'ಸಿಎಂ ಆದಾಗಿಂದಲೇ ಸವಾಲು: ಮೊದಲು ಪ್ರವಾಹ, ಬಳಿಕ ಕೊರೋನಾ, ಈಗ ಮತ್ತೆ ನೆರೆ'

By Kannadaprabha NewsFirst Published Jul 25, 2021, 7:12 AM IST
Highlights

* ಸಿಎಂ ಆದಾಗಿಂದಲೇ ಸವಾಲು ಎದುರಿಸಿದೆ

* ಮೊದಲು ಪ್ರವಾಹ, ಬಳಿಕ ಕೊರೋನಾ, ಈಗ ಮತ್ತೆ ನೆರೆ

* ಜನಪರ ಕೆಲಸ ಮಾಡಿದ ತೃಪ್ತಿ ಇದೆ: ಸಿಎಂ ಭಾವುಕ ನುಡಿ

ಬೆಂಗಳೂರು(ಜು.25): ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಈವರೆಗೆ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಆದರೆ, ಜನರ ಜೀವನವನ್ನು ಉತ್ತಮಗೊಳಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಸಂಕಷ್ಟದ ಕಾಲದಲ್ಲಿ ಸರ್ಕಾರದೊಂದಿಗೆ ಸಹಕರಿಸಿ, ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಬೆಂಬಲಿಸಿದ ಜನತೆಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದೂ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ಶನಿವಾರ ಶಿವಮೊಗ್ಗ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಬೆಂಗಳೂರಿನಿಂದಲೇ ವರ್ಚುವಲ್‌ ಮೂಲಕ ಭಾಗವಹಿಸಿ ಮಾತನಾಡಿದ ಅವರು ಹೃದಯಸ್ಪರ್ಶಿ ಭಾಷಣ ಮಾಡಿದರು.

ತವರು ಜಿಲ್ಲೆ ಹಾಗೂ ಸ್ವಕ್ಷೇತ್ರದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ಯಡಿಯೂರಪ್ಪ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಗರಿಷ್ಠ ಪ್ರಯತ್ನ ಮಾಡಿದ ತೃಪ್ತಿ ನನಗಿದೆ. ನನಗೆ ರಾಜಕೀಯ ಜನ್ಮ ನೀಡಿದ ಶಿವಮೊಗ್ಗ ಜಿಲ್ಲೆಯ ಅದರಲ್ಲಿಯೂ ಶಿಕಾರಿಪುರ ತಾಲೂಕಿನ ಜನತೆಯ ಋುಣವನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ ಎಂದರು.

ಜಿಲ್ಲೆಯ ರೈತರ ಹೊಲಕ್ಕೆ ನೀರುಣಿಸುವ ನೀರಾವರಿ ಯೋಜನೆಗಳನ್ನು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಯುದ್ಧೋಪಾದಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಗಳಿಗೆ ದಾಖಲೆ ಪ್ರಮಾಣದ ಅನುದಾನವನ್ನು ಒದಗಿಸಲಾಗಿದೆ. ಈ ನೀರಾವರಿ ಯೋಜನೆಗಳು ಭವಿಷ್ಯದಲ್ಲಿ ಜಿಲ್ಲೆಯ ರೈತರ ಆರ್ಥಿಕ ಚಿತ್ರಣವನ್ನೇ ಬದಲಾಯಿಸುವ ವಿಶ್ವಾಸವಿದೆ. ಶಿವಮೊಗ್ಗ ತಾಲೂಕಿನ ಸೋಗಾನೆಯಲ್ಲಿ ಏರ್‌ ಬಸ್‌ ಮಾದರಿಯ ವಿಮಾನಗಳು ಇಳಿಯಲು ಸಾಧ್ಯವಾಗುವಂತಹ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ. ಮುಂದಿನ ಏಪ್ರಿಲ್‌ ವೇಳೆಗೆ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ವಿಮಾನ ನಿಲ್ದಾಣ ಆರಂಭದಿಂದ ಶಿವಮೊಗ್ಗ ಮಾತ್ರವಲ್ಲ ಸುತ್ತಲಿನ ಜಿಲ್ಲೆಗಳ ಆರ್ಥಿಕ ಪರಿಸ್ಥಿತಿಗೆ ಅನುಕೂಲವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಇವೆಲ್ಲದರ ನಡುವೆಯೂ ಈ ಭಾಗದ ಜನರ ಜೀವನ, ಆರ್ಥಿಕತೆ, ಮೂಲಸೌಕರ್ಯ ಇವೆಲ್ಲವುಗಳನ್ನು ಉನ್ನತೀಕರಿಸಲು ಎಲ್ಲ ಕ್ರಮಗಳನ್ನು ಕೈಗೊಂಡ ತೃಪ್ತಿ ನನ್ನದು. ಶಿವಮೊಗ್ಗದ ಅಭಿವೃದ್ಧಿ ಪರ್ವ ಹೀಗೆಯೇ ಮುಂದುವರೆಯಲಿದೆ ಎಂದು ನುಡಿದರು.

ಜನತೆಗೆ ಧನ್ಯವಾದ

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಈವರೆಗೆ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಆದರೆ, ಜನರ ಜೀವನವನ್ನು ಉತ್ತಮಗೊಳಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೇನೆ. ಸಂಕಷ್ಟದ ಕಾಲದಲ್ಲಿ ಸರ್ಕಾರದೊಂದಿಗೆ ಸಹಕರಿಸಿ, ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಬೆಂಬಲಿಸಿದ ಜನತೆಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

click me!