
ಬೆಂಗಳೂರು(ಸೆ.08): ರಾಜ್ಯದಲ್ಲಿ ಉಂಟಾಗಿರುವ ನೆರೆಯಿಂದಾಗಿ 8,071 ಕೋಟಿ ರು. ನಷ್ಟ ಉಂಟಾಗಿದೆ. 4.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿ ಸೇರಿ ಸಾಕಷ್ಟು ಆಸ್ತಿ ಹಾನಿಯಾಗಿದೆ. ಹೀಗಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ನೆರವು ಒದಗಿಸುವ ಮಾರ್ಗಸೂಚಿ ಪರಿಷ್ಕರಿಸಿ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇಂದ್ರ ನೆರೆ ಅಧ್ಯಯನ ತಂಡಕ್ಕೆ ಮನವಿ ಮಾಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಕೆ.ವಿ. ಪ್ರತಾಪ್ ಅವರ ನೇತೃತ್ವದ ನೆರೆ ಅಧ್ಯಯನ ತಂಡದ ಸದಸ್ಯರೊಂದಿಗೆ ಸಭೆ ನಡೆಸಿದ ಅವರು ರಾಜ್ಯದಲ್ಲಿ ಆಗಿರುವ ನೆರೆ ನಷ್ಟಹಾಗೂ ನೀಡಬೇಕಿರುವ ಪರಿಹಾರದ ಬಗ್ಗೆ ಮಾಹಿತಿ ಒದಗಿಸಿದರು.
ಪ್ರಸಕ್ತ ವರ್ಷದ ನೆರೆಯಿಂದಾಗಿ 8,071 ಕೋಟಿ ರು. ನಷ್ಟ ಉಂಟಾಗಿದೆ. 2018-19ನೇ ಸಾಲಿನಲ್ಲೂ ಭಾರಿ ಪ್ರಮಾಣದ ಪ್ರವಾಹ ಹಾಗೂ ಭೂ ಕುಸಿತ ಉಂಟಾಗಿ 22 ಜಿಲ್ಲೆ ಸಂಕಷ್ಟಕ್ಕೆ ಸಿಲುಕಿತ್ತು. ಈ ಬಾರಿಯ ನೆರೆಯಿಂದಾಗಿ 4.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಹಾಗೂ ರಸ್ತೆ, ಸೇತುವೆ, ವಿದ್ಯುತ್ ಪರಿವರ್ತಕ, ಶಾಲೆ, ಸರ್ಕಾರಿ ಕಟ್ಟಡಗಳು, ಖಾಸಗಿ ಮನೆಗಳು ಸೇರಿದಂತೆ ಕೋಟ್ಯಂತರ ಹಾನಿ ಉಂಟಾಗಿದೆ ಎಂದರು.
ನೆರೆಯಿಂದ ಹಾನಿಗೊಳಗಾದ ಮನೆಗಳನ್ನು ಉತ್ತಮವಾಗಿ ಮರು ನಿರ್ಮಿಸಲು ಹಾಗೂ ಪ್ರಕೃತಿ ವಿಕೋಪ ತಡೆಯುವ ಸಾಮರ್ಥ್ಯದ ಮನೆಗಳನ್ನು ಪುನರ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಸಂಪೂರ್ಣ ಹಾಳಾದ ಮನೆಗೆ 5 ಲಕ್ಷ ರು. ಹಾಗೂ ತೀವ್ರ ಹಾನಿಗೆ 3 ಲಕ್ಷ ರು., ಭಾಗಶಃ ಹಾನಿಗೆ 50 ಸಾವಿರ ರು. ಧನ ಸಹಾಯ ನೀಡಲಾಗುತ್ತಿದೆ. ಕಳೆದ ವರ್ಷ ಇದಕ್ಕಾಗಿ 1,500 ಕೋಟಿ ರು. ಒದಗಿಸಿದ್ದು, ಪ್ರಸಕ್ತ ಸಾಲಿನಲ್ಲಿ ಕೊರೋನಾ ಸಂಕಷ್ಟದ ಹೊರತಾಗಿಯೂ ಹಾನಿಗೊಳಗಾದವರಿಗೆ 200 ಕೋಟಿ ರು. ನೀಡಿದ್ದೇವೆ.
ಕೇಂಂದ್ರ ಸರ್ಕಾರವು ಕೊರೋನಾ ಹಾಗೂ ಪ್ರವಾಹ ನಿಯಂತ್ರಣಕ್ಕೆ ಒಟ್ಟು 460 ಕೋಟಿ ರು. ಬಿಡುಗಡೆ ಮಾಡಿದ್ದು ತೀವ್ರ ನೆರೆ ಹಾಗೂ ಕೊರೋನಾ ಹೆಚ್ಚಾದ ಹಿನ್ನೆಲೆಯಲ್ಲಿ ಈ ಹಣ ಸಾಲುತ್ತಿಲ್ಲ. ಹೀಗಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿ ಒದಗಿಸುವ ಮಾರ್ಗಸೂಚಿಗಳನ್ನು ಪ್ರಸಕ್ತ ವರ್ಷವೇ ಪರಿಷ್ಕರಣೆ ಮಾಡಬೇಕು. ಮಾರ್ಗಸೂಚಿ ಪರಿಷ್ಕರಿಸಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಹೆಚ್ಚಿನ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಕೇಂದ್ರಕ್ಕೆ ಯಡಿಯೂರಪ್ಪ ಮನವಿ ಸಲ್ಲಿಸಿದರು.
ಕೊರೋನಾದಿಂದ ತಡೆಯಾಗಿದೆ:
ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ನಾಲ್ಕು ಪ್ರತ್ಯೇಕ ನಿಧಿಗಳನ್ನು ಕೇಂದ್ರ ಸರ್ಕಾರ ಸೃಷ್ಟಿಸಿದೆ. ಆದರೆ, ಕೊರೋನಾದಿಂದ ನಮ್ಮ ಪ್ರಯತ್ನಗಳಿಗೆ ತಡೆಯಾಗಿದೆ. ರಾಜ್ಯ ಪ್ರಕೃತಿ ವಿಕೋಪ ಪ್ರಾಧಿಕಾರವು ರಾಜ್ಯ ವಿಪತ್ತು ನಿರ್ವಹಣಾ ಯೋಜನೆ-2020ಗೆ ಅನುಮೋದನೆ ನೀಡಿದೆ. ಆದರೆ ಕೊರೋನಾದಿಂದ ನೆರೆ ನಿರ್ವಹಣೆಗೂ ತಡೆಯಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಕೇಂದ್ರದ ನೆರೆ ಅಧ್ಯಯನ ತಂಡದ 6 ಮಂದಿ ಸದಸ್ಯರ ಜತೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಆರ್. ಅಶೋಕ್, ಜೆ.ಸಿ. ಮಾಧುಸ್ವಾಮಿ, ರಮೇಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ವಿ. ಸೋಮಣ್ಣ, ಕೆ. ಗೋಪಾಲಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ