ರಾಜ್ಯ ವಿಧಾನಮಂಡಲ ಕಲಾಪ ಇಂದಿನಿಂದ: ಗೋಹತ್ಯೆ ನಿಷೇಧ ಸೇರಿ 11 ವಿಧೇಯಕ ಮಂಡನೆ!

By Kannadaprabha NewsFirst Published Jan 28, 2021, 8:10 AM IST
Highlights

ರಾಜ್ಯ ವಿಧಾನಮಂಡಲ ಕಲಾಪ ಇಂದಿನಿಂದ| ಗೋಹತ್ಯೆ ನಿಷೇಧ ಸೇರಿ 11 ವಿಧೇಯಕ ಮಂಡನೆ| ಇಂದು ಜಂಟಿ ಕಲಾಪ ಉದ್ದೇಶಿಸಿ ಗೌರ್ನರ್‌ ಭಾಷಣ| ಖಾತೆ ಹಂಚಿಕೆ, ರೈತ ಹೋರಾಟ ಬಗ್ಗೆ ಜಟಾಪಟಿ?

 

ಬೆಂಗಳೂರು(ಜ.28): ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಗುರುವಾರದಿಂದ ಆರಂಭವಾಗಲಿದ್ದು, ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ, ಇತ್ತೀಚಿನ ಖಾತೆ ಹಂಚಿಕೆ ಗೊಂದಲ, ನಾಯಕತ್ವ ಬದಲಾವಣೆಯ ವದಂತಿ, ವಿಧಾನಪರಿಷತ್ತಿನ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಸೇರಿದಂತೆ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿಗೆ ವೇದಿಕೆ ಸಜ್ಜಾಗಿದೆ.

ಗುರುವಾರ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಇತ್ತೀಚೆಗೆ ಅಗಲಿದ ವಿಧಾನಪರಿಷ್‌ನ ಉಪಸಭಾಪತಿ ಧರ್ಮೇಗೌಡ ಸೇರಿದಂತೆ ಮಾಜಿ ಶಾಸಕರು ಮತ್ತು ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯ ಕೈಗೊಳ್ಳಲಾಗುತ್ತದೆ. ನಂತರ ಸದನವನ್ನು ಶುಕ್ರವಾರಕ್ಕೆ ಮುಂದೂಡಲಾಗುತ್ತದೆ.

ಜಂಟಿ ಅಧಿವೇಶನದಲ್ಲಿ 11 ವಿಧೇಯಕಗಳು ಮಂಡನೆಯಾಗಲಿದೆ. ಗೋಹತ್ಯೆ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಹೊರಡಿಸಲಾಗಿದ್ದು, ಈ ವಿಧೇಯಕವು ಸಹ ಮಂಡನೆಯಾಗುವ ಸಾಧ್ಯತೆ ಇದೆ. ಅಲ್ಲದೇ, ಪ್ರಶ್ನೋತ್ತರ ಕಲಾಪ ಸೇರಿದಂತೆ ವಿವಿಧ ವಿಚಾರಗಳ ಚರ್ಚೆಗೆ ಅವಕಾಶ ಕಲ್ಪಿಸಲಾಗುತ್ತದೆ. ಫೆ.5ರವರೆಗೆ ಕಲಾಪ ನಡೆಯಲಿದೆ.

ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸಭೆಯ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬುಧವಾರ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು. ಕೋವಿಡ್‌ ಹಿನ್ನೆಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮಂಡನೆ ಮಾಡಲು ಉದ್ದೇಶಿಸಿರುವ ವಿಧೇಯಕಗಳ ಪ್ರತಿಯನ್ನು ಅದಷ್ಟುಬೇಗ ಸದನಕ್ಕೆ ಮತ್ತು ಸದಸ್ಯರಿಗೆ ನೀಡಬೇಕು. ಇದರಿಂದ ಸದಸ್ಯರು ಅಧ್ಯಯನ ನಡೆಸಿ ಚರ್ಚೆ ನಡೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಸಾರ್ವಜನಿಕರಿಗೆ ಪ್ರವೇಶವಿಲ್ಲ:

ಕೋವಿಡ್‌ ಹಿನ್ನೆಲೆಯಲ್ಲಿ ಈ ಹಿಂದಿನಂತೆ ಈ ಬಾರಿಯೂ ಕ್ರಮ ಜರುಗಿಸಲಾಗಿದೆ. ಸಾರ್ವಜನಿಕರಿಗೆ ಅಧಿವೇಶನ ವೀಕ್ಷಿಸಲು ಅವಕಾಶ ಇರುವುದಿಲ್ಲ.

ಅಧಿವೇಶನಕ್ಕೆ ಆಗಮಿಸುವ ಪ್ರತಿಯೊಬ್ಬರೂ ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪತ್ರಕರ್ತರಿಗೆ ಎರಡನೇ ಮಹಡಿಯಿಂದ ವರದಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸದಸ್ಯರ ಆಪ್ತ ಸಹಾಯಕರು ಮತ್ತು ಗನ್‌ಮ್ಯಾನ್‌ಗಳಿಗೆ ವಿಧಾನಸೌಧದ ಮೊದಲನೇ ಮಹಡಿಯಲ್ಲಿನ ವಿಧಾನಸಭೆಯ ಸಭಾಂಗಣದ ಮುಖ್ಯದ್ವಾರದ ಮುಂಭಾಗದಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಅಧಿವೇಶನದ ವೇಳೆ ಪ್ರತಿದಿನ ಸದನ ಮುಕ್ತಾಯವಾದ ನಂತರ ವಿಧಾನಸಭೆಯ ಸಭಾಂಗಣವನ್ನು ಮತ್ತು ಅದರ ಸುತ್ತಮುತ್ತಲಿನ ಎಲ್ಲಾ ಆವರಣಗಳನ್ನು ಸ್ಯಾನಿಟೈಸ್‌ ಮಾಡಲಾಗುವುದು ಎಂದು ಸ್ಪೀಕರ್‌ ವಿವರಿಸಿದರು.

ಮಂಡನೆ/ಅಂಗೀಕಾರಕ್ಕೆ ಬಾಕಿ ಇರುವ ಮಸೂದೆ

* ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ

* ಶ್ರೀಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯ ವಿಧೇಯಕ

* ವಿದ್ಯಾಶಿಲ್ಪ ವಿಶ್ವವಿದ್ಯಾಲಯ ವಿಧೇಯಕ

* ಏಟ್ರಿಯಾ ವಿಶ್ವವಿದ್ಯಾಲಯ ವಿಧೇಯಕ

* ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕ

* ಕರ್ನಾಟಕ ಲೋಕಾಯುಕ್ತ (ಮೂರನೇ ತಿದ್ದುಪಡಿ) ವಿಧೇಯಕ

* ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ

* ಕರ್ನಾಟಕ ಸಾಂಕ್ರಾಮಿಕ ರೋಗಗಳು (ತಿದ್ದುಪಡಿ) ವಿಧೇಯಕ

* ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ

* ಕರ್ನಾಟಕ ನಗರಪಾಲಿಕೆಗಳ (ಎರಡನೇ ತಿದ್ದುಪಡಿ) ವಿಧೇಯಕ

* ಕರ್ನಾಟಕ ಪೌರಸಭೆಗಳ (ನಾಲ್ಕನೇ ತಿದ್ದುಪಡಿ) ವಿಧೇಯ

click me!