ಸಿದ್ದರಾಮಯ್ಯ ಡಿಸ್ಚಾರ್ಜ್:  ಆಸ್ಪತ್ರೆ ಹೊರಗೆ ‘ಹೌದು ಹುಲಿಯಾ’ ಜೈಕಾರ!

By Suvarna NewsFirst Published Dec 16, 2019, 8:21 AM IST
Highlights

ಆಸ್ಪತ್ರೆಯಿಂದ ಸಿದ್ದು ಡಿಸ್ಚಾಜ್‌ರ್| ಇನ್ನು 1 ವಾರ ಮನೆಯಲ್ಲೇ ವಿಶ್ರಾಂತಿ| ಬಳಿಕ ರಾಜಕೀಯ ಚಟುವಟಿಕೆ| ಆಸ್ಪತ್ರೆ ಹೊರಗೆ ‘ಹೌದು ಹುಲಿಯಾ’ ಜೈಕಾರ!

ಬೆಂಗಳೂರು[ಡಿ.16]: ಆ್ಯಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೊಳಗಾಗಿ ಐದು ದಿನಗಳ ಕಾಲ ಮಲ್ಲೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ತಮ್ಮ ಅಧಿಕೃತ ನಿವಾಸ ಕಾವೇರಿಗೆ ತೆರಳಿದರು.

ಬಿಡುಗಡೆ ನಂತರ ಆಸ್ಪತ್ರೆ ಆವರಣದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೀಗ ಸಂಪೂರ್ಣ ಗುಣಮುಖನಾಗಿದ್ದೇನೆ. ವೈದ್ಯರ ಸಲಹೆಯಂತೆ ಒಂದು ವಾರ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳುತ್ತೇನೆ. ಆ ನಂತರವಷ್ಟೇ ರಾಜಕೀಯ ಚಟುವಟಿಕೆ ಕಡೆ ಗಮನ ಹರಿಸುತ್ತೇನೆ. ಸದ್ಯಕ್ಕೆ ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.

ನನಗೆ 2000ನೇ ಇಸವಿಯಲ್ಲಿ ಹೃದಯದ ಎರಡು ರಕ್ತನಾಳಗಳು ಬ್ಲಾಕ್‌ ಆಗಿದ್ದವು. ಆಗ ಸ್ಟೆಂಟ್‌ ಅಳವಡಿಸಲಾಗಿತ್ತು. 19 ವರ್ಷಗಳ ನಂತರ ಅವುಗಳ ಪೈಕಿ ಒಂದು ರಕ್ತನಾಳ ಮತ್ತೆ ಶೇ.95ರಷ್ಟುಬ್ಲಾಕ್‌ ಆಗಿತ್ತು. ಡಾ.ರಮೇಶ್‌ ಅವರು ಈಗ ಆ್ಯಂಜಿಯೋಪ್ಲಾಸ್ಟಿಮಾಡಿ ನಾಳದಲ್ಲಿ ರಕ್ತ ಬ್ಲಾಕ್‌ ಆಗಿರುವುದನ್ನು ನಿವಾರಿಸಿ ಹೊಸ ಸ್ಟೆಂಟ್‌ ಅಳವಡಿಸಿದ್ದಾರೆ. ಈಗ ರಕ್ತ ಚಲನೆ ಸಲೀಸಾಗಿದೆ. ನಾನೀಗ ಮೊದಲಿನಂತೆ ಆರೋಗ್ಯವಂತನಾಗಿದ್ದೇನೆ ಎಂದರು.

ವೈದ್ಯರ ಸಲಹೆಯಂತೆ ಒಂದು ವಾರ ವಿಶ್ರಾಂತಿ ಪಡೆದುಕೊಳ್ಳುತ್ತೇನೆ. ನಂತರ ರಾಜಕೀಯ ಚಟುವಟಿಕೆ ಶುರುಮಾಡಿಕೊಳ್ಳುತ್ತೇನೆ. ಏಕೆಂದರೆ ಎಲ್ಲವೂ ಸಲೀಸಾಗಬೇಕಲ್ಲ, ನನಗೆ ಈಗಲೂ ಹೆಚ್ಚು ಕಾಲ ಓಡಾಡಲು ಆಗುವುದಿಲ್ಲ. ವಿಶ್ರಾಂತಿ ಪಡೆದು ಎಲ್ಲಾ ಸಲೀಸಾದ ಮೇಲೆ ರಾಜಕಾರಣದ ಕಡೆ ಗಮನಕೊಡುತ್ತೇನೆ. ಸದ್ಯ ಯಾವುದೇ ರಾಜಕೀಯ ವಿಚಾರದ ಬಗ್ಗೆಯೂ ಮಾತನಾಡುವುದಿಲ್ಲ. ನಾನು ಆರೋಗ್ಯವಂತನಾಗಿರಬೇಕು, ರಾಜಕೀಯ ಮಾತನಾಡುವುದಿಲ್ಲ ಎಂದರು.

ಮನುಷ್ಯತ್ವ ದೊಡ್ಡದು, ಎಲ್ಲರಿಗೂ ಧನ್ಯವಾದ:

ಪಕ್ಷಾತೀತವಾಗಿ ಆಸ್ಪತ್ರೆಗೆ ಬಂದು ತಮ್ಮ ಆರೋಗ್ಯ ವಿಚಾರಿಸಿದ ಎಲ್ಲ ರಾಜಕೀಯ ನಾಯಕರಿಗೂ ಇದೇ ವೇಳೆ ಧನ್ಯವಾದ ತಿಳಿಸಿದ ಸಿದ್ದರಾಮಯ್ಯ ಅವರು, ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಮನುಷ್ಯತ್ವ ಅನ್ನುವುದು ಬಂದಾಗ ಭಿನ್ನಾಭಿಪ್ರಾಯ, ಶತ್ರುತ್ವ ಯಾವುದೂ ಇರುವುದಿಲ್ಲ. ರಾಜಕೀಯಕ್ಕಿಂತ ಮನುಷ್ಯತ್ವ ಮುಖ್ಯ ಎಂದರು.

ನನಗೆ ಚಿಕಿತ್ಸೆ ನೀಡಿದ ಕಾರ್ಡಿಯಾಲಜಿಸ್ಟ್‌ ಡಾ| ರಮೇಶ್‌, ಆಸ್ಪತ್ರೆಯ ಮಾಲಿಕರಾದ ಡಾ| ನಾರಾಯಣಸ್ವಾಮಿ, ಆಸ್ಪತ್ರೆಯಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಂಡ ಆಸ್ಪತ್ರೆಯ ಸಿಬ್ಬಂದಿಗೆ ಹಾಗೂ ನಾನು ಶೀಘ್ರ ಗುಣಮುಖರಾಗಲಿ ಎಂದು ಪೂಜೆ, ಪುನಸ್ಕಾರಗಳನ್ನು ಮಾಡಿ ಆಸ್ಪತ್ರೆಗೇ ಪ್ರಸಾದ ತಂದುಕೊಟ್ಟನನ್ನ ಅಭಿಮಾನಿಗಳಿಗೂ ಧನ್ಯವಾದ ಸಲ್ಲಿಸುತ್ತೇನೆ. ವಿಶೇಷವಾಗಿ ಆಸ್ಪತ್ರೆಗೆ ಊಟ, ಹಣ್ಣು ಹಂಪಲು, ನಾಟಿ ಕೋಳಿ ಸಾರು ಮಾಡಿ ಕಳುಹಿಸುತ್ತಿದ್ದ ನಾರಾಯಣಸ್ವಾಮಿ ಅವರ ಪತ್ನಿ ಅವರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

ಆಸ್ಪತ್ರೆ ಹೊರಗೆ ‘ಹೌದು ಹುಲಿಯಾ’ ಜೈಕಾರ!

ಸಿದ್ದರಾಮಯ್ಯ ಅವರು ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಜೈಕಾರ ಕೂಗಿ ಬೀಳ್ಕೊಟ್ಟರು. ಕಾರು ಏರಿ ಹೊರಡುವಾಗ ‘ಹೌದು ಹುಲಿಯಾ’ ಎಂಬ ಘೋಷಣೆ ಅಭಿಮಾನಿಗಳ ಮಧ್ಯದಿಂದ ಕೇಳಿಬಂತು. ಅಭಿಮಾನಿಗಳ ಘೋಷಣೆ ಕಂಡು ಸಿದ್ದರಾಮಯ್ಯ ನಕ್ಕು ಕೈಬೀಸಿ ತೆರಳಿದರು.

ಆಸ್ಪತ್ರೆಯಿಂದ ಕಾವೇರಿ ನಿವಾಸಕ್ಕೆ ಹೊರಟ ಸಿದ್ದರಾಮಯ್ಯ ಇನ್ನು 10-15 ದಿನಗಳ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಮಾಹಿತಿ ಇದೆ. ಈ ಸಂದರ್ಭ ಯಾವುದೇ ಪ್ರವಾಸ ಮಾಡದಂತೆ ವೈದ್ಯರು ಸೂಚಿಸಿದ್ದಾರೆ. ಆಸ್ಪತ್ರೆಯಲ್ಲಿದ್ದಾಗಲೂ ನಾಟಿ ಕೋಳಿ ಸಾರಿನ ಊಟವನ್ನೇ ಮಾಡಿದ್ದ ಸಿದ್ದರಾಮಯ್ಯಗೆ ಈ ಊಟ ಮುಂದುವರಿಸಿದರೂ ಸಮಸ್ಯೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ

click me!