ಫೆ.26ರಿಂದ 28ರವರೆಗೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ತೀರ್ಮಾನಿಸಿದೆ.
ಬೆಂಗಳೂರು(ನ.25): 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ.26ರಿಂದ 28ರವರೆಗೆ ಹಾವೇರಿಯಲ್ಲಿ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ತೀರ್ಮಾನಿಸಿದೆ. ಈ ಬೆನ್ನಲ್ಲೇ ಕೋವಿಡ್ ಮಾರ್ಗಸೂಚಿ ಸಡಿಲಗೊಳಿಸಿ ಸಮ್ಮೇಳನಕ್ಕೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದೆ.
ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಜರುಗಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನ ಆಯೋಜಿಸುವ ಕುರಿತು ದೀರ್ಘ ಚರ್ಚೆ ನಡೆಯಿತು. ಈಗಾಗಲೇ ನಿರ್ಧರಿಸಿರುವಂತೆ ಹಾವೇರಿಯಲ್ಲಿ ನುಡಿಜಾತ್ರೆಯನ್ನು 2021 ಫೆಬ್ರವರಿ 26-28ರವರೆಗೆ ಮೂರು ದಿನಗಳ ಕಾಲ ನಡೆಸಲು ಕಾರ್ಯಕಾರಿ ಸಮಿತಿಯು ಒಮ್ಮತದಿಂದ ನಿರ್ಣಯ ಕೈಗೊಂಡಿತು.
ಬ್ಯಾನರ್‌ನಲ್ಲಿ ಓ ಕರ್ನಾಟಕ ಹೃದಯ ಏಸು ಎಂಬ ಅಕ್ಷರ ಬಳಕೆ, ಶಾಸಕಿ ವಿರುದ್ಧ ಆಕ್ರೋಶ ..
ಅದಕ್ಕೂ ಮುನ್ನ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಹಾವೇರಿ ಶಾಸಕ ನೆಹರೂ ಓಲೆಕಾರ್ ಅವರೊಂದಿಗೆ ಸಮ್ಮೇಳನದ ಕುರಿತು ದಿನಾಂಕ ನಿಗದಿಪಡಿಸುವ ಬಗ್ಗೆ ಚರ್ಚಿಸಲಾಗಿತ್ತು. ಈ ವೇಳೆ ಗೃಹ ಸಚಿವರು ಅಕ್ಷರ ಜಾತ್ರೆಗೆ ಒಪ್ಪಿಗೆ ನೀಡಿದ್ದರಿಂದ ಕಸಾಪ ಕಾರ್ಯಕಾರಿ ಸಮಿತಿ ಸಮ್ಮೇಳನ ಆಯೋಜಿಸಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್-19 ಹರಡುವಿಕೆ ಇಳಿಮುಖವಾಗ ತೊಡಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾರ್ಗಸೂಚಿಗಳನ್ನು ಸಡಿಲಗೊಳಿಸಿ ಸಮ್ಮೇಳನಕ್ಕೆ ಅನುವು ಮಾಡಿಕೊಡಲು ಶೀಘ್ರವೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ತಿಳಿಸಿದ್ದಾರೆ.
2019ರ ಜನವರಿಯಲ್ಲಿ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ನಡೆದಿದ್ದು ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸಿದ್ದರು. 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2020 ಫೆಬ್ರವರಿ 5-7ರವರೆಗೆ ಕಲಬುರಗಿಯಲ್ಲಿ ನಡೆದಿತ್ತು. ಸಮ್ಮೇಳನಾಧ್ಯಕ್ಷತೆಯನ್ನು ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ವಹಿಸಿದ್ದರು. ಈ ಬಾರಿಯಾದರೂ ಡಿಸೆಂಬರ್ ಅಂತ್ಯದೊಳಗೆ ಸಮ್ಮೇಳನ ಆಯೋಜಿಸಬೇಕೆಂಬ ಉದ್ದೇಶ ಕಸಾಪದ್ದಾಗಿತ್ತು. ಆದರೆ ಕೋವಿಡ್-19ರ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಫೆಬ್ರವರಿಯಲ್ಲಿ ಆಯೋಜಿಸಲಾಗುತ್ತಿದೆ. ಜತೆಗೆ ಮಾ.3ಕ್ಕೆ ಹಾಲಿ ಅಧ್ಯಕ್ಷ ಮನು ಬಳಿಗಾರ್ ಅವರ ಅಧಿಕಾರವಧಿಯೂ ಮುಗಿಯಲಿದೆ.