Kannada Rajyotsava: ನವೆಂಬರ್‌ನಲ್ಲಿ ಪುಸ್ತಕ ಪ್ರೇಮಿಗಳಿಗೆ ಒಂದಲ್ಲ, ಮೂರು ಆಫರ್‌

Published : Nov 01, 2026, 08:02 AM IST
books book shelf

ಸಾರಾಂಶ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಪ್ನ ಬುಕ್‌ಹೌಸ್‌ನಲ್ಲಿ ಉಚಿತ ಪುಸ್ತಕ ವಿತರಣೆ ಹಾಗೂ ಪುಸ್ತಕ ಜಾತ್ರೆ ನಡೆಯಲಿದೆ. ಇದರ ಜೊತೆಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಶೇ.50 ರಿಯಾಯಿತಿ ಮತ್ತು ಜಯನಗರದಲ್ಲಿ ವೀರಲೋಕ ಪುಸ್ತಕ ಸಂತೆ ಆಯೋಜಿಸಲಾಗಿದೆ.

ಬೆಂಗಳೂರು: 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಪ್ನ ಬುಕ್‌ಹೌಸ್‌ ವತಿಯಿಂದ ನ.1ರಂದು ಪುಸ್ತಕ ಜಾತ್ರೆ ಮತ್ತು ಕನ್ನಡ ಬರಹಗಾರರ ಸಮ್ಮಿಲನವನ್ನು ಆಯೋಜಿಸಲಾಗಿದೆ.

60 ವಸಂತಗಳನ್ನು ಪೂರೈಸಿರುವ ಸಪ್ನ ಬುಕ್‌ಹೌಸ್‌, ರಾಜ್ಯೋತ್ಸವದಂದು ಜಾತ್ರೆಗೆ ಆಗಮಿಸುವ ಪ್ರತಿಯೊಬ್ಬರಿಗೂ ಉಚಿತವಾಗಿ ಒಂದು ಕನ್ನಡ ಪುಸ್ತಕವನ್ನು ಕೊಡುಗೆಯಾಗಿ ನೀಡುವ ಮೂಲಕ ಈ ಬಾರಿಯ ಕನ್ನಡ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಿದೆ.

ಪುಸ್ತಕ ಜಾತ್ರೆ ಹಾಗೂ ರಿಯಾಯಿತಿ ಮೇಳಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಚಾಲನೆ ನೀಡಲಿದ್ದಾರೆ. ವಿದ್ವಾಂಸ ನಾಡೋಜ ಪ್ರೊ.ಹಂಪ ನಾಗರಾಜಯ್ಯ ಭಾಗವಹಿಸಲಿದ್ದು, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ.ಆರ್.ಸುನಂದಮ್ಮ ಕನ್ನಡ ಜ್ಯೋತಿ ಬೆಳಗಲಿದ್ದಾರೆ. ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ.ಸಿ.ಸೋಮಶೇಖರ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ, ಡಾ.ಟಿ.ಆರ್.ಅನಂತರಾಮ್, ಪ್ರೊ.ಕೆ.ಈ.ರಾಧಾಕೃಷ್ಣ, ರಾ.ನಂ.ಚಂದ್ರಶೇಖರ, ಡಾ.ಡಿ.ವಿ. ಗುರುಪ್ರಸಾದ್, ವಿಶ್ವೇಶ್ವರ ಭಟ್, ಕನ್ನಡಪ್ರಭದ ಸಂಪಾದಕ ಗಿರೀಶ್‌ರಾವ್‌ ಹತ್ವಾರ್‌ (ಜೋಗಿ), ಷಡಕ್ಷರಿ, ಡಾ.ಸಿ.ಆರ್.ಚಂದ್ರಶೇಖರ್, ಜಿ.ಎನ್.ಮೋಹನ್, ಡಾ.ಎಚ್.ಎಲ್.ಪುಷ್ಪ, ಡಾ.ವಸುಂಧರಾ ಭೂಪತಿ, ತಾರಾ ಮಂಜುನಾಥ್, ಪ್ರೊ.ಎನ್.ಎಸ್.ಅನಂತರಾಮನ್ ಸೇರಿದಂತೆ ಹಲವರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಶೇ.50 ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದಿಂದದ ನವೆಂಬರ್‌ ತಿಂಗಳಾದ್ಯಂತ ಶೇ.50ರ ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟ ಮಾಡಲಾಗುತ್ತಿದೆ. ನಗರದ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆ, ಎಲ್ಲ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ.

ಪ್ರಾಧಿಕಾರದ ವೆಬ್‌ಸೈಟ್‌: https://kpp.karnataka.gov.in ಖರೀದಿಯಲ್ಲೂ ರಿಯಾಯಿತಿ ದೊರೆಯಲಿದೆ. ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸಿದ್ದು, ಅವುಗಳಲ್ಲಿ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಸೇರಿದಂತೆ ಹಲವು ಪ್ರಾಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ಮುದ್ರಿಸಿ ಪ್ರಕಟಿಸಿದೆ ಎಂದು ಆಡಳಿತಾಧಿಕಾರಿ ಕೆ.ಬಿ. ಕಿರಣ್‌ ಸಿಂಗ್‌ ತಿಳಿಸಿದ್ದಾರೆ.

ನ.20 ರಿಂದ ವೀರಲೋಕ ಪುಸ್ತಕ ಸಂತೆ-6ನೇ ಆವೃತ್ತಿ

ಬೆಂಗಳೂರು: ಸಾಹಿತ್ಯಾಸಕ್ತರು, ಲೇಖಕರು ಹಾಗೂ ಪ್ರಕಾಶಕರನ್ನು ಒಂದೇ ಸೂರಿನಡಿ ಬೆಸೆಯುವ ಸಾಹಿತ್ಯಿಕ ಉತ್ಸವ ‘ವೀರಲೋಕ ಪುಸ್ತಕ ಸಂತೆ’ಯ ಆರನೇ ಆವೃತ್ತಿ ನ.20ರಿಂದ 22ರವರೆಗೆ ಜಯನಗರದ ಶಾಲಿನಿ ಮೈದಾನದಲ್ಲಿ ನಡೆಯಲಿದೆ ಎಂದು ವೀರಲೋಕ ಪ್ರತಿಷ್ಠಾನದ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.

ಈ ಮೂರು ದಿನಗಳ ಕಾಲ ನಿತ್ಯ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9ರವರೆಗೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುವುದು. ಸಾಹಿತ್ಯ, ಓದು, ಪ್ರದರ್ಶನ ಹಾಗೂ ಮಾರಾಟವನ್ನು ಒಗ್ಗೂಡಿಸಿ ಆಯೋಜಿಸಲಾಗುತ್ತಿರುವ ಈ ಸಂತೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ 100ಕ್ಕೂ ಹೆಚ್ಚು ಪ್ರಕಾಶಕರು, ಮುದ್ರಕರು ಪಾಲ್ಗೊಳ್ಳಲಿದ್ದಾರೆ.

ಉತ್ತರ ಕರ್ನಾಟಕದ ಲೇಖಕರು ಹಾಗೂ ಅವರ ಕೃತಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಒಟ್ಟು 20 ವಿಚಾರಗೋಷ್ಠಿಗಳು ನಡೆಯಲಿವೆ. ಜತೆಗೆ ಪ್ರತಿದಿನ ಸಂಜೆ ಜಾನಪದ, ಭಾವಗೀತೆ ಹಾಗೂ ಸಿನಿಮಾ ಗೀತೆಗಳ ಸಾಂಸ್ಕೃತಿಕ ರಸದೌತಣವೂ ಇರಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಹಾಲಿನ ದರ ₹8 ಏರಿಕೆ ಆದ್ರೂ ಈ ಟೀ ಅಂಗಡಿಯಲ್ಲಿ ಕೇವಲ ₹5ಗೆ ಕಾಫಿ, ಟೀ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕನ್ನಡ ರಾಜ್ಯೋತ್ಸವ: ಸಂಚಾರ ಮಾರ್ಗ ಬದಲಾವಣೆ, ವಾಹನ ಸವಾರರೇ ಇಂದು ಈ ರಸ್ತೆಗಳಲ್ಲಿ ಸಂಚರಿಸುವ ಮುನ್ನ ಗಮನಿಸಿ!
ಪ್ರತಿಯೊಬ್ಬ ಕನ್ನಡಿಗನೂ ಇದನ್ನ ಓದಲೇಬೇಕು: ರಾಜಧಾನಿಯಲ್ಲೇ ಅಲ್ಪಸಂಖ್ಯಾತರಾಗುವತ್ತ ಕನ್ನಡಿಗರು!