿದ್ದ ಸಂಚಾಕಾರ ದೂರವಾಗಲಿದೆ.
ಮಡಿಕೇರಿಯ ಸಂಪಿಗೆ ಕಟ್ಟೆಯಿಂದ ಶುರುವಾಗಿ ಕೆಲವು ಕಡೆಗಳಲ್ಲಿ ಕಿರಿದಾದ ಹೆದ್ದಾರಿಯನ್ನು ವಿಸ್ತರಣೆ ಮಾಡುವುದು ಹಾಗೂ 21 ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಆಗಲಿದೆ. ಇದು ಕೊಡಗಿನ ಜನತೆಗೆ ಅದರಲ್ಲೂ ಮಡಿಕೇರಿಯಿಂದ ಸಂಪಾಜೆವರೆಗೆ ಇರುವ ಹತ್ತಾರು ಗ್ರಾಮಗಳ ಸಾವಿರಾರು ಜನರಿಗೆ ತುಂಬಾ ಅನುಕೂಲ ಆಗಲಿದೆ.
ಈ ಕುರಿತು ಮಾತನಾಡಿರುವ ಸ್ಥಳೀಯರಾದ ರವಿಗೌಡ ಅವರು 2018 ರಲ್ಲಿ ಮೊದಲ ಬಾರಿಗೆ ಎದುರಾದ ಭೂಕುಸಿತದ ಸಂದರ್ಭದಲ್ಲಿ ಮಡಿಕೇರಿಯಿಂದ ಸಂಪಾಜೆವರೆಗೆ ಹಲವಾರು ಕಡೆಗಳಲ್ಲಿ ರಸ್ತೆಯೇ ಇಲ್ಲ ಎನ್ನುವಂತಹ ಸ್ಥಿತಿ ಎದುರಾಗಿತ್ತು. ಅದಾದ ಬಳಿಕವೂ ಪ್ರತೀ ವರ್ಷ ಹೆದ್ದಾರಿ ಕುಸಿಯುವುದು ಮತ್ತು ಹೆದ್ದಾರಿ ಮೇಲೆ ಬೆಟ್ಟ ಕುಸಿಯುವುದು ಸರ್ವೇ ಸಾಮಾನ್ಯವಾಗಿ ಹೋಗಿತ್ತು. ಇದರಿಂದ ಸಾವಿರಾರು ಜನರು ಪಡಬಾರದ ಕಷ್ಟ ಅನುಭವಿಸುತ್ತಿದ್ದರು. ಸ್ಥಳೀಯ ಜನರಲ್ಲದೆ ಮಡಿಕೇರಿ ಸಂಪಾಜೆ ಮಾರ್ಗವಾಗಿ ಮಂಗಳೂರು, ಉಡುಪಿ ಅಥವಾ ಉತ್ತರ ಕನ್ನಡ ಜಿಲ್ಲೆಗಳಿಗೆ ಹೋಗಬೇಕಾದ ಸಾವಿರಾರು ವಾಹನಗಳ ಸವಾರರು ಪರದಾಡುತ್ತಿದ್ದರು. ಅದರಲ್ಲೂ ಯಾರಾದರೂ ತುರ್ತು ಚಿಕಿತ್ಸೆ ಪಡೆಯಲು ಈ ಮಾರ್ಗದ ಮೂಲಕ ಮಂಗಳೂರು ಭಾಗಕ್ಕೆ ಹೋಗಬೇಕೆಂದರೆ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಹೆದ್ದಾರಿ ಕುಸಿಯುವ ಅಥವಾ ಹೆದ್ದಾರಿ ಮೇಲೆ ಬೆಟ್ಟ ಕುಸಿಯುವಂತಹ ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಲು ಮುಂದಾಗಿರುವುದು ಒಳ್ಳೆಯ ವಿಚಾರ. ಆದಷ್ಟು ಶೀಘ್ರವೇ ಕಾಮಗಾರಿ ಆಗಲಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯನವರು ಮಂಡಿಸಿದ್ದು ಅಲ್ಪಸಂಖ್ಯಾತರ ಓಲೈಕೆಯ ಬಜೆಟ್: ಸಂಸದ ಯದುವೀರ್ ಒಡೆಯರ್ ಟೀಕೆ
ಇನ್ನು ಹೆದ್ದಾರಿಗೆ ತಡೆಗೋಡೆ ನಿರ್ಮಿಸಲು ಅನುಮೋದನೆ ದೊರೆತ್ತಿರುವುದು ಒಳ್ಳೆಯ ವಿಚಾರ. ಹಿಂದೆಯೇ ಅಧಿಕಾರಿಗಳು ಈ ಕಾಮಗಾರಿಗೆ ಯೋಜನೆ ರೂಪಿಸಿ ಕೇಂದ್ರಕ್ಕೆ ಕಳುಹಿಸಿದ್ದರು, ಇದೀಗ ನಮ್ಮ ಸಂಸದರು ತಮ್ಮ ಪರಿಶ್ರಮದಿಂದ ಈ ಕಾಮಗಾರಿಗೆ ಅನುಮೋದನೆ ಕೊಡಿಸಿರುವುದು ಒಳ್ಳೆಯ ವಿಚಾರ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ