ಆಂಧ್ರ ಕನ್ನಡ ಶಾಲೆಗಳು ಮುಚ್ಚುವ ಭೀತಿ| ಎಲ್ಲ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತಿಸಲು ಜಗನ್ ಸರ್ಕಾರ ನಿರ್ಧಾರ| 79 ಕನ್ನಡ ಶಾಲೆಗಳಿಗೆ ಆತಂಕ
ಕೆ.ಎಂ. ಮಂಜುನಾಥ್
ಬಳ್ಳಾರಿ[ಡಿ.17]: ಆಂಧ್ರಪ್ರದೇಶ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಾಗಿ ಬದಲಾಯಿಸಲು ನಿರ್ಧರಿಸಿರುವುದು ಅಲ್ಲಿನ 79 ಕನ್ನಡ ಮಾಧ್ಯಮ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಲು ತೀರ್ಮಾನಿಸಿರುವ ಜಗನ್ ರೆಡ್ಡಿ ನೇತೃತ್ವದ ಆಂಧ್ರ ಸರ್ಕಾರ ತೆಲುಗು ಹಾಗೂ ಉರ್ದುವನ್ನು ಒಂದು ಭಾಷೆಯಾಗಿ ಕಲಿಸುವ ನಿಲುವು ತೆಗೆದುಕೊಂಡಿದೆ. ಇದೇ ವೇಳೆ ಕನ್ನಡವನ್ನು ಒಂದು ಭಾಷೆಯಾಗಿ ಉಳಿಸುವ ಬಗ್ಗೆ ಈವರೆಗೆ ಎಲ್ಲೂ ಚರ್ಚಿಸದಿರುವುದು ಆತಂಕಕ್ಕೆ ಕಾರಣವಾಗಿದೆ.
undefined
ಸ್ವಾತಂತ್ರ್ಯ ಪೂರ್ವದಿಂದಲೂ ಅವಿಭಜಿತ ಆಂಧ್ರಪ್ರದೇಶದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿದ್ದು, ಕೆಲವು ಶಾಲೆಗಳು ಶತಮಾನೋತ್ಸವವನ್ನೂ ಆಚರಿಸಿಕೊಂಡಿವೆ. ತೆಲಂಗಾಣದಲ್ಲಿ 26 ಕನ್ನಡ ಮಾಧ್ಯಮ ಶಾಲೆಗಳಿದ್ದು, ಆಂಧ್ರಪ್ರದೇಶದಲ್ಲಿ 79 ಕನ್ನಡ ಶಾಲೆಗಳಿವೆ. ಆಂಧ್ರದ ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಯಲ್ಲಿ ಕನ್ನಡ ಶಾಲೆಗಳು ಹೆಚ್ಚಾಗಿದ್ದು ಇದೀಗ ಆಂಧ್ರ ಸರ್ಕಾರ ತೆಗೆದುಕೊಂಡಿರುವ ನಿಲುವು ಕನ್ನಡಿಗರಲ್ಲಿ ಭಾಷಾ ಕಣ್ಮರೆಯ ಭೀತಿ ಮೂಡಿಸಿದೆ.
‘ಕನ್ನಡ ಭಾಷೆಯಿಂದ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂಬ ಆಶಯ ಹೊತ್ತು ಕನ್ನಡ ಮಾಧ್ಯಮಕ್ಕೆ ಸೇರಿಸಿದೆವು. ನಮಗೂ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುವ ಅವಕಾಶ ಇದ್ದರೂ ಭಾಷಾ ಪ್ರೇಮದಿಂದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ಮುಂದಾದೆವು. ಇದೀಗ ಆಂಧ್ರ ಸರ್ಕಾರ ಕನ್ನಡಿಗರು, ಕನ್ನಡ ಶಾಲೆಗಳ ಕುರಿತು ಯಾವ ನಿಲುವು ತೆಗೆದುಕೊಂಡಿದೆ ಎಂಬುದು ಗೊತ್ತಾಗುತ್ತಿಲ್ಲ. ಈ ಸಂಬಂಧ ಕರ್ನಾಟದಲ್ಲಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗಳು ಸಹ ಈವರೆಗೆ ಚಕಾರ ಎತ್ತಿಲ್ಲ’ ಎಂಬುದು ಆಂಧ್ರದಲ್ಲಿರುವ ಕನ್ನಡಿಗರ ಆತಂಕ.
ಆಂಧ್ರದಲ್ಲಿ ಎಲ್ಲಾ ಶಾಲೆಗಳಲ್ಲಿ ತೆಲುಗು, ಉರ್ದು ಮಾಧ್ಯಮ ಬಂದ್!
ತಡಮಾಡುವುದು ಸರಿಯಲ್ಲ:
ಎಲ್ಲವೂ ಇಂಗ್ಲಿಷ್ ಮಾಧ್ಯಮವಾಗಿ ಪರಿವರ್ತನೆಯಾದರೆ ಕನ್ನಡ ಮಾಧ್ಯಮ ಶಾಲೆಗಳು ಉಳಿಯುವುದಿಲ್ಲ ಎಂಬ ಆತಂಕ ಒಂದೆಡೆಯಾದರೆ, ಒಂದು ಭಾಷೆಯಾಗಿ ಕನ್ನಡ ಕಲಿಸದೆ ಹೋದರೆ ಕನ್ನಡ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ ಅನಂತಪುರ ಜಿಲ್ಲಾ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಕನ್ನಡ ಶಾಲೆಗಳ ಪರ ಹೋರಾಟಗಾರ ಎಂ. ಗಿರಿಜಾಪತಿ. ಆಂಧ್ರ ಸರ್ಕಾರ ಈವರೆಗೆ ಸ್ಥಳೀಯ ಅಲ್ಪಸಂಖ್ಯಾತ ಭಾಷೆಯ ಕುರಿತು ತೆಗೆದುಕೊಳ್ಳುವ ನಿರ್ಧಾರ ಏನೆಂಬುದು ಗೊತ್ತಾಗಿಲ್ಲ. ಇನ್ನೂ ಸಮಯ ಇದೆ ಎಂದು ನಿರ್ಲಕ್ಷ್ಯ ತೋರಿಸುವುದು ಸರಿಯಲ್ಲ. ಆದಷ್ಟು, ಬೇಗ ಕರ್ನಾಟಕ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳು ಆಂಧ್ರಪ್ರದೇಶ ಸರ್ಕಾರ ಜೊತೆ ಮಾತುಕತೆ ನಡೆಸುವಂತಾಗಬೇಕು ಎಂಬುದು ಅವರ ಆಗ್ರಹವಾಗಿದೆ.
ಆಂಧ್ರದ ನಿಲುವು ಕಾದು ನೋಡೋಣ: ಕುಂವೀ
ಆಂಧ್ರದಲ್ಲಿ ಕನ್ನಡ ಶಾಲೆಗಳಷ್ಟೇ ಅಲ್ಲ, ತಮಿಳು, ಮರಾಠಿ ಮಾಧ್ಯಮ ಶಾಲೆಗಳೂ ಇವೆ. ಸ್ಥಳೀಯ ಅಲ್ಪಸಂಖ್ಯಾತ ಭಾಷೆಗಳು ಉಳಿಯಬೇಕು. ಇದಕ್ಕಾಗಿ ಆಂಧ್ರ ಸರ್ಕಾರದ ಕನ್ನಡ ಶಾಲೆಗಳ ಬಗೆಗಿನ ಧೋರಣೆ ಏನು ಎಂಬುದು ಗೊತ್ತಾದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳೋಣ ಎನ್ನುತ್ತಾರೆ ಕನ್ನಡದ ಖ್ಯಾತ ಲೇಖಕ ಕುಂ.ವೀರಭದ್ರಪ್ಪ (ಕುಂವೀ). ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿರುವ ಅವರು, ಇಂಗ್ಲಿಷ್ ಮಾಧ್ಯಮದಿಂದ ಮಾತ್ರ ಗುಣಮಟ್ಟಶಿಕ್ಷಣ ಸಿಗುತ್ತದೆ ಎಂಬುದು ಅತ್ಯಂತ ಅವೈಜ್ಞಾನಿಕ. ಇಂಗ್ಲಿಷ್‌ನಲ್ಲಿ ಓದಿ ಕೆಲಸವಿಲ್ಲದೆ ಅಲೆದಾಡುವ ಸಾಕಷ್ಟುಮಂದಿ ಇದ್ದಾರೆ. ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರೆಯುವಂತಾಗಬೇಕು ಎಂಬುದು ನನ್ನ ನಿಲುವು ಎಂದು ತಿಳಿಸಿದ್ದಾರೆ.
ಆಂಧ್ರದಲ್ಲಿರುವ ಕನ್ನಡ ಶಾಲೆಗಳು ಉಳಿಯಬೇಕು. ಈ ನಿಟ್ಟಿನಲ್ಲಿ ನಾವು ಆಂಧ್ರ ಸರ್ಕಾರದ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಆಂಧ್ರ ಸರ್ಕಾರದ ನಿರ್ಧಾರ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಮ್ಮ ಶಾಲೆಗಳು, ನಮ್ಮ ಭಾಷೆ ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ನಮ್ಮದು. ನಾವು ಖಂಡಿತ ಮಾಡಿಕೊಳ್ಳುತ್ತೇವೆ.
-ಸುರೇಶ್ ಕುಮಾರ್, ಶಿಕ್ಷಣ ಸಚಿವರು
ಮಾಧ್ಯಮ ಬದಲಾಯಿಸುವ ಕುರಿತು ಆಂಧ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ನನಗೆ ಮಾಹಿತಿಯಿಲ್ಲ. ತಿಳಿದುಕೊಂಡು ಪ್ರತಿಕ್ರಿಯಿಸುತ್ತೇನೆ.
-ಮನು ಬಳಿಗಾರ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು.