*ಅಡ್ಡಿ-ಆತಂಕವಿಲ್ಲದೆ ಮೇಕೆದಾಟು ಪಾದಯಾತ್ರೆ ಶುಭಾರಂಭ
*ಸಂಗಮದಿಂದ ಹೊರಟು ಡಿಕೆಶಿ ಹುಟ್ಟೂರು ದೊಡ್ಡಾಲಹಳ್ಳಿಗೆ ಆಗಮನ
ರಾಮನಗರ (ಜ. 10): ರಾಜ್ಯ ಸರ್ಕಾರದ ಕೋವಿಡ್ ಕಠಿಣ ನಿರ್ಬಂಧಗಳಿಗೆ (Covid 19 Restrictions) ಸಡ್ಡು ಹೊಡೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ನೇತೃತ್ವದಲ್ಲಿ ನಮ್ಮ ನೀರು, ನಮ್ಮ ಹಕ್ಕು ಘೋಷಣೆಯೊಂದಿಗೆ ಆರಂಭವಾದ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ಮೊದಲ ದಿನವಾದ ಭಾನುವಾರ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಸುಮಾರು 15 ಕಿ.ಮೀ. ಕ್ರಮಿಸಿತು. ಕಾವೇರಿ ನದಿ ನೀರಿನ ನೀನಾದ ಹಿಮ್ಮೇಳ, ಜಾನಪದ ಕಲೆಗಳ ಮುಮ್ಮೇಳದೊಂದಿಗೆ ಐತಿಹಾಸಿಕ ಪಾದಯಾತ್ರೆ ಮೊದಲ ದಿನ ಮೇಕೆದಾಟು ಸಮೀಪದ ಸಂಗಮದಿಂದ ಡಿ.ಕೆ.ಶಿವಕುಮಾರ್ ಅವರ ಹುಟ್ಟೂರಾದ ದೊಡ್ಡಾಲಹಳ್ಳಿವರೆಗೆ ಹೆಜ್ಜೆಹಾಕಿತು. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಡೊಳ್ಳು ಕುಣಿತ, ಕಂಸಾಳೆ, ಪೂಜಾ ಕುಣಿತ ಸೇರಿ ವಿವಿಧ ಜಾನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡುವ ಮೂಲಕ ಕಳೆಕಟ್ಟಿದವು.
undefined
ಉತ್ಸಾಹದಿಂದ ಹೆಜ್ಜೆ ಮೇಲೆ ಹೆಜ್ಜೆ
ಪಾದಯಾತ್ರೆಯಲ್ಲಿ ಎಲ್ಲಾ ನಾಯಕರು ಒಟ್ಟಾಗಿ ತೆರಳದೆ ಹಲವು ತಂಡಗಳ ಮೂಲಕ ಪ್ರತ್ಯೇಕವಾಗಿ ಹೆಜ್ಜೆ ಹಾಕಿದರು. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತ್ಯೇಕ ತಂಡಗಳಲ್ಲಿ ಮುನ್ನಡೆದು ಕಾರ್ಯಕರ್ತರಲ್ಲಿ ಜೋಶ್ ತುಂಬುತ್ತಿದ್ದರು. ಹಿರಿಯರೂ ಆದ ರಾಜ್ಯಸಭೆ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರಿನಲ್ಲಿ ತೆರಳಿದರು. ಕಾಂಗ್ರೆಸ್‌ನ ಘಟಾನುಘಟಿ ಹಿರಿಯ ನಾಯಕರು, ಸಂಸದರು, ಶಾಸಕರು, ಮಹಿಳಾ ಪ್ರತಿನಿಧಿಗಳು ಸೇರಿ ಸುಮಾರು 8 ರಿಂದ 10 ಸಾವಿರ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಹೆಚ್ಚಿನ ನಾಯಕರು ಮಾಸ್ಕ್ ಧರಿಸದೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದು ಎದ್ದು ಕಾಣುತ್ತಿತ್ತು.
ಇದನ್ನೂ ಓದಿ: Mekedatu Politics: ಕಾಂಗ್ರೆಸ್ಸಿನದ್ದು ರಾಜಕೀಯಪ್ರೇರಿತ ಪಾದಯಾತ್ರೆ: ಬೊಮ್ಮಾಯಿ ಕಿಡಿ
ಹೆಗ್ಗೂರಲ್ಲಿ ಭೋಜನ:ಸುಮಾರು 6.5 ಕಿ.ಮೀ ಸಾಗಿದ ಪಾದಯಾತ್ರಿಕರು ಹೆಗ್ಗನೂರು ಗ್ರಾಮದಲ್ಲಿ ಭೋಜನ ಸ್ವೀಕರಿಸಿ, ವಿಶ್ರಾಂತಿ ಪಡೆದರು. ನಂತರ ಸಂಜೆ 5ಕ್ಕೆ ಮತ್ತೆ ನಡಿಗೆ ಆರಂಭಿದರು. ಈ ವೇಳೆ ನಟಿ ಉಮಾಶ್ರೀ ತಮಟೆ ಸದ್ದಿಗೆ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು. ಅವರನ್ನು ಅನುಕರಿಸಿದ ಮಹಿಳಾ ಕಾಂಗ್ರೆಸ್ಸಿಗರು ಡೊಳ್ಳು-ತಮಟೆ ನಾದಕ್ಕೆ ತಾಳ ಹಾಕುತ್ತಾ ದೊಡ್ಡಾಲಹಳ್ಳಿ ವರೆಗಿನ ಪ್ರಯಾಣಕ್ಕೆ ಉತ್ಸಾಹ ತುಂಬಿದರು. ವೀಕೆಂಡ್ ಕರ್ಫ್ಯೂ ಕಾರಣ ಪಾದಯಾತ್ರೆಗೆ ಜಿಲ್ಲಾಡಳಿತ ಹಾಗೂ ಪೊಲೀಸರು ತಡೆ ಒಡ್ಡಬಹುದೆಂಬ ನಿರೀಕ್ಷೆ ಇತ್ತು.
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಐತಿಹಾಸಿಕ 'ನಮ್ಮ ನೀರು ನಮ್ಮ ಹಕ್ಕು' ಪಾದಯಾತ್ರೆಗೆ ಸಾತನೂರಿನ ಸಂಗಮದಲ್ಲಿ ವಿಜೃಂಭಣೆಯ ಚಾಲನೆ ನೀಡಲಾಯಿತು.
ಕೆಪಿಸಿಸಿ ಅಧ್ಯಕ್ಷರಾದ , ರಾಜ್ಯಸಭೆ ವಿಪಕ್ಷ ನಾಯಕರಾದ , ವಿಧಾನಸಭೆ ವಿಪಕ್ಷ ನಾಯಕರಾದ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು. pic.twitter.com/E21F4VWZIA
11.15ಕ್ಕೆ ನಡಿಗೆ ಆರಂಭ
11.15ರ ಸುಮಾರಿಗೆ ಸಂಗಮದಿಂದ ಆರಂಭ, ಮಧ್ಯಾಹ್ನ 3.30ರ ವೇಳೆಗೆ ಹೆಗ್ಗನೂರು ದೊಡ್ಡಿಗೆ ಆಗಮನ, ಭೋಜನ ಸೇವಿಸಿ, ಕೆಲಹೊತ್ತು ವಿಶ್ರಾಂತಿ. 5ಗಂಟೆಗೆ ಹೊರಟು ಸಂಜೆ 7 ಗಂಟೆಗೆ ದೊಡ್ಡಾಲಹಳ್ಳಿ ಪ್ರವೇಶ. ರಾತ್ರಿ ವಾಸ್ತವ್ಯ.
ಇಂದು ಕನಕಪುರಕ್ಕೆ ಆಗಮನ
2ನೇ ದಿನ ದೊಡ್ಡಾಲಹಳ್ಳಿಯಿಂದ 8 ಕಿ.ಮೀ. ಸಾಗಿ ಮಾದಪ್ಪನದೊಡ್ಡಿ ಬಳಿ ವಿಶ್ರಾಂತಿ, ಊಟ ಮುಗಿಸಿ ಮತ್ತೆ 8 ಕಿ.ಮೀ. ಸಾಗಿ ಕನಕಪುರ ತಾಲೂಕು ಕೇಂದ್ರ ಪ್ರವೇಶ. ರಾತ್ರಿ ಕನಕಪುರದಲ್ಲಿ ಪಾದಯಾತ್ರಿಗಳು ವಾಸ್ತವ್ಯ.
ಇದನ್ನೂ ಓದಿ: Mekedatu padayatra ನನ್ನನ್ನು ಮತ್ತೆ ಜೈಲಿಗೆ ಹಾಕಿಸಲು ಷಡ್ಯಂತ್ರ, ಸ್ವಗ್ರಾಮದಲ್ಲಿ ಡಿಕೆಶಿ ಭಾವನಾತ್ಮಕ ಭಾಷಣ
ಡಿಕೆ ಸೋದರರಿಗೆ ಅದ್ಧೂರಿ ಸ್ವಾಗತ
ರಾಮನಗರ: ಪಾದಯಾತ್ರೆಯಲ್ಲಿ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಅವರಿಗೆ ಹುಟ್ಟೂರು ದೊಡ್ಡಾಲಹಳ್ಳಿಯಲ್ಲಿ ಭರ್ಜರಿ ಸ್ವಾಗತ ದೊರೆಯಿತು. ಸಂಜೆ 8 ಗಂಟೆ ವೇಳೆಗೆ ಆಗಮಿಸಿದ ಸೋದರರಿಗೆ ಗ್ರಾಮಸ್ಥರು ಹೂವಿನ ಮಳೆಯ ಸ್ವಾಗತ ನೀಡಿದರು, ಆರತಿ ಬೆಳಗಿದರು. ಈ ವೇಳೆ ಗ್ರಾಮದ ಯುವಕರು ಪಟಾಕಿ ಸಿಡಿಸಿ ಜೈಕಾರ ಹಾಕಿ ಪಾದಯಾತ್ರೆಗೆ ಶುಭ ಕೋರಿದರು. ಇದಕ್ಕೂ ಮೊದಲು ಬೆಂಡಗೋಡು ಗ್ರಾಮದ ದ್ವಾರದಲ್ಲಿ ಹೆಣ್ಣು ಮಕ್ಕಳು ಕಳಸ ಹಿಡಿದು ಅದ್ಧೂರಿಯಾಗಿ ಸ್ವಾಗತಿಸಿದರೆ, ಮಹಿಳೆಯರು ಬೆಲ್ಲದಾರತಿ ಮಾಡಿದರು. ಏಳಗಳ್ಳಿ ಬಳಿಯೂ ನೂರಾರು ಜನರು ಡಿ.ಕೆ.ಶಿವಕುಮಾರ್ಗೆ ಆರತಿ ಬೆಳಗಿ ಸ್ವಾಗತಿಸಿದರು. ಮೊದಲ ದಿನದ ಪಾದಯಾತ್ರೆ ದೊಡ್ಡಾಲಹಳ್ಳಿಯಲ್ಲೇ ಮುಕ್ತಾವಾಗಿದ್ದು, ಪಾದಯಾತ್ರಿಗಳಿಗೆ ಇಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.