
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಜೂ.19): ಕರುನಾಡಿನ ಸೆರೆಮನೆಗಳ ಕತ್ತಲ ಕೋಣೆಗಳಲ್ಲಿ ‘ಸಾಕ್ಷರತೆ ಬೆಳಕು’ ಪಸರಿಸಿದ್ದು, ಚಾಕು-ಲಾಂಗುಗಳನ್ನು ಬದಿಗೆ ಸರಿಸಿ ರಾಜ್ಯದ 54 ಕಾರಾಗೃಹಗಳಲ್ಲಿ ತಮ್ಮ ಸಹ ಕೈದಿಗಳಿಂದಲೇ ಅಕ್ಷರಸ್ಥರಾಗಿ ಸುಮಾರು 6329 ಕೈದಿಗಳು ಚರಿತ್ರೆ ಬರೆದಿದ್ದಾರೆ. ದರೋಡೆ, ಕೊಲೆ ಹಾಗೂ ಸುಲಿಗೆ ಹೀಗೆ ನಾನಾ ಅಪರಾಧ ಕೃತ್ಯಗಳನ್ನು ಎಸಗಿ ಜೈಲು ಸೇರಿದ ನಿರಕ್ಷರಕುಕ್ಷಿ ಸೆರೆಹಕ್ಕಿಗಳಿಗೆ ಜೈಲುಗಳಲ್ಲಿ ವಿದ್ಯಾವಂತ ಕೈದಿಗಳಿಂದಲೇ ಅಕ್ಷರ ಕಲಿಸುವ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ವಿನೂತನ ಪ್ರಯೋಗ ಯಶಸ್ಸು ಕಂಡಿದ್ದು, ಕೈದಿಗಳ ಬದುಕಿನಲ್ಲಿ ಹೊಸ ಬೆಳಕು ಮೂಡಿದೆ.
ಜೈಲುಗಳಲ್ಲಿ ಕೈದಿಗಳ ಮನಃ ಪರಿವರ್ತನೆಗೆ ಶಿಕ್ಷಣ ಮಹತ್ವದ್ದಾಗಿದೆ. ಹೀಗಾಗಿ ಅನಕ್ಷರಸ್ಥ ಕೈದಿಗಳನ್ನು (ಸಜಾ ಹಾಗೂ ವಿಚಾರಣಾಧೀನ) ಸುಶಿಕ್ಷಿತರಾಗಿಸುವ ಸಲುವಾಗಿ 2022ರಲ್ಲಿ ಸಮೂಹ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ‘ಕಲಿಕೆಯಿಂದ ಬದಲಾವಣೆ ಕಡೆಗೆ’ ಎಂಬ ಘೋಷವಾಕ್ಯದಲ್ಲಿ ‘ನವಚೇತನ’ ಎಂಬ ವಿಶಿಷ್ಟಕಾರ್ಯಕ್ರಮವನ್ನು ಆರಂಭಿಸಲಾಯಿತು. ಇದರ ಫಲಗಿ ಜೈಲುಗಳಲ್ಲಿ 6329 ಕೈದಿಗಳು ಅಕ್ಷರಸ್ಥರಾಗಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ಹೇಳಿದ್ದಾರೆ.
ಬಡವರಿಗೆ ಕೊಡುವ ಅಕ್ಕಿಯಲ್ಲಿ ಕೇಂದ್ರ ಸರ್ಕಾರ ರಾಜಕೀಯ: ಸಚಿವ ಚಲುವರಾಯಸ್ವಾಮಿ
ಕೈದಿಗಳ ಎದೆಗೂ ಬಿದ್ದ ಅಕ್ಷರ: ರಾಜ್ಯದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ, ಮೈಸೂರು, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ಬೆಳಗಾವಿ, ಮಂಗಳೂರು, ಶಿವಮೊಗ್ಗ ಹಾಗೂ ವಿಜಯಪುರ ಸೇರಿ 9 ಕೇಂದ್ರ ಕಾರಾಗೃಹಗಳು, 24 ಜಿಲ್ಲಾ ಹಾಗೂ 21 ತಾಲೂಕು ಸೇರಿದಂತೆ ಒಟ್ಟು 54 ಜೈಲುಗಳಿವೆ. ಪ್ರಸುತ್ತ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 5,100 ಕೈದಿಗಳು (ಸಜಾ ಮತ್ತು ವಿಚಾರಣಾಧೀನ) ಸೇರಿ ಒಟ್ಟು ರಾಜ್ಯದ ಕಾರಾಗೃಹಗಳಲ್ಲಿ 16 ಸಾವಿರ ಕೈದಿಗಳಿದ್ದಾರೆ. ಪ್ರತಿಯೊಬ್ಬ ಕೈದಿ ಎದೆಗೂ ಅಕ್ಷರ ಬೀಳಬೇಕು ಎಂಬುದು ಇಲಾಖೆಯ ಧ್ಯೇಯವಾಗಿದೆ.
ಮೊದಲಿನಿಂದಲೂ ಕಾರಾಗೃಹಗಳಲ್ಲಿ ಕೈದಿಗಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಶಿಕ್ಷಕರಿದ್ದಾರೆ. ಹಲವು ಮಂದಿ ಕಾರಾಗೃಹದಿಂದಲೇ ಮುಕ್ತ ವಿಶ್ವವಿದ್ಯಾಲಯದ ಮೂಲಕ ಸ್ನಾತಕೋತ್ತರ ಹಾಗೂ ಪದವಿ ಸಹ ಪಡೆದಿದ್ದಾರೆ. ಕೆಲವು ವಿದ್ಯಾವಂತರು ಸಹ ಅಪರಾಧ ಆರೋಪ ಹೊತ್ತು ಜೈಲಿಗೆ ಬರುತ್ತಾರೆ. ಆದರೆ ರಾಜ್ಯದ ಒಟ್ಟು ಕೈದಿಗಳ ಪೈಕಿ ಶೇ.40ರಷ್ಟು ಅನರಕ್ಷಸ್ಥರಿದ್ದಾರೆ. ಜೈಲುಗಳಲ್ಲಿ ಶೇ.100 ರಷ್ಟುಸಾಕ್ಷರತೆ ಸಾಧಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿಯೇ ಸಮೂಹ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಅಕ್ಷರ ಕಲಿಸುವ ಕಾರ್ಯಕ್ರಮ ರೂಪಿಸಲಾಯಿತು. ಇದಕ್ಕೆ ಅಗತ್ಯವಾದ ಬೋಧನಾ ಪರಿಕರಗಳನ್ನು ಶಿಕ್ಷಣ ಇಲಾಖೆಯೇ ಪೂರೈಸಿತು ಎಂದು ರಾಜ್ಯ ಕಾರಾಗೃಹ ಇಲಾಖೆ ಎಸ್‌ಪಿ ಸುರೇಶ್ ಮಾಹಿತಿ ನೀಡಿದ್ದಾರೆ.
ಜೈಲಿಗೆ ಪ್ರವೇಶ ಪಡೆದಾಗ ವಿಚಾರಣಾಧೀನ ಹಾಗೂ ಸಜಾ ಕೈದಿಗಳ ಸ್ವವಿವರ ಪಡೆಯಲಾಗುತ್ತದೆ. ಅದರಲ್ಲಿ ಅವರ ಶೈಕ್ಷಣಿಕ ಅರ್ಹತೆ ಸಹ ಗೊತ್ತಾಗುತ್ತಿದೆ. ಇದರಲ್ಲಿ ಸರಾಸರಿ ಶೇ.40ರಷ್ಟು ಅನಕ್ಷರಸ್ಥರು ಪತ್ತೆಯಾದರು. ಎಲ್ಲ ಜೈಲುಗಳಿಗೆ ಶಿಕ್ಷಕರ ಲಭ್ಯತೆಯ ಸಮಸ್ಯೆ ಎದುರಾಯಿತು. ಆಗ ಜೈಲುಗಳಲ್ಲಿರುವ ಕೈದಿಗಳ ಮೂಲಕವೇ ಅಕ್ಷರ ಕಲಿಸುವ ನಿರ್ಧಾರಕ್ಕೆ ಬರಲಾಯಿತು. ಅಂತೆಯೇ ಮೊದಲು ವಿದ್ಯಾವಂತ ಕೈದಿಗಳಿಗೆ ಅನಕ್ಷರಸ್ಥರಿಗೆ ಹೇಗೆ ಅಕ್ಷರ ಕಲಿಸಬೇಕು ಎಂಬುದನ್ನು ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು. ಬಳಿಕ ಸುಶಿಕ್ಷಿತ ಕೈದಿಗಳ ಮೂಲಕ ಸಹ ಕೈದಿಗಳಿಗೆ ಅಕ್ಷರ ಜ್ಯೋತಿ ಬೆಳಗಿಸಲಾಯಿತು. ಇದೊಂದು ರೀತಿ ಆರು ಬ್ರಿಡ್ಜ್ ಕೋರ್ಸ್ ರೀತಿ ಇದೆ. ಈ ಆರು ತಿಂಗಳ ಕಲಿಕೆ ಅವಧಿಯ ಮುಗಿದ ಬಳಿಕ ಅಕ್ಷರ ಕಲಿತ ಕೈದಿಗಳಿಗೆ ಪರೀಕ್ಷೆ ನಡೆಸಲಾಯಿತು. ಇದರಲ್ಲಿ ಉತ್ತೀರ್ಣರಾದ ಆರು ಸಾವಿರ ಕೈದಿಗಳಿಗೆ ಪ್ರಮಾಣ ಪತ್ರ ಸಹ ವಿತರಿಸಲಾಗಿದೆ ಎಂದು ಅಧಿಕಾರಿಗಳು ಹೇಳದ್ದಾರೆ.
ಅಕ್ಷರ, ಕೌಶಲ್ಯ ಹಾಗೂ ಯೋಗ ಕಲಿತವರ ವಿವರ ಹೀಗಿದೆ
ಅಕ್ಷರ- 6329
ಯೋಗ-17941
ಕೌಶಲ್ಯ ತರಬೇತಿ-2943
ಯೋಜನೆಗಳ ಫಲಿತಾಂಶದ ಸಮಗ್ರ ವರದಿ ಸಲ್ಲಿಸಿ: ಅಧಿಕಾರಿಗಳಿಗೆ ಸಂಸದ ಡಿ.ಕೆ.ಸುರೇಶ್ ಸೂಚನೆ
ಕಾರಾಗೃಹಗಳಲ್ಲಿ ಕೈದಿಗಳ ಸುಧಾರಣೆಗೆ ಹೊಸ ಹೊಸ ಪ್ರಯತ್ನಗಳು ನಡೆದಿವೆ. ಅಕ್ಷರ ಕಲಿಕೆ ಹಾಗೂ ಕೌಶಲ್ಯ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈ ಕಾರ್ಯಕ್ರಮಗಳು ಜೈಲಿನಿಂದ ಬಿಡುಗಡೆಗೊಂಡ ಬಳಿಕ ಕೈದಿಗಳಿಗೆ ಒಳ್ಳೆಯ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗುತ್ತವೆ.
-ಮನೀಷ್ ಕರ್ಬೀಕರ್, ಮುಖ್ಯಸ್ಥರು, ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ