ಲಸಿಕೆ ವಿತರಣೆಗೆ ರಾಜ್ಯದಲ್ಲಿ 29500 ಕೇಂದ್ರ, 10 ಸಾವಿರ ಸಿಬ್ಬಂದಿ!

By Kannadaprabha NewsFirst Published Nov 25, 2020, 7:47 AM IST
Highlights

ಲಸಿಕೆ ವಿತರಣೆಗೆ ರಾಜ್ಯದಲ್ಲಿ 29500 ಕೇಂದ್ರ: ಸುಧಾಕರ್‌| ಕೇಂದ್ರದ ಸೂಚನೆಯಂತೆ ಸಿದ್ಧತೆ| 10 ಸಾವಿರ ಸಿಬ್ಬಂದಿ ನಿಯೋಜನೆ

ಬೆಂಗಳೂರು(ನ.25): ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ಕೋವಿಡ್‌ ಲಸಿಕೆ ವಿತರಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಒಟ್ಟು 29,451 ಲಸಿಕೆ ವಿತರಣಾ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

‘ಕೋವಿಡ್‌ ಕಾರ್ಯಪಡೆ ಸಭೆ ನಡೆಸಿ ಲಸಿಕೆ ವಿತರಣೆ ಸಂಬಂಧ ಚರ್ಚೆ ನಡೆಸಲಾಗಿದೆ. ಲಸಿಕೆ ಸಂಗ್ರಹ ಮತ್ತು ವಿತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಲಾಗಿದೆ. ಲಸಿಕೆ ವಿತರಣೆ ಮಾಡಲು 10,008 ವಾಕ್ಸಿನೇಟರ್‌ ಸಿಬ್ಬಂದಿಗಳನ್ನು ಗುರುತಿಸಲಾಗಿದೆ’ ಎಂದು ಹೇಳಿದ್ದಾರೆ.

ಮೊದಲಿಗೆ 1 ಕೋಟಿ ಆರೋಗ್ಯ ಸಿಬ್ಬಂದಿಗೆ ಕೊರೋನಾ ಲಸಿಕೆ!

‘ಸರ್ಕಾರಿ ಆರೋಗ್ಯ ಕೇಂದ್ರಗಳ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ ಬಗೆಗಿನ ಮಾಹಿತಿಯನ್ನು ದಾಖಲಿಸಲಾಗಿದೆ. ಶೇ.80ರಷ್ಟುಖಾಸಗಿ ಆಸ್ಪತ್ರೆಗಳು ಮಾಹಿತಿ ಒದಗಿಸಿವೆ. ಇನ್ನೂ ಶೇ.20ರಷ್ಟುಆಸ್ಪತ್ರೆಗಳು ವಾರದೊಳಗೆ ಮಾಹಿತಿ ನೀಡಲಿವೆ. ರಾಜ್ಯದಲ್ಲಿ ಲಸಿಕೆ ಸಂಗ್ರಹ ಮತ್ತು ವಿತರಣೆಗೆ 2,855 ಕೋಲ್ಡ್‌ ಚೇನ್‌ ಕೇಂದ್ರ ಲಭ್ಯ ಇವೆ. ಬೇಗನೆ ಲಸಿಕೆ ವಿತರಿಸಲು ಸಾಧ್ಯವಾಗುವಂತೆ ಹೊಸದಾಗಿ ಬೆಂಗಳೂರು ನಗರ, ಶಿವಮೊಗ್ಗ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಪ್ರಾದೇಶಿಕೆ ಲಸಿಕೆ ಸಂಗ್ರಹ ಕೇಂದ್ರಗಳನ್ನು ಆರಂಭಿಸಲು ಪ್ರಸ್ತಾಪಿಸಲಾಗಿದೆ. ಈ ಕೇಂದ್ರಗಳಿಗೆ ವಾಕ್‌ ಇನ್‌ ಕೂಲರ್‌, ವಾಕ್‌ ಇನ್‌ ಫ್ರೀಜರ್‌ಗಳನ್ನು ಕೂಡ ನೀಡುವ ಪ್ರಸ್ತಾಪವಿದೆ’ ಎಂದು ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವೀಡಿಯೋ ಸಂವಾದದ ಮುನ್ನ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

‘ರಾಜ್ಯದಲ್ಲಿ 10 ವಾಕ್‌ ಇನ್‌ ಕೂಲರ್‌ ಮತ್ತು 4 ವಾಕ್‌ ಇನ್‌ ಫ್ರೀಜರ್‌ ಇದೆ. ಕೇಂದ್ರ ಆರೋಗ್ಯ ಸಚಿವಾಲಯವು 3 ವಾಕ್‌ ಇನ್‌ ಕೂಲರ್‌, 2 ವಾಕ್‌ ಇನ್‌ ಫ್ರೀಜರ್‌ ನೀಡಲಿದೆ. ಇದಕ್ಕಾಗಿ ಸಿವಿಲ್‌ ಕಾಮಗಾರಿ ಆರಂಭವಾಗಿದೆ. ಕೋಲ್ಡ್‌ ಸ್ಟೋರೇಜ್‌ ಮತ್ತು ಸಂಗ್ರಹಕ್ಕೆ ಸಂಬಂಧಪಟ್ಟಂತೆ ಡೋಸ್‌ಗಳು ಮತ್ತಿತರ ಮಾಹಿತಿ ಅಗತ್ಯ ಇದೆ. ಈ ಮಾಹಿತಿಯನ್ನು ಶೀಘ್ರ ಒದಗಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕೋರಲಾಗಿದೆ. ಲಸಿಕೆ ಕಾರ್ಯಕ್ರಮಕ್ಕೆ ಅಗತ್ಯ ಇರುವ ಡ್ರೈ ಸ್ಟೋರೇಜ್‌ ಬಗ್ಗೆಯೂ ನಿರ್ಧಾರ ಕೈಗೊಳ್ಳಬೇಕಿದೆ’ ಎಂದಿದ್ದಾರೆ.

1 ವರ್ಷ ರಕ್ಷಣೆ ನೀಡಲಿದೆ ಲಸಿಕೆ, 2023 ವೇಳೆಗೆ ವೈರಸ್‌ ಕ್ಷೀಣ!

‘ಕೇಂದ್ರ ಸರ್ಕಾರ ಈಗಾಗಲೇ ಡೀಪ್‌ ಫ್ರೀಜರ್‌ ಮತ್ತು ರೆಫ್ರಿಜರೇಟರ್‌ಗಳನ್ನು ಮಂಜೂರು ಮಾಡಿದೆ. ಹೆಚ್ಚುವರಿ ಅಗತ್ಯಗಳ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಪಶುಸಂಗೋಪನೆ ಇಲಾಖೆಯಲ್ಲಿ ಲಭ್ಯ ಇರುವ ಕೋಲ್ಡ್‌ ಸ್ಟೋರೇಜ್‌ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಕಾರ್ಪೋರೇಟ್‌ ಖಾಸಗಿ ಆಸ್ಪತ್ರೆಗಳ ಕೋಲ್ಡ್‌ ಸ್ಟೋರೇಜ್‌ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

click me!