ಬೆಂಗಳೂರು (ಜು.25): ಪಶು ಸಂಗೋಪನಾ ಇಲಾಖೆ ಹೊಸದಾಗಿ ಆರಂಭಿಸಿದ್ದ ‘ಪಶು ಕಲ್ಯಾಣ ಸಹಾಯವಾಣಿ’ಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಒಂದು ತಿಂಗಳಲ್ಲಿ ಸುಮಾರು ಒಂಬತ್ತು ಸಾವಿರ ಕರೆಗಳು ‘ವಾರ್ ರೂಮ್’ಗೆ ಬಂದಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಪ್ರಾಣಿಗಳ ಆರೋಗ್ಯ ಮತ್ತು ಪಶುವೈದ್ಯಕೀಯ ಸೇವೆಗಳು, ಪಶುಸಂಗೋಪನೆ ಸೇವೆಗಳು, ಪ್ರಾಣಿ ಕಲ್ಯಾಣ ಮತ್ತು ಕ್ರೌರ್ಯ ತಡೆಗಟ್ಟುವಿಕೆ, ಸ್ವಯಂ ಉದ್ಯೋಗದ ಮಾಹಿತಿ ಬಗ್ಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಉತ್ತಮ ಸ್ಪಂದನೆ ದೊರೆತಿದೆ. ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಕಲಬುರಗಿ ಮತ್ತು ತುಮಕೂರು ಜಿಲ್ಲೆಗಳಿಂದ ಹೆಚ್ಚಿನ ಕರೆಗಳು ಬಂದಿವೆ. ಎಲ್ಲ ಕರೆಗಳನ್ನು ವ್ಯವಸ್ಥಿತವಾಗಿ ನಿಭಾಯಿಸಲಾಗಿದೆ. ಇದಲ್ಲದೇ, ಹೊರ ರಾಜ್ಯದಿಂದ ನಮ್ಮ ರಾಜ್ಯದಲ್ಲಿ ಅನುಷ್ಠಾನವಾಗಿರುವ ಯೋಜನೆಗಳು ಮತ್ತು ತಂತ್ರಜ್ಞಾನ ಕುರಿತಾಗಿ ಕರೆಗಳು ಬಂದಿವೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬೆಂಗಳೂರಲ್ಲಿ ಬಿಡಾಡಿ ನಾಯಿಗಳಿಗೆ ಆಶ್ರಯ ಒದಗಿಸುವ ಕುರಿತು ಬಂದಿರುವ ಸುಮಾರು 250 ಕರೆಗಳು ಮಾತ್ರ ಬಾಕಿ ಉಳಿದಿದ್ದು, ಉಳಿದೆಲ್ಲಾ ಕರೆಗಳಿಗೆ ಸಂಪೂರ್ಣವಾಗಿ ಸ್ಪಂದನೆ ನೀಡಲಾಗಿದೆ. ಪ್ರಾಣಿಗಳ ಆರೋಗ್ಯ ಮತ್ತು ಪಶು ವೈದ್ಯಕೀಯ ಸೇವೆಗಳ ಬಗ್ಗೆ 2540 ಕರೆಗಳು, ಪಶುಸಂಗೋಪನೆ ಸೇವೆಗಳ ಕುರಿತಾಗಿ 1989 ಕರೆಗಳು, ಪ್ರಾಣಿ ಕಲ್ಯಾಣ ಮತ್ತು ಕ್ರೌರ್ಯ ತಡೆಗಟ್ಟುವಿಕೆ ಕುರಿತಾಗಿ 934 ಕರೆಗಳು, ಪಶುಸಂಗೋಪನೆಯಲ್ಲಿ ತಂತ್ರಜ್ಞಾನದ ಹೊಸ ಬಳಕೆ ಕುರಿತಾಗಿ 53 ಕರೆಗಳು, ಸ್ವಯಂ ಉದ್ಯೋಗ ತರಬೇತಿಗಾಗಿ 2691 ಕರೆಗಳು ಬಂದಿರುತ್ತವೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ನೂತನವಾಗಿ ಪಶುಸಂಗೋಪನೆ ಇಲಾಖೆ ನಡೆಸಿದ ಈ ಪ್ರಯತ್ನ ರೈತರಿಗೆ, ಜಾನುವಾರು ಸಾಕಣೆದಾರರಿಗೆ, ಸ್ವಯಂ ಉದ್ಯೋಗ ಕಂಡುಕೊಳ್ಳುವವರಿಗೆ ಉಪಯೋಗವಾಗುತ್ತಿರುವುದು ಸಂತಸದ ಸಂಗತಿ. ದಿನದ 24 ಗಂಟೆ ಮೂರು ಶಿಫ್ಟ್‌ನಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೇ, ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್, ಟೆಲಿಗ್ರಾಂ, ಟ್ವಿಟ್ಟರ್ ಮೂಲಕ ಒಂದು ಸಾವಿರಕ್ಕೂ ಹೆಚ್ಚು ಕರೆ ಬಂದಿವೆ. ಪಶುಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯ ನಡುವೆಯೂ ಪಶು ಕಲ್ಯಾಣ ಸಹಾಯವಾಣಿಯಿಂದ ಬಂದ ಎಲ್ಲ ಕರೆಗಳನ್ನು ಇಲಾಖೆಯ ಪಶುವೈದ್ಯರು ಮತ್ತು ಸಿಬ್ಬಂದಿ ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಶುಕಲ್ಯಾಣ ಸಹಾಯವಾಣಿಯ ಬಗ್ಗೆ ಜಿಲ್ಲೆ, ತಾಲೂಕು ಮತ್ತು ಗ್ರಾಮಮಟ್ಟದಲ್ಲಿ ಜಾಗೃತಿ ಮೂಡಿಸಲು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.